ಬೊಜ್ಜಿನ ಎಚ್ಚರಿಕೆ ನೀಡುವ ಏಳು ಸಂಕೇತಗಳು

Update: 2018-07-15 10:51 GMT

ಬೊಜ್ಜು ಹಲವಾರು ಕಾಯಿಲೆಗಳಿಗೆ ಆಹ್ವಾನ ನೀಡುತ್ತದೆ ಎನ್ನುವುದು ಹೆಚ್ಚಿನವರಿಗೆ ಗೊತ್ತು. ಮನುಷ್ಯ ಚೂರು ಬೊಜ್ಜು ಹೊಂದಿದ್ದರೆ ಅದು ಕೆಟ್ಟದ್ದೇನಲ್ಲ,ಆದರೆ ಅದು ಮಿತಿಯನ್ನು ದಾಟಿದರೆ ಸಮಸ್ಯೆಯಾಗುತ್ತದೆ.

ಬೊಜ್ಜುದೇಹವಿರುವ ಪುರುಷರು ಹೃದ್ರೋಗಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದರೆ,ಮಹಿಳೆಯರು ಫಲವತ್ತತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಅನುಭವಿಸುತ್ತಾರೆ. ವಯಸ್ಸಾಗುತ್ತಿದ್ದಂತೆ ಬೊಜ್ಜು ಅಧಿಕ ರಕ್ತದೊತ್ತಡ, ಮಂಡಿನೋವು,ಅಸ್ಥಿರಂಧ್ರತೆ,ಬೆನ್ನುನೋವು ಸೇರಿದಂತೆ ಹಲವಾರು ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಎಲ್ಲ ತೊಂದರೆಗಳಿಂದ ದೂರವಿರಬೇಕೆಂದರೆ ಬೊಜ್ಜು ನಮ್ಮ ಶರೀರವನ್ನು ಆಕ್ರಮಿಸಿಕೊಳ್ಳದಂತೆ ನೋಡಿಕೊಳ್ಳುವುದು ಅಗತ್ಯವಾಗುತ್ತದೆ.

ಸ್ವಲ್ಪ ಹೆಚ್ಚು ದೇಹತೂಕವನ್ನು ಹೊಂದಿರುವುದು ಮತ್ತು ಬೊಜ್ಜಿನ ನಡುವೆ ವ್ಯತ್ಯಾಸಗಳನ್ನು ಕಂಡುಕೊಳ್ಳಲು ನಾವು ಸಮರ್ಥರಾದರೆ ಮಾತ್ರ ಬೊಜ್ಜಿನ ವಿರುದ್ಧ ಎಚ್ಚರಿಕೆ ವಹಿಸಲು ಸಾಧ್ಯ. ಬೊಜ್ಜಿನ ಎಚ್ಚರಿಕೆ ನೀಡುವ ಏಳು ಸಂಕೇತಗಳು ಇಲ್ಲಿವೆ.....

►ಉಸಿರಾಟದ ತೊಂದರೆ

ಓಡಾಡಲು ನಿಮಗೆ ಕಷ್ಟವಾಗುತ್ತಿದ್ದರೆ ಬೊಜ್ಜು ಅದಕ್ಕೆ ಕಾರಣವಾಗಿರಬಹುದು. ಬೊಜ್ಜು ಹೊಂದಿರುವ ವ್ಯಕ್ತಿಗಳ ಕತ್ತಿನ ಸುತ್ತ ಕೊಬ್ಬು ಸಂಗ್ರಹಗೊಳ್ಳುತ್ತದೆ. ಇದರಿಂದಾಗಿ, ವಿಶೇಷವಾಗಿ ಶ್ರಮದ ಕೆಲಸಗಳಲ್ಲಿ ತೊಡಗಿಕೊಂಡಾಗ ಉಸಿರಾಡುವುದು ಕಷ್ಟವಾಗುತ್ತದೆ. ಇದು ಅತ್ಯಂತ ಗಂಭೀರ ಸ್ಥಿತಿಯಾಗಿದ್ದು,ಇತರ ಹಲವಾರು ಸಮಸ್ಯೆಗಳು ವ್ಯಕ್ತಿಯನ್ನು ಕಾಡಲು ಸಜ್ಜಾಗಿರುವುದನ್ನು ಸೂಚಿಸುತ್ತದೆ. ಇದರಿಂದಾಗಿ ದೈನಂದಿನ ಸರಳ ಕೆಲಸಗಳನ್ನು ಮಾಡುವುದೂ ಕಷ್ಟವಾಗಬಹುದು. ಈ ಬಗ್ಗೆ ತಕ್ಷಣ ವೈದ್ಯರ ಸಲಹೆ ಪಡೆದುಕೊಂಡು ಹೆಚ್ಚು ಕ್ರಿಯಾಶೀಲವಾದ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬುದ್ಧಿವಂತಿಕೆಯಾಗುತ್ತದೆ.

►ಬೆನ್ನುನೋವು

ಇದು ಬೊಜ್ಜನ್ನು ಸೂಚಿಸುವ ಮೊದಲ ಎಚ್ಚರಿಕೆಯ ಸಂಕೇತಗಳಲ್ಲೊಂದಾಗಿದೆ. ಮಾನವನ ಅಸ್ಥಿಪಂಜರವು ನಿರ್ದಿಷ್ಟ ಭಾರವನ್ನು ಸಹಿಸಿಕೊಳ್ಳುವಂತೆ ರಚನೆಯಾಗಿರುತ್ತದೆ. ಬೆನ್ನಿನ ಮೇಲೆ ಹೆಚ್ಚಿನ ಒತ್ತಡವುಂಟಾದಾಗ ಅಸ್ಥಿಪಂಜರವು ಅದನ್ನು ತಾಳಿಕೊಳ್ಳುವ ಸ್ಥಿತಿಯಲ್ಲಿರುವುದಿಲ್ಲ ಮತ್ತು ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ಆದಷ್ಟು ಶೀಘ್ರ ಮೂಳೆತಜ್ಞರನ್ನು ಸಂಪರ್ಕಿಸಬೇಕಾಗುತ್ತದೆ. ಸೂಕ್ತ ಕಾಳಜಿಯನ್ನು ವಹಿಸದಿದ್ದರೆ ಇದು ಸ್ಪಾಂಡಿಲೊಲಿಸಿಸ್ ಮತ್ತು ಬೆನ್ನುಮೂಳೆಯ ಮುರಿತದಂತಹ ಹೆಚ್ಚು ಗಂಭೀರವಾದ ಸಮಸ್ಯೆಗಳನ್ನುಂಟು ಮಾಡಬಹುದು. ಈ ತೊಂದರೆಗಳು ಶಾಶ್ವತ ಅಂಗವೈಕಲ್ಯಕ್ಕೂ ಕಾರಣವಾಗಬಹುದು.

►ಹೊರಗೆ ತಿರುಗಾಡಲು ಹಿಂಜರಿಕೆ

ಭಾರತೀಯ ಸಮಾಜದಲ್ಲಿ ಬೊಜ್ಜುದೇಹಿಗಳನ್ನು ಕುಹಕದ ದೃಷ್ಟಿಯಿಂದ ಕಾಣಲಾಗುತ್ತದೆ. ಹೀಗಾಗಿ ಬೊಜ್ಜುದೇಹಿಗಳು ಜನರ ಜೊತೆ ಸೇರುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಮತ್ತು ಸಾಮಾಜಿಕ ಕೂಟಗಳಿಂದ ದೂರವುಳಿದು ಕೂಪಮಂಡೂಕಗಳಂತಾಗುತ್ತಾರೆ. ಇವೆಲ್ಲದರ ಪರಿಣಾಮವಾಗಿ ಅಂತಹ ವ್ಯಕ್ತಿಗಳು ಉದ್ವೇಗ,ಖಿನ್ನತೆಯಂತಹ ಸಮಸ್ಯೆಗಳಿಗೆ ಗುರಿಯಾಗುತ್ತಾರೆ. ಇದು ಬೊಜ್ಜಿನ ಮೊದಲ ಎಚ್ಚರಿಕೆಯ ಸಂಕೇತಗಳಲ್ಲೊಂದಾಗಿದೆ. ಹೀಗಾಗಿ ನಾಲ್ಕು ಜನರ ಮಧ್ಯೆಯಿದ್ದಾಗ ನಿಮ್ಮನ್ನ ಠೊಣಪ,ಧಡಿಯ ಎಂಬೆಲ್ಲ ಅಡ್ಡಹೆಸರುಗಳಿಂದ ಕರೆದರೆ ನೀವು ಬೊಜ್ಜುದೇಹಿಯಾಗುತ್ತಿದ್ದೀರಿ ಎಂದು ತಿಳಿದುಕೊಳ್ಳಬೇಕಾಗುತ್ತದೆ ಮತ್ತು ವೈದ್ಯರನ್ನು ಕಂಡು ಬೊಜ್ಜು ನಿಮ್ಮನ್ನು ಸಂಪೂರ್ಣವಾಗಿ ಆಕ್ರಮಿಸಿಕೊಳ್ಳದಂತೆ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.

►ವೆರಿಕೋಸ್ ವೇನ್ಸ್

ರಕ್ತನಾಳಗಳ ಭಿತ್ತಿಗಳು ದುರ್ಬಲಗೊಂಡಾಗ ಅವು ಉಬ್ಬಿಕೊಳ್ಳುತ್ತವೆ. ಇದು ಅತ್ಯಂತ ಅನಾರೋಗ್ಯಕರವಾಗಿದ್ದು ಶರೀರದ ಒಟ್ಟಾರೆ ಶಕ್ತಿಯ ಮೇಲೆ ದುಷ್ಪರಿಣಾಮವನ್ನು ಉಂಟು ಮಾಡುತ್ತದೆ. ಇಂತಹ ಉಬ್ಬಿದ ರಕ್ತನಾಳಗಳು ಹೊರಗಿನಿಂದ ನೇರಳೆ ಅಥವಾ ನೀಲಿ ಬಣ್ಣದಲ್ಲಿ ಕಂಡು ಬರುತ್ತವೆ ಮತ್ತು ಕೆಂಪು ಲೋಮನಾಳಗಳಿಂದ ಸುತ್ತುವರಿದಿರುತ್ತವೆ. ಆಂತರಿಕವಾಗಿ ಅತ್ಯಂತ ಯಾತನೆಯನ್ನು ನೀಡುತ್ತವೆ ಮತ್ತು ನಡಿಗೆಯಂತಹ ಸರಳ ಚಟುವಟಿಕೆಯೂ ಕೂಡ ಕಷ್ಟವಾಗುತ್ತದೆ. ನಿಮ್ಮಲ್ಲಿ ಉಬ್ಬಿದ ರಕ್ತನಾಳಗಳು ಕಂಡುಬಂದರೆ ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಲು ಇದು ಸಕಾಲವಾಗಿದೆ.

►ಎದೆಉರಿ

ಪದೇ ಪದೇ ಆಮ್ಲೀಯತೆ ದಾಳಿಯಿಡುವುದು ಬೊಜ್ಜಿನ ಇನ್ನೊಂದು ಸಂಕೇತವಾಗಿದೆ. ಅತಿಯಾದ ಕೊಬ್ಬು ಜೀರ್ಣಾಂಗದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ವಿಶೇಷವಾಗಿ ಕುತ್ತಿಗೆಯಲ್ಲಿ ಮತ್ತು ಸುತ್ತಮುತ್ತ ಕೊಬ್ಬು ಸಂಗ್ರಹವಾಗಿದ್ದಾಗ ಇದು ಸಾಮಾನ್ಯವಾಗಿದೆ. ಈ ಭಾರೀ ಒತ್ತಡದಿಂದಾಗಿ ಜಠರದಲ್ಲಿನ ಆಹಾರವು ಅನ್ನನಾಳದತ್ತ ಮರಳಿ ತಳ್ಳಲ್ಪಡುತ್ತದೆ. ಇದು ಆಮ್ಲೀಯತೆಯನ್ನುಂಟು ಮಾಡಿ ಎದೆಯುರಿ,ವಾಯು,ಹೊಟ್ಟೆಯುಬ್ಬರ ಇತ್ಯಾದಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಯಾವಾಗಲೋ ಒಮ್ಮೆ ಇಂತಹ ತೊಂದರೆಗಳು ಕಾಣಿಸಿಕೊಂಡರೆ ಚಿಂತಿಸಬೇಕಿಲ್ಲ. ಆದರೆ ಪದೇ ಪದೇ ಅನುಭವವಾಗುತ್ತಿದ್ದರೆ ಆಹಾರ ಕ್ರಮವನ್ನು ಬದಲಿಸಿ, ಕಡಿಮೆ ಆಹಾರ ಸೇವನೆಯನ್ನು ಆರಂಭಿಸಬೇಕಾಗುತ್ತದೆ. ಕರಿದ ಪದಾರ್ಥಗಳಿಂದ ದೂರವಿದ್ದಷ್ಟೂ ಒಳ್ಳೆಯದು.

►ಗೊರಕೆ

ಇದು ಗಂಭೀರ ಆರೋಗ್ಯ ಸಮಸ್ಯೆಯಲ್ಲ ಮತ್ತು ವೈದ್ಯಕೀಯವಾಗಿ ಕಳವಳಗೊಳ್ಳಬೇಕಾದ ವಿಷಯವೇನಲ್ಲ. ಆದರೆ ಬೊಜ್ಜುದೇಹಿಗಳು ಆರೋಗ್ಯಕರವಾದ ತೂಕವನ್ನು ಹೊಂದಿರುವ ಇತರರಿಗಿಂತ ಹೆಚ್ಚು ಗೊರಕೆ ಹೊಡೆಯುತ್ತಾರೆ ಎನ್ನುವುದು ಕಟುಸತ್ಯವಾಗಿದೆ. ದೇಹತೂಕದಲ್ಲಿ ದಿಢೀರ್ ಹೆಚ್ಚಳವು ಸ್ಲೀಪ್ ಅಪ್ನಿಯಾ ಅಥವಾ ನಿದ್ರೆಯಲ್ಲಿ ಉಸಿರುಗಟ್ಟುವ ಅಪಾಯವನ್ನು ಹೆಚ್ಚಿಸುತ್ತದೆ. ಇದಕ್ಕೆ ವ್ಯಕ್ತಿಯ ಕತ್ತಿನ ಸುತ್ತ ಶೇಖರಗೊಂಡಿರುವ ಕೊಬ್ಬು ಮುಖ್ಯ ಕಾರಣವಾಗಿದೆ. ಪರಿಣಾಮವಾಗಿ ವ್ಯಕ್ತಿಯ ಗೊರಕೆಯ ಶಬ್ದ ತೀರ ಹೆಚ್ಚುತ್ತದೆ.

►ಅನಿಯಮಿತ ಮುಟ್ಟಿನ ಅವಧಿ

ಬೊಜ್ಜು ಮಹಿಳೆಯರಲ್ಲಿ ಸಂತಾನೋತ್ಪತ್ತಿ ಚಕ್ರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಮತ್ತು ಅನಿಯಮಿತ ಮುಟ್ಟಿನ ಅವಧಿಗಳು ಬೊಜ್ಜಿನ ಮೊದಲ ಎಚ್ಚರಿಕೆಯನ್ನು ನೀಡುತ್ತವೆ. ದೇಹದಲ್ಲಿರುವ ಕೊಬ್ಬಿನ ಹೆಚ್ಚುವರಿ ಪದರಗಳು ಹಾರ್ಮೋನ್ ಸಮತೋಲನವನ್ನು ಬುಡಮೇಲುಗೊಳಿಸುತ್ತವೆ ಮತ್ತು ಮುಟ್ಟು ಅವಧಿಗೆ ಮೊದಲೇ ಅಥವಾ ಅವಧಿಯನ್ನು ಮೀರಿ ಸಂಭವಿಸಬಹುದು. ಕೆಲವು ಪ್ರಕರಣಗಳಲ್ಲಿ ಮುಟ್ಟು ನಿರಂತರ ರಕ್ತಸ್ರಾವದೊಂದಿಗೆ ಹತ್ತು ದಿನಗಳವರೆಗೂ ಮುಂದುವರಿಯಬಹುದು. ಇತರ ಪ್ರಕರಣಗಳಲ್ಲಿ 2-3 ತಿಂಗಳುಗಳವರೆಗೂ ರಜಸ್ವಲೆಯಾಗದಿರಬಹುದು. ಈ ಎರಡೂ ಸಂದರ್ಭಗಳಲ್ಲಿ ವಿಳಂಬ ಮಾಡದೇ ವೈದ್ಯರನ್ನು ಕಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News