ಒಂದೇ ಚುನಾವಣೆ ಎಂಬ ಇನ್ನೊಂದು ಹುನ್ನಾರ
ಏಕಕಾಲಕ್ಕೆ ಚುನಾವಣೆ ಎಂಬುದು ಯಾವುದೇ ಸರಕಾರವನ್ನು ಮತದಾನದ ಮೂಲಕ ಕೆಳಗಿಳಿಸಲು ಚುನಾಯಿತ ಶಾಸಕರು ಮತ್ತು ಲೋಕಸಭಾ ಸದಸ್ಯರಿಗೆ ಇರುವ ಹಕ್ಕಿನ ಮೇಲೆ ಕಡಿವಾಣ ಹಾಕಿದಂತಾಗುತ್ತದೆ. ಬಹುಮತ ಹೊಂದಿರುವ ಒಂದು ಆಳುವ ಪಕ್ಷ, ಸದನದ ವಿಸರ್ಜನೆಗೆ ಶಿಫಾರಸು ಮಾಡಿ, ಮಧ್ಯಂತರ ಚುನಾವಣೆ ನಡೆಸುವುದಕ್ಕೆ ಇರುವ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ.
ಒಂದೇ ದೇಶ, ಒಂದೇ ಪಕ್ಷ, ಒಬ್ಬನೇ ನಾಯಕ ಎಂಬ ಸಿದ್ಧಾಂತವನ್ನು ಆಧರಿಸಿ ರಾಷ್ಟ್ರಕ್ಕೆ ಒಂದೇ ಚುನಾವಣೆ ನಡೆಸುವ ಪ್ರಸ್ತಾವನೆ ಈಗ ಚರ್ಚೆಯ ವಿಷಯವಾಗಿದೆ. ಶೇ.31ರಷ್ಟು ಮತಗಳನ್ನು ಮಾತ್ರ ಪಡೆದು ಅಧಿಕಾರ ಸೂತ್ರ ಹಿಡಿದ ಬಿಜೆಪಿ ಈ ಬಗ್ಗೆ ವಿಶೇಷ ಆಸಕ್ತಿಯನ್ನು ವಹಿಸಿದೆ. ನಿರೀಕ್ಷಿಸಿದಂತೆ, ಕಾಂಗ್ರೆಸ್ ಮತ್ತು ಎಡಪಕ್ಷಗಳಿಂದ ಈ ಪ್ರಸ್ತಾವನಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇತರ ಪ್ರತಿಪಕ್ಷಗಳು ವಿರೋಧಿಸಿವೆ. ಲೋಕಸಭೆೆ ಮತ್ತು ರಾಜ್ಯಗಳ ವಿಧಾನಸಭೆೆಗಳಿಗೆ ಆಗಾಗ ನಡೆಯುವ ಚುನಾವಣೆಗಳಿಂದ ಉಂಟಾಗುವ ಖರ್ು ವೆಚ್ಚವನ್ನು ಕಡಿಮೆ ಮಾಡಲು ಈ ಪ್ರಸ್ತಾವನೆ ಸೂಕ್ತವಾಗಿದೆ ಎಂದು ಬಿಜೆಪಿ ಮಾತ್ರವಲ್ಲ, ಆ ಪಕ್ಷದ ಕೃಪಾಪೋಷಿತ ಪತ್ರಕರ್ತರು ಮತ್ತು ಅಂಕಣಕಾರರು ಇದಕ್ಕೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಮುಗಿದಿದೆ. ಇನ್ನು ಕೆಲವೇ ತಿಂಗಳಲ್ಲಿ ಮಧ್ಯಪ್ರದೇಶ, ಛತ್ತೀಸ್‌ಗಡ ಮತ್ತು ರಾಜಸ್ಥಾನ ರಾಜ್ಯಗಳಿಗೆ ಚುನಾವಣೆಗಳು ನಡೆಯಬೇಕಿದೆ. ನಂತರ ಮುಂದಿನ ಒಂಬತ್ತು ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರವ್ಯಾಪಿ ಐದು ವರ್ಷಕ್ಕೊಮ್ಮೆ ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ ನಡೆಸುವುದರಿಂದ ಹಣದ ಉಳಿತಾಯವಾಗುತ್ತದೆ ಎಂದು ಜನರನ್ನು ನಂಬಿಸುವ ಪ್ರಯತ್ನ ಆಳುವ ವರ್ಗದಿಂದ ನಡೆದಿದೆ.
ಆದರೆ ತಮ್ಮ ಅನುಕೂಲಕ್ಕಾಗಿ ಇಂಥ ತರ್ಕ ಮಂಡಿಸುವವರಿಗೆ ದೇಶದ ಸಂವಿಧಾನದ ಬಗ್ಗೆ ಅರಿವಿಲ್ಲ. ಭಾರತ ಒಂದು ಒಕ್ಕೂಟ ಎಂಬುದನ್ನು ಅವರು ಒಪ್ಪಿಕೊಳ್ಳುವುದಿಲ್ಲ. ಈ ದೇಶ ವಿಭಿನ್ನ ಧರ್ಮ, ಭಾಷೆ, ಸಂಸ್ಕೃತಿ, ಜನಾಂಗ ಮತ್ತು ರಾಷ್ಟ್ರೀಯತೆಗಳನ್ನು ಒಳಗೊಂಡ ಒಕ್ಕೂಟ. ಈ ವೈವಿಧ್ಯತೆಯೇ ಈ ನೆಲದ ಜೀವಸತ್ವವಾಗಿದೆ. ಈ ವೈವಿಧ್ಯತೆಯನ್ನು ನಾಶ ಮಾಡಿ, ಏಕ ಸಂಸ್ಕೃತಿ ಮತ್ತು ಏಕ ಧರ್ಮವನ್ನು ಹೇರಲು ಹೊರಟರೆ, ಈ ಒಕ್ಕೂಟ ಒಡೆದು ಚೂರುಚೂರಾಗುತ್ತದೆ. ಇಂತಹ ವೈವಿಧ್ಯತೆ ಹೊಂದಿದ ದೇಶದಲ್ಲಿ ನಮ್ಮ ಸಂವಿಧಾನ ನಿರ್ಮಾಪಕರು ಪೆಡೆರಲ್ ಆಡಳಿತ ವ್ಯವಸ್ಥೆಯನ್ನು ಜಾರಿಗೆ ತಂದರು. ಈ ಎಲ್ಲಾ ಅಂಶಗಳನ್ನು ಪರಿಗಣಿಸಿದಾಗ, ಲೋಕಸಭೆ ಮತ್ತು ರಾಜ್ಯದ ವಿಧಾನಸಭೆೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದರ ಉದ್ದೇಶ ಏನೇ ಆಗಿರಲಿ, ಅದು ಕಾರ್ಯಸಾಧ್ಯವಲ್ಲ.
ಹಣಕಾಸು ಉಳಿತಾಯದ ನೆಪ ಮುಂದೆ ಮಾಡಿ, ಒಂದೇ ಚುನಾವಣೆ ಹೆಸರಿನಲ್ಲಿ ದೇಶದಲ್ಲಿ ಏಕಪಕ್ಷ ಮತ್ತು ಏಕವ್ಯಕ್ತಿ ಸರ್ವಾಧಿಕಾರವನ್ನು ಹೇರುವ ದುರುದ್ದೇಶವನ್ನು ಈ ಪ್ರಸ್ತಾವನೆ ಹೊಂದಿದೆ. ಇದು ಮೂಲಭೂತವಾಗಿ ಸಂವಿಧಾನ ವಿರೋಧಿ ಮತ್ತು ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶ ಮಾಡಿ, ಅಧ್ಯಕ್ಷೀಯ ಮಾದರಿಯನ್ನು ದೇಶದ ಮೇಲೆ ಹೇರುವ ಒಳ ಸಂಚು ಇದರಲ್ಲಿ ಅಡಗಿದೆ. ಏಕಕಾಲಕ್ಕೆ ಚುನಾವಣೆ ನಡೆಸಲು ಸಂವಿಧಾನಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಅದಕ್ಕಾಗಿ ರಾಜಕೀಯ ಪಕ್ಷಗಳ ಮತ್ತು ವಿವಿಧ ಸಂಘಸಂಸ್ಥೆಗಳ ಅಭಿಪ್ರಾಯ ಸಂಗ್ರಹಿಸುವ ಪ್ರಕ್ರಿಯೆ ಆರಂಭವಾಗಿದೆ. ಇದರ ಅಪಾಯವನ್ನು ಅರಿತು ವಿರೋಧವೂ ವ್ಯಕ್ತವಾಗುತ್ತಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ನಾಲ್ಕು ಸಾರ್ವತ್ರಿಕ ಚುನಾವಣೆಗಳು ಬಹುತೇಕ ಏಕಕಾಲಕ್ಕೆ ನಡೆದವು ಎಂಬುದೇನೋ ನಿಜ. ಆಗ ಕೇಂದ್ರ ಮತ್ತು ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿ ಇದ್ದುದರಿಂದ ಏಕಕಾಲದ ಚುನಾವಣೆಗೆ ಅಂತಹ ತೊಂದರೆ ಆಗಲಿಲ್ಲ. 1967ರ ನಂತರ ಹಲವಾರು ರಾಜ್ಯಗಳ ವಿಧಾನಸಭೆಗಳಲ್ಲಿ ಕಾಂಗ್ರೆಸ್ ಬಹುಮತ ಕಳೆದುಕೊಂಡು ಪ್ರತಿಪಕ್ಷಗಳು ಸಂಯುಕ್ತ ರಚಿಸಿಕೊಂಡು ಅಧಿಕಾರಕ್ಕೆ ಬಂದವು. ಆನಂತರ ಸದನಗಳು ಅವಧಿಯ ಮುನ್ನವೇ ವಿಸರ್ಜನೆಗೊಳ್ಳುವ ಅನಿವಾರ್ಯ ಸ್ಥಿತಿ ನಿರ್ಮಾಣವಾಯಿತು. ಕ್ರಮೇಣ ಲೋಕಸಭೆೆ ಮತ್ತು ರಾಜ್ಯದ ವಿಧಾನಸಭೆಗಳಿಗೆ ಬೇರೆ ಬೇರೆ ಸಂದರ್ಭದಲ್ಲಿ ಚುನಾವಣೆ ನಡೆಸಬೇಕಾಗಿ ಬಂತು. ಇದು ಜನತಂತ್ರದ ಸಹಜ ಪ್ರಕ್ರಿಯೆ. ಏಕಕಾಲದಲ್ಲಿ ಚುನಾವಣೆ ನಡೆಸುವುದಕ್ಕಾಗಿ ಒಮ್ಮೆ ವಿಸರ್ಜನೆಗೊಂಡ ಸದನವನ್ನು ಮುಂದಿನ ಐದು ವರ್ಷಗಳವರೆಗೆ ಅಮಾನತಿನಲ್ಲಿ ಇಡಲು ಬರುವುದಿಲ್ಲ. ಮತ್ತೆ ಜನರ ಬಳಿ ಹೋಗಿ ಆದೇಶ ಪಡೆಯಲೇಬೇಕಾಗುತ್ತದೆ.
ಅಧ್ಯಕ್ಷೀಯ ಮಾದರಿಯ ವ್ಯವಸ್ಥೆಯಲ್ಲಿ ಕಾರ್ಯಾಂಗ ಮತ್ತು ಶಾಸಕಾಂಗ ಎರಡಕ್ಕೂ ನಿಶ್ಚಿತ ಅವಧಿಯನ್ನು ನಿಗದಿಪಡಿಸಬಹುದು. ಆದರೆ, ಸಂಸದೀಯ ವ್ಯವಸ್ಥೆಯಲ್ಲಿ ಚುನಾಯಿತ ಸದನದ ಅವಧಿಯನ್ನು ನಿರ್ದಿಷ್ಟಪಡಿಸಲು ಆಗುವುದಿಲ್ಲ. ಯಾವುದೇ ಪಕ್ಷಕ್ಕೆ ಅಥವಾ ಮೈತ್ರಿಕೂಟಕ್ಕೆ ಸದನದಲ್ಲಿ ಬಹುಮತ ಇಲ್ಲದಿದ್ದರೆ, ಅವಧಿಗೂ ಮುನ್ನವೇ ಸದನ ವಿಸರ್ಜನೆಗೊಂಡು ಮಧ್ಯಂತರ ಚುನಾವಣೆ ನಡೆಸಬೇಕಾಗುತ್ತದೆ. ಇದು ನಾವು ಒಪ್ಪಿಕೊಂಡ ಸಂಸದೀಯ ಪ್ರಜಾಪ್ರಭುತ್ವ ಸಹಜ ಸ್ವರೂಪ. ಇದರ ಅರಿವಿಲ್ಲದೆ ಏಕಕಾಲದಲ್ಲಿ ಚುನಾವಣೆ ನಡೆಸುತ್ತೇವೆ ಎಂಬುದು ಮೂರ್ಖತನವಾಗುತ್ತದೆ.
ರಾಜ್ಯ ವಿಧಾನಸಭೆೆ ಚುನಾವಣೆಗಳನ್ನು ಲೋಕಸಭೆೆ ಚುನಾವಣೆಗಳ ಜೊತೆ ನಡೆಸುವ ಪ್ರಸ್ತಾವನೆ ಒಕ್ಕೂಟ ತತ್ವಕ್ಕೆ ವಿರೋಧವಾಗಿದೆ. ಕೇಂದ್ರ ಸರಕಾರ 356ನೇ ವಿಧಿಯನ್ನು ದುರುಪಯೋಗ ಪಡಿಸಿಕೊಂಡು ರಾಜ್ಯಗಳ ಚುನಾಯಿತ ಸರಕಾರಗಳನ್ನು ವಜಾ ಮಾಡುತ್ತಾ ಬಂದ ಪರಿಣಾಮವಾಗಿ ರಾಜ್ಯ ವಿಧಾನಸಭೆೆಗಳಿಗೆ ಪ್ರತ್ಯೇಕ ಚುನಾವಣೆ ನಡೆಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. 1959ರಲ್ಲಿ ಕೇರಳದಲ್ಲಿ ಇ.ಎಂ.ಎಸ್. ನಂಬೂದ್ರಿಪಾಡ್ ನೇತೃತ್ವದ ಕಮ್ಯುನಿಸ್ಟ್ ಸರಕಾರವನ್ನು ವಜಾ ಮಾಡುವುದರೊಂದಿಗೆ ಈ ಕೆಟ್ಟ ಪರಂಪರೆ ಆರಂಭವಾಯಿತು.
ಈಗ ಅಧಿಕಾರದಲ್ಲಿರುವ ಬಿಜೆಪಿಗೆ ಮತ್ತು ಆ ಪಕ್ಷದ ಪ್ರಧಾನ ಮಂತ್ರಿಗೆ ಮತ್ತು ಇವರೆಲ್ಲರನ್ನೂ ನಿಯಂತ್ರಿಸುತ್ತಿರುವ ಸಂಘ ಪರಿವಾರಕ್ಕೆ ವೈವಿಧ್ಯದಿಂದ ಕೂಡಿದ ಬಹುಮುಖ ಭಾರತ ಬೇಕಾಗಿಲ್ಲ. ದೇಶದ ಅನೇಕತೆಯನ್ನು ನಾಶಪಡಿಸಿ, ಒಂದೇ ಮನುವಾದಿ ಸಂಸ್ಕೃತಿಯನ್ನು ಮತ್ತು ಧರ್ಮವನ್ನು ಹಾಗೂ ಏಕನಾಯಕನನ್ನು ದೇಶದ ಮೇಲೆ ಹೇರುವ ಮಸಲತ್ತು ಅವು ನಡೆಸಿವೆ. ಈ ಗುರಿ ಸಾಧನೆಗೆ ಸಂಸದೀಯ ಪ್ರಜಾಪ್ರಭುತ್ವ ವ್ಯವಸ್ಥೆ ಅಡ್ಡಿಯಾಗಿದೆ. ಅದಕ್ಕಾಗಿ ಇದನ್ನು ಬದಲಿಸಿ, ದೇಶದ ಮೇಲೆ ಅಧ್ಯಕ್ಷೀಯ ವ್ಯವಸ್ಥೆಯನ್ನು ಹೇರುವ ಹುನ್ನಾರ ನಡೆಸಿದೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾಪವನ್ನು ದೇಶದ ಮುಂದಿಟ್ಟು, ಜನರು ಅದನ್ನು ಒಪ್ಪಿಕೊಳ್ಳುವಂತೆ ಮಾಡಿ ಒಮ್ಮೆಲೇ ಚುನಾವಣೆ ನಡೆಸಿ, ಒಂದೇ ಪಕ್ಷದ ಸರಕಾರವನ್ನು ಇಡೀ ದೇಶದ ಮೇಲೆ ಹೇರುವ ದುಸ್ಸಾಹಸಕ್ಕೆ ಅದು ಕೈ ಹಾಕಿದೆ. ಈ ಪ್ರಸ್ತಾವನೆ ಪ್ರತಿಪಕ್ಷಗಳಿಗೆ ಮಾತ್ರವಲ್ಲ, ಪ್ರಾದೇಶಿಕ ಪಕ್ಷಗಳಿಗೂ ಅಪಾಯಕಾರಿಯಾಗಿದೆ. ದಕ್ಷಿಣ ಭಾರತದ ದ್ರಾವಿಡ ರಾಜ್ಯಗಳ ಮೇಲೆ ಉತ್ತರ ಭಾರತದ ಸರ್ವಾಧಿಕಾರವನ್ನು ಹೇರುವ ಮತ್ತು ಕನ್ನಡ, ತಮಿಳು, ತೆಲುಗು, ಮಲೆಯಾಳಂ ಭಾಷೆಗಳ ಭಾಷಾ ಅಸ್ಮಿತೆಯನ್ನೇ ನಾಶ ಮಾಡುವ ಕುತಂತ್ರ ಇದರಲ್ಲಿ ಅಡಗಿದೆ.
ಡಾ. ಅಂಬೇಡ್ಕರ್ ಹೇಳಿದಂತೆ, ಉತ್ತರದ ರಾಜ್ಯಗಳು ಕಂದಾಚಾರ ಹಾಗೂ ಪಾಳೇಗಾರಿಕೆ ವೌಲ್ಯಗಳನ್ನು ಹೊಂದಿದ ರಾಜ್ಯಗಳಾಗಿವೆ. ಇವುಗಳಿಗೆ ಹೋಲಿಸಿದರೆ, ದಕ್ಷಿಣದ ರಾಜ್ಯಗಳು ವೈಚಾರಿಕವಾಗಿ ಪ್ರಗತಿಪರ, ಸುಧಾರಣಾವಾದಿ ಆಶಯಗಳನ್ನು ಹೊಂದಿದ ರಾಜ್ಯಗಳಾಗಿವೆ. ಇವುಗಳ ಮೇಲೆ ಉತ್ತರದ ಯಜಮಾನಿಕೆ ಸರಿಯಲ್ಲ.
ಈ ದೇಶದಲ್ಲಿ 29 ರಾಜ್ಯಗಳಿವೆ. ಲೋಕಸಭೆಗೆ ಚುನಾವಣೆ ನಡೆದಾಗ, ಈ ರಾಜ್ಯಗಳ ಮತದಾನದ ಸ್ವರೂಪ ಬೇರೆಯಾಗಿರುತ್ತದೆ. ಆದರೆ, ರಾಜ್ಯಗಳ ವಿಧಾನ ಸಭೆೆ ಚುನಾವಣೆ ನಡೆದಾಗ, ಜನರ ಆಯ್ಕೆ ಬೇರೆಯಾಗಿರುತ್ತದೆ. ಲೋಕಸಭೆೆ ಚುನಾವಣೆಯಲ್ಲಿ ಒಂದು ಪಕ್ಷವನ್ನು ಬೆಂಬಲಿಸುವ ಜನ, ರಾಜ್ಯಗಳ ವಿಧಾನಸಭೆೆ ಚುನಾವಣೆ ಗಳಲ್ಲಿ ಇನ್ನೊಂದು ಪಕ್ಷವನ್ನು ಬೆಂಬಲಿಸುತ್ತಾರೆ. 2013ರ ವಿಧಾನಸಭೆ ಚುನಾವಣೆ ಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸನ್ನು ಬೆಂಬಲಿಸಿದ ಜನರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ನೀಡಿದರು. ಬಿಹಾರ ಮತ್ತು ದಿಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ತಿರಸ್ಕರಿಸಿದ ಮತದಾರರು ಲೋಕಸಭಾ ಚುನಾವಣೆಯಲ್ಲಿ ಅದೇ ಪಕ್ಷವನ್ನು ಬೆಂಬಲಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ಜನಾದೇಶಗಳು ಭಿನ್ನಭಿನ್ನವಾಗಿ ಹೊರಹೊಮ್ಮುತ್ತವೆ. ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಈ ಜನಾದೇಶವನ್ನು ಏಕತ್ರಗೊಳಿಸುವ ದುಸ್ಸಾಹಸಕ್ಕೆ ಕೈ ಹಾಕಿದರೆ, ಈ ದೇಶ ಒಂದಾಗಿ ಉಳಿಯುವುದಿಲ್ಲ.
ಏಕಕಾಲಕ್ಕೆ ಚುನಾವಣೆ ಎಂಬುದು ಯಾವುದೇ ಸರಕಾರವನ್ನು ಮತದಾನದ ಮೂಲಕ ಕೆಳಗಿಳಿಸಲು ಚುನಾಯಿತ ಶಾಸಕರು ಮತ್ತು ಲೋಕಸಭಾ ಸದಸ್ಯರಿಗೆ ಇರುವ ಹಕ್ಕಿನ ಮೇಲೆ ಕಡಿವಾಣ ಹಾಕಿದಂತಾಗುತ್ತದೆ. ಬಹುಮತ ಹೊಂದಿರುವ ಒಂದು ಆಳುವ ಪಕ್ಷ, ಸದನದ ವಿಸರ್ಜನೆಗೆ ಶಿಫಾರಸು ಮಾಡಿ, ಮಧ್ಯಂತರ ಚುನಾವಣೆ ನಡೆಸುವುದಕ್ಕೆ ಇರುವ ಹಕ್ಕನ್ನು ಮೊಟಕುಗೊಳಿಸಿದಂತಾಗುತ್ತದೆ.
ಈಗ ಕೇಂದ್ರದಲ್ಲಿ ಅಧಿಕಾರ ಸೂತ್ರ ಹಿಡಿದಿರುವ ಪಕ್ಷ ಮತ್ತು ಪ್ರಧಾನಿಗೆ ದೇಶದಲ್ಲಿರುವ ಪ್ರತಿಪಕ್ಷಗಳ ಸರಕಾರವನ್ನು ಸಹಿಸಲು ಆಗುತ್ತಿಲ್ಲ. ಅಂತಲೇ ದಿಲ್ಲಿಯ ಕೇಜ್ರಿವಾಲ್ ಸರಕಾರಕ್ಕೆ ನಾನಾ ತರಹದ ಕಿರುಕುಳ ನೀಡಲಾಯಿತು. ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಪ್ರಧಾನ ಮಂತ್ರಿಯ ಭೇಟಿಗೆ ಅವಕಾಶ ಕೇಳಿದರೆ, ಅವಕಾಶ ನಿರಾಕರಿಸಲಾಯಿತು.
ಅಂಬಾನಿ, ಅದಾನಿಯವರ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಪ್ರಧಾನಿ ಮೋದಿಯವರಿಗೆ ಬಿಜೆಪಿಯೇತರ ರಾಜ್ಯಗಳ ಮುಖ್ಯಮಂತ್ರಿಗಳನ್ನು ಭೇಟಿಯಾಗಲು ಪುರಸೂತ್ತು ಇಲ್ಲ. ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಮುಖ್ಯಮಂತ್ರಿ ಇರಬೇಕೆಂದು ಅವರು ಬಯಸುತ್ತಾರೆ. ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗಿನಿಂದ ಕಾಂಗ್ರೆಸ್ ಮುಕ್ತ ಭಾರತ ಎಂದು ಹೇಳುತ್ತಲೇ ಇದ್ದಾರೆ. ವಾಸ್ತವವಾಗಿ ಇದು, ಕಾಂಗ್ರೆಸ್ ಮುಕ್ತವಲ್ಲ. ಪ್ರತಿಪಕ್ಷ ಮುಕ್ತ ಭಾರತ ನಿರ್ಮಿಸುವುದು ಇವರ ಗುರಿಯಾಗಿದೆ. ಪ್ರತಿಪಕ್ಷಗಳು ಇಲ್ಲದ ದೇಶದಲ್ಲಿ ಪ್ರಜಾಪ್ರಭುತ್ವ ಸುರಕ್ಷಿತವಾಗಿ ಇರುವುದಿಲ್ಲ. ಆದ್ದರಿಂದ ಈ ದೇಶದ ಜನರೇ ಪ್ರಜಾಪ್ರಭುತ್ವವನ್ನು ಕಾಪಾಡಬೇಕಾಗಿದೆ.