ಮಲಬದ್ಧತೆಯ ಐದು ಸಾಮಾನ್ಯ ಕಾರಣಗಳು

Update: 2018-07-19 09:26 GMT

ಮಲಬದ್ಧತೆ ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿದ್ದು,ಅನಾರೋಗ್ಯಕರ ಆಹಾರ ಸೇವನೆ,ದ್ರವಸೇವನೆಯ ಕೊರತೆ ಮತ್ತು ದೈಹಿಕ ಜಡತೆ ಇತ್ಯಾದಿಗಳು ಇದಕ್ಕೆ ಕಾರಣವಾಗುತ್ತವೆ. 2014ರಲ್ಲಿ ಜರ್ನಲ್ ಆಫ್ ಗ್ಯಾಸ್ಟ್ರೊಎಂಟರಾಲಜಿ ನರ್ಸಿಂಗ್‌ನಲ್ಲಿ ಪ್ರಕಟಗೊಂಡಿದ್ದ ಅಧ್ಯಯನ ವರದಿಯಂತೆ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಮಲಬದ್ಧತೆಯ ತೊಂದರೆಯನ್ನು ಅನುಭವಿಸುತ್ತಾರೆ.

ಏನಿದು ಮಲಬದ್ಧತೆ?

ಹಲವಾರು ಏಷ್ಯನ್ ರಾಷ್ಟ್ರಗಳಲ್ಲಿ ಶೇ.90ಕ್ಕೂ ಅಧಿಕ ಜನರಿಗೆ ಸಾಮಾನ್ಯವಾಗಿ ದಿನಕ್ಕೆ ಒಂದೆರಡು ಬಾರಿ ಮಲವಿಸರ್ಜನೆಯಾಗುತ್ತದೆ. ಭಾರತೀಯ ರೋಗಿಗಳಲ್ಲಿ ಮಲಬದ್ಧತೆಯ ಲಕ್ಷಣಗಳ ಕುರಿತು 2016ರಲ್ಲಿ ನಡೆಸಲಾದ ಅಧ್ಯಯನದಂತೆ ವಾರಕ್ಕೆ ಐದು ಬಾರಿಗಿಂತ ಕಡಿಮೆ ಮಲವಿಸರ್ಜನೆಯನ್ನು ಮಲಬದ್ಧತೆ ಎಂದು ಪರಿಗಣಿಸಬಹುದು. ಮಲಬದ್ಧತೆಗೆ ಕಾರಣವೇನು?

ಮಹಿಳೆಯರಲ್ಲಿ ಗರ್ಭಾವಸ್ಥೆಯಲ್ಲಿ ಮಲಬದ್ಧತೆಯು ಸಾಮಾನ್ಯವಾಗಿದೆ. 60ಕ್ಕಿಂತ ಹೆಚ್ಚು ಪ್ರಾಯದ ವ್ಯಕ್ತಿಗಳಲ್ಲಿಯೂ ಈ ಸಮಸ್ಯೆ ಹೆಚ್ಚು. ಇದು ವ್ಯಕ್ತಿಗೆ ದೈನಂದಿನ ಜೀವನದಲ್ಲಿ ಕಿರಿಕಿರಿಯನ್ನುಂಟು ಮಾಡುತ್ತದೆ,ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಮಲಬದ್ಧತೆಗೆ ನಿಖರ ಕಾರಣಗಳು ಗೊತ್ತಾಗುವುದಿಲ್ಲ. ಆದರೆ ಕೆಲವು ಸಾಮಾನ್ಯ ಕಾರಣಗಳನ್ನು ಬೆಟ್ಟು ಮಾಡಬಹುದಾಗಿದೆ.

►ಕಳಪೆ ಆಹಾರ ಸೇವನೆ

ಇದು ಮಲಬದ್ಧತೆಗೆ ಅತ್ಯಂತ ಸಾಮಾನ್ಯ ಕಾರಣಗಳಲ್ಲೊಂದಾಗಿದ್ದು, ಕರುಳಿನ ಚಲನವಲನಗಳ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ. ಹಣ್ಣುಗಳು ಮತ್ತು ತರಕಾರಿಗಳಂತಹ ಸಮೃದ್ಧ ನಾರು ಹೊಂದಿರುವ ಆಹಾರಗಳನ್ನು ಸೇವಿಸದಿದ್ದರೆ ಅಥವಾ ಇಂತಹ ಆಹಾರಗಳನ್ನು ಕಡಿಮೆ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ಅದು ಜೀರ್ಣಕ್ರಿಯೆಯ ಮೇಲೆ ಮತ್ತು ಮಲವಿಸರ್ಜನೆಯ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ನೈಸರ್ಗಿಕ ವಿರೇಚಕವಾಗಿ ಕೆಲಸ ಮಾಡುವ ನಾರು ಮಲದಲ್ಲಿ ನೀರನ್ನು ಹಿಡಿದಿಡುತ್ತದೆ ಮತ್ತು ಮಲದ ಪ್ರಮಾಣವನ್ನು ಹೆಚ್ಚಿಸಿ ಅದರ ವಿಸರ್ಜನೆಯನ್ನು ಸುಲಭವಾಗಿಸುತ್ತದೆ. ಆಹಾರದಲ್ಲಿ ನಾರಿನಂಶದ ಕೊರತೆಯು ಕರುಳಿನಲ್ಲಿಯ ಮಲವನ್ನು ಖಾಲಿ ಮಾಡುವುದನ್ನು ಕಷ್ಟವಾಗಿಸುತ್ತದೆ ಮತ್ತು ಮಲಬದ್ಧತೆಗೆ ಕಾರಣವಾಗುತ್ತದೆ.

►ಸಾಕಷ್ಟು ದ್ರವಗಳನ್ನು ಸೇವಿಸದಿರುವುದು

ಶರೀರದಲ್ಲಿ ಸಾಕಷ್ಟು ನೀರಿನ ಕೊರತೆಯಾದರೆ ಅದು ನಿರ್ಜಲೀಕರಣವನ್ನುಂಟು ಮಾಡುತ್ತದೆ ಮತ್ತು ಇದು ಮಲಬದ್ಧತೆಗೆ ಕಾರಣವಾಗುತ್ತದೆ. ನಾವು ನಿರ್ಜಲೀಕರಣದಿಂದ ಬಳಲುತ್ತಿರುವಾಗ ಶರೀರವು ಮಲದಲ್ಲಿಯ ನೀರನ್ನು ಪ್ರತ್ಯೇಕಿಸಿ ಅದನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ. ಪರಿಣಾಮವಾಗಿ ಮಲದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ ಮತ್ತು ಮಲವಿಸರ್ಜನೆ ಕಷ್ಟವಾಗುತ್ತದೆ.

►ಕೆಲವು ಔಷಧಿಗಳ ಸೇವನೆ

ಕಬ್ಬಿಣಾಂಶದ ಮಾತ್ರೆಗಳು,ಶಾಮಕಗಳು,ಅಂಟಾಸಿಡ್‌ಗಳು ಮತ್ತು ರಕ್ತದೊತ್ತಡವನ್ನು ತಗ್ಗಿಸುವ ಮಾತ್ರೆಗಳಂತಹ ಕೆಲವು ಔಷಧಿಗಳ ಸೇವನೆಯ ಅಡ್ಡಪರಿಣಾಮವಾಗಿಯೂ ಮಲಬದ್ಧತೆಯುಂಟಾ ಗುತ್ತದೆ. ಹೀಗಾಗಿ ಇಂತಹ ಔಷಧಿಗಳನ್ನು ಸೇವಿಸುವವರು ವೈದ್ಯರ ಸಲಹೆ ಪಡೆದುಕೊಳ್ಳುವುದು ಅಗತ್ಯವಾಗುತ್ತದೆ. ಅವರು ಔಷಧಿಗಳ ಡೋಸೇಜ್‌ನ್ನು ಬದಲಿಸಬಹುದು ಅಥವಾ ಔಷಧಿಗಳು ಇಲ್ಲವೇ ವಿರೇಚಕಗಳನ್ನು ನೀಡಿ ಮಲಬದ್ಧತೆಯ ಸಮಸ್ಯೆಗೆ ಪರಿಹಾರವನ್ನು ಒದಗಿಸಬಹುದು.

►ಜೀರ್ಣಕ್ರಿಯೆಯಲ್ಲಿ ವ್ಯತ್ಯಯ

ಅನಿಯಮಿತ ಮಲವಿಸರ್ಜನೆಯ ತೊಂದರೆಯಿರುವವರು ಮಲಬದ್ಧತೆಗೆ ಗುರಿಯಾಗಬಹುದು. ಮಧುಮೇಹ ಮತ್ತು ಮಧುಮೇಹ ನರರೋಗದಿಂದ ಬಳಲುತ್ತಿರುವವರಲ್ಲಿಯೂ ಈ ಸಮಸ್ಯೆ ಕಂಡುಬರುತ್ತದೆ. ಮಧುಮೇಹ ನರರೋಗವು ಕರುಳಿನ ನರಗಳ ಮೇಲೆ ಪರಿಣಾಮವನ್ನುಂಟು ಮಾಡಿ ಅದರ ಕಾರ್ಯನಿರ್ವಹಣೆ ಯನ್ನು ನಿಧಾನಗೊಳಿಸುವುದು ಇದಕ್ಕೆ ಕಾರಣವಾಗಿದೆ.

ಥೈರಾಯ್ಡ ಹಾರ್ಮೋನ್‌ಗಳ ಕಡಿಮೆ ಮಟ್ಟ ಮತ್ತು ಕ್ಯಾಲ್ಸಿಯಮ್‌ನ ಹೆಚ್ಚಿನ ಮಟ್ಟ ಕೂಡ ಸುಗಮ ಮಲವಿಸರ್ಜನೆಗೆ ತೊಂದರೆಯನ್ನುಂಟು ಮಾಡುತ್ತವೆ. ಅಲ್ಲದೆ ಸುದೀರ್ಘ ಕಾಲ ಹಾಸಿಗೆಯಲ್ಲಿ ವಿಶ್ರಾಂತಿ ಅಗತ್ಯವಿರುವ ದೀರ್ಘಕಾಲೀನ ಅನಾರೋಗ್ಯವೂ ಮಲಬದ್ಧತೆಗೆ ಕಾರಣವಾಗುತ್ತದೆ. ದೈಹಿಕ ಚಟುವಟಿಕೆಯ ಕೊರತೆಯು ಕರುಳಿನಲ್ಲಿ ಜೀರ್ಣಗೊಂಡ ಆಹಾರ ಮತ್ತು ಮಲದ ಚಲನವಲನದ ಮೇಲೆ ಬೀರುವ ವ್ಯತಿರಿಕ್ತ ಪರಿಣಾಮದಿಂದ ಮಲಬದ್ಧತೆಯುಂಟಾಗುತ್ತದೆ.

►ವಿರೇಚಕಗಳ ಅತಿಯಾದ ಬಳಕೆ

ಮಲಬದ್ಧತೆಯ ತೊಂದರೆಯಿಂದ ಪಾರಾಗಲು ವಿರೇಚಕಗಳ ಬಳಕೆ ಸಾಮಾನ್ಯವಾಗಿದೆ. ಮಲಬದ್ಧತೆಯ ಹೆಚ್ಚಿನ ಪ್ರಕರಣಗಳಲ್ಲಿ ಜನರು ವೈದ್ಯರನ್ನು ಸಂಪರ್ಕಿಸುವುದಿಲ್ಲ ಮತ್ತು ಔಷಧಿ ಅಂಗಡಿಗಳಲ್ಲಿ ಸುಲಭವಾಗಿ ಸಿಗುವ ವಿರೇಚಕಗಳನ್ನು ಸೇವಿಸುತ್ತಾರೆ. ಆದರೆ ವಿರೇಚಕಗಳ ಅತಿಯಾದ ಬಳಕೆ ಆರೋಗ್ಯಕ್ಕೆ ಒಳ್ಳೆಯದಲ್ಲ. ಆಗಾಗ್ಗೆ ವಿರೇಚಕಗಳನ್ನು ಬಳಸುವವರು ಮುಂದೆ ಅವುಗಳ ನೆರವಿಲ್ಲದೆ ಸಹಜವಾಗಿ ಮಲವಿಸರ್ಜಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಾರೆ ದೀರ್ಘ ಕಾಲದಲ್ಲಿ ಇದು ವಿರೇಚಕಗಳ ಹೆಚ್ಚಿನ ಬಳಕೆಗೆ ಕಾರಣವಾಗುತ್ತದೆ ಮತ್ತು ಮಲಬದ್ಧತೆಯ ಅಪಾಯವನ್ನು ಹೆಚಿಸುತ್ತದೆ.

ಮಲಬದ್ಧತೆಗೆ ಮೊದಲ ಚಿಕಿತ್ಸಾ ಕ್ರಮವಾಗಿ ಸಾಂಪ್ರದಾಯಿಕ ವಿರೇಚಕಗಳ ಬಳಕೆಯು ಹೆಚ್ಚಿನ ಪ್ರಕರಣಗಳಲ್ಲಿ ಪರಿಣಾಮಕಾರಿ ಯಾಗುವುದಿಲ್ಲ. ಅಲ್ಲದೆ ವಿರೇಚಕಗಳು ಇತರ ಔಷಧಿಗಳ ಪರಿಣಾಮವನ್ನೂ ತಗ್ಗಿಸುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News