ಮಾಧ್ಯಮಗಳಲ್ಲಿ ಸುದ್ದಿಯಾಗದ ಖರ್ಗೆ ಮಾತುಗಳು

Update: 2018-07-22 18:49 GMT

ಕಳೆದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರನ್ನು ನೇರವಾಗಿ ಟೀಕಿಸಿದ ಇಬ್ಬರೇ ಇಬ್ಬರು ಕಾಂಗ್ರೆಸ್ ನಾಯಕರೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್ ಖರ್ಗೆ. ಇಂತಹ ದಿಟ್ಟ ಹಿನ್ನೆಲೆ ಹೊಂದಿರುವ ಖರ್ಗೆಯವರಿಗೆ ನ್ಯಾಯವಾಗಿ ಮುಖ್ಯ ಮಂತ್ರಿಯಾಗುವ ಅವಕಾಶ ದೊರೆಯಬೇಕಾಗಿತ್ತು. ಆದರೆ ದೊರಕಲಿಲ್ಲ. ಆದರೂ ಖರ್ಗೆಯವರು ಲೋಕಸಭೆಗೆ ಚುನಾಯಿತರಾಗಿ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದು ನಿಂತಿದ್ದಾರೆ.



ಕಳೆದ ಶುಕ್ರವಾರ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ರಾಹುಲ್ ಗಾಂಧಿಯವರು ಪರಿಣಾಮಕಾರಿಯಾಗಿ ಮಾತನಾಡಿದರು. ಆದರೆ, ಕೊನೆಗೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಅಪ್ಪಿಕೊಂಡಿದ್ದೇ ಮಾಧ್ಯಮಗಳಿಗೆ ದೊಡ್ಡ ಸುದ್ದಿಯಾಯಿತು. ಅವರು ಆಡಿದ ಮಾತುಗಳೆಲ್ಲವೂ ಗಾಳಿಯಲ್ಲಿ ಹೋದವು. ಅದಕ್ಕಿಂತ ಮುಖ್ಯವಾಗಿ ಲೋಕಸಭೆಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಆಡಿದ ಮನುವಾದಿಗಳಿಗೆ ಮರ್ಮಾಘಾತ ಉಂಟು ಮಾಡುವ ಮಾತುಗಳು ಮಾಧ್ಯಮಗಳಲ್ಲಿ ವರದಿಯಾಗಲೇ ಇಲ್ಲ. ಅವಿಶ್ವಾಸ ನಿರ್ಣಯದ ಮೇಲೆ ನಡೆದ ಚರ್ಚೆಯಲ್ಲಿ ಮಾತನಾಡಿದ ಗೃಹಸಚಿವ ರಾಜನಾಥ್ ಸಿಂಗ್, ರಾಮಾಯಣ ಮತ್ತು ಮಹಾಭಾರತ ಈ ದೇಶದ ಹೆಮ್ಮೆಯ ಸಂಕೇತ ಎಂದು ಅವೆರಡರ ಬಗ್ಗೆ ಸುದೀರ್ಘ ಮಾತನಾಡಿದರು. ಈ ಮಾತುಗಳಿಗೆ ತಮ್ಮ ಭಾಷಣದಲ್ಲಿ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆಯವರು, ರಾಮಾಯಣದಲ್ಲಿ ಎಲ್ಲವನ್ನೂ ಹೇಳಿ ರಾಮ ಶಂಭೂಕನ ವಧೆ ಮಾಡಿದ ಕತೆಯನ್ನು ಹೇಳುವುದೇ ಇಲ್ಲ. ಅದೇ ರೀತಿ ಮಹಾಭಾರತದಲ್ಲಿ ಏಕಲವ್ಯನ ಹೆಬ್ಬೆರಳನ್ನು ದ್ರೋಣಾಚಾರ್ಯರು ಗುರುದಕ್ಷಿಣೆಯಾಗಿ ಪಡೆದ ವಂಚನೆಯ ಕತೆಯನ್ನು ಮುಚ್ಚಿಡುತ್ತೀರಿ ಎಂದು ಹೇಳಿದರು. ಖರ್ಗೆಯವರು ಹೇಳಿದ ಈ ಮಾತುಗಳು ಮಾಧ್ಯಮಗಳಲ್ಲಿ ಎಲ್ಲಿಯೂ ವರದಿಯಾಗಲಿಲ್ಲ. ಇದು ಮೋದಿ ಭಜನೆ ಮಾಡುತ್ತಿರುವ ಕಾರ್ಪೊರೇಟ್ ಮಾಧ್ಯಮಗಳ ಹುನ್ನಾರ.

ಈ ಹಿಂದೆ ಲೋಕಸಭೆಯಲ್ಲಿ ಬಿಜೆಪಿ ಸದಸ್ಯನೊಬ್ಬ ಗೋಮಾಂಸ ತಿನ್ನುವವರು ಈ ದೇಶ ಬಿಟ್ಟು ಹೋಗಬೇಕೆಂದು ಹೇಳಿದಾಗ, ಇದೇ ರೀತಿ ತಿರುಗೇಟು ನೀಡಿದ್ದ ಖರ್ಗೆಯವರು, ‘ನಾವು ಈ ದೇಶದ ಮೂಲನಿವಾಸಿಗಳು. ನಮಗೆ ಈ ದೇಶ ಬಿಟ್ಟರೆ ಇನ್ನೊಂದು ದೇಶವಿಲ್ಲ. ನೀವು ಆರ್ಯ ಸಂತಾನದವರು. ನೀವು ಈ ದೇಶ ಬಿಟ್ಟು ಹೋಗಿ’ ಎಂದು ತರಾಟೆ ತೆಗೆದುಕೊಂಡಾಗ ಸದನದಲ್ಲಿದ್ದ ಪ್ರಧಾನಿ ಮೋದಿ ಬಾಯಿ ಮುಚ್ಚಿಕೊಂಡು ಕೂತಿದ್ದರು. ಅದೇ ರೀತಿ ಇತ್ತೀಚೆಗೆ ದಲಿತ ಮುಖ್ಯಮಂತ್ರಿ ಪ್ರಶ್ನೆ ಬಂದಾಗ, ಖರ್ಗೆ ಮಾರ್ಮಿಕ ವಾಗಿ ನುಡಿದಿದ್ದರು. ‘‘ದಲಿತ ಎನ್ನುವ ಕಾರಣಕ್ಕಾಗಿ ತನಗೆ ಮುಖ್ಯಮಂತ್ರಿ ಸ್ಥಾನ ನೀಡುವುದಾದರೆ ಬೇಡ. ಕಾಂಗ್ರೆಸ್ ಪಕ್ಷಕ್ಕಾಗಿ ಐವತ್ತು ವರ್ಷ ದುಡಿದಿದ್ದಕ್ಕಾಗಿ ಈ ಅವಕಾಶ ನೀಡಿದರೆ ಓಕೆ’’ ಎಂದು ಹೇಳಿದ್ದರು. ಇಂತಹ ಮಾತನ್ನು ಹೇಳಲು ತುಂಬಾ ಎದೆಗಾರಿಕೆ ಬೇಕು. ಒಂದು ನಿರ್ದಿಷ್ಟ ಸೈದ್ಧಾಂತಿಕ ನಿಲುವಿರಬೇಕು. ಅಂಬೇಡ್ಕರ್‌ವಾದಿಯಾದ ಖರ್ಗೆಯವರಿಗೆ ಮಾತ್ರ ಈ ಮಾತನ್ನು ಹೇಳಲು ಸಾಧ್ಯ.

ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನಮ್ಮಂತಹ ಅನೇಕರು ಇಷ್ಟಪಡಲು ಕಾರಣವೇನೆಂದರೆ ನಿರಂತರ ಅಧಿಕಾರ ರಾಜಕಾರಣದಲ್ಲಿದ್ದರೂ ಕೂಡ ನಂಬಿದ ವೌಲ್ಯಗಳೊಂದಿಗೆ ರಾಜಿ ಮಾಡಿಕೊಳ್ಳದೇ ಸ್ವಾಭಿಮಾನಿಯಾಗಿ ಬದುಕಿದ ಹಿರಿಮೆ ಅವರದು. ಕಳೆದ 2 ವರ್ಷಗಳಿಂದ ಖರ್ಗೆಯವರ ಕರ್ಮಭೂಮಿ ಕಲಬುರಗಿಯ ಒಡನಾಟ ಹೊಂದಿರುವ ನಾನು ಅವರ ಚಟುವಟಿಕೆಗಳನ್ನು ಹತ್ತಿರದಿಂದ ನೋಡಿದ್ದೇನೆ. ಹಾಗೆಂದು ಅವರ ಬಳಿ ಎಂದೂ ಹೋಗಿಲ್ಲ. ಅಧಿಕಾರ ಕೇಂದ್ರದಲ್ಲಿರುವವರಿಂದ ಸಾಕಷ್ಟು ಅಂತರ ಕಾಯ್ದುಕೊಳ್ಳುವುದರಿಂದ ನಮಗನಿಸಿದ್ದನ್ನು ಮುಕ್ತವಾಗಿ ಹೇಳಲು ಸಾಧ್ಯವಾಗುತ್ತದೆ. ಎಂದೋ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕಾಗಿದ್ದ ಖರ್ಗೆಯವರಿಗೆ ಜಾತಿ ರಾಜಕಾರಣದಲ್ಲಿ ಅವಕಾಶ ಸಿಗಲಿಲ್ಲ. ಆದರೆ ಎಂದೂ ಬೇಸರ ಮಾಡಿಕೊಳ್ಳದೇ ಪಕ್ಷ ವಹಿಸಿದ ಕೆಲಸವನ್ನು ಅವರು ಮಾಡುತ್ತ ಬಂದಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗದ ಪಾಳೇಯಗಾರ ಜಮೀನ್ದಾರಿ ಪರಿಸರದಲ್ಲಿ ಜಾತಿ ವ್ಯವಸ್ಥೆಯ ಮುಳ್ಳು ಬೇಲಿಗಳನ್ನು ದಾಟಿ ಎಲ್ಲ ಸಮುದಾಯಗಳ ಜನನಾಯಕರಾಗಿ ಹೊರಹೊಮ್ಮುವುದು ಸಾಮಾನ್ಯ ಸಂಗತಿಯಲ್ಲ. ಎಲ್ಲರೂ ಅವರನ್ನು ಒಪ್ಪಿಕೊಂಡಿದ್ದಾರೆಂದೇನಲ್ಲ. ಆದರೆ, ಈ ಭಾಗದ ಬಹುತೇಕ ಜನ ಸಾಮಾನ್ಯರು ಅವರ ನಾಯಕತ್ವದ ಬಗ್ಗೆ ಎಂದೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿಲ್ಲ.

ಕಳೆದ ನಾಲ್ಕು ದಶಕಗಳಿಂದ ರಾಜ್ಯ ವಿಧಾನಸಭೆ ಮತ್ತು ಲೋಕಸಭೆಗಳಿಗೆ ಚುನಾಯಿತರಾಗುತ್ತಲೇ ಬಂದ ಖರ್ಗೆಯವರು ಕಲಬುರಗಿ ಜಿಲ್ಲೆಗೆ ಏನೂ ಮಾಡಿಲ್ಲ ಎಂದು ಕೆಲವರು ಟೀಕಿಸಿದರೂ ಕೂಡ ವಾಸ್ತವ ಸಂಗತಿ ಭಿನ್ನವಾಗಿದೆ. ಸಂವಿಧಾನದ 371(ಜ) ವಿಧಿ ವ್ಯಾಪ್ತಿಗೆ ಇಡೀ ಹೈದರಾಬಾದ್ ಕರ್ನಾಟಕವನ್ನು ಒಳಪಡಿಸಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿಸಲು ಅವರು ಪಟ್ಟ ಪರಿಶ್ರಮ ಅಷ್ಟಿಷ್ಟಲ್ಲ. ಅದಕ್ಕಾಗಿ ದಿಲ್ಲಿಯಲ್ಲಿ ಫೈಲುಗಳನ್ನು ಹಿಡಿದುಕೊಂಡು ಎಲ್ಲಾ ಸಚಿವ ಖಾತೆಗಳ ಕಚೇರಿಗೆ ಓಡಾಡಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರ ಮನವೊಲಿಸಿ ಕೇಂದ್ರ ಸಂಪುಟ ಇದನ್ನು ಒಪ್ಪಿಕೊಳ್ಳುವಂತೆ ಮಾಡಿದರು.

ಕೇಂದ್ರ ಮಂತ್ರಿಮಂಡಲದಲ್ಲಿ ಸಚಿವರಾಗಲು ಅವಕಾಶ ದೊರಕಿದಾಗ ರೈಲ್ವೈ ಹಾಗೂ ಕಾರ್ಮಿಕ ಸಚಿವರಾಗಿ ಸಮರ್ಥವಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದರು. ಕಲಬುರಗಿಗೆ ಇಎಸ್‌ಐ ಆಸ್ಪತ್ರೆ ತೆಗೆದುಕೊಂಡು ಬಂದರು. ಕಲಬುರಗಿಯಲ್ಲಿ 2 ವಿಶ್ವವಿದ್ಯಾನಿಲಯಗಳಿವೆ. ನಾಲ್ಕು ಮೆಡಿಕಲ್ ಕಾಲೇಜುಗಳಿವೆ. ದಕ್ಷಿಣ ಭಾರತದಲ್ಲೇ ಗಮನಸೆಳೆದ ವಿಶಾಲವಾದ ಬೌದ್ಧ ವಿಹಾರವಿದೆ. ಒಬ್ಬ ಕೂಲಿ ಕಾರ್ಮಿಕನ ಮಗನಾಗಿ ನನಗೆ ದೊರೆತ ಅಧಿಕಾರದಲ್ಲಿ ಇಷ್ಟು ಮಾಡಿದ್ದೇನೆ. ಇನ್ನೇನು ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸುತ್ತಾರೆ. ಖರ್ಗೆಯವರು ಕಟ್ಟಾ ಅಂಬೇಡ್ಕರ್‌ವಾದಿ. ಅರುವತ್ತರ ದಶಕದ ಕೊನೆಯಲ್ಲಿ ಬಾಬಾಸಾಹೇಬರು ಸ್ಥಾಪಿಸಿದ ರಿಪಬ್ಲಿಕನ್ ಪಾರ್ಟಿ ಮೂಲಕ ರಾಜಕೀಯ ರಂಗ ಪ್ರವೇಶಿದ ಅವರು ಆರಂಭದಲ್ಲಿ ಎಂ.ಎಸ್.ಕೆ ಮಿಲ್ ಕಾರ್ಮಿಕ ಸಂಘದ ನಾಯಕರಾಗಿ ಆ ಕಾಲದ ಕಮ್ಯುನಿಸ್ಟ್ ಮುಖಂಡರಾಗಿದ್ದ ಶ್ರೀನಿವಾಸ ಗುಡಿ ಮತ್ತು ಗಂಗಾಧರ್ ನಮೋಶಿ ಅವರ ಜೊತೆಗೆ ಕೆಲಸ ಮಾಡಿದವರು. ನಂತರ ಇವರನ್ನು ಗುರುತಿಸಿದ ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಇವರಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಇವರನ್ನು ಸಚಿವರನ್ನಾಗಿ ಮಾಡಿದರು. ಬಲಾಢ್ಯ, ಜಾತಿ ಮತ್ತು ವರ್ಗಗಳ ತಾಣವಾದ ಕಲಬುರಗಿಯಲ್ಲಿ ಖರ್ಗೆ ಮತ್ತು ಧರಂಸಿಂಗ್ ಹಿಂದುಳಿದ ದಲಿತ ಮತ್ತು ಅಲ್ಪಸಂಖ್ಯಾತರ ನಾಯಕರಾಗಿ ಬೆಳೆದುನಿಂತರು.

ಖರ್ಗೆ ಅವರು ಮಂತ್ರಿಯಾದ ನಂತರವೂ ಕೂಡ ತಾವು ನಂಬಿಕೊಂಡು ಬಂದ ಅಂಬೇಡ್ಕರ್ ಸಿದ್ಧಾಂತವನ್ನು ಬಿಟ್ಟುಕೊಡಲಿಲ್ಲ. ಉಳಿದವರಂತೆ ಗುಡಿ ಗುಂಡಾರಗಳನ್ನು ಸುತ್ತುವುದಿಲ್ಲ. ಯಾವ ಮಠಾಧೀಶರ ಕಾಲಿಗೆ ಬೀಳುವುದಿಲ್ಲ. ಚುನಾವಣೆ ನಾಮಪತ್ರ ಸಲ್ಲಿಸುವಾಗ ರಾಹುಕಾಲ ಗುಳಿಕಾಲ ನೋಡುವುದಿಲ್ಲ. ಬಾಬಾಸಾಹೇಬರಂತೆ ಒಂದು ವಿಧದಲ್ಲಿ ನಾಸ್ತಿಕರಾಗಿರುವ ಖರ್ಗೆಯವರ ಮನೆಯಲ್ಲಿ ಅವರ ಪತ್ನಿ ಮತ್ತು ಸೊಸೆಯಂದಿರು ದೇವರ ಪೂಜೆ ಮಾಡುತ್ತಾರೆಂದು ಕೆಲವರು ಹೇಳುತ್ತಾರೆ. ಆದರೆ ಅವರ ವ್ಯಕ್ತಿ ಸ್ವಾತಂತ್ರಕ್ಕೆ ಖರ್ಗೆಯವರು ಅಡ್ಡಿಪಡಿಸುವುದಿಲ್ಲ. ಆದರೆ ಅವರು ಮಾತ್ರ ಬುದ್ಧನ ಹೊರತು ಯಾವ ದೇವರನ್ನು ಮನ್ನಿಸುವುದಿಲ್ಲ. ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಅದರಲ್ಲೂ ಕಲಬುರಗಿಯಲ್ಲಿ ಕೋಮು ವಾದಿ ಶಕ್ತಿಗಳು ಬಾಲ ಬಿಚ್ಚದಿರುವುದಕ್ಕೆ ಇಲ್ಲಿರುವ ಪ್ರಗತಿಪರ ಸಂಘಟನೆಗಳು ಎಡಪಂಥೀಯ ಚಳವಳಿ ಹಾಗೂ ಖರ್ಗೆಯವರ ಪ್ರಭಾವವೂ ಒಂದು ಕಾರಣ. ಬಸವಣ್ಣ ಅವರ ಕಾಲದಿಂದ ಬೆಳೆದುಬಂದ ಸೌಹಾರ್ದ ಪರಂಪರೆ ನಂತರ ಅಂಬೇಡ್ಕರ್ ಅನುಯಾಯಿ ಶ್ಯಾಮಸುಂದರ್ ಅವರ ಪರಂಪರೆ-ಈ ಎಲ್ಲ ಕಾರಣ ಗಳಿಂದ ಈ ಜಿಲ್ಲೆ ಉಳಿದ ಜಿಲ್ಲೆಗಳಿಗಿಂತ ಭಿನ್ನವಾಗಿದೆ.

ಲೋಕಸಭೆಗೆ ಚುನಾಯಿತರಾಗಿ ಬಂದ ಖರ್ಗೆಯವರು ಮೊದಲು ಮಂತ್ರಿ ಯಾಗಿ ದಕ್ಷವಾಗಿ ಕಾರ್ಯನಿರ್ವಹಿಸಿದರು. ಮೋದಿಯವರು ಪ್ರಧಾನಿಯಾದ ನಂತರ ಕಾಂಗ್ರೆಸ್ ಪಕ್ಷದ ನಾಯಕರಾಗಿ ಸರಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಹಿಂದುಮುಂದು ನೋಡಲಿಲ್ಲ. ಅಂತಲೇ ಇವರಿಗೆ ಪ್ರತಿಪಕ್ಷದ ಸ್ಥಾನಮಾನ ನೀಡಲು ಮೋದಿ ಸರಕಾರ ಹಿಂದೇಟು ಹಾಕಿತು. ಹಿಂದಿ ಭಾಷೆಯಲ್ಲಿ ಅಧಿಕಾರವಾಣಿಯಿಂದ ಮಾತನಾಡುವ ಖರ್ಗೆಯವರು ಸದನದಲ್ಲಿ ಸರಕಾರವನ್ನು ಮುಲಾಜಿಲ್ಲದೇ ತರಾಟೆಗೆ ತೆಗೆದುಕೊಳ್ಳುತ್ತಾರೆ. ಒಮ್ಮೆ ಬಿಜೆಪಿ ಮಂತ್ರಿಯೊಬ್ಬರು ಗೋಮಾಂಸ ತಿನ್ನುವವರು ಈ ದೇಶವನ್ನು ಬಿಟ್ಟು ಹೋಗಬೇಕು ಎಂದು ಹೇಳಿದಾಗ ಕೆರಳಿ ನಿಂತ ಖರ್ಗೆಯವರು, ನಾವು ಈ ದೇಶದ ಮೂಲನಿವಾಸಿಗಳು. ನಾವೇಕೆ ಈ ದೇಶ ಬಿಟ್ಟು ಹೋಗಬೇಕು. ಹೊರಗಿನಿಂದ ಬಂದ ನೀವು ಈ ದೇಶ ಬಿಟ್ಟು ಹೋಗಿ ಎಂದು ಘರ್ಜಿಸಿದರು.

ಇಂತಹ ಖರ್ಗೆಯವರನ್ನು ಸೋಲಿಸಲು ನರೇಂದ್ರ ಮೋದಿ ಅಮಿತ್ ಶಾ ಜೋಡಿ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಸಾಕಷ್ಟು ಪ್ರಯತ್ನ ನಡೆಸಲಿದೆ. ಆದರೆ ಅದು ಸುಲಭವಲ್ಲ. ಕೆಲ ದಿನಗಳ ಹಿಂದೆ ಖರ್ಗೆಯವರು ತಮಗೆ ಜೀವ ಬೆದರಿಕೆ ಇದೆ ಎಂದು ಹಾಗೂ ಬೆದರಿಕೆ ಕರೆಗಳು ಬರುತ್ತಿವೆಯೆಂದು ದಿಲ್ಲಿಯ ಸಪ್ಧರ್‌ಜಂಗ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ನಂತರ ಸಾರ್ವಜನಿಕವಾಗಿ ಇಂತಹ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ ಎಂದು ಸವಾಲು ಹಾಕಿದ್ದರು.

ಕಳೆದ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದವರನ್ನು ನೇರವಾಗಿ ಟೀಕಿಸಿದ ಇಬ್ಬರೇ ಇಬ್ಬರು ಕಾಂಗ್ರೆಸ್ ನಾಯಕ ರೆಂದರೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ್ ಖರ್ಗೆ. ಇಂತಹ ದಿಟ್ಟ ಹಿನ್ನೆಲೆ ಹೊಂದಿರುವ ಖರ್ಗೆಯವರಿಗೆ ನ್ಯಾಯವಾಗಿ ಮುಖ್ಯ ಮಂತ್ರಿಯಾಗುವ ಅವಕಾಶ ದೊರೆಯಬೇಕಾಗಿತ್ತು. ಆದರೆ ದೊರಕಲಿಲ್ಲ. ಆದರೂ ಖರ್ಗೆಯವರು ಲೋಕಸಭೆಗೆ ಚುನಾಯಿತರಾಗಿ ರಾಷ್ಟ್ರಮಟ್ಟದ ನಾಯಕರಾಗಿ ಬೆಳೆದು ನಿಂತಿದ್ದಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News