ಯಾವುದೇ ಮುನ್ಸೂಚನೆಯಿಲ್ಲದೆ ಬರಬಹುದಾದ ಈ ರೋಗಗಳ ಬಗ್ಗೆ ಎಚ್ಚರಿಕೆಯಿರಲಿ

Update: 2018-07-23 12:45 GMT

ಕೆಲವು ರೋಗಗಳು ಸಾಕಷ್ಟು ಮುನ್ಸೂಚನೆಗಳನ್ನು ನೀಡುತ್ತವೆ. ಇನ್ನು ಕೆಲವು ರೋಗಗಳು ಯಾವುದೇ ಲಕ್ಷಣಗಳನ್ನು ತೋರಿಸುವುದಿಲ್ಲ ಮತ್ತು ಅದು ವ್ಯಕ್ತಿಯನ್ನು ಕಾಡತೊಡಗಿದಾಗ ಮಾತ್ರ ಗೊತ್ತಾಗುತ್ತದೆ. ಇಂತಹ ಐದು ರೋಗಗಳ ಬಗ್ಗೆ ಮಾಹಿತಿಯಿಲ್ಲಿದೆ......

►ಮಧುಮೇಹ

ಅತಿಯಾದ ಬಾಯಾರಿಕೆ,ಆಗಾಗ್ಗೆ ಮೂತ್ರವಿಸರ್ಜನೆ ಮತ್ತು ತೀವ್ರ ಬಳಲಿಕೆಯಂತಹ ಮಧುಮೇಹದ ಕೆಲವು ಸಾಮಾನ್ಯ ಲಕ್ಷಣಗಳು ನಿಮಗೆ ತಿಳಿದಿರಬಹುದು. ಆದರೆ ಟೈಪ್ 2 ಮಧುಮೇಹವನ್ನು ಹೊಂದಿರುವ ಹೆಚ್ಚಿನ ರೋಗಿಗಳಲ್ಲಿ ಅದರ ಲಕ್ಷಣಗಳು ಪ್ರಕಟವಾಗುವುದೇ ಇಲ್ಲ ಎನ್ನುವುದು ನಿಮಗೆ ಗೊತ್ತೇ?

ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಮಧುಮೇಹವು ಹೃದಯಾಘಾತ, ಪಾರ್ಶ್ವವಾಯು,ಅಂಧತ್ವ ಅಥವಾ ಮೂತ್ರಪಿಂಡಗಳ ವೈಫಲ್ಯಕ್ಕೆ ಕಾರಣವಾಗುತ್ತದೆ. ಹೀಗಾಗಿ ತಮಗೆ ಮಧುಮೇಹದ ಅಪಾಯವಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು 40 ವರ್ಷ ದಾಟಿದ ಜನರು ನಿಯಮಿತವಾಗಿ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು.

►ಹೃದ್ರೋಗ

ಹೃದಯಾಘಾತ ಅಥವಾ ಪಾರ್ಶ್ವವಾಯುವಿನ ತುರ್ತು ಲಕ್ಷಣಗಳನ್ನು ತಿಳಿದುಕೊಳ್ಳುವುದರಿಂದ ನೀವು ಚುರುಕಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಮತ್ತು ಇದರಿಂದ ಒಂದು ಜೀವವನ್ನು ಉಳಿಸಬಹುದು.

 ದುರದೃಷ್ಟವಶಾತ್ ಅಪಧಮನಿಗಳಲ್ಲಿ ತಡೆಯಂತಹ ಹೃದ್ರೋಗವನ್ನು ಉಂಟು ಮಾಡುವ ಕಾರಣಗಳು ಯಾವುದೇ ಲಕ್ಷಣಗಳನ್ನು ತೊರಿಸುವುದಿಲ್ಲ. ಲಕ್ಷಣಗಳು ಕಂಡು ಬಂದಾಗ ಕಾಯಿಲೆ ಆಗಲೇ ವ್ಯಕ್ತಿಗೆ ಅಂಟಿಕೊಂಡಿರುತ್ತದೆ. ಬೊಜ್ಜು,ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟ ಮತ್ತು ಧೂಮ್ರಪಾನ ಇತ್ಯಾದಿಗಳು ಹೃದ್ರೋಗವನ್ನು ತರುವ ಅಪಾಯದ ಅಂಶಗಳಾಗಿದ್ದರೂ ಆರೋಗ್ಯಕರ ಮತ್ತು ಕ್ರಿಯಾಶೀಲ ವ್ಯಕ್ತಿಗಳೂ ಹೃದ್ರೋಗಕ್ಕೆ ಗುರಿಯಾಗುತ್ತಾರೆ. ಹೀಗಾಗಿ ನಮ್ಮ ಹೃದಯಕ್ಕೆ ಅಪಾಯದ ಸಾಧ್ಯತೆಗಳಿವೆಯೇ,ಅದು ಸುರಕ್ಷಿತವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಲು ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಅಗತ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳಬೇಕು.

►ಕರುಳಿನ ಕ್ಯಾನ್ಸರ್

ಕರುಳಿನ ಕ್ಯಾನ್ಸರ್ ಮತ್ತು ಗುದನಾಳ ಕ್ಯಾನ್ಸರ್ ಒಟ್ಟಿಗೇ ಆಗಬಹುದು ಮತ್ತು ಇದನ್ನು ಕೊಲೊರೆಕ್ಟಲ್ ಕ್ಯಾನ್ಸರ್ ಎಂದು ಕರೆಯಲಾಗುತ್ತದೆ. ಕುಟುಂಬದಲ್ಲಿ ನಿಕಟ ಸಂಬಂಧಿಗಳು ಕರುಳಿನ ಕ್ಯಾನ್ಸರ್ ಹೊಂದಿದ್ದ ಇತಿಹಾಸವಿದ್ದರೆ ಅಂತಹ ವ್ಯಕ್ತಿಯು ಈ ಕಾಯಿಲೆಗೆ ಗುರಿಯಾಗುವ ಅಪಾಯವು 2ರಿಂದ 3 ಪಟ್ಟು ಹೆಚ್ಚಾಗಿರುತ್ತದೆ. ಮೊದಲೇ ಪತ್ತೆಯಾದರೆ ಈ ರೋಗವನ್ನು ಶೇ.90ರಷ್ಟು ತಡೆಯಬಹುದು. ಆದರೆ ಈ ಕ್ಯಾನ್ಸರ್ ಹರಡುವವರೆಗೆ ರೋಗದ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಕರುಳಿನ ಕ್ಯಾನ್ಸರ್‌ಗಾಗಿ ನಿಯಮಿತ ತಪಾಸಣೆ ಮಾಡಿಸಿಕೊಳ್ಳುತ್ತಿದ್ದರೆ ಈ ರೋಗವನ್ನು ಆರಂಭದಲ್ಲಿಯೇ ಪತ್ತೆ ಹಚ್ಚಿ ಅದು ನಂತರದ ಹಂತಗಳಿಗೆ ಹರಡುವುದನ್ನು ತಡೆಯಬಹುದು.

►ಚರ್ಮದ ಕ್ಯಾನ್ಸರ್

ವಿಶ್ವದಲ್ಲಿ ಪತ್ತೆಯಾಗುವ ಪ್ರತಿ ಮೂರು ಕ್ಯಾನ್ಸರ್ ಪ್ರಕರಣಗಳಲ್ಲಿ ಒಂದು ಚರ್ಮಕ್ಕೆ ಸಂಬಂಧಿಸಿರುತ್ತದೆ. ಶೇ.80ರಿಂದ 90ರಷ್ಟು ಚರ್ಮದ ಕ್ಯಾನ್ಸರ್ ಪ್ರಕರಣಗಳಿಗೆ ಅಲ್ಟ್ರಾವಯಲೆಟ್ ವಿಕಿರಣವು ಕಾರಣವಾಗಿರುತ್ತದೆ.

  ಚರ್ಮದ ಮೇಲೆ ಅಸಹಜ ಮಚ್ಚೆಗಳು ಕಾಣಿಸಿಕೊಳ್ಳುವುದು ಚರ್ಮದ ಕ್ಯಾನ್ಸರ್‌ನ ಲಕ್ಷಣವಾಗಿರಬಹುದು,ಆದರೆ ಹೆಚ್ಚಿನವರಿಗೆ ಇದು ಗೊತ್ತಾಗುವುದಿಲ್ಲ. ನಾವು ಆಗಾಗ್ಗೆ ಸುಲಭವಾಗಿ ಪರಿಶೀಲಿಸಲು ಸಾಧ್ಯವಿಲ್ಲದ ತಲೆಬುರುಡೆ,ಬೆನ್ನು ಮತ್ತು ತೊಡೆಸಂದಿಯಂತಹ ಸ್ಥಳಗಳಲ್ಲಿ ಚರ್ಮದ ಕ್ಯಾನ್ಸರ್ ಉಂಟಾದರಂತೂ ಅದು ನಂತರದ ಹಂತಗಳಲ್ಲಿಯೇ ಗೊತ್ತಾಗುತ್ತದೆ. ಚರ್ಮದ ಕ್ಯಾನ್ಸರ್‌ನ್ನು ಗುರುತಿಸಲು ಸ್ವಯಂ ಪರೀಕ್ಷೆ ನೆರವಾಗುತ್ತದೆಯಾದರೂ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಿರುವರು ನಿಯಮಿತ ದೈಹಿಕ ಪರೀಕ್ಷೆಯನ್ನು ಮಾಡಿಸಿಕೊಳ್ಳುತ್ತಿದ್ದರೆ ಇಂತಹ ಜಾಗಗಳಲ್ಲಿ ಚರ್ಮದ ಕ್ಯಾನ್ಸರನ್ನು ಆರಂಭದಲ್ಲಿಯೇ ಪತ್ತೆ ಹಚ್ಚಬಹುದಾಗಿದೆ.

►ಸ್ಲೀಪ್ ಅಪ್ನಿಯಾ

   ನಿದ್ರೆಯಲ್ಲಿ ಉಸಿರಾಟ ಕೆಲಕಾಲ ಸ್ಥಗಿತಗೊಳ್ಳುವ ಸಮಸ್ಯೆಯನ್ನು ಸ್ಲೀಪ್ ಅಪ್ನಿಯಾ ಎಂದು ಕರೆಯಲಾಗುತ್ತದೆ. ನಿದ್ರೆಯಲ್ಲಿರುವಾಗ ಗಂಟಲಿನ ಸ್ನಾಯುಗಳು ಆಗಾಗ್ಗೆ ಹಿಗ್ಗಿ ಶ್ವಾಸನಾಳಕ್ಕೆ ತಡೆಯೊಡ್ಡುವುದರಿಂದ ಕೆಲವು ಕ್ಷಣಗಳ ಕಾಲ ಉಸಿರಾಟ ಸ್ತಬ್ಧಗೊಳ್ಳುತ್ತದೆ. ಗೊರಕೆಯು ಈ ರೋಗದ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಈ ರೋಗವನ್ನು ಹೊಂದಿರುವ ಹೆಚ್ಚಿನವರಿಗೆ ನಿದ್ರೆಯಲ್ಲಿ ತಮ್ಮ ಉಸಿರಾಟ ಕೆಲಕಾಲ ನಿಂತಿದ್ದು ಗೊತ್ತೇ ಇರುವುದಿಲ್ಲ ಮತ್ತು ತಾವು ಒಳ್ಳೆ ನಿದ್ರೆ ಮಾಡಿದ್ದಾಗಿ ಭಾವಿಸುತ್ತಾರೆ.

ಸ್ಲೀಪ್ ಅಪ್ನಿಯಾ ಹೆಚ್ಚಿನ ರಕ್ತದೊತ್ತಡ,ಹೃದಯಾಘಾತ ಮತ್ತ ಪಾರ್ಶ್ವವಾಯುವಿಗೆ ಕಾರಣವಾಗಬಹುದು. ಅದು ಇತರ ಕಾಯಿಲೆಗಳ ಚಿಕಿತ್ಸೆಗೆ ಮತ್ತು ಶಸ್ತ್ರಚಿಕಿತ್ಸೆ ಸಂದರ್ಭಗಳಲ್ಲಿ ತೊಂದರೆಗಳನ್ನು ಸೃಷ್ಟಿಸಬಹುದು. ನಿಯಮಿತ ಆರೋಗ್ಯ ಪರೀಕ್ಷೆಯಿಂದ ಸ್ಲೀಪ್ ಅಪ್ನಿಯಾ ಸಮಸ್ಯೆಯಿದೆಯೇ ಎನ್ನುವುದನ್ನು ಪತ್ತೆ ಹಚ್ಚಬಹುದು.

ಈ ರೋಗಗಳನ್ನು ಆರಂಭದಲ್ಲಿಯೇ ಪತ್ತೆ ಹಚ್ಚುವುದರಿಂದ ಅವುಗಳಿಗೆ ಸಕಾಲದಲ್ಲ್ಲಿ ಸೂಕ್ತ ಚಿಕಿತ್ಸೆ ಪಡೆಯಬಹುದಾಗಿದ. ಇದಕ್ಕೆ ನಿಯಮಿತ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅಗತ್ಯವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News