ನಿಮ್ಮ ಹೃದಯದಲ್ಲಿ ಸಮಸ್ಯೆಯನ್ನು ಪತ್ತೆ ಹಚ್ಚಲು ಈ ರಕ್ತಪರೀಕ್ಷೆಗಳು ಅಗತ್ಯ

Update: 2018-08-13 11:44 GMT

ನಿಮ್ಮ ಶರೀರದಲ್ಲಿನ ಯಾವುದೇ ಕಾಯಿಲೆಯ ಬಗ್ಗೆ ನಿಮ್ಮ ರಕ್ತವು ಹಲವಾರು ಸುಳಿವುಗಳನ್ನು ನೀಡುತ್ತದೆ. ಇದಕ್ಕೆ ಹೃದಯದ ಆರೋಗ್ಯ ಸ್ಥಿತಿಯೂ ಹೊರತಾಗಿಲ್ಲ. ಉದಾಹರಣೆಗೆ ನಿಮ್ಮ ರಕ್ತದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿದ್ದರೆ ರಕ್ತಪರೀಕ್ಷೆಯು ನಿಮಗೆ ಹೃದಯಾಘಾತದ ಸಂಭಾವ್ಯ ಅಪಾಯವನ್ನು ಸೂಚಿಸುತ್ತದೆ. ಅಲ್ಲದೆ ರಕ್ತಪರೀಕ್ಷೆಯು ಅಪಧಮನಿಗಳಲ್ಲಿ ಪಾಚಿಗಟ್ಟಿದ್ದರೆ ಅದನ್ನೂ ತೋರಿಸುತ್ತದೆ ಮತ್ತು ನಿಮಗೆ ಹೃದಯಾಘಾತವಾಗುವ ಸಾಧ್ಯತೆಯಿದೆಯೇ ಎನ್ನುವುದನ್ನು ಗುರುತಿಸಲು ವೈದ್ಯರಿಗೆ ಸಾಧ್ಯವಾಗುತ್ತದೆ.

ಕೇವಲ ಒಂದು ರಕ್ತಪರೀಕ್ಷೆಯಿಂದ ಹೃದಯದ ಆರೋಗ್ಯವನ್ನು ನಿರ್ಧರಿಸಲು ಸಾಧ್ಯವಾಗುವುದಿಲ್ಲವಾದರೂ ಮುಂದೆ ಕೈಗೊಳ್ಳಬೇಕಾದ ಕ್ರಮವನ್ನು ಅದು ಖಂಡಿತವಾಗಿಯೂ ಸೂಚಿಸಬಲ್ಲುದು. ಹೃದ್ರೋಗಗಳನ್ನು ಪತ್ತೆ ಹಚ್ಚಲು ಹಲವಾರು ರಕ್ತಪರೀಕ್ಷೆಗಳಿವೆ ಮತ್ತು ನೀವು ನಿಯಮಿತವಾಗಿ ಮಾಡಿಸಬೇಕಾದ ಅಂತಹ ಪರೀಕ್ಷೆಗಳ ಕುರಿತು ಮಾಹಿತಿಗಳಿಲ್ಲಿವೆ.......

► ಕೊಲೆಸ್ಟ್ರಾಲ್ ಪರೀಕ್ಷೆ

ಲಿಪಿಡ್ ಪ್ಯಾನೆಲ್ ಅಥವಾ ಲಿಪಿಡ್ ಪ್ರೊಫೈಲ್ ಎಂದೂ ಕರೆಯಲಾಗುವ ಕೊಲೆಸ್ಟ್ರಾಲ್ ಪರೀಕ್ಷೆಯು ರಕ್ತದಲ್ಲಿನ ಕೊಬ್ಬು(ಲಿಪಿಡ್)ಗಳನ್ನು ಪತ್ತೆ ಹಚ್ಚುತ್ತದೆ. ಇದು ಹೃದ್ರೋಗಗಳನ್ನು ಪತ್ತೆ ಹಚ್ಚುವಲ್ಲಿ ಹೆಚ್ಚಿನ ನೆರವು ನೀಡುವ ರಕ್ತಪರೀಕ್ಷೆಗಳಲ್ಲಿ ಒಂದಾಗಿದೆ. ಈ ಪರೀಕ್ಷೆಯಿಂದ ನಿಮಗೆ ಹೃದಯಾಘಾತದ ಅಥವಾ ಹ್ರದ್ರೋಗವುಂಟಾಗುವ ಅಪಾಯವಿದೆಯೇ ಎನ್ನುವುದನ್ನು ನಿರ್ಧರಿಸಬಹುದಾಗಿದೆ.

ಈ ರಕ್ತಪರೀಕ್ಷೆಯ ಮೂಲಕ ಒಟ್ಟು ಕೊಲೆಸ್ಟ್ರಾಲ್,ಕಡಿಮೆ ಸಾಂದ್ರತೆಯ ಲಿಪೊಪ್ರೋಟಿನ್(ಎಲ್‌ಡಿಎಲ್) ಕೊಲೆಸ್ಟ್ರಾಲ್,ಹೆಚ್ಚು ಸಾಂದ್ರತೆಯ ಲಿಪೊಪ್ರೋಟಿನ್(ಎಚ್‌ಡಿಎಲ್) ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಅಳೆಯಬಹುದು.

► ಸಿ-ರಿಯಾಕ್ಟಿವ್ ಪ್ರೋಟಿನ್(ಸಿಆರ್‌ಪಿ) ಪರೀಕ್ಷೆ

ಸಿಆರ್‌ಪಿ ಗಾಯ ಅಥವಾ ಸೋಂಕಿಗೆ ನಿಮ್ಮ ಶರೀರವು ಪ್ರತಿಕ್ರಿಯಿಸುವಾಗ ಯಕೃತ್ತು ಉತ್ಪಾದಿಸುವ ಪ್ರೋಟಿನ್ ಆಗಿದೆ. ಸಿಆರ್‌ಪಿಯ ಅಸ್ತಿತ್ವವು ಶರೀರದಲ್ಲಿ ಉರಿಯೂತವಿರುವುದನ್ನು ಸೂಚಿಸುತ್ತದೆ. ಆದರೆ ನಿಖರವಾಗಿ ಶರೀರದ ಯಾವ ಭಾಗದಲ್ಲಿ ಉರಿಯೂತವಿದೆ ಎನ್ನುವುದನ್ನು ಪತ್ತೆ ಹಚ್ಚಲು ಸಿಆರ್‌ಪಿ ಪರೀಕ್ಷೆಯಿಂದ ಸಾಧ್ಯವಿಲ್ಲ.

ಶರೀರದಲ್ಲಿಯ ಉರಿಯೂತವು ಅಪಧಮನಿ ಕಾಠಿಣ್ಯವನ್ನುಂಟು ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ ಮತ್ತು ಅಪಧಮನಿಗಳಲ್ಲಿ ಕೊಬ್ಬುಗಳು ಸಂಗ್ರಹಗೊಳ್ಳುವ ಸ್ಥಿತಿಗೆ ಕಾರಣವಾಗುತ್ತದೆ. ಸಿಆರ್‌ಪಿ ಪರೀಕ್ಷೆಯೊಂದೇ ಹೃದಯದ ಕಾಯಿಲೆಯನ್ನು ಸೂಚಿಸುವುದಿಲ್ಲವಾದರೂ ಇತರ ಪರೀಕ್ಷಾ ಫಲಿತಾಂಶಗಳೊಂದಿಗೆ ಗಣನೆಗೆ ತೆಗೆದುಕೊಂಡಾಗ ಅದು ನಿಮ್ಮ ಆರೋಗ್ಯದ ಬಗ್ಗೆ ವೈದ್ಯರಿಗೆ ಸ್ಪಷ್ಟ ಚಿತ್ರಣವನ್ನು ನೀಡುತ್ತದೆ.

► ಫೈಬ್ರಿನೊಜೆನ್ ಪರೀಕ್ಷೆ

ಫೈಬ್ರಿನೊಜೆನ್ ಶರೀರದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ಹೆಚ್ಚಿಸುವ ಪ್ರೋಟಿನ್ ಆಗಿದೆ. ಆದರೆ ಅದು ಅತಿಯಾದ ಪ್ರಮಾಣದಲ್ಲಿದ್ದರೆ ಅಪಧಮನಿಯಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವಾಗುತ್ತದೆ ಮತ್ತು ಇದು ಹೃದಯಾಘಾತ ಅಥವಾ ಪಾರ್ಶ್ವವಾಯುವನ್ನುಂಟು ಮಾಡಬಹುದು.

► ಲಿಪೊಪ್ರೋಟಿನ್(ಎ) ಪರೀಕ್ಷೆ 

ಲಿಪೊಪ್ರೋಟಿನ್(ಎ) ಅಥವಾ ಎಲ್‌ಪಿ(ಎ) ಒಂದು ವಿಧದ ಎಲ್‌ಡಿಎಲ್ ಕೊಲೆಸ್ಟ್ರಾಲ್ ಆಗಿದ್ದು,ಶರೀರದಲ್ಲಿ ಅದರ ಮಟ್ಟವನ್ನು ವಂಶವಾಹಿಗಳ ಮೂಲಕ ನಿರ್ಧರಿಸಲಾಗುತ್ತದೆ ಮತ್ತು ನಮ್ಮ ಜೀವನಶೈಲಿಯು ಸಾಮಾನ್ಯವಾಗಿ ಇದರ ಮೇಲೆ ಯಾವುದೇ ಪ್ರಭಾವವನ್ನು ಬೀರುವುದಿಲ್ಲ. ಶರೀರದಲ್ಲಿ ಎಲ್‌ಪಿ(ಎ) ಮಟ್ಟವು ಹೆಚ್ಚಾಗಿದ್ದರೆ ಹೃದ್ರೋಗಕ್ಕೆ ಗುರಿಯಾಗುವ ಹೆಚ್ಚಿನ ಅಪಾಯವಿದೆ ಎಂದೇ ಅರ್ಥ. ಆದರೆ ಅಪಾಯದ ಪ್ರಮಾಣ ಮಾತ್ರ ಸ್ಪಷ್ಟವಾಗಿ ಅಂದಾಜಿಸಲಾಗುವುದಿಲ್ಲ.

► ನ್ಯಾಟ್ರಿಯುರೆಟಿಕ್ ಪೆಪ್ಟೈಡ್ಸ್ ಪರೀಕ್ಷೆ

ಬಿ-ಟೈಪ್ ನ್ಯಾಟ್ರಿಯುರೆಟಿಕ್ ಪೆಪ್ಟೈಡ್(ಬಿಎನ್‌ಪಿ) ಎಂದೂ ಕರೆಯಲಾಗುವ ಬ್ರೇಯ್ನಿ ನ್ಯಾಟ್ರಿಯುರೆಟಿಕ್ ಪೆಪ್ಟೈಡ್ ಹೃದಯ ಮತ್ತು ರಕ್ತನಾಳಗಳು ಉತ್ಪಾದಿಸುವ ಒಂದು ವಿಧದ ಪ್ರೋಟಿನ್ ಆಗಿದೆ. ಶರೀರದಲ್ಲಿಯ ದ್ರವಗಳನ್ನು ನಿವಾರಿಸುವಲ್ಲಿ,ರಕ್ತನಾಳಗಳಿಗೆ ವಿಶ್ರಾಂತಿ ನೀಡುವಲ್ಲಿ ಮತ್ತು ಮೂತ್ರದಲ್ಲಿ ಸೋಡಿಯಂ ಅನ್ನು ಹರಿಸುವಲ್ಲಿ ಬಿಎನ್‌ಪಿಯು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೃದಯಕ್ಕೆ ಹಾನಿಯುಂಟಾದಾಗ ಅದರ ಮೇಲಿನ ಒತ್ತಡವನ್ನು ತಗ್ಗಿಸಲು ಶರೀರವು ಹೆಚ್ಚಿನ ಪ್ರಮಾಣದಲ್ಲಿ ಬಿಎನ್‌ಪಿಯನ್ನು ರಕ್ತದಲ್ಲಿ ಬಿಡುಗಡೆಗೊಳಿಸುತ್ತದೆ. ರಕ್ತಪರೀಕ್ಷೆಯಿಂದ ರಕ್ತದಲ್ಲಿನ ಬಿಎನ್‌ಪಿ ಪ್ರಮಾಣವನ್ನು ಪತ್ತೆ ಹಚ್ಚಬಹುದು ಮತ್ತು ಹೃದಯದ ಸ್ಥಿತಿಯನ್ನು ತಿಳಿದುಕೊಳ್ಳಬಹುದು.

ಸಕಾಲದಲ್ಲಿ ರಕ್ತಪರೀಕ್ಷೆ ಮಾಡುವುದರಿಂದ ಹೃದಯಕ್ಕೆ ಸಂಬಂಧಿಸಿದ ಹಲವಾರು ಮಾರಣಾಂತಿಕ ಕಾಯಿಲೆಗಳನ್ನು ನಿವಾರಿಸಬಹುದು ಎನ್ನುವುದನ್ನು ಮರೆಯಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News