ದೇವರ ಹುಂಡಿ ಹಣ ಸಂತ್ರಸ್ತರ ನೆರವಿಗೆ ಬರಲಿ

Update: 2018-08-19 18:38 GMT

ದೀರ್ಘಕಾಲದವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿಯವರಿಗೆ ಸಮಗ್ರ ದೇಶದ ಕಲ್ಪನೆ ಇನ್ನೂ ಮೂಡಿಲ್ಲ ಎಂಬಂತೆ ಭಾಸವಾಗುತ್ತದೆ. ಭಾರತದಲ್ಲಿ 30 ರಾಜ್ಯಗಳಿವೆ. ರಾಜ್ಯ ಸರಕಾರಗಳಿದ್ದರೂ ಮತ್ತು ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಅವುಗಳ ಅಭಿವೃದ್ಧಿ ಮತ್ತು ಅಲ್ಲಿನ ಜನರ ಅಹವಾಲಿಗೆ ಸ್ಪಂದಿಸುವ ಹೊಣೆ ಪ್ರಧಾನಿಗೆ ಇರುತ್ತದೆ. ಹೊಸದಿಲ್ಲಿಯ ಪ್ರಧಾನಿ ಕಚೇರಿಗೆ ಅಥವಾ ಉತ್ತರ ಭಾರತದ ಕೆಲವೇ ರಾಜ್ಯಗಳಿಗೆ ಸೀಮಿತವಾದರೆ, ಪ್ರಧಾನಿಯ ಕರ್ತವ್ಯ ಪೂರ್ಣಗೊಳ್ಳುವುದಿಲ್ಲ. ಕೇರಳದಲ್ಲಿ ಬಿಜೆಪಿಯದ್ದಲ್ಲ, ಕಮ್ಯುನಿಸ್ಟ್ ಸರಕಾರವಿದೆ ಎಂದು ದ್ವೇಷ ಮನೋಭಾವ ಬೆಳೆಸಿಕೊಳ್ಳಬಾರದು.


‘ದೇವರ ನಾಡು’ ಎಂದೇ ಗುರುತಿಸಿಕೊಂಡು, ಅದೇ ರೀತಿ ಕರೆಯಿಸಿಕೊಳ್ಳುವ ಕೇರಳದಲ್ಲಿ ದೇವರು ನಾಪತ್ತೆಯಾಗಿದ್ದಾನೆ. ದೇವರ ದೇಗುಲವಷ್ಟೇ ಅಲ್ಲ, ಜನಸಾಮಾನ್ಯರ ಬದುಕು ನೀರಿನಲ್ಲಿ ಮುಳುಗಿ ಹೋಗಿದೆ. ದಿನಗಳು ಕಳೆದಂತೆ ಜನರು ಇನ್ನಷ್ಟು ಅತಂತ್ರರಾಗುತ್ತಿದ್ದಾರೆ. ಸಮೃದ್ಧ ಹಸಿರು ತಾಣವಾದ ಕೊಡಗಿನಲ್ಲೂ ಪ್ರಕೃತಿ ಮುನಿಸಿಕೊಂಡಿದೆ. ಇಷ್ಟು ವರ್ಷಗಳ ಕಾಲ ಕಾಯ್ದುಕೊಂಡಿದ್ದ ಸಹನೆ, ತಾಳ್ಮೆ ಕಳೆದು ಕೊಂಡಿದೆ. ಈ ಕಾರಣಕ್ಕೆ ಮನೆ, ರಸ್ತೆ, ಸೇತುವೆ ಎಂಬುದನ್ನು ನೋಡದೇ ಎಲ್ಲದರ ಅಸ್ತಿತ್ವ ಕಳೆದು ಹಾಕುವಂತೆ ಮಾಡಿದೆ. ಈ ಎಲ್ಲಾ ಅನಾಹುತವನ್ನು ಸಾವಿರಾರು ರೀತಿಯಲ್ಲಿ ಅವಲೋಕಿಸಬಹುದು. ತಪ್ಪುಒಪ್ಪುಗಳನ್ನು ಹೇಳಬಹುದು. ವೈಜ್ಞಾನಿಕವಾಗಿ ವ್ಯಾಖ್ಯಾನ ಮಾಡಬಹುದು. ‘ಹವಾಮಾನ ವೈಪರೀತ್ಯ’ ಎಂದು ಒಂದು ಸಾಲಿನ ಸರಳ ಕಾರಣ ಹೇಳಿ ಜಾರಿಕೊಳ್ಳಲೂಬಹುದು. ಆದರೆ, ಇವೆಲ್ಲದಕ್ಕೂ ಮುನ್ನ ನಾವು ಸ್ವವಿಮರ್ಶೆ ಮಾಡಿಕೊಳ್ಳಬೇಕಿದೆ. ಈ ಎಲ್ಲಾ ಅವಘಡಗಳಿಗೆ ನಾವು ಕೂಡ ಹೊಣೆ ಎಂಬುದನ್ನು ಅರಿತುಕೊಂಡು ಎಲ್ಲವನ್ನೂ ಸರಿಪಡಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ.

ಸಾಕೆಂದರೂ ಸುರಿಯುತ್ತಿರುವ ಮಳೆಗೆ ಕೇರಳ ತತ್ತರಿಸಿ ಹೋಗಿದೆ. ನಮ್ಮ ಕೊಡಗಿನ ಬದುಕು ಅಸ್ತವ್ಯಸ್ತಗೊಂಡಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿವೆ. ನೀರಿನ ರಭಸಕ್ಕೆ ಮತ್ತು ಮಳೆಯ ಅವಾಂತರಕ್ಕೆ ಬೃಹತ್ ಕಟ್ಟಡಗಳು, ಮನೆಗಳು, ಸೇತುವೆಗಳು ನೆಲಸಮಗೊಳ್ಳುತ್ತಿವೆ. ಎತ್ತರದ ಗುಡ್ಡಗಳಂತೂ ಕರಗಿ, ನೀರಿನಲ್ಲಿ ಕಳೆದು ಹೋಗುತ್ತಿವೆ. ಊರು, ಗ್ರಾಮಗಳು ಕಣ್ಮರೆಯಾಗಿವೆ. ಬದುಕಿದವರು ಬದುಕನ್ನೇ ಕಳೆದುಕೊಂಡಿದ್ದರೆ, ಸತ್ತವರ ಶವಗಳು ಸಿಗದಷ್ಟು ಪರಿಸ್ಥಿತಿ ಬಿಗಡಾಯಿಸಿದೆ. ಎಷ್ಟೆಲ್ಲ ವೈಮಾನಿಕ ಸಮೀಕ್ಷೆ ನಡೆಸಿದರೂ ಮತ್ತು ನೆರವಿನ ಮಹಾಪೂರವೇ ಹರಿದು ಬಂದರೂ ಅಲ್ಲಿನ ಜನಜೀವನ ಸದ್ಯಕ್ಕೆ ಸಹಜ ಸ್ಥಿತಿಗೆ ಬರುವಂತೆ ಕಾಣುತ್ತಿಲ್ಲ.

ದೇಶದಲ್ಲೇ ವಿಭಿನ್ನ ಮತ್ತು ವಿಶಿಷ್ಟತೆಯಿಂದ ಕೂಡಿರುವ ಕೇರಳದ ಜನರು ನಿಜಾರ್ಥದಲ್ಲಿ ಪ್ರಕೃತಿ ಪ್ರಿಯರು. ಯಾವುದರ ಉಸಾಬರಿಗೆ ಹೋಗದೇ ಮತ್ತು ಕೆಡಕನ್ನೂ ಬಯಸದೆ ಪ್ರಕೃತಿಯನ್ನು ದೇವರು, ಮಾತೆಯೆಂದು ನಂಬಿ ಕೃಷಿ ಮತ್ತು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡು ಬಾಳ್ವೆ ನಡೆಸುತ್ತಿರುವವರು. ಹಿಂದೆಂದೂ ಆಗಿರದ ಈ ಪರಿಯ ಮಳೆಯ ರೌದ್ರನರ್ತನದಿಂದ ಅವರ ಬದುಕು ಸಂಪೂರ್ಣ ನೀರು ಪಾಲಾಗಿದೆ. ತಾವು ಬದುಕುಳಿಯುವುದು ಅಷ್ಟೇ ಅಲ್ಲ, ತಮ್ಮಿಂದಿಗೆ ಇರುವ ಜಾನುವಾರುಗಳನ್ನು, ಪ್ರಾಣಿಪಕ್ಷಿಗಳನ್ನು ಮತ್ತು ಸುತ್ತಮುತ್ತಲಿನ ಪರಿಸರವನ್ನು ಯಥಾಸ್ಥಿತಿಯಲ್ಲಿ ಪುನಃ ಸ್ಥಾಪಿಸಿಕೊಳ್ಳಲು ಸಾಧ್ಯವಾಗುವುದೇ ಎಂಬ ಪ್ರಶ್ನೆ ಅವರಲ್ಲಿ ಮೂಡತೊಡಗಿದೆ. ಎಲ್ಲವನ್ನೂ ಕಳೆದುಕೊಂಡ ಅವರು ಒಂದೆಡೆ ದಿಕ್ಕು ತೋಚದ ಸ್ಥಿತಿಗೆ ತಲುಪಿದ್ದರೆ, ಮತ್ತೊಂದೆಡೆ ಪುನಃ ನೆಮ್ಮದಿಯ ಬದುಕು ರೂಪಿಸಿಕೊಳ್ಳಲು ಸಾಧ್ಯವೇ ಎಂಬ ಅಳುಕು ಅವರನ್ನು ಕಾಡತೊಡಗಿದೆ. ಇಲ್ಲಿನ ಜನರ ಮನಸ್ಸಿನಲ್ಲಿ ಮೂಡಿಸಿರುವ ಆಘಾತ ಅಂಥದ್ದು.

ಕೊಡಗಿನ ಪರಿಸ್ಥಿತಿ ಕೂಡ ಹೆಚ್ಚು ಭಿನ್ನವಾಗಿಲ್ಲ. ಇಲ್ಲಿನ ಜನರು ಕೂಡ ಕೃಷಿ ಮತ್ತು ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡವರು. ಭೌಗೋಳಿಕವಾಗಿ ಗುಡ್ಡಗಾಡು ಪ್ರದೇಶ ಹೊಂದಿರುವ ಮಡಿಕೇರಿಯಲ್ಲಿ ಯಾವುದೇ ಭಾಗಕ್ಕೆ ಹೋದರೂ ಅಲ್ಲಿ ಪುಟ್ಟದಾದ ರೆಸಾರ್ಟ್, ಬಂಗಲೆ, ವಿಲ್ಲಾ ಅಥವಾ ಮನೆಯೊಂದು ಖಂಡಿತ ಕಾಣಸಿಗುತ್ತದೆ. ಇವರು ಗುಡ್ಡಗಾಡು ಪ್ರದೇಶದಲ್ಲೇ ಹೊಂದಾಣಿಕೆ ಮಾಡಿಕೊಂಡು ಬದುಕನ್ನು ಕಟ್ಟಿಕೊಂಡವರು. ಪ್ರವಾಸೋದ್ಯಮಕ್ಕೆ ಪರ್ಯಾಯವಾಗಿ ಅಲ್ಲಲ್ಲಿ ಒಂದಿಷ್ಟು ಕೃಷಿ ಚಟುವಟಿಕೆ ಮತ್ತು ಬೇರೆ ಬೇರೆ ಉದ್ಯಮ-ವಹಿವಾಟು ನಂಬಿದವರು. ಒಂದೇ ಸಮನೆ ಸುರಿಯುತ್ತಿರುವ ಮಳೆಯು ಅದೆಲ್ಲವನ್ನೂ ಕಸಿದುಕೊಂಡಿದೆ. ಪುಟ್ಟ ಜಿಲ್ಲೆಯಲ್ಲಿ ಭಾರೀ ಅಲ್ಲೋಲ-ಕಲ್ಲೋಲವನ್ನೇ ಸೃಷ್ಟಿಸಿದೆ.

ಕೇರಳ-ಕೊಡಗಿನ ಜನರ ದಯನೀಯ ಮತ್ತು ಅಸಹಾಯಕ ಪರಿಸ್ಥಿತಿಯನ್ನು ಪತ್ರಿಕೆ-ದೃಶ್ಯ ಮಾಧ್ಯಮದಲ್ಲಿ ಅಲ್ಲದೇ ಸಾಮಾಜಿಕ ಜಾಲತಾಣಗಳಲ್ಲಿ ಕಂಡು ಸಿನೆಮಾ ನಟ, ನಟಿಯರು ಮತ್ತು ವಿವಿಧ ಸಂಘಸಂಸ್ಥೆಗಳ ಪ್ರತಿನಿಧಿಗಳು ಸಹಾಯಕ್ಕೆ ಮುಂದಾಗಿದ್ದಾರೆ. ಕೋಟ್ಯಂತರ ರೂ. ಆರ್ಥಿಕ ನೆರವು ನೀಡುವುದರ ಜೊತೆಗೆ ಜನರಿಗೆ ಅಗತ್ಯವಿರುವ ಆಹಾರ ಮತ್ತು ಬಟ್ಟೆಯ ವ್ಯವಸ್ಥೆ ಮಾಡತೊಡಗಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಯುವಜನರು ತಂಡಗಳನ್ನು ಕಟ್ಟಿಕೊಂಡು ಪ್ರವಾಹ ಪೀಡಿತ ಪ್ರದೇಶಗಳಿಗೆ ತೆರಳಿ ಸಹಾಯ ಮಾಡುತ್ತಿದ್ದಾರೆ.

ಕೇರಳ-ಕೊಡಗು ವಿಷಮ ಸ್ಥಿತಿ ತಲುಪುತ್ತಿವೆ ಮತ್ತು ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂಬುದು ಗೊತ್ತಿದ್ದರೂ ಕೇಂದ್ರ ಸರಕಾರ ತಕ್ಷಣಕ್ಕೆ ನೆರವಿಗೆ ಬಾರದಿರುವುದು ಸೋಜಿಗದ ಸಂಗತಿ. ಪ್ರವಾಹಕ್ಕೆ ತತ್ತರಿಸಿದ ಕೇರಳದ ರಾಜ್ಯ ಸರಕಾರವು ಎಲ್ಲವನ್ನೂ ವಿವರಿಸುವುದರ ಜೊತೆಗೆ 1,800 ಕೋಟಿ ರೂ. ಆರ್ಥಿಕ ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಬೇಡಿಕೆ ಇಟ್ಟಿತು. ಆದರೆ ಆರಂಭಿಕ ಹಂತದಲ್ಲಿ ಕೇಂದ್ರ ಸರಕಾರವು 100 ಕೋಟಿ ರೂ. ಮಾತ್ರ ಬಿಡುಗಡೆ ಮಾಡುವುದಾಗಿ ಹೇಳಿತೇ ಹೊರತು ಬೇರೆ ಯಾವುದೇ ಸ್ವರೂಪದಲ್ಲಿ ಸಹಾಯ ಮಾಡುವ ಇಚ್ಛೆ ತೋರಲಿಲ್ಲ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದು ಗೊತ್ತಾಗುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮೀಕ್ಷೆ ನಡೆಸಿ, 500 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದರೇ ಹೊರತು ಅಗತ್ಯವಿರುವಷ್ಟು ನೆರವು ನೀಡಲು ಆಸಕ್ತಿ ತೋರಲಿಲ್ಲ.

ಶಿವಾಜಿ ಪ್ರತಿಮೆ ಸ್ಥಾಪಿಸಲು 40 ಸಾವಿರ ಕೋಟಿ ರೂ. ಖರ್ಚು ಮಾಡಲು, ಸರ್ದಾರ ಪಟೇಲ್ ಪ್ರತಿಮೆ ಸ್ಥಾಪನೆಗೆ 3 ಸಾವಿರ ಕೋಟಿ ರೂ. ಖರ್ಚು ಮಾಡಲು ತಯಾರು ಇರುವ ಕೇಂದ್ರ ಸರಕಾರ 1,800 ಕೋಟಿ ರೂ. ನೆರವು ನೀಡಲು ಆಗದಿರುವಷ್ಟು ಬಡವಾಗಿದೆಯೇ? ಪದೇ ಪದೇ ಕೋಟ್ಯಂತರ ರೂಪಾಯಿ ಖರ್ಚು ಮಾಡಿಕೊಂಡು ವಿದೇಶಕ್ಕೆ ಹೋಗಿ ಅಲ್ಲಿನ ನಾಯಕರ ಜೊತೆಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸುವ ಪ್ರಧಾನಿಗೆ 1,800 ಕೋಟಿ ರೂ. ಕೊಡಲು ಕಷ್ಟವಾಗುವುದೇ? ಕುಂಭಮೇಳದಂತಹ ಧಾರ್ಮಿಕ ಕಾರ್ಯಕ್ರಮಕ್ಕೆ 4 ಸಾವಿರ ಕೋಟಿ ರೂ. ಅನುದಾನ ನೀಡುವ ಮತ್ತು ಉದ್ಯಮಿಗಳಿಗೆ ಬೇರೆ ಬೇರೆ ಸ್ವರೂಪದಲ್ಲಿ ನೆರವಾಗುವ ಕೇಂದ್ರ ಸರಕಾರಕ್ಕೆ ಕೇರಳದ ಜನರ ಪರಿಸ್ಥಿತಿ ಅರ್ಥವಾಗುತ್ತಿಲ್ಲವೇ?

ದೀರ್ಘಕಾಲದವರೆಗೆ ಗುಜರಾತ್‌ನ ಮುಖ್ಯಮಂತ್ರಿಯಾಗಿದ್ದ ಪ್ರಧಾನಿ ಮೋದಿಯವರಿಗೆ ಸಮಗ್ರ ದೇಶದ ಕಲ್ಪನೆ ಇನ್ನೂ ಮೂಡಿಲ್ಲ ಎಂಬಂತೆ ಭಾಸವಾಗುತ್ತದೆ. ಭಾರತದಲ್ಲಿ 30 ರಾಜ್ಯಗಳಿವೆ. ರಾಜ್ಯ ಸರಕಾರಗಳಿದ್ದರೂ ಮತ್ತು ಕೇಂದ್ರಾಡಳಿತ ಪ್ರದೇಶವಾಗಿದ್ದರೂ ಅವುಗಳ ಅಭಿವೃದ್ಧಿ ಮತ್ತು ಅಲ್ಲಿನ ಜನರ ಅಹವಾಲಿಗೆ ಸ್ಪಂದಿಸುವ ಹೊಣೆ ಪ್ರಧಾನಿಗೆ ಇರುತ್ತದೆ. ಹೊಸದಿಲ್ಲಿಯ ಪ್ರಧಾನಿ ಕಚೇರಿಗೆ ಅಥವಾ ಉತ್ತರ ಭಾರತದ ಕೆಲವೇ ರಾಜ್ಯಗಳಿಗೆ ಸೀಮಿತವಾದರೆ, ಪ್ರಧಾನಿಯ ಕರ್ತವ್ಯ ಪೂರ್ಣಗೊಳ್ಳುವುದಿಲ್ಲ. ಕೇರಳದಲ್ಲಿ ಬಿಜೆಪಿಯದ್ದಲ್ಲ, ಕಮ್ಯುನಿಸ್ಟ್ ಸರಕಾರವಿದೆ ಎಂದು ದ್ವೇಷ ಮನೋಭಾವ ಬೆಳೆಸಿಕೊಳ್ಳಬಾರದು. ಜನರು ಸಂಕಷ್ಟದ ಪರಿಸ್ಥಿತಿಯಲ್ಲಿರುವಾಗ, ರಾಜಕೀಯ ಮಾಡದೆ ಅವರ ನೆರವಿಗೆ ಮುಂದಾಗಬೇಕು. ಚೇತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿರುವ ಕೇರಳದಲ್ಲಿ ಪ್ರಧಾನಿ ಕಾಟಾಚಾರಕ್ಕೆ ವೈಮಾನಿಕ ಸಮೀಕ್ಷೆ ಮಾಡಿದರೆ ಸಾಲದು. ಕೇರಳ ಸರಕಾರದ ಬೇಡಿಕೆಗಳನ್ನು ಈಡೇರಿಸುವುದರ ಜೊತೆಗೆ ಜನರ ಬದುಕು ಸಹಜ ಸ್ಥಿತಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು.

ಕೊಡಗು ಜಿಲ್ಲೆಯ ವೈಮಾನಿಕ ಸಮೀಕ್ಷೆ ಮಾಡಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ 200 ಕೋಟಿ ರೂಪಾಯಿ ಪರಿಹಾರ ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಗೆ 50 ಕೋಟಿ ನೀಡಿದ್ದಾರೆ. ರಾಜ್ಯ ಸರಕಾರವೇ ಇಷ್ಟೆಲ್ಲ ಆರ್ಥಿಕ ನೆರವು ನೀಡುತ್ತಿರುವಾಗ, ಕೇಂದ್ರ ಸರಕಾರಕ್ಕೆ ಜನರ ಬದುಕಿಗಾಗಿ ಸಾವಿರಾರು ಕೋಟಿ ನೀಡಲು ಆಗುವುದಿಲ್ಲವೇ?

ಇಂತಹ ದಯನೀಯ ಪರಿಸ್ಥಿತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಲ್ಲದೇ ಜನರು ಕೂಡ ನೆರವಿಗೆ ಧಾವಿಸಬೇಕು. ರಾಜ್ಯದ ವಿವಿಧೆಡೆ ಇರುವ ಮಠ, ಮಂದಿರ, ಧಾರ್ಮಿಕ ಕೇಂದ್ರಗಳು ಸಹ ಸಂತ್ರಸ್ತರ ನೆರವಿಗೆ ಮುಂದಾಗಬೇಕು. ಹುಂಡಿಯಲ್ಲಿ ಶೇಖರಣೆಯಾಗುವ ಭಕ್ತರ ದೇಣಿಗೆಯನ್ನು ಸಂತ್ರಸ್ತರ ಬದುಕನ್ನು ಸುಧಾರಿಸಲು ನೀಡಬೇಕು. ಉಡುಪಿಯ ಪೇಜಾವರ ಮಠದ ಶ್ರೀಗಳು, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಅಲ್ಲದೇ ಇತರ ಧಾರ್ಮಿಕ ಮುಖಂಡರು ಮತ್ತು ಪ್ರಮುಖರು ಒಂದೆಡೆ ಸೇರಿ, ಪ್ರವಾಹ ಪೀಡಿತರ ಬದುಕು ಹಸನುಗೊಳಿಸಲು ಕಾರ್ಯಪ್ರವೃತ್ತರಾಗಬೇಕು. ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಕಲಬುರಗಿ, ಮೈಸೂರು, ಚಿತ್ರದುರ್ಗ ಮುಂತಾದ ಕಡೆ ಪಾದಯಾತ್ರೆ ಕೈಗೊಂಡು ಪರಿಹಾರ ಧನ ಸಂಗ್ರಹಿಸಬೇಕು. ಹಣದ ಜೊತೆಗೆ ಅಗತ್ಯವಿರುವ ವಸ್ತುಗಳನ್ನು ಜನರಿಗೆ ತಲುಪಿಸುವ ಕಾರ್ಯ ಕೈಗೊಳ್ಳಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News