ಮಧುಮೇಹಕ್ಕೂ ಅಧಿಕ ರಕ್ತದೊತ್ತಡಕ್ಕೂ ಏನು ಸಂಬಂಧ...?
ನಿಮಗೆ ಅಧಿಕ ರಕ್ತದೊತ್ತಡವಿದೆಯೇ? ಚಿಂತಿಸಬೇಡಿ,ಅದು ಮಧುಮೇಹಕ್ಕೆ ಕಾರಣವಾಗುವುದಿಲ್ಲ. ಮಧುಮೇಹವು ಹೃದ್ರೋಗ,ದೃಷ್ಟಿ ಮಾಂದ್ಯತೆ ಮತ್ತು ಮೂತ್ರಪಿಂಡ ಕಾಯಿಲೆಗಳಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ,ನಿಜ. ಆದರೆ ಮಧುಮೇಹಿಗಳು ಅಧಿಕ ರಕ್ತದೊತ್ತಡವನ್ನೂ ಹೊಂದಿದ್ದರೆ ಅದು ಈ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಶೇ.60ರಷ್ಟು ಮಧುಮೇಹಿಗಳು ಅಧಿಕ ರಕ್ತದೊತ್ತಡದಿಂದಲೂ ಬಳಲುತ್ತಿರುತ್ತಾರೆ ಎನ್ನುವುದು ಕಳವಳಕಾರಿಯಾಗಿದೆ.
ಮಧುಮೇಹವು ಅಪಧಮನಿಗಳ ಮೇಲೆ ದುಷ್ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಅಪಧಮನಿ ಕಾಠಿಣ್ಯಕ್ಕೆ ಕಾರಣವಾಗುತ್ತದೆ. ರಕ್ತನಾಳಗಳು ಪೆಡುಸಾಗಿ ಸಂಕುಚಿತಗೊಳ್ಳುವುದರಿಂದ ರಕ್ತ ಹೆಪ್ಪುಗಟ್ಟಿ ಶರೀರದ ಇತರ ಭಾಗಗಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ. ಹೀಗಾದಾಗ ರಕ್ತವನ್ನು ಪಂಪ್ ಮಾಡಲು ಹೃದಯವು ಹೆಚ್ಚು ಶ್ರಮಿಸಬೇಕಾಗುತ್ತದೆ. ಅಪಧಮನಿ ಕಾಠಿಣ್ಯವು ರಕ್ತದೊತ್ತಡವನ್ನೂ ಹೆಚ್ಚಿಸುತ್ತದೆ. ಅಧಿಕ ರಕ್ತದೊತ್ತಡಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದರೆ ಅದು ರಕ್ತನಾಳಗಳಿಗೆ ಹಾನಿ,ಪಾರ್ಶ್ವವಾಯು,ಹೃದಯ ವೈಫಲ್ಯ,ಹೃದಯಾಘಾತ ಅಥವಾ ಮೂತ್ರಪಿಂಡಗಳ ವೆೈಫಲ್ಯಕ್ಕೆ ಕಾರಣವಾಗಬಲ್ಲದು.
ಮಧುಮೇಹಿಗಳಲ್ಲಿ ರಕ್ತದೊತ್ತಡ ಎಷ್ಟಿರಬೇಕು?
ಸಾಮಾನ್ಯವಾಗಿ ರಕ್ತದೊತ್ತಡವು 120/80 ಎಂಎಂಎಚ್‌ಜಿಗಿಂತ ಕಡಿಮೆ ಇರಬೇಕು. ಆದರೆ ಹಲವಾರು ಸಂದರ್ಭಗಳಲ್ಲಿ ಇದು 140/90 ಎಂಎಂಎಚ್‌ಜಿಗಿಂತ ಹೆಚ್ಚಾಗಿದ್ದರೆ ವೈದ್ಯರು ಅದನ್ನು ಅಧಿಕ ರಕ್ತದೊತ್ತಡವೆಂದು ನಿರ್ಧರಿಸಬಹುದು. ಆದರೆ ವ್ಯಕ್ತಿಗೆ ಮಧುಮೇಹ ಅಥವಾ ಮೂತ್ರಪಿಂಡ ಕಾಯಿಲೆಯಿದ್ದರೆ 130/80 ಎಂಎಂಎಚ್‌ಜಿಗಿಂತ ಹೆಚ್ಚಿನ ರಕ್ತದೊತ್ತಡವನ್ನು ಅಧಿಕ ಎಂದು ಪರಿಗಣಿಸಲಾಗುತ್ತದೆ ಮತ್ತು ವೈದ್ಯರು ಅಧಿಕ ರಕ್ತದೊತ್ತಡದ ಚಿಕಿತ್ಸೆಗಾಗಿ ಔಷಧಿಗಳನ್ನು ಆರಂಭಿಸುತ್ತಾರೆ.
ಅಧಿಕ ರಕ್ತದೊತ್ತಡದ ಲಕ್ಷಣಗಳು
ಹೆಚ್ಚಿನ ಜನರಲ್ಲಿ ಅಧಿಕ ರಕ್ತದೊತ್ತಡವಿದ್ದರೂ ಅದರ ಲಕ್ಷಣಗಳು ಪ್ರಕಟಗೊಳ್ಳುವುದಿಲ್ಲ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡವಿರುವವರಿಗೂ ಇದು ಅನ್ವಯಿಸುತ್ತದೆ. ಆದರೆ ಅಧಿಕ ರಕ್ತದೊತ್ತಡವು ಮಧುಮೇಹಿಗಳಲ್ಲಿ ಹೃದ್ರೋಗ,ಮೂತ್ರಪಿಂಡ ಕಾಯಿಲೆ ಮತ್ತು ಪಾರ್ಶ್ವವಾಯು ಅಪಾಯವನು ಹೆಚ್ಚಿಸುವ ಮೂಲಕ ಅಧಿಕ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಅಧಿಕ ರಕ್ತದೊತ್ತಡವನ್ನು ಹೊಂದಿರುವ ಮಧುಮೇಹಿಗಳು ತಮ್ಮ ರಕ್ತದೊತ್ತಡವನ್ನು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯವಾಗುತ್ತದೆ.
ಅಧಿಕ ರಕ್ತದೊತ್ತಡದ ಚಿಕಿತ್ಸೆಗಾಗಿ ಔಷಧಿಗಳನ್ನು ಸೇವಿಸುವುವವರು ಯಾವುದೇ ಕಾರಣಕ್ಕೂ ವೈದ್ಯರೊಂದಿಗೆ ಸಮಾಲೋಚಿಸದೆ ಔಷಧಿಗಳನ್ನು ಬದಲಿಸಬಾರದು ಅಥವಾ ಸೇವನೆಯನ್ನು ನಿಲ್ಲಿಸಬಾರದು ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು.
ರಕ್ತದೊತ್ತಡವನ್ನು ನಿಯಂತ್ರಿಸಲು ಔಷಧಿಗಳ ಸೇವನೆಯೊಂದಿಗೆ ಜೀವನಶೈಲಿಯಲ್ಲಿ ಬದಲಾವಣೆಗಳು ಹೆಚ್ಚಿನ ನೆರವು ನೀಡುತ್ತವೆ. ಆಹಾರದಲ್ಲಿ ವಿಫುಲ ಹಣ್ಣುಗಳು,ತರಕಾರಿಗಳು ಮತ್ತು ಇಡಿಯ ಧಾನ್ಯಗಳ ಸೇವನೆಯು ಮುಖ್ಯವಾಗಿದೆ. ಬಳಸುವ ಡೇರಿ ಉತ್ಪನ್ನಗಳಲ್ಲಿ ಕೊಬ್ಬಿನ ಅಂಶ ಕಡಿಮೆಯಿರುವಂತೆ ನೋಡಿಕೊಳ್ಳಬೇಕು. ಟ್ರಾನ್ಸ್ ಫ್ಯಾಟ್ ಮತ್ತು ಸ್ಯಾಚುರೇಟೆಡ್ ಫ್ಯಾಟ್‌ಗಳಿರುವ ಆಹಾರವನ್ನು ಸೇವಿಸಬಾರದು. ಉಪ್ಪಿನ ಸೇವನೆಯು ದಿನವೊಂದಕ್ಕೆ 1600 ಎಂಜಿ ಮೀರದಂತೆ ಎಚ್ಚರಿಕೆ ವಹಿಸುವುದು ಒಳ್ಳೆಯದು. ನಿಯಮಿತವಾಗಿ ವ್ಯಾಯಾಮ ಮಾಡುವುದು ರಕ್ತದೊತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ.