ಕೋಕೊ ಪುಡಿಯ ಸೇವನೆಯ ಆರೋಗ್ಯಲಾಭಗಳು ನಿಮಗೆ ಗೊತ್ತೇ....?

Update: 2018-08-25 12:02 GMT

ಕೆಲವರು ಚಾಕೊಲೇಟ್‌ಗಳನ್ನು ಇಷ್ಟಪಡುತ್ತಾರೆ. ಇನ್ನು ಕೆಲವರು ಬೊಜ್ಜು ಮತ್ತು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಭಾವಿಸಿ ಅದನ್ನು ಇಷ್ಟಪಡುವುದಿಲ್ಲ. ಚಾಕೊಲೇಟ್‌ಗಳು ಕೋಕೊ ಬೀಜಗಳಿಂದ ತಯಾರಾಗುತ್ತವೆ. ಈ ಬೀಜಗಳನ್ನು ನುರಿಸಿ ಹುಡಿಯನ್ನು ಸಿದ್ಧಗೊಳಿಸಲಾಗುತ್ತದೆ. ಕೋಕೊ ಹುಡಿ ಅತ್ಯಂತ ಪೌಷ್ಟಿಕವಾಗಿದ್ದು, ನಮ್ಮ ಶರೀರಕ್ಕೆ ಹಲವಾರು ಆರೋಗ್ಯಲಾಭಗಳನ್ನು ನೀಡುತ್ತದೆ.

ಕೋಕೊ ಹುಡಿಯು ಕ್ಯಾಲ್ಸಿಯಂ,ತಾಮ್ರ,ಮ್ಯಾಗ್ನೇಷಿಯಂ,ಸೋಡಿಯಂ,ಸತುವು, ರಂಜಕ ಮತ್ತು ಪೊಟ್ಯಾಷಿಯಮ್‌ನಂತಹ ಹಲವಾರು ಖನಿಜಗಳನ್ನೊಳಗೊಂಡಿದೆ.

ಎರಡು ಟೇಬಲ್ ಸ್ಪೂನ್‌ಗಳಷ್ಟು ಹುಡಿಯು ಕೇವಲ 25 ಕ್ಯಾಲರಿಗಳನ್ನು,1.5 ಗ್ರಾಂ ಕೊಬ್ಬು ಮತ್ತು 3.6 ಗ್ರಾಂ ಅಂದರೆ ನಮ್ಮ ದೈನಂದಿನ ಅಗತ್ಯದ ಶೇ.14ರಷ್ಟು ನಾರನ್ನು ಹೊಂದಿರುತ್ತದೆ. ಅದು ನಮ್ಮ ದೈನಂದಿನ ಮ್ಯಾಗ್ನೇಷಿಯಂ ಅಗತ್ಯದ ಶೇ.14ರಷ್ಟು ಮತ್ತು ಶೇ.8ರಷ್ಟು ಕಬ್ಬಿಣವನ್ನು ಒದಗಿಸುತ್ತದೆ. ಎಪಿಕ್ಯಾಟೆಚಿನ್ ಮತ್ತು ಕ್ಯಾಟೆಚಿನ್ ಇವು ಕೋಕೊ ಹುಡಿಯಲ್ಲಿಯ ಇತರ ಪ್ರಮುಖ ಘಟಕಗಳಾಗಿವೆ. ಫ್ಲಾವನಾಯ್ಡಾಗಳೆಂದು ಕರೆಯಲಾಗುವ ಇವು ಸಸ್ಯಜನ್ಯ ರಾಸಾಯನಿಕಗಳಾಗಿವೆ. ಈ ಹುಡಿಯ ಆರೋಗ್ಯಲಾಭಗಳು ಹೀಗಿವೆ......

►ಅಧಿಕ ರಕ್ತದೊತ್ತಡವನ್ನು ತಗ್ಗಿಸುತ್ತದೆ

ಕೋಕೊ ಹುಡಿಯು ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುವ ಮೂಲಕ ರಕ್ತದೊತ್ತಡವನ್ನು ಇಳಿಸಲು ನೆರವಾಗುತ್ತದೆ. ಅದರಲ್ಲಿಯ ಫ್ಲಾವನಾಲ್‌ಗಳು ಅಂದರೆ ಒಂದು ವರ್ಗಕ್ಕೆ ಸೇರಿದ ಫ್ಲಾವನಾಯ್ಡಾಗಳು ರಕ್ತದಲ್ಲಿ ನೈಟ್ರಿಕ್ ಆಕ್ಸೈಡ್ ಮಟ್ಟವನ್ನು ಹೆಚ್ಚಿಸುತ್ತವೆ. ಇದರಿಂದ ರಕ್ತನಾಳಗಳ ಕಾರ್ಯ ನಿರ್ವಹಣೆ ಉತ್ತಮಗೊಳ್ಳುತ್ತದೆ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ. 30ರಿಂದ 1,218 ಎಂಜಿ ಫ್ಲಾವನಾಲ್‌ಗಳನ್ನು ಒಳಗೊಂಡಿರುವ ಕೋಕೊ ಹುಡಿಯು ರಕ್ತದೊತ್ತಡವನ್ನು ಸರಾಸರಿ 2 ಎಂಎಂಎಚ್‌ಜಿಯಷ್ಟು ಕಡಿಮೆ ಮಾಡುತ್ತದೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

►ಖಿನ್ನತೆ ನಿರೋಧಕವಾಗಿ ಕೆಲಸ ಮಾಡುತ್ತದೆ

 ಕೋಕೊ ಹುಡಿಯು ನಮ್ಮ ಮೂಡ್‌ನ್ನು ಹೆಚ್ಚಿಸಿ ಖಿನ್ನತೆಯ ಲಕ್ಷಣಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಹೊಂದಿದೆ. ಮಿದುಳಿನಲ್ಲಿರುವ ನರಪ್ರೇಕ್ಷಕವಾಗಿರುವ ಫಿನೆಥೈಲಮೈನ್ ಎಂಬ ರಾಸಾಯನಿಕವು ಕೋಕೊ ಹುಡಿಯಲ್ಲಿದ್ದು,ಇದು ನಮ್ಮನ್ನು ಉಲ್ಲಸಿತರನ್ನಾಗಿಸುತ್ತದೆ ಮತ್ತು ನೈಸರ್ಗಿಕ ಖಿನ್ನತೆ ನಿರೋಧಕವಾಗಿ ಕೆಲಸ ಮಾಡುತ್ತದೆ. ಅದು ಇನ್ನೊಂದು ನರಪ್ರೇಕ್ಷಕ ಸಿರೊಟನಿನ್ ಮಟ್ಟವನ್ನೂ ಹೆಚ್ಚಿಸುತ್ತದೆ ಮತ್ತು ಇದು ಕೂಡ ಖಿನ್ನತೆ ನಿರೋಧಕವಾಗಿದೆ.

►ಸಮೃದ್ಧ ಪಾಲಿಫಿನಾಲ್‌ಗಳನ್ನೊಳಗೊಂಡಿದೆ

ಪಾಲಿಫಿನಾಲ್‌ಗಳು ಉತ್ಕರ್ಷಣ ನಿರೋಧಕಗಳಾಗಿದ್ದು,ಕೋಕೊ ಹುಡಿಯಲ್ಲಿ ಇವು ಸಮೃದ್ಧವಾಗಿವೆ. ಹಣ್ಣುಗಳು,ತರಕಾರಿಗಳು,ಚಾಕೊಲೇಟ್‌ನಂತಹ ಆಹಾರಗಳು,ಚಹಾ ಮತ್ತು ವೈನ್‌ನಂತಹ ಪಾನೀಯಗಳಲ್ಲಿಯೂ ಈ ಪಾಲಿಫಿನಾಲ್‌ಗಳು ಇರುತ್ತವೆ. ಉರಿಯೂತವನ್ನು ಕಡಿಮೆ ಮಾಡುವುದರಿಂದ ಹಿಡಿದು ರಕ್ತದ ಹರಿವನ್ನು ಉತ್ತಮಗೊಳಿಸುವವರೆಗೆ,ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಕಡಿಮೆಗೊಳಿಸುವುದರಿಂದ ಹಿಡಿದು ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವವರೆಗೆ ಹಲವಾರು ಆರೋಗ್ಯಲಾಭಗಳನ್ನು ಈ ಪಾಲಿಫಿನಾಲ್‌ಗಳು ನಿಡುತ್ತವೆ.

►ಹೃದಯಾಘಾತ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡುತ್ತದೆ

ಕೋಕೊ ಹುಡಿಯು ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್)ನ್ನು ತಗ್ಗಿಸುತ್ತದೆ ಮತ್ತು ಹೃದಯಕ್ಕೆ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಅದರಲ್ಲಿಯ ಫ್ಲಾವನಾಲ್‌ಗಳು ಹೃದಯ ಮತ್ತು ರಕ್ತನಾಳಗಳ ಆರೋಗ್ಯದ ಮೇಲೆ ಪ್ರಭಾವವನ್ನು ಬೀರುವ ಮೂಲಕ ಹೃದಯಾಘಾತ,ಪಾರ್ಶ್ವವಾಯು ಮತ್ತು ಇತರ ಹೃದ್ರೋಗಗಳ ಅಪಾಯವನ್ನು ಕಡಿಮೆಗೊಳಿಸುತ್ತವೆ.

►ದೇಹತೂಕವನ್ನು ಇಳಿಸಲು ನೆರವಾಗಬಹುದು

ಕೋಕಾ ಹುಡಿಯ ಸೇವನೆಯು ದೇಹದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ ಎನ್ನಲಾಗಿದೆ. ಆಹಾರದಲ್ಲಿಯ ಕೊಬ್ಬು ಶರೀರದಲ್ಲಿ ಚಯಾಪಚಯಗೊಂಡು ಶಕ್ತಿಯಾಗಿ ಬಳಕೆಯಾಗುತ್ತದೆ. ಕೋಕಾ ಹುಡಿಯು ಶಕ್ತಿಯ ಬಳಕೆಯನ್ನು ಕ್ರಮಬದ್ಧಗೊಳಿಸಲು ನೆರವಾಗುತ್ತದೆ. ಶಕ್ತಿಯನ್ನು ಶರೀರವು ಬಳಸಿಕೊಳ್ಳದಿದ್ದರೆ ಕೊಬ್ಬುಗಳು ಕೊಬ್ಬು ಅಂಗಾಂಶಗಳಲ್ಲಿ ಶೇಖರಗೊಳ್ಳುತ್ತವೆ. ಕೋಕೊ ಹುಡಿಯು ಹಸಿವನ್ನು ಕುಂದಿಸುತ್ತದೆ,ಉರಿಯೂತವನ್ನು ತಗ್ಗಿಸುತ್ತದೆ ಮತ್ತು ಕೊಬ್ಬಿನ ಉತ್ಕರ್ಷಣವನ್ನು ಹೆಚ್ಚಿಸುವ ಮೂಲಕ ಸದಾ ಹೊಟ್ಟೆ ತುಂಬಿರುವ ಅನುಭವವನ್ನು ನೀಡುತ್ತದೆ. ಇದು ದೇಹದ ತೂಕವನ್ನು ಇಳಿಸಿಕೊಳ್ಳಲು ನೆರವಾಗುತ್ತದೆ.

►ಅಸ್ತಮಾದ ಚಿಕಿತ್ಸೆಯಲ್ಲಿ ನೆರವಾಗುತ್ತದೆ

  ಕೋಕೊ ಹುಡಿಯಲ್ಲಿ ಥಿಯೊಫೈಲಿನ್ ಮತ್ತು ಥಿಯೊಬ್ರೊಮೈನ್‌ನಂತಹ ಅಸ್ತಮಾ ನಿರೋಧಕ ಸಂಯುಕ್ತಗಳಿರುವುದರಿಂದ ಅದು ಅಸ್ತಮಾ ರೋಗಿಗಳಿಗೆ ಲಾಭದಾಯಕವಾಗಿದೆ. ಥಿಯೊಬ್ರೊಮೈನ್‌ನ್ನು ಕೆಫೀನ್‌ಗೆ ಹೋಲಿಸಬಹುದಾಗಿದ್ದು ನಿರಂತರ ಕೆಮ್ಮನ್ನು ಶಮನಗೊಳಿಸುತ್ತದೆ. ಥಿಯೊಫೈಲಿನ್ ಶ್ವಾಸಕೋಶಗಳನ್ನು ಹಿಗ್ಗಿಸುವಲ್ಲಿ ನೆರವಾಗುತ್ತದೆ,ತನ್ಮೂಲಕ ಶ್ವಾಸನಾಳಗಳನ್ನು ಸಡಿಲಗೊಳಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ.

►ದಂತಕುಳಿಗಳ ವಿರುದ್ಧ ರಕ್ಷಣೆ ನೀಡುತ್ತದೆ

ಕೋಕೊ ಹುಡಿಯು ಬಾಯಿಯ ಆರೋಗ್ಯವನ್ನು ಹೆಚ್ಚಿಸುವ ಕಿಣ್ವಕ ನಿರೋಧಕ, ಬ್ಯಾಕ್ಟೀರಿಯಾ ನಿರೋಧಕ ಮತ್ತು ನಿರೋಧಕ ಶಕ್ತಿಯನ್ನು ಉತ್ತೇಜಿಸುವ ಗುಣಗಳನ್ನು ಹೊಂದಿರುವ ಹಲವಾರು ಸಂಯುಕ್ತಗಳನ್ನೊಳಗೊಂಡಿದೆ. ಅದು ದಂತಕುಳಿಗಳನ್ನುಂಟು ಮಾಡುವ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಿ ಹಲ್ಲುಗಳ ಆರೋಗ್ಯವನ್ನು ಹೆಚ್ಚಿಸುತ್ತದೆ.

►ಕ್ಯಾನ್ಸರ್ ನಿರೋಧಕ ಗುಣವನ್ನು ಹೊಂದಿದೆ

ಕೋಕೊ ಹುಡಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿರುವ ಫ್ಲಾವನಾಲ್‌ಗಳು ಕ್ಯಾನ್ಸರ್ ನಿರೋಧಕ ಗುಣಗಳನ್ನು ಹೊಂದಿವೆ. ಅದು ಪ್ರತಿಕ್ರಿಯಾತ್ಮಕ ಅಣುಗಳಿಂದ ಆಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುತ್ತದೆ,ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ,ಉರಿಯೂತದ ವಿರುದ್ಧ ಹೋರಾಡುತ್ತದೆ ಮತ್ತು ಕ್ಯಾನ್ಸರ್‌ಕೋಶಗಳ ಹರಡುವಿಕೆಯನ್ನು ತಡೆಯುತ್ತದೆ. ಸ್ತನ,ಮೇದೋಜ್ಜೀರಕ ಗ್ರಂಥಿ,ಕರುಳು,ಪ್ರಾಸ್ಟೇಟ್ ಮತ್ತು ಯಕೃತ್ತಿನ ಕ್ಯಾನ್ಸರ್‌ಗಳ ಅಪಾಯಗಳನ್ನು ಕಡಿಮೆ ಮಾಡುವಲ್ಲಿ ಕೋಕೊ ಸಾರವು ಧನಾತ್ಮಕ ಪರಿಣಾಮವನ್ನು ಬೀರುತ್ತದೆ.

ದಿನಕ್ಕೆಷ್ಟು ಕೋಕೊ ಹುಡಿಯನ್ನು ಸೇವಿಸಬೇಕು?

 ಕೋಕೊ ಹುಡಿಯ ಆರೋಗ್ಯಲಾಭಗಳನ್ನು ಪಡೆಯಲು ಪ್ರತಿದಿನ 2.5 ಗ್ರಾಮ್‌ನಷ್ಟು ಅಧಿಕ ಫ್ಲಾವನಾಲ್ ಇರುವ ಹುಡಿ ಅಥವಾ 10 ಗ್ರಾಂ ಅಧಿಕ ಫ್ಲಾವನಾಲ್ ಇರುವ ಡಾರ್ಕ್ ಚಾಕೊಲೇಟ್ ಸೇವಿಸಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News