ನಿಮ್ಮ ಕಿವಿಗಳು ಆಗಾಗ್ಗೆ ತುರಿಸುತ್ತಿವೆಯೇ? ಕಾರಣಗಳನ್ನು ತಿಳಿಯಿರಿ
ನಮ್ಮ ಕಿವಿಗಳು ನರವೈಜ್ಞಾನಿಕ ತಂತುಗಳಿಂದ ತುಂಬಿರುವುದರಿಂದ ಎಂದಾದರೊಮ್ಮೆ ಅವುಗಳಲ್ಲಿ ತುರಿಕೆಯುಂಟಾಗುವುದು ಸಾಮಾನ್ಯ. ಆದರೆ ಆಗಾಗ್ಗೆ ಕಿವಿಗಳಲ್ಲಿ ತುರಿಕೆಯಾಗುತ್ತಿದ್ದರೆ ಅದು ಅನಾರೋಗ್ಯದ ಲಕ್ಷಣವಾಗಿರಬಹುದು.
ಕಿವಿಗಳು ತುರಿಸಲು ಕಾರಣಗಳು
1.ಸ್ವಿಮರ್ಸ್ ಇಯರ್
ಸ್ವಿಮರ್ಸ್ ಇಯರ್ ಅಥವಾ ಬಾಹ್ಯ ಉರಿಯೂತವು ಕಿವಿಯ ಕಾಲುವೆಯಲ್ಲಿ ಉಂಟಾಗುವ ಸೋಂಕು ಆಗಿದೆ. ಈಜು ಅಥವಾ ಸ್ನಾನದ ಬಳಿಕ ನೀರು ಕಿವಿಗಳಲ್ಲಿ ಉಳಿದುಕೊಂಡರೆ ಬ್ಯಾಕ್ಟೀರಿಯಾಗಳ ಅಭಿವೃದ್ಧಿಗೆ ಅಥವಾ ಇತರ ಕಣಗಳು ಅಂಟಿಕೊಳ್ಳಲು ಸೂಕ್ತವಾದ ಆರ್ದ್ರತೆಯನ್ನು ಸೃಷ್ಟಿಸುತ್ತದೆ ಮತ್ತು ಇದು ಸೋಂಕಿಗೆ ಕಾರಣವಾಗುತ್ತದೆ. ಈಜಾಡುವಾಗ ಅಥವಾ ಸ್ನಾನ ಮಾಡುವಾಗ ಕಿವಿಗಳು ಒದ್ದೆಯಾಗದಂತೆ ನೋಡಿಕೊಳ್ಳುವುದು ಮತ್ತು ನೀರು ಪ್ರವೇಶಿಸಿದ್ದರೆ ಅದನ್ನು ಹೊರಗೆ ಹಾಕಿ ಕಿವಿಗಳ ಒಳಭಾಗ ಒಣಗಿರುವಂತೆ ನೋಡಿಕೊಳ್ಳುವುದು ಈ ಸೋಂಕಿನಿಂದ ದೂರವಿರಲು ಅತ್ಯುತ್ತಮ ಮಾರ್ಗವಾಗಿದೆ.
2. ಗುಗ್ಗೆ ಶೇಖರಗೊಳ್ಳುವುದು
ಕಿವಿಗಳಲ್ಲಿ ಗುಗ್ಗೆಯಿದ್ದರೆ ನಾವು ಆಗಾಗ್ಗೆ ಸ್ವಚ್ಛಗೊಳಿಸುತ್ತೇವೆ. ಆದರೆ ಗುಗ್ಗೆ ಅಥವಾ ಮೇಣ ಇದ್ದರೆ ಒಳ್ಳೆಯದು,ಏಕೆಂದರೆ ಅದು ಮೃತ ಚರ್ಮಕೋಶಗಳನ್ನು ನಿವಾರಿಸುವ ಶರೀರದ ವಿಧಾನವಾಗಿದೆ. ಅಲ್ಲದೆ ಗುಗ್ಗೆ ಕೀಟಾಣುಗಳು ಕಿವಿಗಳನ್ನು ಪ್ರವೇಶಿಸದಂತೆ ತಡೆಯುತ್ತದೆ. ಆದರೆ ಕಿವಿಗಳಲ್ಲಿ ಅತಿಯಾಗಿ ಗುಗ್ಗೆ ಶೇಖರಗೊಂಡಿದ್ದರೆ ಅದು ತುರಿಕೆ,ಕಿವಿನೋವು,ಶ್ರವಣಶಕ್ತಿಯ ಕ್ಷೀಣಿಸುವಿಕೆ, ಕಿವಿಗಳಲ್ಲಿ ಮೊರೆತ,ಕೆಮ್ಮು,ವಾಸನೆ ಅಥವಾ ಕಿವಿ ಸೋರುವಿಕೆಗೆ ಕಾರಣವಾಗುತ್ತದೆ.
3. ಆಹಾರ ಸೇವನೆ ಸಂದರ್ಭದಲ್ಲಿ
ಕೆಲವರಿಗೆ ಆಹಾರವನ್ನು ನುಂಗುವಾಗ ಕಿವಿಗಳ ಆಳದಲ್ಲಿ ತುರಿಕೆಯ ಅನುಭವವಾಗಬಹುದು. ಸಾಮಾನ್ಯವಾಗಿ ಶೀತ ವೈರಸ್‌ಗಳ ಬಾಧೆಯಿಂದಾಗಿ ಗಂಟಲು ಕೆರೆತವಿದ್ದರೆ ಹೀಗಾಗುತ್ತದೆ ಮತ್ತು ಗಂಟಲು ಕೆರೆತಕ್ಕೆ ಚಿಕಿತ್ಸೆ ಪಡೆದುಕೊಂಡಾಗ ಈ ಸಮಸ್ಯೆಯೂ ಮಾಯವಾಗುತ್ತದೆ.
4. ಶ್ರವಣ ಸಾಧನಗಳು
ಶ್ರವಣ ಸಾಧನಗಳು ಸಾಮಾನ್ಯವಾಗಿ ಪ್ಲಾಸ್ಟಿಕ್‌ನಿಂದ ತಯಾರಾಗಿರುತ್ತವೆ. ಸದಾ ಕಾಲ ಈ ಸಾಧನಗಳನ್ನು ಧರಿಸುವವರಲ್ಲಿ ಪ್ಲಾಸ್ಟಿಕ್‌ಗೆ ಅಲರ್ಜಿಯಿದ್ದರೆ ಕಿವಿಗಳಲ್ಲಿ ತುರಿಕೆಯಾಗಬಹುದು. ಇಂತಹ ಸಂದರ್ಭಗಳಲ್ಲಿ ಬೇರೆ ವಸ್ತುವಿನಿಂದ ತಯರಾದ ಶ್ರವಣ ಸಾಧನಗಳನ್ನು ಬಳಸುವುದು ಒಳ್ಳೆಯದು. ಅಲ್ಲದೆ ಶ್ರವಣ ಸಾಧನಗಳು ಮೃದುವಾದ ಕಿವಿಯ ಭಾಗದ ಮೇಲೆ ಒತ್ತಡವನ್ನುಂಟು ಮಾಡುವುದೂ ತುರಿಕೆಯನ್ನುಂಟು ಮಾಡಬಹುದು.
5. ಚರ್ಮದ ಸಮಸ್ಯೆಗಳು
ಕಜ್ಜಿ,ಸೋರಿಯಾಸಿಸ್,ಉರಿಯೂತ ಮತ್ತು ಒಣಗುವಿಕೆಯಂತಹ ಚರ್ಮದ ಸಮಸ್ಯೆಗಳು ಕಿವಿಗಳಲ್ಲಿ ತುರಿಕೆಯನ್ನುಂಟು ಮಾಡುತ್ತವೆ. ಕಿವಿಗಳ ಚರ್ಮ ಒಣಗುತ್ತಿದ್ದರೆ ಆಲಿವ್ ಅಥವಾ ಬೇಬಿ ಆಯಿಲ್ ಬಳಸಿ ಚಿಕಿತ್ಸೆ ಪಡೆಯಬಹುದು. ಕಜ್ಜಿ,ಸೋರಿಯಾಸಿಸ್‌ನಂತಹ ಕಾಯಿಲೆಗಳನ್ನು ಸಾಮಾನ್ಯವಾಗಿ ಸ್ಟಿರಾಯ್ಡಿಗಳನ್ನು ಬಳಸಿ ಗುಣಪಡಿಸಲಾಗುತ್ತದೆ.
6. ಕೆಲ ಆಹಾರ ಅಲರ್ಜಿಗಳು
ಕೆಲವು ಹಣ್ಣುಗಳು,ತರಕಾರಿಗಳು ಅಥವಾ ಟ್ರೀ ನಟ್‌ಗಳನ್ನು ಸೇವಿಸಿದಾಗ ಪರಾಗ ಅಲರ್ಜಿಯು ಕಿವಿಗಳನ್ನು ತುರಿಸುವಂತೆ ಮಾಡಬಹುದು, ಆದರೆ ಇದು ಬೇಯಿಸದ ಪದಾರ್ಥಗಳಿಗೆ ಮಾತ್ರ ಸೀಮಿತವಾಗಿದೆ.
ಕಿವಿ ತುರಿಕೆಯ ಲಕ್ಷಣಗಳು
ನಿಮ್ಮ ಕಿವಿಗಳು ಸದಾ ಕಾಲ ತುರಿಸುತ್ತಿದ್ದರೆ ಅದು ಕಿರಿಕಿಯನ್ನುಂಟು ಮಾಡುತ್ತದೆ. ಕಿವಿಗಳಲ್ಲಿ ತುರಿಕೆಯೊಂದಿಗೆ ಕಿವಿ ಸೋರುವಿಕೆ,ಕಿವಿ ಊದಿಕೊಳ್ಳುವುದು ಮತ್ತು ಜ್ವರದ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.
ವೈದ್ಯರನ್ನು ಯಾವಾಗ ಸಂಪರ್ಕಿಸಬೇಕು?
ನಿಮ್ಮ ಕಿವಿಗಳಲ್ಲಿ ಅತಿಯಾಗಿ ರಕ್ತಸ್ರಾವ ಅಥವಾ ದ್ರವ ಸೋರುವಿಕೆಯಿದ್ದರೆ ಅಥವಾ ನಿಮಗೆ ಸ್ಪಷ್ಟವಾಗಿ ಕಿವಿ ಕೇಳಿಸುತ್ತಿಲ್ಲವಾದರೆ ತಕ್ಷಣ ವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.