ಮಧುಮೇಹದ ಈ ಏಳು ಅಡ್ಡಪರಿಣಾಮಗಳ ಬಗ್ಗೆ ನಿಮಗೆ ಗೊತ್ತಿರಲೇಬೇಕು

Update: 2018-09-16 11:47 GMT

ಯಾವುದೇ ವ್ಯಕ್ತಿ ದೊಡ್ಡ ಅಥವಾ ಸಣ್ಣ ಕಾಯಿಲೆಗೆ ಗುರಿಯಾದಾಗ ಅಡ್ಡ ಪರಿಣಾಮಗಳು ಕಾಣಿಸಿಕೊಳ್ಳುತ್ತವೆ. ಉದಾಹರಣೆಗೆ ನೀವು ಜ್ವರದಿಂದ ಬಳಲುತ್ತಿದ್ದರೆ ಅದು ಗುಣಮುಖವಾದ ಬಳಿಕವೂ ನೀವು ಬಳಲಿಕೆಯನ್ನು ಅನುಭವಿಸಬಹುದು. ಸಿಡುಬಿಗೆ ತುತ್ತಾದಾಗ ರೋಗವು ಗುಣವಾದರೂ ಅದು ಚರ್ಮದ ಮೇಲೆ ಕಲೆಗಳನ್ನುಂಟು ಮಾಡುತ್ತದೆ ಮತ್ತು ಈ ಕಲೆಗಳು ಶಾಶ್ವತವಾಗಬಹುದು.

ಹೀಗೆ ಹೆಚ್ಚಿನ ಕಾಯಿಲೆಗಳು ಜನರು ನಿರೀಕ್ಷಿಸಿರುವ ಕೆಲವು ಅಡ್ಡಪರಿಣಾಮಗಳನ್ನು ಹೊಂದಿರುತ್ತವೆ. ಆದರೆ ಕೆಲವೊಮ್ಮೆ ಕೆಲವು ಕಾಯಿಲೆಗಳು ಅನಿರೀಕ್ಷಿತ ಅಡ್ಡ ಪರಿಣಾಮಗಳನ್ನುಂಟು ಮಾಡುತ್ತವೆ.

ಮಧುಮೇಹವೂ ಇಂತಹ ಅಡ್ಡಪರಿಣಾಮಗಳನ್ನು ಹೊಂದಿದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಏರಿಕೆ,ದಣಿವು,ತೂಕ ಇಳಿಕೆ ಇತ್ಯಾದಿಗಳು ಮಧುಮೇಹಿಗಳಲ್ಲಿ ಸಾಮಾನ್ಯ. ಇವುಗಳ ಜೊತೆಗೆ ಅದು ನಾವು ನಿರೀಕ್ಷಿಸಿರದ ಕೆಲವು ಅಡ್ಡಪರಿಣಾಮಗಳಿಗೂ ಕಾರಣವಾಗುತ್ತದೆ. ಈ ಬಗ್ಗೆ ಮಾಹಿತಿಯಿಲ್ಲಿದೆ.....

►ಚರ್ಮದಲ್ಲಿ ಕಲೆಗಳು

ಯಾವುದೇ ಕಾರಣವಿಲ್ಲದೆ ಚರ್ಮದಲ್ಲಿ ಅಸಮಾನ ಗಾತ್ರದ,ಒರಟು ಅಥವಾ ಮೃದುವಾದ ಕಪ್ಪುಕಲೆಗಳು ಕಾಣಿಸಿಕೊಂಡರೆ ಅದು ಮಧುಮೇಹದ,ವಿಶೇಷವಾಗಿ ಟೈಪ್ 2 ಮಧುಮೇಹದ ಅಡ್ಡಪರಿಣಾಮವಾಗಿರಬಹುದು. ಶರೀರದಲ್ಲಿ ಹರಿಯುತ್ತಿರುವ ಹೆಚ್ಚುವರಿ ಇನ್ಸುಲಿನ್ ತ್ವರಿತವಾಗಿ ನವೀಕರಣಗೊಳ್ಳುವಂತೆ ಚರ್ಮದ ಕೋಶಗಳನ್ನು ಪ್ರಚೋದಿಸಿದಾಗ ಮತ್ತು ಚರ್ಮದಲ್ಲಿ ಹೆಚ್ಚಿನ ಮೆಲಾನಿನ್ ಉತ್ಪತ್ತಿಯನ್ನು ಪ್ರಚೋದಿಸಿದಾಗ ಈ ಕಲೆಗಳು ಕಾಣಿಸಿಕೊಳ್ಳುತ್ತವೆ.

►ಅಧಿಕ ಕೊಲೆಸ್ಟ್ರಾಲ್

 ಮಧುಮೇಹವಿರುವ ವ್ಯಕ್ತಿಯಲ್ಲಿ ಅಧಿಕ ಕೊಲೆಸ್ಟ್ರಾಲ್ ಮಟ್ಟವಿದ್ದರೆ ಅದು ಮಧುಮೇಹದ ಇನ್ನೊಂದು ಅಡ್ಡಪರಿಣಾಮವಾಗಿರುತ್ತದೆ. ರಕ್ತದಲ್ಲಿ ಸಕ್ಕರೆಯ ಮಟ್ಟ ಹೆಚ್ಚಾಗಿದ್ದಾಗ ಶರೀರದಲ್ಲಿಯ ಇನ್ಸುಲಿನ್ ಪರಿಣಾಮಕಾರಿಯಾಗಿ ಬಳಕೆಯಾಗುವುದಿಲ್ಲವಾದ್ದರಿಂದ ಅದು ಒಳ್ಳೆೆಯ ಕೊಲೆಸ್ಟ್ರಾಲ್(ಎಚ್‌ಡಿಎಲ್)ನ ಮಟ್ಟವು ಕುಸಿಯಲು ಕಾರಣವಾಗುತ್ತದೆ ಮತ್ತು ಅನಾರೋಗ್ಯಕರ ಕೊಬ್ಬುಕೋಶಗಳನ್ನು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.

►ಮಿದುಳಿನ ಆರೋಗ್ಯ ಸಮಸ್ಯೆಗಳು

 ಹೆಚ್ಚಿನ ಮಧುಮೇಹಿಗಳು ತಮ್ಮ ಅರಿವಿನ ಶಕ್ತಿ ಮತ್ತು ಮಿದುಳಿನ ಚಟುವಟಿಕೆಗಳು ಕ್ರಮೇಣ ಕುಂದುತ್ತಿರುವ ಅನಿರೀಕ್ಷಿತ ಅಡ್ಡಪರಿಣಾಮವನ್ನು ಅನುಭವಿಸುತ್ತಾರೆ. ಇದು ಅಲ್ಜೀಮರ್ಸ್ ಮತ್ತು ಡಿಮೆನ್ಶಿಯಾದಂತಹ ಮಿದುಳಿನ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಅಧ್ಯಯನವು ಬೆಟ್ಟು ಮಾಡಿದೆ. ಕೆಲವು ಮಧುಮೇಹ ರೋಗಿಗಳಲ್ಲಿ ಮಿದುಳಿಗೆ ರಕ್ತದ ಪೂರೈಕೆಯಲ್ಲಿ ವ್ಯತ್ಯಯವುಂಟಾಗುವದು ಇದಕ್ಕೆ ಕಾರಣವಾಗಿರಬಹುದು ಎಂದು ಅದು ಹೇಳಿದೆ.

►ವಸಡಿನ ಕಾಯಿಲೆಗಳು

ಮಧುಮೇಹಿಗಳು ವಸಡಿನ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚಾಗಿದ್ದು,ಇದೂ ಅದರ ಅನಿರೀಕ್ಷಿತ ಅಡ್ಡ ಪರಿಣಾಮಗಳಲ್ಲೊಂದಾಗಿದೆ. ಮಧುಮೇಹಿಗಳ ರಕ್ತದಲ್ಲಿನ ಹೆಚ್ಚಿನ ಸಕ್ಕರೆಯ ಮಟ್ಟವು ವಸಡುಗಳಲ್ಲಿಯ ಕೊಲಾಜೆನ್ ಅಂಗಾಂಶಗಳ ಮೇಲೆ ಪರಿಣಾಮವನ್ನು ಬೀರುತ್ತದೆ ಮತ್ತು ಅವುಗಳು ಉರಿಯೂತ ಮತ್ತು ಸೋಂಕಿಗೆ ಗುರಿಯಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ ಎನ್ನುವುದು ಅಧ್ಯಯನಗಳಿಂದ ಬೆಳಕಿಗೆ ಬಂದಿದೆ. ಅಲ್ಲದೆ ಮಧುಮೇಹಿಗಳಲ್ಲಿ ಗಾಯಗಳು ನಿಧಾನವಾಗಿ ಮಾಯುವುದರಿಂದ ವಸಡಿನ ಸೋಂಕುಗಳು ಶಮನಗೊಳ್ಳಲು ತುಂಬ ಸಮಯವನ್ನು ತೆಗೆದುಕೊಳ್ಳುತ್ತವೆ.

►ಶ್ರವಣ ಶಕ್ತಿ ನಷ್ಟ

 ಇತರರಿಗೆ ಹೋಲಿಸಿದರೆ ಮಧುಮೇಹಿಗಳು ಶ್ರವಣ ಶಕ್ತಿ ನಷ್ಟಕ್ಕೊಳಗಾಗುವ ಸಾಧ್ಯತೆಗಳು ಹೆಚ್ಚು ಎನ್ನುವುದನ್ನು ಹಲವಾರು ಸಂಶೋಧನೆಗಳು ಬಹಿರಂಗಗೊಳಿಸಿವೆ. ಮಧುಮೇಹವು ಸುದೀರ್ಘ ಅವಧಿಯ ಬಳಿಕ ಒಳ ಕಿವಿಯ ರಕ್ತನಾಳಗಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಇದು ರೋಗಿಗಳಲ್ಲಿ ಶ್ರವಣ ಶಕ್ತಿ ನಷ್ಟ ಅಥವಾ ಕಿವುಡುತನಕ್ಕೆ ಕಾರಣವಾಗುತ್ತದೆ. ಇದು ಶಾಶ್ವತವಾಗಬಹುದು.

►ಮೂತ್ರಪಿಂಡ ವೈಫಲ್ಯ

  ಇದು ಅತ್ಯಂತ ಗಂಭೀರ,ಅನಿರೀಕ್ಷಿತ ಅಡ್ಡಪರಿಣಾಮವಾಗಿದೆ. ದೀರ್ಘಾವಧಿಯಿಂದ ಮಧುಮೇಹದಿಂದ ಬಳಲುತ್ತಿರುವವರಲ್ಲಿ ಮೂತ್ರಪಿಂಡಗಳು ರಕ್ತವನ್ನು ಶೋಧಿಸುವಾಗ ರಕ್ತದಲ್ಲಿ ಅಧಿಕ ಪ್ರಮಾಣದಲ್ಲಿರುವ ಸಕ್ಕರೆಯು ಮೂತ್ರಪಿಂಡಗಳ ಕೋಶಗಳಿಗೆ ಹಾನಿಯನ್ನುಂಟು ಮಾಡುತ್ತದೆ. ಇದು ಮೂತ್ರಪಿಂಡ ಕಾಯಿಲೆಗಳು,ಸೋಂಕುಗಳು ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗುತ್ತದೆ. ತುರ್ತು ವೈದ್ಯಕೀಯ ಚಿಕಿತ್ಸೆಯನ್ನು ಪಡೆಯದಿದ್ದರೆ ಮಾರಣಾಂತಿಕವೂ ಆಗಬಹುದು.

►ಲೈಂಗಿಕ ನಿರಾಸಕ್ತಿ

ಮಧುಮೇಹ ಹೊಂದಿರುವ ಕೆಲವರಲ್ಲಿ ಜನನಾಂಗಗಳಲ್ಲಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಮತ್ತು ಇದರಿಂದಾಗಿ ಅವರ ಲೈಂಗಿಕ ಕ್ಷಮತೆಯು ಕುಗ್ಗುತ್ತದೆ. ರಕ್ತದಲ್ಲಿ ಅಧಿಕ ಸಕ್ಕರೆಯಿಂದಾಗಿ ವಿಶೇಷವಾಗಿ ಪುರುಷರಲ್ಲಿ ಹಾರ್ಮೋನ್‌ಗಳ ಅಸಮತೋಲನ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನ್‌ಗಳ ಮಟ್ಟ ಕುಸಿಯುವುದು ಇದಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News