ಮಕ್ಕಳಲ್ಲಿ ಚರ್ಮದ ಅಲರ್ಜಿಗೆ ಕಾರಣಗಳಿಲ್ಲಿವೆ...

Update: 2018-09-17 09:45 GMT

ನಿಮ್ಮ ಮಗು ಪದೇ ಪದೇ ಚರ್ಮವನ್ನು ಕೆರೆದುಕೊಳ್ಳುತ್ತಿದ್ದರೆ ಅಥವಾ ಚರ್ಮದಲ್ಲಿ ತಾನಾಗಿಯೇ ಮಾಯವಾಗದ ದದ್ದುಗಳು ಉಂಟಾಗಿದ್ದರೆ ಅದು ಚರ್ಮದ ಅಲರ್ಜಿಯನ್ನು ಸೂಚಿಸಬಹುದು. ಮಕ್ಕಳಲ್ಲಿ ಅತ್ಯಂತ ಸಾಮಾನ್ಯ ಅಲರ್ಜಿಗಳಲ್ಲೊಂದಾಗಿರುವ ಚರ್ಮದ ಅಲರ್ಜಿಯುಂಟಾಗಲು ಹವಾಮಾನ ಬದಲಾವಣೆಯಿಂದ ಹಿಡಿದು ವಾತಾವರಣದಲ್ಲಿನ ವಿಷಕಾರಕಗಳವರೆಗೆ ಹಲವಾರು ಕಾರಣಗಳಿವೆ. ಮಕ್ಕಳಲ್ಲಿ ಚರ್ಮದ ಅಲರ್ಜಿಯನ್ನುಂಟು ಮಾಡುವ ಕೆಲವು ಸಾಮಾನ್ಯ ಕಾರಣಗಳ ಮಾಹಿತಿಯಿಲ್ಲಿದೆ.....

ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಅಲರ್ಜಿಯನ್ನುಂಟು ಮಾಡುವ ಕಾಯಿಲೆಗಳು ಗಣನೀಯವಾಗಿ ಹೆಚ್ಚುತ್ತಿವೆ. ಪೀಡಿಯಾಟ್ರಿಕ್ ಚೈಲ್ಡ್ ಹೆಲ್ತ್ ಜರ್ನಲ್‌ನಲ್ಲಿ ಪ್ರಕಟಿತ ಅಧ್ಯಯನ ವರದಿಯಂತೆ ಅಲರ್ಜಿಗಳಿಂದ ಶೇ.35ರಷ್ಟು ಮಕ್ಕಳು ಪೀಡಿತರಾಗುತ್ತಾರೆ. ಅಲ್ಲದೆ ಕುಟುಂಬದಲ್ಲಿ ಅಲರ್ಜಿಯ ಇತಿಹಾಸವಿದ್ದರೂ ಮಕ್ಕಳು ಅದರಿಂದ ಬಳಲುವ ಸಾಧ್ಯತೆ ಹೆಚ್ಚಾಗಿರುತ್ತದೆ.

►ಕಜ್ಜಿ

ಇದು ಸಾಮಾನ್ಯ ಚರ್ಮದ ಅಲರ್ಜಿಗಳಲ್ಲೊಂದಾಗಿದ್ದು,ವಿಶ್ವಾದ್ಯಂತ ಸುಮಾರು ಶೇ.10ರಷ್ಟು ಮಕ್ಕಳು ಇದರಿಂದ ಬಳಲುತ್ತಾರೆ. ನಿಮ್ಮ ಮಗು ಅಸ್ತಮಾ,ಆಹಾರದ ಅಲರ್ಜಿಗಳು,ಪರಾಗ ಅಥವಾ ಧೂಳಿನ ಅಲರ್ಜಿಗೆ ಗುರಿಯಾಗಿದ್ದರೆ ಕಜ್ಜಿಗಳು ಉಂಟಾಗುವ ಸಾಧ್ಯತೆಯು ಹೆಚ್ಚಾಗಿರುತ್ತದೆ. ಅಲ್ಲದೆ ಕುಟುಂಬದಲ್ಲಿ ಈ ಸಮಸ್ಯೆಯು ಹರಿದುಬಂದಿದ್ದರೆ ಮಗುವಿಗೆ ಕಜ್ಜಿಯಂಟಾಗುವ ಅಪಾಯವಿರುತ್ತದೆ. ಮಗುವಿಗೆ ಕಜ್ಜಿಯಾಗಿದ್ದರೆ ಚರ್ಮವು ತೀರ ಒಣಗಿರುತ್ತದೆ ಮತ್ತು ತೇವಾಂಶದ ಕೊರತೆಯಿರುತ್ತದೆ. ಇದು ಚರ್ಮವನ್ನು ಹೊರಗಿನ ಗಾಳಿಗೆ ಒಡ್ಡಿಕೊಂಡಾಗ ಕೆರಳುವಿಕೆ ಮತ್ತು ಉರಿಯೂತವನ್ನುಂಟು ಮಾಡುತ್ತದೆ. ಅಲ್ಲದೆ ಕಜ್ಜಿಯಿಂದ ನರಳುತ್ತಿರುವ ಮಕ್ಕಳು ಆಹಾರ ಸಂವೇದನಾಶೀಲತೆಯನ್ನು ಹೊಂದಿರುತ್ತಾರೆ ಮತ್ತು ಅಂತಹ ಆಹಾರಗಳನ್ನು ಸೇವಿಸಿದಾಗ ಸ್ಥಿತಿ ಇನ್ನಷ್ಟು ಹದಗೆಡುತ್ತದೆ.

►ಸಂಪರ್ಕದಿಂದ ಉಂಟಾಗುವ ಚರ್ಮರೋಗ

ಇದು ಚರ್ಮವು ಅಲರ್ಜಿಕಾರಕದ ಸಂಪರ್ಕಕ್ಕೆ ಬಂದಾಗ ಕಾಣಿಸಿಕೊಳ್ಳುವ ಕಾಯಿಲೆಯಾಗಿದೆ. ಉದಾಹರಣೆಗೆ ಮಗುವು ತಾಮ್ರಕ್ಕೆ ಅಲರ್ಜಿಯನ್ನು ಹೊಂದಿದ್ದರೆ ಮತ್ತು ತಾಮ್ರದ ಪಾತ್ರೆ ಅಥವಾ ಒಡವೆ ಅಥವಾ ವಸ್ತುವನ್ನು ಸ್ಪರ್ಶಿಸಿದರೆ ಅದು ಅಲರ್ಜಿಯನ್ನುಂಟು ಮಾಡುತ್ತದೆ. ನಿಕೆಲ್,ವಿಷಯುಕ್ತ ಸಸ್ಯ,ಟೂಥ್‌ಪೇಸ್ಟ್ ಅಥವಾ ವೌತ್‌ವಾಷ್‌ನಲ್ಲಿಯ ಘಟಕಗಳು,ಪ್ರಸಾದನ ಸಾಮಗ್ರಿಗಳು,ಬಣ್ಣಗಳು ಮತ್ತು ಕೆಲವು ಔಷಧಿಗಳು ಸಹ ಅಲರ್ಜಿಯನ್ನುಂಟು ಮಾಡುತ್ತವೆ.

►ಹೈವ್ಸ್

 ಚರ್ಮವು ಅಲರ್ಜಿಕಾರಕದ ಸಂಪರ್ಕಕ್ಕೆ ಬಂದಾಗ ಅದರ ಮೇಲೆ ಕೆಂಪುಬಣ್ಣದ,ಉಬ್ಬಿದ ದದ್ದುಗಳು ಕಾಣಿಸಿಕೊಳ್ಳುತ್ತವೆ ಮತ್ತು ಇದರಿಂದಾಗಿ ಉಂಟಾಗುವ ಅಲರ್ಜಿಯು ಚುಚ್ಚಿದ ನೋವನ್ನುಂಟು ಮಾಡುವುದರಿಂದ ಇದನ್ನು ಹೈವ್ಸ್ ಎಂದು ಕರೆಯಲಾಗುತ್ತದೆ. ಅಲರ್ಜಿಕಾರಕದಿಂದ ದೂರವಾದರೆ ಈ ಅಲರ್ಜಿಯು ತನ್ನಿಂತಾನೇ ಮಾಯವಾಗುತ್ತದೆ. ಈ ಅಲರ್ಜಿಯು ದೇಹದ ಯಾವುದೇ ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಕೆಲವು ನಿಮಿಷಗಳು,ಕೆಲವು ಗಂಟೆಗಳು ಅಥವಾ ಕೆಲವು ದಿನಗಳವರೆಗೂ ಕಾಡಬಹುದು.

 ಈ ಅಲರ್ಜಿಯಿದ್ದಾಗ ಶರೀರದ ರೋಗ ನಿರೋಧಕ ವ್ಯವಸ್ಥೆಯು ಹಿಸ್ಟಾಮಿನ್ ಅನ್ನು ಬಿಡುಗಡೆಗೊಳಿಸುವುದರಿಂದ ಉರಿಯೂತ ಕಾಣಣಿಸಿಕೊಳ್ಳುತ್ತದೆ. ಹಿಸ್ಟಾಮಿನ್ ರಕ್ತನಾಳಗಳ ಸೋರಿಕೆಗೆ ಮತ್ತು ಚರ್ಮದ ಊತಕ್ಕೆ ಕಾರಣವಾಗುತ್ತದೆ. ಚರ್ಮದಲ್ಲಿ ತುರಿಕೆಯನ್ನುಂಟು ಮಾಡುವ ಕೆಂಪು ದದ್ದುಗಳೊಂದಿಗೆ ಉಸಿರಾಟದಲ್ಲಿ ತೊಂದರೆ ಮತ್ತು ಮುಖ ಹಾಗೂ ಬಾಯಿ ಊದಿಕೊಳ್ಳುವಿಕೆಯಂತಹ ಇತ್ಯಾದಿ ಲಕ್ಷಣಗಳೂ ಕಾಣಿಸಿಕೊಳ್ಳಬಹುದು.

►ಆ್ಯಂಜಿಯೊಡೆಮಾ

ಚರ್ಮದ ಊತ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಚುಚ್ಚಿದ ಅನುಭವ ಆ್ಯಂಜಿಯೊಡೆಮಾ ಅಲರ್ಜಿಯ ವೈಶಿಷ್ಟವಾಗಿದೆ. ಇದು ಸಾಮಾನ್ಯವಾಗಿ ಕಣ್ಣುಗುಡ್ಡೆಗಳು,ಬಾಯಿ ಅಥವಾ ಜನನಾಂಗಗಳಲ್ಲಿ ಕಾಣಿಸಿಕೊಳ್ಳುತ್ತದೆ. ಕೆಲವು ಪ್ರಕರಣಗಳಲ್ಲಿ ಈ ಅಲರ್ಜಿಯು ಶ್ವಾಸನಾಳದ ಅಥವಾ ಜೀರ್ಣಾಂಗದ ಲೋಳೆಪೊರೆಯ ಊತವನ್ನುಂಟು ಮಾಡುತ್ತದೆ. ಗಂಟಲುಗೂಡಿನ ಊತವು ಜೀವಕ್ಕೆ ಅಪಾಯವನ್ನುಂಟು ಮಾಡುವ ಸಮಸ್ಯೆಗಳಿಗೆ ಕಾರಣವಾಗಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News