ನೀವು ಮಧುಮೇಹಿಗಳಾಗಿದ್ದಲ್ಲಿ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಈ ಗಿಡಮೂಲಿಕೆಯನ್ನು ಬಳಸಿ ನೋಡಿ

Update: 2018-10-16 12:50 GMT

ಮಧುಮೇಹ ಜೀವನಶೈಲಿ ಕಾಯಿಲೆಯಾಗಿದ್ದು,ಇದನ್ನು ಗುಣಪಡಿಸಲು ಸಾಧ್ಯವಿಲ್ಲ. ಆದರೆ ಆರೋಗ್ಯಕರ ಆಹಾರ ಸೇವನೆ ಮತ್ತು ನಿಯಮಿತ ವ್ಯಾಯಾಮಗಳಿಂದ ಈ ರೋಗವನ್ನು ನಿಯಂತ್ರಿಸಬಹುದು ಮತ್ತು ಇತರರಂತೆ ಸಹಜ ಬದುಕನ್ನು ನಡೆಸಬಹುದು. ಆಯುರ್ವೇದಲ್ಲಿ ರಕ್ತದಲ್ಲಿಯ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಗಿಡಮೂಲಿಕೆಗಳನ್ನು ಸೂಚಿಸಲಾಗಿದ್ದು,ಇವುಗಳ ಪೈಕಿ ಪುನರ್ನವ ಸಸ್ಯ ಅತ್ಯಂತ ಪರಿಣಾಮಕಾರಿಯೆಂದು ಹೇಳಲಾಗಿದೆ.

ಮಧುಮೇಹವು ನಮ್ಮ ಶರೀರವು ಸಾಕಷ್ಟು ಇನ್ಸುಲಿನ್‌ನ್ನು ಉತ್ಪಾದಿಸದಿರುವ ಅಥವಾ ಶರೀರದ ಜೀವಕೋಶಗಳು ಇನ್ಸುಲಿನ್‌ಗೆ ಸೂಕ್ತವಾಗಿ ಪ್ರತಿಕ್ರಿಯಿಸದಿರುವ ಸ್ಥಿತಿಯಾಗಿದೆ. ಪರಿಣಾಮವಾಗಿ ಆಗಾಗ್ಗೆ ರಕ್ತದಲ್ಲಿಯ ಸಕ್ಕರೆ ಮಟ್ಟದಲ್ಲಿ ಏರಿಳಿತಗಳಾಗುತ್ತವೆ ಮತ್ತು ಇದರಿಂದ ಮೂತ್ರಪಿಂಡಗಳಿಗೆ ಹಾನಿಯುಂಟಾಗುತ್ತದೆ. ಇಂತಹ ಸಂದರ್ಭದಲ್ಲಿ,ವೈಜ್ಞಾನಿಕವಾಗಿ ಬೊರ್ಹವಿಯಾ ಡಿಫ್ಯುಸಾ ಎಂದು ಕರೆಯಲಾಗುವ ಪುನರ್ನವ ರಕ್ಷಣೆ ನೀಡುತ್ತದೆ.

ಸುದೀರ್ಘ ಕಾಲದಿಂದಲೂ ವಿವಿಧ ಕಾಯಿಲೆಗಳಿಗಾಗಿ ಗಿಡಮೂಲಿಕೆ ಔಷಧಿಗಳಲ್ಲಿ ಪುನರ್ನವವನ್ನು ಬಳಸಲಾಗುತ್ತಿದೆ. ಇದು ಬಳ್ಳಿಯಂತೆ ಹಬ್ಬುವ ಸಸ್ಯವಾಗಿದ್ದು, ಭಾರತ ಮತ್ತು ಬ್ರಾಝಿಲ್‌ನ ಕಾಡುಗಳಲ್ಲಿ ವರ್ಷವಿಡೀ ಬೆಳೆಯುತ್ತಿರುತ್ತದೆ. ನೀವು ತಿಳಿದುಕೊಳ್ಳಲೇಬೇಕಾದ ಪುನರ್ನವದ ಆರೋಗ್ಯಲಾಭಗಳು ಇಲ್ಲಿವೆ....

ಜರ್ನಲ್ ಆಫ್ ಫಾರ್ಮಾಕಾಲಜಿ ಆ್ಯಂಡ್ ಫೈಟೊಕೆಮಿಸ್ಟ್ರಿಯಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯಂತೆ ಪುನರ್ನವವು ಮಧುಮೇಹವನ್ನು ನಿಭಾಯಿಸುವಲ್ಲಿ ಮುಖ್ಯವಾಗಿರುವ ಜೀರ್ಣಾಂಗವನ್ನು ಸರಿಪಡಿಸುತ್ತದೆ. ಆರೋಗ್ಯಕರವಾದ ಜೀರ್ಣಾಂಗವು ರಕ್ತದಲ್ಲಿಯ ಸಕ್ಕರೆ ಮಟ್ಟವು ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತದೆ.

 ಪುನರ್ನವವನ್ನು ಪ್ರಮುಖವಾಗಿ ಮೂತ್ರಪಿಂಡ ಮತ್ತು ಮೂತ್ರಸಂಬಂಧಿ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸಲಾಗುತ್ತದೆ. ಅದು ಮಧುಮೇಹದಿಂದ ಹಾನಿಗೀಡಾಗಿರುವ ಮೂತ್ರಪಿಂಡಗಳ ಕಾರ್ಯ ನಿರ್ವಹಣೆಯನ್ನು ಸುಧಾರಿಸುತ್ತದೆ. ಅದು ರಕ್ತದಲ್ಲಿಯ ಗ್ಲುಕೋಸ್ ಮಟ್ಟವನ್ನು ಸ್ಥಿರಗೊಳಿಸುತ್ತದೆ ಮತ್ತು ಇದು ಮಧುಮೇಹಿಗಳಿಗೆ ಹೆಚ್ಚು ಲಾಭದಾಯಕವಾಗಿದೆ. ಅಲ್ಲದೆ ಅದು ಪ್ಲಾಸ್ಮಾ ಇನ್ಸುಲಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಮಧುಮೇಹವನ್ನು ನಿಯಂತ್ರಿಸುವಲ್ಲಿ ನೆರವಾಗುತ್ತದೆ.

 ಅಲೋಪತಿ ಮತ್ತು ಗಿಡಮೂಲಿಕೆಗಳ ಔಷಧಿಗಳನ್ನು ಏಕಕಾಲದಲ್ಲಿ ಸೇವಿಸುವುದರಿಂದ ರಕ್ತದಲ್ಲಿಯ ಸಕ್ಕರೆಯ ಮಟ್ಟವು ಗಣನೀಯವಾಗಿ ತಗ್ಗಬಹುದು. ಹೀಗಾಗಿ ಮಧುಮೇಹಕ್ಕೆ ಈಗಾಗಲೇ ಅಲೋಪತಿ ಔಷಧಿಗಳನ್ನು ಸೇವಿಸುತ್ತಿರುವವರು ಗಿಡಮೂಲಿಕೆಗಳನ್ನು ಬಳಸುವ ಮುನ್ನ ತಮ್ಮ ವೈದ್ಯರ ಸಲಹೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News