ಅಯೊಡಿನ್ ಕೊರತೆಯನ್ನು ಸೂಚಿಸುವ ಈ ಲಕ್ಷಣಗಳು ನಿಮಗೆ ತಿಳಿದಿರಲಿ

Update: 2018-10-20 12:59 GMT

ಅಯೊಡಿನ್ ಅಗತ್ಯ ಕಿರುಪೋಷಕಾಂಶವಾಗಿದ್ದು,ನಮ್ಮ ಥೈರಾಯ್ಡ ಗ್ರಂಥಿಯ ಸಹಜ ಕಾರ್ಯ ನಿರ್ವಹಣೆಗೆ ಮತ್ತು ಸೂಕ್ತ ಬೆಳವಣಿಗೆಗೆ ಇದು ಬೇಕೇ ಬೇಕು. ಆದರೆ ಅಯೊಡಿನ್ ಕೊರತೆಯಿಂದುಂಟಾಗುವ ರೋಗಗಳು ಇಂದು ವಿಶ್ವಾದ್ಯಂತ ಪ್ರಮುಖ ಆರೋಗ್ಯ ಕಳವಳವಾಗಿವೆ.

ಇತ್ತೀಚಿನ ವರದಿಯೊಂದರಂತೆ ವಿಶ್ವದಲ್ಲಿ ಸುಮಾರು 1.88 ಶತಕೋಟಿ ಜನರು ಅಯೊಡಿನ್ ಕೊರತೆಯ ಅಪಾಯವನ್ನೆದುರಿಸುತ್ತಿದ್ದಾರೆ ಮತ್ತು 241 ಮಿಲಿಯ ಶಾಲಾಮಕ್ಕಳು ಸಾಕಷ್ಟು ಅಯೊಡಿನ್ ಸೇವಿಸುತ್ತಿಲ್ಲ.

ಥೈರಾಯ್ಡ ಹಾರ್ಮೋನ್‌ಗಳ ಸಂಶ್ಲೇಷಣೆಯಲ್ಲಿ ಅಯೋಡಿನ್ ನಿರ್ಣಾಯಕ ಪಾತ್ರವನ್ನು ಹೊಂದಿದೆ. ಆರು ವರ್ಷದವರೆಗಿನ ಮಕ್ಕಳು ಪ್ರತಿದಿನ 90 ಮೈಕ್ರೋಗ್ರಾಂ,6ರಿಂದ 12 ವರ್ಷದ ಮಕ್ಕಳು 120 ಮೈಕ್ರೋಗ್ರಾಂ, ಹದಿಹರೆಯದವರು ಮತ್ತು ವಯಸ್ಕರು 150 ಮೈಕ್ರೋಗ್ರಾಂ ಮತ್ತು ಗರ್ಭಿಣಿಯರು ಹಾಗು ಹಾಲೂಡಿಸುವ ತಾಯಂದಿರು 250 ಮೈಕ್ರೋಗ್ರಾಂ ಅಯೊಡಿನ್ ಸೇವಿಸುವ ಅಗತ್ಯವಿದೆ.

ಕಬ್ಬಿಣ ಮತ್ತು ಕ್ಯಾಲ್ಸಿಯಮ್‌ನಂತಹ ಇತರ ಸಾಮಾನ್ಯ ಪೌಷ್ಟಿಕಾಂಶಗಳಂತೆ ಅಯೊಡಿನ್ ಆಹಾರಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೈಸರ್ಗಿಕವಾಗಿ ದೊರೆಯುವುದಿಲ್ಲ. ಅದು ಮಣ್ಣಿನಲ್ಲಿರುತ್ತದೆ,ಹೀಗಾಗಿ ಅಯೊಡಿನ್ ಸಮೃದ್ಧವಾಗಿರುವ ಮಣ್ಣಿನಲ್ಲಿ ಬೆಳೆದ ಆಹಾರ ಸಾಮಗ್ರಿಗಳು ಈ ಖನಿಜವನ್ನು ಒಳ್ಳೆಯ ಪ್ರಮಾಣದಲ್ಲಿ ಹೊಂದಿರುತ್ತವೆ.

ಅಯೊಡಿನ್ ಕಿರು ಪ್ರಮಾಣದಲ್ಲಿ ನೀರು,ಆಹಾರ ಮತ್ತು ಉಪ್ಪಿನಲಿರುತ್ತದೆ. ಸಮುದ್ರ ಮೀನುಗಳು,ಹಸಿರು ತರಕಾರಿಗಳು,ಹಾಲು,ಮಾಂಸ,ದ್ವಿದಳ ಧಾನ್ಯಗಳು ಮತ್ತು ಉಪ್ಪು ಅಯೊಡಿನ್‌ನ ಸಾಮಾನ್ಯ ಮೂಲಗಳಾಗಿವೆ. ಅಯೊಡಿನ್ ಕೊರತೆಯನ್ನು ನೀಗಿಸಲು ಅದನ್ನು ಬೆರೆಸಿದ ಉಪ್ಪು ಮಾರುಕಟ್ಟೆಗಳಲ್ಲಿ ಲಭ್ಯವಿದೆ.

  ಅಗತ್ಯ ಪ್ರಮಾಣದಲ್ಲಿ ಅಯೊಡಿನ್ ಸೇವಿಸದಿದ್ದರೆ ಥೈರಾಯ್ಡ ಹಾರ್ಮೋನ್‌ಗಳು ಸಾಕಷ್ಟು ಪ್ರಮಾಣದಲ್ಲಿ ಉತ್ಪತ್ತಿಯಾಗುವುದಿಲ್ಲ. ಈ ಹಾರ್ಮೋನ್‌ಗಳು ಹೃದಯ,ಯಕೃತ್ತು ಮತ್ತು ಮೂತ್ರಪಿಂಡಗಳಂತಹ ವಿವಿಧ ಅಂಗಾಂಗಗಳ ಕಾರ್ಯವನ್ನು ಕ್ರಮಬದ್ಧಗೊಳಿಸುವಲ್ಲಿ ನೆರವಾಗುತ್ತವೆ. ಅದು ವಿಶೇಷವಾಗಿ ಭ್ರೂಣ ಹಂತದಲ್ಲಿ ಮಿದುಳಿನ ಬೆಳವಣಿಗೆ ಮತ್ತು ಅಭಿವೃದ್ಧಿಗೂ ಅಗತ್ಯವಾಗಿದೆ. ಹೀಗಾಗಿ ಅಯೊಡಿನ್ ಕೊರತೆಯು ಹಲವಾರು ಆರೋಗ್ಯ ಸಮಸ್ಯೆಗಳನ್ನುಂಟು ಮಾಡುತ್ತದೆ. ಅಯೊಡಿನ್‌ನ ತೀವ್ರ ಕೊರತೆಯು ಹೈಪೊಥೈರಾಯ್ಡಿಸಂ,ಗಳಗಂಡ ಮತ್ತು ಗರ್ಭಿಣಿಯರಲ್ಲಿ ಮೃತ ಶಿಶು ಜನನ,ಗರ್ಭಪಾತ ಮತ್ತು ಶಿಶುಗಳಲ್ಲಿ ಜನ್ಮಜಾತ ರೋಗಗಳಂತಹ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಅಯೊಡಿನ್ ಕೊರತೆಯ ಎಲ್ಲ ಲಕ್ಷಣಗಳು ಥೈರಾಯ್ಡ ಗ್ರಂಥಿಯ ಮೇಲೆ ಅದರ ಪರಿಣಾಮಗಳಿಗೆ ಸಂಬಂಧಿಸಿವೆ. ಅಯೊಡೈಡ್ ರೂಪದಲ್ಲಿ ಶರೀರವನ್ನು ಪ್ರವೇಶಿಸುವ ಅಯೊಡಿನ್‌ನ್ನು ಥೈರಾಯ್ಡ ಗ್ರಂಥಿಯು ಹಿಡಿದಿಟ್ಟುಕೊಂಡು ಥೈರಾಯ್ಡ ಹಾರ್ಮೋನ್‌ಗಳ ಸಂಶ್ಲೇಷಣೆ ಮತ್ತು ದಾಸ್ತಾನಿಗೆ ಬಳಸಿಕೊಳ್ಳುವುದು ಇದಕ್ಕೆ ಕಾರಣವಾಗಿದೆ.

ಅಯೊಡಿನ್ ಕೊರತೆಯುಂಟಾದರೆ ಸಾಕಷ್ಟು ಪ್ರಮಾಣದಲ್ಲಿ ಥೈರಾಯ್ಡ ಹಾರ್ಮೋನ್‌ಗಳ ಸಂಶ್ಲೇಷಣೆ ಕಠಿಣವಾಗುತ್ತದೆ ಮತ್ತು ಇದರ ಪರಿಣಾಮವಾಗಿ ಥೈರಾಯ್ಡ ಗ್ರಂಥಿಯು ಗಾತ್ರದಲ್ಲಿ ದೊಡ್ಡದಾಗುತ್ತದೆ(ಗಳಗಂಡ) ಮತ್ತು ಹೈಪೊಥೈರಾಯ್ಡಿಸಂಗೆ ಕಾರಣವಾಗುತ್ತದೆ.

►ಕುತ್ತಿಗೆಯ ಊತ

ಗಳಗಂಡವೆಂದೂ ಕರೆಯಲಾಗುವ ಇದು ಅಯೊಡಿನ್ ಕೊರತೆಯ ಅತ್ಯಂತ ಸಾಮಾನ್ಯ ಲಕ್ಷಣಗಳಲ್ಲೊಂದಾಗಿದೆ. ಶರೀರದಲ್ಲಿ ಅಯೊಡಿನ್ ಕಡಿಮೆಯಾದಾಗ ಕುತ್ತಿಗೆಯ ಪ್ರದೇಶದಲ್ಲಿರುವ ಥೈರಾಯ್ಡಿ ಗ್ರಂಥಿಗೆ ಅಗತ್ಯವಿರುವಷ್ಟು ಹಾರ್ಮೋನ್‌ಗಳ ಉತ್ಪಾದನೆ ಸಾಧ್ಯವಾಗುವುದಿಲ್ಲ. ಹೀಗಾಗಿ ಬೇಡಿಕೆಯನ್ನು ಪೂರೈಸಲು ಅದು ಹೆಚ್ಚು ಕೆಲಸ ಮಾಡುತ್ತದೆ,ಇದರಿಂದಾಗಿ ದೊಡ್ಡದಾಗುತ್ತದೆ ಮತ್ತು ಗಂಟಲಿನ ಊತಕ್ಕೆ ಕಾರಣವಾಗುತ್ತದೆ

►ನಿಶ್ಶಕ್ತಿ ಮತ್ತು ದಣಿವು

 ಇವು ಹೈಪೊಥೈರಾಯ್ಡಿಸಮ್‌ನ ಸಾಮಾನ್ಯ ಲಕ್ಷಣಗಳಾಗಿವೆ. ಥೈರಾಯ್ಡಿ ಹಾರ್ಮೋನ್‌ಗಳು ಶರೀರದಲ್ಲಿ ಶಕ್ತಿ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಅಯೊಡಿನ್ ಕೊರತೆಯಿಂದ ಈ ಹಾರ್ಮೋನ್‌ಗಳ ಉತ್ಪತ್ತಿ ಕಡಿಮೆಯಾದರೆ ಅದು ನಿಶ್ಶಕ್ತಿ ಮತ್ತು ದಣಿವಿನ ಅನುಭವವನ್ನು ನೀಡುತ್ತದೆ.

►ವಿನಾಕಾರಣ ತೂಕ ಏರಿಕೆ

ಥೈರಾಯ್ಡ ಹಾರ್ಮೋನ್‌ಗಳು ಚಯಾಪಚಯ ನಿಯಂತ್ರಣದಲ್ಲಿಯೂ ನೆರವಾಗುತ್ತವೆ. ಅಯೊಡಿನ್ ಕೊರತೆಯಿಂದ ಈ ಹಾರ್ಮೋನ್‌ಗಳು ಕಡಿಮೆಯಾದರೆ ಅದು ಶರೀರವು ಕ್ಯಾಲರಿಗಳನ್ನು ದಹಿಸುವ ವೇಗದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಪರಿಣಾಮವಾಗಿ ಶರೀರವು ಕೆಲವೇ ಕ್ಯಾಲರಿಗಳನ್ನು ದಹಿಸುತ್ತದೆ ಮತ್ತು ಹೆಚ್ಚುವರಿ ಕ್ಯಾಲರಿಗಳು ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತವೆ ಮತ್ತು ದೇಹತೂಕ ಹೆಚ್ಚಾಗುತ್ತದೆ.

►ತಲೆಗೂದಲು ಉದುರುವಿಕೆ

ಥೈರಾಯ್ಡ ಹಾರ್ಮೋನ್‌ಗಳು ಕೂದಲ ಕೋಶಕಗಳ ಬೆಳವಣಿಗೆಯಲ್ಲಿ ನೆರವಾಗುತ್ತವೆ, ಅಯೊಡಿನ್ ಕೊರತೆಯಿಂದಾಗಿ ಥೈರಾಯ್ಡ ಹಾರ್ಮೋನ್‌ಗಳ ಮಟ್ಟ ಕುಸಿದಾಗ ಅದು ಗಣನೀಯ ಪ್ರಮಾಣದಲ್ಲಿ ತಲೆಗೂದಲು ಉದುರುವಂತೆ ಮಾಡುತ್ತದೆ.

►ಒಣಗಿದ ಮತ್ತು ಒರಟಾದ ಚರ್ಮ

 ಥೈರಾಯ್ಡ ಹಾರ್ಮೋನ್‌ಗಳು ಚರ್ಮದ ಜೀವಕೋಶಗಳ ಮರು ಉತ್ಪಾದನೆಗೆ ನೆರವಾಗುವುದರೊಂದಿಗೆ ಬೆವರಿನ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸುವ ಮೂಲಕ ಚರ್ಮದ ಜಲೀಕರಣವನ್ನೂ ಮಾಡುತ್ತವೆ. ಹೀಗಾಗಿ ಈ ಹಾರ್ಮೋನ್‌ಗಳ ಕೊರತೆಯಾದಾಗ ಬೆವರು ಹರಿಯುವುದೂ ಕಡಿಮೆಯಾಗುತ್ತದೆ. ಪರಿಣಾಮವಾಗಿ ಚರ್ಮವು ಒಣಗುತ್ತದೆ ಮತ್ತು ಒರಟಾಗುತ್ತದೆ.

►ಜ್ಞಾಪಕಶಕ್ತಿ ಕುಂಠಿತ

ಅಯೊಡಿನ್ ಕೊರತೆಯು ಮಕ್ಕಳಲ್ಲಿ ಮಿದುಳಿಗೆ ಹಾನಿಯನ್ನುಂಟು ಮಾಡುತ್ತದೆ ಮತ್ತು ಅವರ ಕಲಿಕೆಯ ಶಕ್ತಿಯನ್ನು ಕಡಿಮೆ ಮಾಡುತ್ತದೆ,ಜೊತೆಗೆ ಜ್ಞಾಪಕ ಶಕ್ತಿಯನ್ನು ಕುಂಠಿತಗೊಳಿಸುತ್ತದೆ,ಮಾತನಾಡುವ ಮತ್ತು ಯೋಚನೆ ಮಾಡುವ ಸಾಮರ್ಥ್ಯವನ್ನು ಕುಂದಿಸುತ್ತದೆ. ಥೈರಾಯ್ಡಿ ಹಾರ್ಮೋನ್‌ಗಳು ಮಿದುಳಿನ ಬೆಳವಣಿಗೆಗೆ ನೆರವಾಗುತ್ತವೆ ಮತ್ತು ಇವುಗಳ ಕೊರತೆಯು ಈ ಪರಿಣಾಮಗಳನ್ನುಂಟು ಮಾಡುತ್ತದೆ.

►ಚಳಿಗೆ ಅಸಂಯಮತೆ

ಥೈರಾಯ್ಡ ಹಾರ್ಮೋನಗಳ ಮಟ್ಟ ಕುಸಿದಾಗ ಅದು ಚಯಾಪಚಯಗಳ ಮೇಲೆ ಪ್ರತಿಕೂಲ ಪರಿಣಾಮವನ್ನುಂಟು ಮಾಡುತ್ತದೆ ಮತ್ತು ಕಡಿಮೆ ಉಷ್ಣತೆಯ ಉತ್ಪಾದನೆಗೆ ಕಾರಣವಾಗುತ್ತದೆ. ಇದರಿಂದಾಗಿ ಚಳಿಗೆ ಹೆಚ್ಚು ಸಂವೇದನಾಶೀಲರನ್ನಾಗಿಸುತ್ತದೆ. ಥೈರಾಯ್ಡಾ ಹಾರ್ಮೋನ್‌ಗಳ ಕೊರತೆಯಿಂದ ಬಳಲುತ್ತಿರುವವರಲ್ಲಿ ಶೇ.84ರಷ್ಟು ಜನರಿಗೆ ಚಳಿಯನ್ನು ಸಹಿಸಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News