ಕಣ್ಣಿನ ಸಾಮಾನ್ಯ ಸಮಸ್ಯೆಗಳಿಗೆ ಕಾರಣಗಳು ಮತ್ತು ಲಕ್ಷಣಗಳು

Update: 2018-10-23 18:39 GMT

ಹೆಚ್ಚಿನ ಜನರಿಗೆ ಒಂದಲ್ಲೊಂದು ಸಂದರ್ಭದಲ್ಲಿ ಕಣ್ಣಿನ ಸಮಸ್ಯೆಗಳು ಬಾಧಿಸುತ್ತಲೇ ಇರುತ್ತವೆ. ನಮ್ಮ ಶರೀರದ ಇತರ ಅಂಗಗಳಂತೆ ಕಣ್ಣುಗಳೂ ವಿವಿಧ ಸೋಂಕುಗಳು ಮತ್ತು ಕಾಯಿಲೆಗಳಿಗೆ ಗುರಿಯಾಗುತ್ತಲೇ ಇರುತ್ತವೆ. ಇಂತಹ ಹೆಚ್ಚಿನ ಸೋಂಕುಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ವಿವಿಧ ಕಣ್ಣು ಸಮಸ್ಯೆಗಳು ಮತ್ತು ಅವುಗಳಿಗೆ ಕಾರಣಗಳ ಬಗ್ಗೆ ಮಾಹಿತಿಯಿಲ್ಲಿದೆ........

♦ ಕಣ್ಣಿನ ಅಲರ್ಜಿಗಳು
ಕೆಲವು ಔಷಧಿಗಳು ಮತ್ತು ವಸ್ತುಗಳಿಗೆ ನಮ್ಮ ಶರೀರದ ನೈಸರ್ಗಿಕ ಪ್ರತಿಕ್ರಿಯೆಯಾಗಿ ಕಣ್ಣುಗಳಲ್ಲಿ ಅಲರ್ಜಿಗಳುಂಟಾಗುತ್ತವೆ. ಇವು ಸಾಮಾನ್ಯ ಸಮಸ್ಯೆಗಳಾಗಿದ್ದು, ಹೆಚ್ಚಿನವರು ಇವುಗಳನ್ನು ಅನುಭವಿಸುತ್ತಿ ರುತ್ತಾರೆ.
ನಮ್ಮ ಶರೀರಕ್ಕೆ ಬಾಹ್ಯ ಅಲರ್ಜಿಕಾರಕಗಳೊಂದಿಗೆ ಸಂಪರ್ಕವುಂಟಾದಾಗ ಶರೀರದ ನಿರೋಧಕ ವ್ಯವಸ್ಥೆಯು ಅದಕ್ಕೆ ಪ್ರತಿಸ್ಪಂದಿಸುತ್ತದೆ. ಹೂವಿನ ಪರಾಗ, ಸಸ್ಯ, ಕಳೆಗಳು, ಹುಲ್ಲು ಇತ್ಯಾದಿಗಳು ಅಲರ್ಜಿಕಾರಕಗಳಾಗಿರಬಹುದು. ತಮ್ಮ ಅಸ್ತಿತ್ವಕ್ಕೆ ಅಪಾಯ ಎದುರಾದರೆ ಇವು ಹಿಸ್ಟಾಮೈನ್ ಎಂಬ ರಾಸಾಯನಿಕವನ್ನು ಬಿಡುಗಡೆಗೊಳಿಸುತ್ತವೆ. ಈ ಹಿಸ್ಟಾಮೈನ್ ಕಣ್ಣುಗಳ ಅಂಗಾಂಶಗಳನ್ನು ಸ್ಪರ್ಶಿಸಿದಾ ಅವುಗಳನ್ನು ಹಿಗ್ಗಿಸುತ್ತದೆ.
ಕಣ್ಣುಗಳು ಕೆಂಪಾಗುವುದು, ಅವುಗಳಿಂದ ಅತಿಯಾಗಿ ನೀರು ಸುರಿಯುವುದು, ಕಣ್ಣುಗಳಲ್ಲಿ ತುರಿಕೆ, ಸೀನುವಿಕೆ, ಸೈನಸ್ ಚಟುವಟಿಕೆ ಇವೆಲ್ಲ ಅಲರ್ಜಿಗಳ ಸಾಮಾನ್ಯ ಲಕ್ಷಣಗಳಾಗಿವೆ.

♦ ಕಂಪ್ಯೂಟರ್ ವಿಜನ್ ಸಿಂಡ್ರೋಮ್(ಸಿವಿಎಸ್)
ಹೆಸರೇ ಸೂಚಿಸುವಂತೆ ಇದು ನಾವು ಸುದೀರ್ಘ ಸಮಯ ಕಂಪ್ಯೂಟರ್ ಬಳಸಿದಾಗ ಕಣ್ಣುಗಳಿಗೆ ಉಂಟಾಗುವ ಆಯಾಸವಾಗಿದೆ. ನಾವು ಎಷ್ಟು ಗಂಟೆಗಳನ್ನು ಡಿಜಿಟಲ್ ತಂತ್ರಜ್ಞಾನದೊಂದಿಗೆ ಕಳೆಯುತ್ತೇವೆ ಎನ್ನುವುದು ಮಾತ್ರವಲ್ಲ, ಇತರ ಹಲವಾರು ಅಂಶಗಳೂ ಸಿವಿಎಸ್ ಉಂಟು ಮಾಡುವಲ್ಲಿ ತಮ್ಮ ಪಾತ್ರ ಹೊಂದಿವೆ. ಕೋಣೆಯಲ್ಲಿನ ಬೆಳಕಿನ ವ್ಯವಸ್ಥೆ, ಕಣ್ಣುಗಳಿಂದ ಸ್ಕ್ರೀನ್‌ನ ದೂರ, ಸ್ಕ್ರೀನ್ ಮೇಲಿನ ಗ್ಲೇರ್, ಕುಳಿತುಕೊಳ್ಳುವ ಭಂಗಿ ಮತ್ತು ನಮ್ಮ ತಲೆಯ ಕೋನ ಇವು ಸಿವಿಎಸ್‌ಗೆ ಕಾರಣಗಳಲ್ಲಿ ಸೇರಿವೆ. ಕಂಪ್ಯೂಟರ್ ಮುಂದೆ ಗಂಟೆಗಳಷ್ಟು ಸಮಯವನ್ನು ಕಳೆಯುವವರು ಸಿವಿಎಸ್‌ನ ಪ್ರಮುಖ ಲಕ್ಷಣಗಳಾದ ಕಣ್ಣುಗಳಲ್ಲಿ ಆಯಾಸ, ತಲೆನೋವು, ಮಸುಕಾದ ದೃಷ್ಟಿ,ಕುತ್ತಿಗೆ ಮತ್ತು ಭುಜದ ನೋವು, ಕಣ್ಣುಗಳಲ್ಲಿ ಶುಷ್ಕತೆ ಇವುಗಳ ಪೈಕಿ ಕನಿಷ್ಠ ಒಂದನ್ನಾದರೂ ಅನುಭವಿಸುತ್ತಿರುತ್ತಾರೆ.

♦ ಶುಷ್ಕ ಕಣ್ಣುಗಳು
ಸಹಜ ಕಣ್ಣೀರನ್ನು ಉತ್ಪಾದಿಸುವಲ್ಲಿ ಕಣ್ಣುಗಳು ಅಸಮರ್ಥಗೊಂಡಾಗ ಅವು ಒಣಗುತ್ತವೆ. ಹಲವಾರು ಅಂಶಗಳು ನಮ್ಮ ಕಣ್ಣುಗಳು ಶುಷ್ಕಗೊಳ್ಳುವಂತೆ ಮಾಡುತ್ತವೆ. ಇದರಲ್ಲಿ ವ್ಯಕ್ತಿಯ ವಯಸ್ಸು ಪ್ರಮುಖ ಪಾತ್ರವನ್ನು ಹೊಂದಿದೆ ಮತ್ತು ವಾತಾವರಣವೂ ಕಣ್ಣುಗಳ ಮೇಲೆ ಪರಿಣಾಮಗಳನ್ನುಂಟು ಮಾಡುತ್ತದೆ. ವಯಸ್ಸಾದಾಗ, ವಿಶೇಷವಾಗಿ ಮಹಿಳೆಯರು ಋತುಬಂಧದ ಹಂತವನ್ನು ದಾಟುತ್ತಿರುವಾಗ ಕಣ್ಣೀರಿನ ಗ್ರಂಥಿಗಳು ಕಣ್ಣೀರಿನ ಉತ್ಪತ್ತಿಯನ್ನು ನಿಧಾನಗೊಳಿಸುವುದು ಸಾಮಾನ್ಯ ಮತ್ತು ಇದು ಕಣ್ಣುಗಳ ಶುಷ್ಕತೆಗೆೆ ಸಾಮಾನ್ಯ ಕಾರಣವಾಗಿದೆ. ಕಣ್ಣುಗಳು ಕೆಂಪುಬಣ್ಣಕ್ಕೆ ತಿರುಗುವುದು, ಕಣ್ಣುಗಳಲ್ಲಿ ಕೆರಳುವಿಕೆ, ಕಣ್ಣುಗಳಲ್ಲಿ ಉರಿ, ಕಾಂಟ್ಯಾಕ್ಟ್ ಲೆನ್ಸ್‌ಗಳನ್ನು ಧರಿಸಲು ತೊಂದರೆ ಇವು ಶುಷ್ಕ ಕಣ್ಣುಗಳ ಸಾಮಾನ್ಯ ಲಕ್ಷಣಗಳಾಗಿವೆ.
♦ ಕೆಂಗಣ್ಣು ಬೇನೆ ಅಥವಾ ಕೋಳಿಕಣ್ಣು
ಕಣ್ಣುಗುಡ್ಡೆಗಳು ಮತ್ತು ಕಣ್ಣುಗಳಿಗೆ ಹೊಂದಿಕೊಂಡಿರುವ ಕಂಜಂಕ್ಟಿವಾ ಅಥವಾ ಪಾರದರ್ಶಕ ವಪೆಯ ಉರಿಯೂತವನ್ನು ಕೆಂಗಣ್ಣು ಬೇನೆ ಎಂದು ಕರೆಯಲಾಗುತ್ತದೆ. ಕೆಲವು ವಿಧಗಳ ಬ್ಯಾಕ್ಟೀರಿಯಾಗಳ ಸೋಂಕು ಈ ಉರಿಯೂತವನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ಕೆಂಗಣ್ಣು ದೊಡ್ಡ ಸಮಸ್ಯೆಯೇನಲ್ಲ, ಆದರೆ ಅದಕ್ಕೆ ಸೋಂಕು ಕಾರಣವಾಗಿದ್ದಾಗ ಈ ಬೇನೆ ತೀವ್ರ ಸಾಂಕ್ರಾಮಿಕವಾಗುತ್ತದೆ.
ಸಾಮಾನ್ಯವಾಗಿ ಬ್ಯಾಕ್ಟೀರಿಯ ಅಥವಾ ವೈರಲ್ ಸೋಂಕುಗಳು ಕೆಂಗಣ್ಣು ಬೇನೆಯನ್ನುಂಟು ಮಾಡುತ್ತವೆ. ಕೆಲವು ಅಲರ್ಜಿಗಳು ಮತ್ತು ವಾತಾವರಣದಲ್ಲಿಯ ರಾಸಾಯನಿಕಗಳೂ ಇದಕ್ಕೆ ಕಾರಣವಾಗುತ್ತವೆ. ಹೆರಿಗೆಯ ಸಂದರ್ಭದಲ್ಲಿ ಈ ಸಮಸ್ಯೆಯು ತಾಯಿಯಿಂದ ಶಿಶುವಿಗೂ ಹರಡಬಹುದು.
ಒಂದು ಅಥವಾ ಎರಡೂ ಕಣ್ಣುಗಳಲ್ಲಿ ಹೊರಗಿನ ವಸ್ತುಗಳು ಸೇರಿಕೊಂಡ ಅನುಭವ, ತುರಿಕೆ ಅಥವಾ ಉರಿ, ಹಳದಿ ಛಾಯೆಯ ದ್ರವದ ಸ್ರವಿಸುವಿಕೆ, ರಾತ್ರಿಯಿಡೀ ಪಿಚ್ಚು ಕಟ್ಟಿಕೊಂಡು ಬೆಳಿಗ್ಗೆ ಕಣ್ಣುಗಳನ್ನು ತೆರೆಯುವುದೂ ಕಷ್ಟವಾಗುವುದು, ಉಬ್ಬಿದ ಕಣ್ಣುಗುಡ್ಡೆಗಳು ಇವು ಕೆಂಗಣ್ಣು ಬೇನೆಯ ಸಾಮಾನ್ಯ ಲಕ್ಷಣಗಳಾಗಿವೆ.
ತೀವ್ರತರದ ಸೋಂಕುಗಳು ಕಣ್ಣಿನ ರೆಟಿನಾ ಮತ್ತು ಕಾರ್ನಿಯಾಕ್ಕೆ ಹಾನಿಯನ್ನುಂಟು ಮಾಡಬಹುದು. ಕಣ್ಣುಗಳಲ್ಲಿ ನೋವು, ದೃಷ್ಟಿಯಲ್ಲಿ ಬದಲಾವಣೆ. ಕಣ್ಣುಗಳು ತೀವ್ರ ಕೆಂಪುಬಣ್ಣಕ್ಕೆ ತಿರುಗುವಿಕೆ, ಕಣ್ಣುಗಳಿಂದ ನಿರಂತರವಾಗಿ ದ್ರವದ ಸ್ರವಿಸುವಿಕೆಯೊಂದಿಗೆ ಕಣ್ಣಿನ ಸಮಸ್ಯೆಗಳು ಪುನರಾವರ್ತನೆಯಾಗುತ್ತಿದ್ದರೆ ನೇತ್ರವೈದ್ಯರನ್ನು ಕಾಣುವುದು ಅಗತ್ಯವಾಗುತ್ತದೆ.

Writer - -ಎನ್.ಕೆ.

contributor

Editor - -ಎನ್.ಕೆ.

contributor

Similar News