ಕೀಟೋನ್ಯೂರಿಯಾ ಎಂದರೇನು ಗೊತ್ತೇ?
ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಕೀಟೋನ್‌ಗಳು ಇರುವ ವೈದ್ಯಕೀಯ ಸ್ಥಿತಿಯನ್ನು ಕೀಟೋನ್ಯೂರಿಯಾ ಎಂದು ಕರೆಯಲಾಗುತ್ತದೆ. ಶರೀರದಲ್ಲಿ ಶಕ್ತಿಯ ಪ್ರಮಾಣ ಕಡಿಮೆಯಾದಾಗ ಕೀಟೋನ್‌ಗಳು ಉಂಟಾಗುತ್ತವೆ. ಸಾಮಾನ್ಯವಾಗಿ ಕಾರ್ಬೊಹೈಡ್ರೇಟ್‌ಗಳು ಶರೀರಕ್ಕೆ ಶಕ್ತಿಯ ಮುಖ್ಯಮೂಲವಾಗಿವೆ ಮತ್ತು ಕೀಟೋನ್‌ಗಳು ಚಯಾಪಚಯ ಉಪಉತ್ಪನ್ನಗಳಾಗಿ ಉತ್ಪತ್ತಿಯಾಗುತ್ತವೆ. ಈ ಕೀಟೋನ್‌ಗಳು ಯಕೃತ್ತಿನಲ್ಲಿ ವಿಭಜನೆಗೊಳ್ಳುತ್ತವೆ ಮತ್ತು ಸಾಮಾನ್ಯವಾಗಿ ಮೂತ್ರದಲ್ಲಿ ಕೀಟೋನ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇರುವುದಿಲ್ಲ.
ಆದರೆ ತುಂಬ ಹೊತ್ತು ಹಸಿದುಕೊಂಡಿದ್ದಾಗ ಅಥವಾ ಟೈಪ್-1 ಮಧುಮೇಹ ಕಾಯಿಲೆಯಿದ್ದಾಗ ರಕ್ತದಲ್ಲಿ ಗ್ಲುಕೋಸ್ ಕೊರತೆಯಾಗುತ್ತದೆ ಮತ್ತು ಶರೀರವು ಶಕ್ತಿಗಾಗಿ ಕೊಬ್ಬುಗಳನ್ನು ವಿಭಜಿಸತೊಡಗುತ್ತದೆ. ಕೊಬ್ಬು ಶಕ್ತಿಯ ಮುಖ್ಯ ಮೂಲವಾಗಿದ್ದಾಗ ಅಧಿಕ ಪ್ರಮಾಣದ ಕೀಟೋನ್‌ಗಳು ಚಯಾಪಚಯ ಉಪಉತ್ಪನ್ನವಾಗಿ ಉತ್ಪತ್ತಿಯಾಗುತ್ತವೆ. ಈ ಕೀಟೋನ್‌ಗಳು ಶರೀರದಲ್ಲಿ ಸಂಗ್ರಹವಾಗುತ್ತವೆ ಮತ್ತು ಹೆಚ್ಚಿನ ಹಾನಿಗೆ ಕಾರಣವಾಗುತ್ತವೆ. ಕೀಟೋನ್ ಮಟ್ಟ ತುಂಬ ಹೆಚ್ಚಾಗಿದ್ದರೆ ಕೀಟೋನ್ಯೂರಿಯಾ ತುಂಬ ಗಂಭೀರ ಸ್ಥಿತಿಯಾಗಬಹುದು. ಶರೀರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇನ್ಸುಲಿನ್ ಉತ್ಪಾದನೆಯಾಗದ ಜನರಲ್ಲಿ ಕೀಟೋನ್‌ಗಳು ಉತ್ಪತ್ತಿಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಹೀಗಾಗಿ ಟೈಪ್-2 ಮಧುಮೇಹಿಗಳು ಕೀಟೋನ್ಯೂರಿಯಾಕ್ಕೆ ಗುರಿಯಾಗುವ ಅಪಾಯ ಹೆಚ್ಚಿರುತ್ತದೆ.
ಶರೀರವು ಕಡಿಮೆ ಪ್ರಮಾಣದಲ್ಲಿ ಇನ್ಸುಲಿನ್ ಅನ್ನು ಉತ್ಪಾದಿಸಿದಾಗ ಅದು ಶಕ್ತಿಗಾಗಿ ಪರ್ಯಾಯ ಕ್ರಮಗಳ ಸಿದ್ಧತೆಯನ್ನು ಆರಂಭಿಸುತ್ತದೆ. ಶಕ್ತಿ ಪಡೆಯಲು ಸಾಕಷ್ಟು ಇನ್ಸುಲಿನ್‌ನ ಕೊರತೆಯಿಂದಾಗಿ ಶರೀರವು ಅಂಗಾಂಶಗಳನ್ನು ಕೀಟೋನ್‌ಗಳಾಗಿ ವಿಭಜಿಸಲು ಆರಂಭಿಸುತ್ತದೆ ಮತ್ತು ಇದನ್ನು ಇಂಧನವನ್ನಾಗಿ ಬಳಸಿಕೊಳ್ಳುತ್ತದೆ.
ಕೀಟೋನ್ಯೂರಿಯಾಕ್ಕೆ ಕಾರಣಗಳು
ವ್ಯಕ್ತಿಯ ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಕೀಟೋನ್‌ಗಳಿರುವುದು ಕೀಟೋನ್ಯೂರಿಯಾ ಉಂಟಾಗಲು ಪ್ರಮುಖ ಕಾರಣವಾಗಿದೆ. ಹೀಗಾಗಿ ರಕ್ತದಲ್ಲಿ ಅಥವಾ ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಕೀಟೋನ್‌ಗಳ ಬಿಡುಗಡೆಯನ್ನುಂಟು ಮಾಡುವ ಪ್ರತಿಯೊಂದೂ ಕೀಟೋನ್ಯೂರಿಯಾಕ್ಕೆ ಕಾರಣವಾಗುತ್ತದೆ. ಇಂತಹ ಕೆಲವು ಅತ್ಯಂತ ಸಾಮಾನ್ಯ ಕಾರಣಗಳಿಲ್ಲಿವೆ........
ಚಯಾಪಚಯ ವ್ಯತ್ಯಯಗಳು
ರಕ್ತದಲ್ಲಿ ಗ್ಲುಕೋಸ್ ಮಟ್ಟವನ್ನು ಕಡಿಮೆಗೊಳಿಸುವ ಮಧುಮೇಹ ಅಥವಾ ಮೂತ್ರದಲ್ಲಿ ಸಕ್ಕರೆ ಹೋಗುವ ರೆನಲ್ ಗೈಕೊಸುರಿಯಾದಂತಹ ವೈದ್ಯಕೀಯ ಸ್ಥಿತಿಯು ರಕ್ತದಲ್ಲಿ ಕೀಟೋನ್‌ಗಳ ಸಂಗ್ರಹಕ್ಕೆ ಮತ್ತು ನಂತರ ಕೀಟೋನ್ಯೂರಿಯಾಕ್ಕೆ ಕಾರಣವಾಗುತ್ತದೆ. ಮಧುಮೇಹಿಗಳಲ್ಲಿ ಗ್ಲುಕೋಸ್‌ನಿಂದ ಶಕ್ತಿ ಪಡೆಯಲು ಸಾಕಷ್ಟು ಇನ್ಸುಲಿನ್ ಇರುವುದಿಲ್ಲ. ಹೀಗಾಗಿ ಶರೀರವು ಶಕ್ತಿಯ ಇತರ ಮೂಲಗಳನ್ನು ಬಳಸಿಕೊಳ್ಳುತ್ತದೆ,ಪರಿಣಾಮವಾಗಿ ಅಧಿಕ ಕೀಟೋನ್‌ಗಳು ಉತ್ಪತ್ತಿಯಾಗುತ್ತವೆ.
ಕೀಟೋಜೆನಿಕ್ ಡಯಟ್
ಕಡಿಮೆ ಪ್ರಮಾಣದಲ್ಲಿ ಕಾರ್ಬೊಹೈಡ್ರೇಟ್‌ಗಳನ್ನೊಳಗೊಂಡಿರುವ ಆಹಾರ ಸೇವನೆ ಅಥವಾ ತುಂಬ ಹೊತ್ತು ಹಸಿದುಕೊಂಡಿರುವುದು ಕೀಟೋನ್ಯೂರಿಯಾಕ್ಕೆ ಕಾರಣವಾಗುತ್ತವೆ. ಇವುಗಳಿಂದಾಗಿ ನಮ್ಮ ಶರೀರಕ್ಕೆ ಸಾಕಷ್ಟು ಗ್ಲುಕೋಸ್ ದೊರೆಯುವುದಿಲ್ಲ. ಗ್ಲುಕೋಸ್ ಕೊರತೆಯಿಂದಾಗಿ ಶರೀರವು ಶಕ್ತಿಗಾಗಿ ಕೊಬ್ಬುಗಳನ್ನು ವಿಭಜಿಸುತ್ತದೆ ಮತ್ತು ಕೀಟೋನ್ಯೂರಿಯಾಕ್ಕೆ ಕಾರಣವಾಗುತ್ತದೆ.
ಕೀಟೋನ್ಯೂರಿಯಾದ ಲಕ್ಷಣಗಳು
ಕೀಟೋನ್ಯೂರಿಯಾದ ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತವೆಯಾದರೂ ಮೂತ್ರದಲ್ಲಿ ಅಧಿಕ ಪ್ರಮಾಣದಲ್ಲಿ ಕೀಟೋನ್‌ಗಳು ಹೊಂದಿರುವ ವ್ಯಕ್ತಿಯಲ್ಲಿ ಹೆಚ್ಚಿನ ಎಲ್ಲ ಲಕ್ಷಣಗಳು ಕಂಡುಬರುತ್ತವೆ. ಪದೇ ಪದೇ ಮೂತ್ರವಿಸರ್ಜನೆ,ವಾಕರಿಕೆ ಮತ್ತು ವಾಂತಿ,ನಿರ್ಜಲೀಕರಣ ಮತ್ತು ಅತಿಯಾದ ಬಾಯಾರಿಕೆ,ಭಾರವಾದ ಉಸಿರಾಟ,ಗೊಂದಲ ಮತ್ತು ಏಕಾಗ್ರತೆಯಿಲ್ಲದಿರುವುದು, ಉಸಿರಿನಲ್ಲಿ ಹಣ್ಣಿನ ವಾಸನೆ ಇವು ಕೀಟೋನ್ಯೂರಿಯಾದ ಅತ್ಯಂತ ಸಾಮಾನ್ಯ ಲಕ್ಷಣಗಳಾಗಿವೆ.
ಕೀಟೋನ್ಯೂರಿಯಾಕ್ಕೆ ಚಿಕಿತ್ಸೆ
ಕೀಟೋನ್ಯೂರಿಯಾಕ್ಕೆ ಚಿಕಿತ್ಸೆಯು ಶರೀರದಲ್ಲಿ ಕೀಟೋನ್‌ಗಳ ಅಧಿಕ ಉತ್ಪಾದನೆಗೆ ಮೂಲಕಾರಣವನ್ನು ಅವಲಂಬಿಸಿರುತ್ತದೆ. ಡಯಟಿಂಗ್ ಅಥವಾ ಹಸಿವೆಯಿಂದ ಕೀಟೋನ್ಯೂರಿಯಾ ಉಂಟಾಗಿದ್ದರೆ ಕಾರ್ಬೊಹೈಡ್ರೇಟ್‌ಗಳು ಹೆಚ್ಚಿನ ಪ್ರಮಾಣದಲ್ಲಿರುವ ಸೂಕ್ತ ಸಮತೋಲಿತ ಆಹಾರ ಸೇವನೆಯ ಮೂಲಕ ಗುಣಪಡಿಸಬಹುದು. ಕೀಟೋನ್ಯೂರಿಯಾದಿಂದ ಬಳಲುತ್ತಿರುವ ಮಧುಮೇಹಿಗಳು ತಮ್ಮ ರಕ್ತದಲ್ಲಿಯ ಕೀಟೋನ್‌ಗಳ ಮಟ್ಟವನು ್ನತಗ್ಗಿಸಲು ತಮ್ಮ ಕಾಯಿಲೆಯನ್ನು ನಿಯಂತ್ರಣದಲ್ಲಿಸುವ ಉತ್ತಮ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ತಡೆಯುವುದು ಹೇಗೆ?
ಸೂಕ್ತ ಎಚ್ಚರಿಕೆಯನ್ನು ವಹಿಸುವ ಮೂಲಕ ಕೀಟೋನ್ಯೂರಿಯಾವನ್ನು ತಡೆಯಬಹುದು. ಮಧುಮೇಹಿಗಳು ಕೀಟೋನ್ಯೂರಿಯಾದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುವುದರಿಂದ ಅವರು ರಕ್ತದಲ್ಲಿಯ ಗ್ಲುಕೋಸ್ ಮಟ್ಟ ಮತ್ತು ಮೂತ್ರದಲ್ಲಿ ಕೀಟೋನ್‌ಗಳ ಮೇಲೆ ಹೆಚ್ಚಿನ ನಿಗಾ ವಹಿಸಬೇಕಾಗುತ್ತದೆ. ಕೀಟೋನ್ಯೂರಿಯಾ ಪ್ರಾಥಮಿಕವಾಗಿ ಟೈಪ್-1 ಮಧುಮೇಹಿಗಳಲ್ಲಿ ಹೆಚ್ಚು ಸಾಮಾನ್ಯವಾಗಿದೆಯಾದರೂ ಅದು ಟೈಪ್-2 ಮಧುಮೇಹಿಗಳಲ್ಲೂ ಉಂಟಾಗಬಹುದು. ಗ್ಲುಕೋಸ್ ಮತ್ತು ಕೀಟೋನ್‌ಗಳ ಮಟ್ಟವನ್ನು ಪರೀಕ್ಷಿಸುವ ಕಿಟ್‌ಗಳು ಔಷಧಿ ಅಂಗಡಿಗಳಲ್ಲಿ ದೊರೆಯುತ್ತವೆ.