ಹೊಟ್ಟೆಯ ಕೊಬ್ಬು ಮತ್ತು ಹೃದಯದ ಆರೋಗ್ಯದ ಬಗ್ಗೆ ತಿಳಿದಿರಲೇಬೇಕಾದ ಮಾಹಿತಿಗಳಿವು…

Update: 2018-10-31 10:59 GMT

ವಿಶ್ವಾದ್ಯಂತ ಸಂಭವಿಸುವ ಸಾವುಗಳಿಗೆ ಹೃದಯ ಸಂಬಂಧಿ ಕಾಯಿಲೆಗಳು ನ.1 ಕಾರಣವಾಗಿವೆ. ಭಾರತದಲ್ಲಿ 1996-2016 ನಡುವೆ ಹೃದ್ರೋಗಗಳಿಂದ ಸಾವಿನ ಪ್ರಮಾಣದಲ್ಲಿ ಶೇ.34ರಷ್ಟು ಏರಿಕೆಯಾಗಿದೆ. ಹೀಗಾಗಿ ಹೃದಯದ ಆರೋಗ್ಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರುವುದು ಈಗ ಹಿಂದೆಂದಿಗಿಂತಲೂ ಹೆಚ್ಚು ಅಗತ್ಯವಾಗಿದೆ. ಹೊಟ್ಟೆಯ ಕೊಬ್ಬು ಭಾರತೀಯರಲ್ಲಿ ಹೃದ್ರೋಗ ಅಪಾಯಗಳಿಗೆ ಪ್ರಮುಖ ಕಾರಣಗಳಲ್ಲೊಂದಾಗಿದೆ. ಪ್ರತಿ 10 ಭಾರತೀಯರಲ್ಲಿ ಏಳು ಜನರು ಹೊಟ್ಟೆಯ ಕೊಬ್ಬಿನಿಂದಾಗಿ ಹೃದ್ರೋಗಗಳ ಹೆಚ್ಚಿನ ಅಪಾಯವನ್ನು ಎದುರಿಸಿತ್ತಿದ್ದಾರೆ. ಏನಿದು ಹೊಟ್ಟೆಯ ಕೊಬ್ಬು?

ವ್ಯಕ್ತಿಯೋರ್ವ ತೆಳುವಾದ ಶರೀರವನ್ನು ಹೊಂದಿದ್ದಾನೆ ಎಂದು ಹೊರನೋಟಕ್ಕೆ ಕಾಣಿಸಬಹುದು. ಆದರೂ ಆತನ ಸೊಂಟದ ಸುತ್ತ ಕೊಬ್ಬು ಸಂಗ್ರಹವಾಗಿರಬಹುದು ಮತ್ತು ಬಿಗಿಯಾದ ಬಟ್ಟೆ ಧರಿಸಿದಾಗ ಇದು ಎದ್ದುಕಾಣುತ್ತದೆ. ಇದನ್ನು ಹೊಟ್ಟೆಯ ಅಥವಾ ಉದರದ ಕೊಬ್ಬು ಎನ್ನಲಾಗುತ್ತದೆ. ದೊಡ್ಡಹೊಟ್ಟೆಯು ಚಯಾಪಚಯ ಕಾಯಿಲೆಗಳ,ವಿಶೇಷವಾಗಿ ಹೃದಯ ಸಂಬಂಧಿ ರೋಗಗಳ ಸಂಭಾವ್ಯ ಅಪಾಯವನ್ನು ಸೂಚಿಸುತ್ತದೆ.

ಹೊಟ್ಟೆಯ ಕೊಬ್ಬನ್ನು ಅಂದಾಜಿಸುವುದು ಹೇಗೆ?

 ಹೊಟ್ಟೆಯ ಕೊಬ್ಬು ಪೃಷ್ಠಗಳ ಕೊಬ್ಬಿಗಿಂತ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಸೊಂಟದ ಸುತ್ತಳತೆಯನ್ನು ಅಳೆಯುವ ಮೂಲಕ ಹೊಟ್ಟೆಯ ಕೊಬ್ಬಿನ ಪ್ರಮಾಣವನ್ನು ಅಂದಾಜಿಸಬಹುದು. ಭಾರತೀಯರಲ್ಲಿ 90 ಸೆಂ.ಮೀ. ಮತ್ತು ಅದಕ್ಕಿಂತ ಹೆಚ್ಚಿನ ಸೊಂಟದ ಸುತ್ತಳತೆ ಹೊಂದಿರುವ ಪುರುಷರು ಮ್ತು 80 ಸೆಂ.ಮೀ.ಮತ್ತು ಅದಕ್ಕೂ ಹೆಚ್ಚಿನ ಸುತ್ತಳತೆ ಹೊಂದಿರುವ ಮಹಿಳೆಯರು ಹೃದ್ರೋಗಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಸೊಂಟದ ಸುತ್ತಳತೆಯನನ್ನು ಪ್ರಷ್ಠದ ಸುತ್ತಳತೆಯಿಂದ ಭಾಗಿಸಿದಾದ ದೊರೆಯುವ ಹೊಟ್ಟೆ ಮತ್ತು ಪೃಷ್ಠ ಅನುಪಾತ(ಡಬ್ಲುಎಚ್‌ಆರ್)ದಿಂದ ಕೊಬ್ಬಿನ ಪ್ರಮಾಣವನ್ನು ಇನ್ನಷ್ಟು ಖಚಿತವಾಗಿ ಅಂದಾಜಿಸಬಹುದು. ಇದು ಮಹಿಳೆಯರಲ್ಲಿ 0.85ಕ್ಕಿಂತ ಮತ್ತು ಪುರುಷರಲ್ಲಿ 1.0ಕ್ಕಿಂತ ಹೆಚ್ಚಿದ್ದರೆ ಅವರು ಹೊಟ್ಟೆಯ ಕೊಬ್ಬಿನಿಂದಾಗಿ ಹೃದ್ರೋಗಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎನ್ನುವುದನ್ನು ಸೂಚಿಸುತ್ತದೆ.

ಹೊಟ್ಟೆಯ ಕೊಬ್ಬಿಗೂ ಹೃದ್ರೋಗಕ್ಕೆ ಏನು ಸಂಬಂಧ?

ಹೃದಯವು ಇಡೀ ಶರೀರಕ್ಕೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಪೂರೈಸುವ ಪ್ರಮುಖ ಅಂಗವಾಗಿದೆ. ಹೀಗಾಗಿ ಅದರ ಆರೋಗ್ಯವನ್ನು ಕಾಯ್ದುಕೊಳ್ಳುವುದು ಮುಖ್ಯವಾಗುತ್ತದೆ. ವಿವಿಧ ಅಂಶಗಳು ಹೃದಯದ ಕಾರ್ಯನಿರ್ವಹಣೆಗೆ ವ್ಯತ್ಯಯವನ್ನುಂಟು ಮಾಡುತ್ತವೆ. ಅತಿಯಾದ ಹೊಟ್ಟೆಯ ಕೊಬ್ಬು ಅವುಗಳಲ್ಲೊಂದಾಗಿದೆ.

ಹೊಟ್ಟೆಯ ಕೊಬ್ಬು ಹೆಚ್ಚಾದಷ್ಟೂ ಹೃದ್ರೋಗಗಳ ಅಪಾಯ ಹೆಚ್ಚುತ್ತದೆ. ಬೊಜ್ಜು ಮತ್ತು ಅತಿಯಾದ ಹೊಟ್ಟೆಯ ಕೊಬ್ಬು ಟ್ರೈಗ್ಲಿಸರೈಡ್(ಟಿಜಿ) ಮತ್ತು ಕೆಟ್ಟ ಕೊಲೆಸ್ಟ್ರಾಲ್(ಎಲ್‌ಡಿಎಲ್)ಗಳ ಹೆಚ್ಚಿನ ಮಟ್ಟಗಳು,ಅಧಿಕ ರಕ್ತದೊತ್ತಡ ಮತ್ತು ಗ್ಲುಕೋಸ್ ಸಹಿಷ್ಣುತೆಯ ಕೊರತೆ ಇವುಗಳೊಂದಿಗೆ ಗುರುತಿಸಿಕೊಂಡಿರುವುದು ಇದಕ್ಕೆ ಕಾರಣವಾಗಿದೆ. ಎಲ್‌ಡಿಎಲ್ ಮೂಲಕ ರಕ್ತನಾಳಗಳ ಭಿತ್ತಿಗಳಲ್ಲಿ ಸಂಗ್ರಹಗೊಳ್ಳುವ ಕೊಲೆಸ್ಟ್ರಾಲ್ ಮತ್ತು ಟಿಜಿಗಳು ಅವುಗಳನ್ನು ಕಿರಿದಾಗಿಸುತ್ತವೆ ಮತ್ತು ಹೃದಯಕ್ಕೆ ರಕ್ತದ ಹರಿವಿಗೆ ತಡೆಯನ್ನುಂಟು ಮಾಡುತ್ತವೆ. ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ.

ಹೆಚ್ಚಿನ ಭಾರತೀಯರೇಕೆ ಹೊಟ್ಟೆಯ ಕೊಬ್ಬು ಹೊಂದಿರುತ್ತಾರೆ?

ಭಾರತೀಯರ ವಂಶವಾಹಿ ರಚನೆಯು ಹೊಟ್ಟೆಯ ಕೊಬ್ಬಿಗೆ ಪ್ರಮುಖ ಕಾರಣವಾಗಿದೆ. ಹೊಟ್ಟೆಯ ಕೊಬ್ಬನ್ನು ತಡೆಯಲು ಸೂಕ್ತ ಆಹಾರ ಮತ್ತು ನಿಯಮಿತ ವ್ಯಾಯಾಮ ಅಗತ್ಯ. ಆದರೆ ಭಾರತೀಯ ಆಹಾರಗಳು ಹೊಟ್ಟೆಯ ಕೊಬ್ಬನ್ನು ನಿಯಂತ್ರಿಸಲು ಪೂರಕವಾಗಿಲ್ಲ. ಭಾರತೀಯ ಆಹಾರಗಳಲ್ಲಿ ಸಕ್ಕರೆ ಅಧಿಕವಾಗಿದ್ದು, ಹಬ್ಬಗಳ ಸಂದರ್ಭ ಹೆಚ್ಚಿನ ಸಿಹಿಖಾದ್ಯಗಳು ನಮ್ಮ ಹೊಟ್ಟೆಯನ್ನು ಸೇರುತ್ತವೆ. ಈ ಸಿಹಿಖಾದ್ಯಗಳು ಬಾಸ್ಮತಿ ಅಕ್ಕಿ,ಗೋದಿಯ ಹುಡಿ ಮತ್ತು ಕರಿದ ಪದಾರ್ಥಗಳಂತಹ ಸಂಸ್ಕರಿತ ಕಾರ್ಬೊಹೈಡ್ರೇಟ್‌ಗಳನ್ನು ಒಳಗೊಂಡಿರುತ್ತವೆ. ಕರಿದ ಪದಾರ್ಥದ ಬಗ್ಗೆ ಮಾತ್ರ ಹೇಳುವುದಾದರೆ ಅದು ಸ್ವಯಂ ಖಳನಾಯಕನಲ್ಲ. ಆದರೆ ಅದನ್ನು ಕರಿಯಲು ಸ್ಯಾಚುರೇಟೆಡ್ ಕೊಬ್ಬನ್ನು ಬಳಸಿದಾಗ ಸಮಸ್ಯೆಯು ಆರಂಭವಾಗುತ್ತದೆ. ಬೆಣ್ಣೆಯಂತಹ ಪ್ರಾಣಿಜನ್ಯ ಕೊಬ್ಬುಗಳು,ಕ್ರೀಂ ಮತ್ತು ಕೊಬ್ಬು ಅಧಿಕವಾಗಿರುವ ಡೇರಿ ಉತ್ಪನ್ನಗಳ ಬಳಕೆಯನ್ನು ಕಡಿಮೆ ಮಾಡುವುದು ಒಳ್ಳೆಯದು. ಹೈಡ್ರೋಜನೇಷನ್ ಮೂಲಕ ಘನೀಕರಿಸಲಾದ ಅಗ್ಗದ ಸಸ್ಯಜನ್ಯ ತೈಲಗಳ ಬಳಕೆಯನ್ನು ಕಡಿತಗೊಳಿಸುವುದು ಇನ್ನಷ್ಟು ಒಳ್ಳೆಯದು. ಇವು ಎಲ್‌ಡಿಎಲ್ ಮಟ್ಟಗಳನ್ನು ಹೆಚ್ಚಿಸುವುದರಿಂದ ಹೆಚ್ಚು ಅಪಾಯಕಾರಿಯಾಗಿವೆ. ಕೃತಕ ಬೆಣ್ಣೆಗಳು,ಪ್ಯಾಕ್ ಮಾಡಲಾದ ಬೇಕರಿ ಆಹಾರಗಳು,ಕನ್ಫೆಕ್ಷನರಿ,ಫ್ರೆಂಚ್ ಫ್ರೈ ಮತ್ತು ಇತರ ಫಾಸ್ಟ್ ಫುಡ್‌ಗಳಲ್ಲಿ ಇವು ಇರುತ್ತವೆ.

 ಮೊನೊ ಅನ್‌ಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್(ಪಿಯುಎಫ್‌ಎ)ಗಳು ಮತ್ತು ಪೊಲಿ ಅನ್‌ಸ್ಯಾಚುರೇಟಡ್ ಫ್ಯಾಟಿ ಆ್ಯಸಿಡ್(ಎಂಯುಎಫ್‌ಎ)ಗಳನ್ನೊಳಗೊಂಡ ಆರೋಗ್ಯಕರ ತೈಲಗಳ ಬಳಕೆಯನ್ನು ಹೆಚ್ಚಿಸಬೇಕು. ಇವು ಎಲ್‌ಡಿಎಲ್ ಮಟ್ಟಗಳನ್ನು ನಿಯಂತ್ರಣದಲ್ಲಿರಿಸಲು ನೆರವಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News