ಏನಿದು ಮಿದುಳು ಟ್ಯೂಮರ್? ಅದರ ಲಕ್ಷಣಗಳೇನು?

Update: 2018-11-04 11:13 GMT

ಮಿದುಳು ಟ್ಯೂಮರ್ ಒಂದು ಮಾರಣಾಂತಿಕ ಕಾಯಿಲೆಯಾಗಿದ್ದು,ಪ್ರತಿ ವರ್ಷ 50,000ಕ್ಕೂ ಅಧಿಕ ಜನರನ್ನು ಬಾಧಿಸುತ್ತದೆ ಮತ್ತು ಈ ಪೈಕಿ ಶೇ.20ರಷ್ಟು ಮಕ್ಕಳಾಗಿರುತ್ತಾರೆ.

ಮಿದುಳು ತಲೆಬುರುಡೆಯೊಳಗಿನ ಮೃದುವಾದ ಅಂಗವಾಗಿದ್ದು,ಅಲ್ಲಿನ ನರಗಳ ಜಾಲವು ಮಿದುಳಿನಿಂದ ಶರೀರಕ್ಕೆ ಮತ್ತು ಶರೀರದಿಂದ ಮಿದುಳಿಗೆ ಸಂದೇಶಗಳನ್ನು ಸಾಗಿಸುತ್ತದೆ. ಚಲನೆ,ಮಾತು,ಉಸಿರಾಟ,ಹೃದಯದ ಪಂಪಿಂಗ್,ಎಲ್ಲ ಸಂವೇದನೆಗಳು,ಜ್ಞಾಪಕ ಶಕ್ತಿ ಮತ್ತು ಭಾವನೆಗಳಂತಹ ಶರೀರದ ಎಲ್ಲ ಕಾರ್ಯಗಳನ್ನು ಮಿದುಳು ನಿಯಂತ್ರಿಸುತ್ತದೆ.

ಜೀವಕೋಶಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಿದ್ದಾಗ ಟ್ಯೂಮರ್ ಅಥವಾ ಗಡ್ಡೆ ಬೆಳೆಯಲಾರಂಭಿಸುತ್ತದೆ. ಸಾಮಾನ್ಯವಾಗಿ ಹಳೆಯ ಮತ್ತು ಹಾನಿಗೀಡಾಗಿರುವ ಜೀವಕೋಶಗಳ ಬದಲು ಹೊಸ ಜೀವಕೋಶಗಳು ರೂಪುಗೊಳ್ಳುತ್ತವೆ. ಹೀಗೆ ಹೊಸ ಜೀವಕೋಶಗಳು ರೂಪುಗೊಂಡಾಗ ಹಳೆಯ ಜೀವಕೋಶಗಳು ಸತ್ತಿರದಿದ್ದರೆ ಅವು ಟ್ಯೂಮರ್ ಎಂದು ಕರೆಯಲಾಗುವ ಅಂಗಾಂಶಗಳ ರಾಶಿಯನ್ನು ಸೃಷ್ಟಿಸುತ್ತವೆ.

ಮಿದುಳು ಟ್ಯೂಮರ್‌ನ ಲಕ್ಷಣಗಳು

ರಾತ್ರಿ ಮತ್ತು ಹಗಲಿನಲ್ಲಿ ತೀವ್ರಗೊಳ್ಳುವ ತಲೆನೋವು ದಿನದ ಉಳಿದ ಸಮಯದಲ್ಲಿ ಕಡಿಮೆಯಾಗುತ್ತ ಹೋಗುತ್ತದೆ. ಬೆಳಿಗ್ಗೆ ವಾಂತಿಯೊಂದಿಗೆ ತಲೆನೋವು ಕಾಣಿಸಿಕೊಳ್ಳುವುದು ಮಿದುಳು ಟ್ಯೂಮರ್‌ನ ಇನ್ನೊಂದು ಲಕ್ಷಣವಾಗಿದೆ. ಮಸುಕಾದ ದೃಷ್ಟಿ ಅಥವಾ ಸಂಪೂರ್ಣ ದೃಷ್ಟಿ ನಷ್ಟದ ಅನುಭವವಾಗಬಹುದು. ಪಾಪಿಲೆಡೆಮಾ ಅಥವಾ ಅಕ್ಷಿಬಿಂಬದ ಊತ ಮತ್ತು ಡಿಪ್ಲೊಪಿಯಾ ಅಥವಾ ದ್ವಿಗುಣ ದೃಷ್ಟಿ(ಎರಡು ನೋಟ)ಯೂ ಉಂಟಾಗಬಹುದು. ಅಲ್ಪಾವಧಿ ಅಥವಾ ದೀರ್ಘಾವಧಿಯ ಜ್ಞಾಪಕ ಶಕ್ತಿ ನಷ್ಟ,ಕೈಕಾಲುಗಳಲ್ಲಿ ನಿಶ್ಶಕ್ತಿ ಇವು ಕೂಡ ಮಿದುಳು ಟ್ಯೂಮರ್‌ನ ಲಕ್ಷಣಗಳಾಗಿವೆ.

ರೋಗನಿರ್ಧಾರ

ಯಾವುದೇ ಲಕ್ಷಣವು ಮಿದುಳು ಟ್ಯೂಮರ್‌ನ್ನು ಸೂಚಿಸುತ್ತದೆ ಎಂದು ವೈದ್ಯರು ಶಂಕಿಸಿದರೆ ಅವರು ರೋಗಿಯ ಆರೋಗ್ಯ ಇತಿಹಾಸದ ವಿವರವಾದ ಮಾಹಿತಿಯನ್ನು ಪಡೆದುಕೊಂಡು ವೈದ್ಯಕೀಯ ತಪಾಸಣೆಗಳನ್ನು ನಡೆಸುತ್ತಾರೆ. ವ್ಯಕ್ತಿಯಲ್ಲಿನ ಲಕ್ಷಣಗಳು ಮಿದುಳು ಟ್ಯೂಮರ್‌ನ್ನು ಬೆಟ್ಟು ಮಾಡಿದರೆ ಮಿದುಳಿನ ಸಿಟಿ ಅಥವಾ ಎಂಆರ್‌ಐ ಸ್ಕಾನ್,ಆ್ಯಂಜಿಯೊಗ್ರಾಂ,ಸಿಎಸ್‌ಎಫ್ ಟೆಸ್ಟ್, ಹಾರ್ಮೋನಲ್ ಬ್ಲಡ್ ಟೆಸ್ಟ್ ಅಥವಾ ಇಸಿಜಿಯಂತಹ ಇನ್ನಷ್ಟು ಪರೀಕ್ಷೆಗಳನ್ನು ಕೈಗೊಳ್ಳುತ್ತಾರೆ.

ಚಿಕಿತ್ಸೆ

  ಶಸ್ತ್ರಚಿಕಿತ್ಸೆಯ ಮೂಲಕ ಮಿದುಳಿನ ಗಡ್ಡೆಯನ್ನು ತೆಗೆಯುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದರೆ ರೋಗಿಯು ಅದನ್ನು ಆಯ್ಕೆ ಮಾಡಿಕೊಳ್ಳಬಹುದು. ಮಿದುಳು ಟ್ಯೂಮರ್ ಸೌಮ್ಯ ಸ್ವರೂಪದ್ದಾಗಿದ್ದರೆ ಮತ್ತು ನರಗಳಿಗೆ ಹೆಚ್ಚಿನ ಹಾನಿಯುಂಟಾಗುವುದಿಲ್ಲ ಎನ್ನುವುದು ಖಚಿತಪಟ್ಟರೆ ಗಡ್ಡೆಯನ್ನು ತೆಗೆಯಲು ಶಸ್ತ್ರಚಿಕಿತ್ಸೆಯು ಸಾಕು. ಆದರೆ ಟ್ಯೂಮರ್ ತೀವ್ರ ರೂಪವನ್ನು ಪಡೆದುಕೊಂಡಿದ್ದರೆ ಕ್ಯಾನ್ಸರ್‌ಕಾರಕ ಕೋಶಗಳು ಸಮೀಪದಲ್ಲಿರುವ ಆರೋಗ್ಯಕರ ಮಿದುಳು ಅಂಗಾಂಶಗಳ ಮೇಲೆ ದಾಳಿ ಮಾಡುವ ಸಾಧ್ಯತೆಗಳಿರುವುದರಿಂದ ಶಸ್ತ್ರಚಿಕಿತ್ಸೆಯ ನಂತರ ಹೆಚ್ಚುವರಿ ಚಿಕಿತ್ಸೆಯು ಅಗತ್ಯವಾಗುತ್ತದೆ.

ರೇಡಿಯೊಥೆರಪಿ

ರೇಡಿಯೊಥೆರಪಿ ಅಥವಾ ವಿಕಿರಣ ಚಿಕಿತ್ಸೆಯು ಕ್ಯಾನ್ಸರ್ ಕೋಶಗಳನ್ನು ನಾಶ ಮಾಡಲು ಮತ್ತು ಗಡ್ಡೆಯನ್ನು ಕುಗ್ಗಿಸಲು ಅಧಿಕ ಶಕ್ತಿಯುತ ಕಿರಣಗಳನ್ನು ಬಳಸಿಕೊಳ್ಳುತ್ತದೆ. ಶಸ್ತ್ರಚಿಕಿತ್ಸೆಯ ಬಳಿಕ ತೆಗೆಯಲು ಸಾಧ್ಯವಾಗದೆ ಉಳಿದುಕೊಂಡಿರುವ ಟೂಮರ್ ಕೋಶಗಳನ್ನು ಕೊಲ್ಲಲು ಆಥವಾ ಶಸ್ತ್ರಚಿಕಿತ್ಸೆಗೆ ಪರ್ಯಾಯವಾಗಿ ರೇಡಿಯೊಥೆರಪಿಯನ್ನು ಕೈಗೊಳ್ಳಲಾಗುತ್ತದೆ. ರೇಡಿಯೊ ಥೆರಪಿಯು ಶರೀರದ ಸಾಮಾನ್ಯ ಜೀವಕೋಶಗಳಿಗೂ ಹಾನಿಯನ್ನುಂಟು ಮಾಡಬಲ್ಲುದು.

ಕಿಮೊಥೆರಪಿ

ಈ ವಿಧಾನದಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶಗೊಳಿಸಲು ಅಥವಾ ಕೊಲ್ಲಲು ಔಷಧಿಗಳನ್ನು ಬಳಸಲಾಗುತ್ತದೆ. ಮಿದುಳು ಟ್ಯೂಮರ್‌ನ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳನ್ನು ಸಾಮಾನ್ಯವಾಗಿ ಅಭಿಧಮನಿಗೆ ಚುಚ್ಚುಮದ್ದಿನ ಮೂಲಕ ನೀಡಲಾಗುತ್ತದೆ. ವಯಸ್ಕರಿಗಿಂತ ಹೆಚ್ಚಾಗಿ ಮಕ್ಕಳಲ್ಲಿ ಮಿದುಳು ಟ್ಯೂಮರ್‌ಗೆ ಚಿಕಿತ್ಸೆ ನೀಡಲು ಕಿಮೊಥೆರಪಿಯನ್ನು ನಡೆಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News