ಶರೀರದ ಈ ಏಳು ಅಂಗಗಳಿಲ್ಲದಿದ್ದರೂ ನಾವು ಬದುಕಬಹುದು ಎನ್ನುವುದು ಗೊತ್ತೇ?
ಮಾನವ ಶರೀರವು ಅಸಾಧಾರಣವಾಗಿ ಮರುಚೇತರಿಸಿಕೊಳ್ಳುವ ಗುಣವನ್ನು ಹೊಂದಿದೆ. ನಾವು ಒಮ್ಮೆ ರಕ್ತದಾನ ಮಾಡಿದರೆ ಸುಮಾರು 3.5 ಲಕ್ಷ ಕೋಟಿ ಕೆಂಪು ರಕ್ತಕಣಗಳನ್ನು ಕಳೆದುಕೊಳ್ಳುತ್ತೇವೆ,ಆದರೆ ಶರೀರವು ಅದನ್ನು ಬಹುಬೇಗನೇ ತುಂಬಿಕೊಳ್ಳುತ್ತದೆ. ನಾವು ಪ್ರಮುಖ ಅಂಗಗಳ ದೊಡ್ಡ ಭಾಗವನ್ನು ಕಳೆದುಕೊಂಡೂ ಬದುಕಲು ಸಾಧ್ಯವಿದೆ. ಉದಾಹರಣೆಗೆ ಕೇವಲ ಅರ್ಧ ಮಿದುಳನ್ನೂ ಹೊಂದಿಯೂ ಜನರು ಸಹಜ ಜೀವನವನ್ನು ನಡೆಸಬಹುದಾಗಿದೆ. ನಮ್ಮ ಬದುಕಿನ ಮೇಲೆ ಯಾವುದೇ ಪರಿಣಾಮವನ್ನುಂಟು ಮಾಡದಂತೆ ಇತರ ಕೆಲವು ಅಂಗಗಳನ್ನೂ ಸಂಪೂರ್ಣವಾಗಿ ತೆಗೆಯಬಹುದಾಗಿದೆ. ಅಂತಹ ಕೆಲವು ‘ನಿರ್ಣಾಯಕವಲ್ಲದ ಅಂಗಗಳ’ ಕುರಿತು ಮಾಹಿತಿಯಿಲ್ಲಿದೆ.
ಗುಲ್ಮ
ಗುಲ್ಮ ಅಥವಾ ಪ್ಲೀಹವು ಹೊಟ್ಟೆಯ ಎಡಭಾಗದಲ್ಲಿ,ಬೆನ್ನಿನ ಬದಿಯಲ್ಲಿ ಪಕ್ಕೆಲವುಗಳ ಕೆಳಗಿರುವ ಅಂಗವಾಗಿದೆ. ಪೆಟ್ಟು ಅಥವಾ ಗಾಯವುಂಟಾದ ಸಂದರ್ಭಗಳಲ್ಲಿ ಹೆಚ್ಚಾಗಿ ಈ ಅಂಗವನ್ನು ತೆಗೆಯಲಾಗುತ್ತದೆ. ಪಕ್ಕೆಲವುಗಳ ಸಮೀಪವಿರುವುದರಿಂದ ಹೊಟ್ಟೆಗೆ ಗಾಯ ಅಥವಾ ಪೆಟ್ಟು ಬಿದ್ದಾಗ ಗುಲ್ಮವೂ ಸುಲಭವಾಗಿ ಹಾನಿಗೊಳಗಾಗುತ್ತದೆ. ಅದು ಕ್ಯಾಪ್ಸೂಲ್‌ನಂತಹ ಅಂಗಾಂಶಗಳ ಹೊದಿಕೆಯಿಂದ ಆವರಿಸಲ್ಪಟಿದ್ದು,ಈ ಹೊದಿಕೆಯು ಸುಲಭವಾಗಿ ಹರಿಯುತ್ತದೆ ಮತ್ತು ಹಾನಿಗೀಡಾಗಿರುವ ಗುಲ್ಮದಿಂದ ರಕ್ತ ಸೋರುವಿಕೆಗೆ ಅವಕಾಶ ನೀಡುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಗುರುತಿಸಿ ಚಿಕಿತ್ಸೆ ನೀಡದಿದ್ದರೆ ವ್ಯಕ್ತಿಯ ಸಾವು ಸಂಭವಿಸಬಹುದು. ಗುಲ್ಮದಲ್ಲಿ ಕಡುಕೆಂಪು ಮತ್ತು ಬಿಳಿಯ ಬಣ್ಣದ ಎರಡು ಭಾಗಗಳಿವೆ. ಕೆಂಪು ಭಾಗವು ಕೆಂಪು ರಕ್ತ ಕಣಗಳ ದಾಸ್ತಾನು ಮತ್ತು ಅವುಗಳ ಮರುಬಳಕೆಯಲ್ಲಿ ಪಾತ್ರ ಹೊಂದಿದ್ದರೆ, ಬಿಳಿಯದು ಬಿಳಿಯ ರಕ್ತಕಣಗಳು ಮತ್ತು ಪ್ಲೇಟ್‌ಲೆಟ್‌ಗಳ ದಾಸ್ತಾನಿಗೆ ಸಂಬಂಧಿಸಿದೆ. ಯಕೃತ್ತು ಕೆಂಪು ರಕ್ತಕಣಗಳು ಮತ್ತು ಅವುಗಳ ಘಟಕಗಳ ಮರುಬಳಕೆಯಲ್ಲಿ ಪಾತ್ರವನ್ನು ಹೊಂದಿರುವುದರಿಂದ ಗುಲ್ಮವಿಲ್ಲದಿದ್ದರೂ ವ್ಯಕ್ತಿಯು ಆರಾಮವಾಗಿ ಬದುಕಬಹುದು. ಇದೇ ರೀತಿ ಶರೀರದಲ್ಲಿಯ ಇತರ ದುಗ್ಧರಸ ಗ್ರಂಥಿಗಳ ಅಂಗಾಂಶಗಳು ಗುಲ್ಮದ ನಿರೋಧಕ ಕಾರ್ಯ ನಿರ್ವಹಣೆಯ ಪಾತ್ರ ವಹಿಸುತ್ತವೆ.
ಜಠರ
ಜಠರವು ನಾವು ಸೇವಿಸಿದ ಆಹಾರವನ್ನು ಜೀರ್ಣೀಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿದೆ. ಕೆಲವೊಮ್ಮೆ ಕ್ಯಾನ್ಸರ್ ಅಥವಾ ಇತರ ರೋಗಗಳ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಯ ಮೂಲಕ ಜಠರವನ್ನು ತೆಗೆಯಲಾಗುತ್ತದೆ. ಹೀಗೆ ಜಠರವನ್ನು ತೆಗೆದಾಗ ವೈದ್ಯರು ಅನ್ನನಾಳವನ್ನು ನೇರವಾಗಿ ಸಣ್ಣಕರುಳಿನೊಂಂದಿಗೆ ಜೋಡಿಸುತ್ತಾರೆ. ಶಸ್ತ್ರಚಿಕಿತ್ಸೆಯಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಬಳಿಕ ವ್ಯಕ್ತಿಯು ಪೂರಕ ವಿಟಾಮಿನ್‌ಗಳ ಜೊತೆಗೆ ಸಹಜ ಆಹಾರವನ್ನು ಸೇವಿಸಬಹುದು.
ಸಂತಾನೋತ್ಪತ್ತಿ ಅಂಗಗಳು
ವೃಷಣಗಳು ಮತ್ತು ಅಂಡಾಶಯಗಳು ಅನುಕ್ರಮವಾಗಿ ಪುರುಷರು ಮತ್ತು ಮಹಿಯರಲ್ಲಿಯ ಮುಖ್ಯ ಸಂತಾನೋತ್ಪತ್ತಿ ಅಂಗಗಳಾಗಿವೆ. ಇವು ಂದು ಜೊತೆಯಿರುತ್ತವೆ ಮತ್ತು ಈ ಪೈಕಿ ಒಂದು ಇಲ್ಲದಿದ್ದರೂ ಜನರು ಮಕ್ಕಳನ್ನು ಪಡೆಯಬಹುದು. ಸಾಮಾನ್ಯವಾಗಿ ಮಹಿಳೆಯರಲ್ಲಿ ಕ್ಯಾನ್ಸರ್‌ನಿಂದಾಗಿ ಮತ್ತು ಪುರುಷರಲ್ಲಿ ಹಿಂಸಾಚಾರ,ಕ್ರೀಡೆಯ ಸಂದರ್ಭದಲ್ಲಿಯ ಅವಘಡ ಅಥವಾ ಅಪಘಾತಗಳಾದಾಗ ಅನಿವಾರ್ಯ ಸಂದರ್ಭವಿದ್ದರೆ ಈ ಪೈಕಿ ಒಂದನ್ನು ಅಥವಾ ಎರಡನ್ನೂ ವೈದ್ಯರು ತೆಗೆಯುತ್ತಾರೆ. ಮಹಿಳೆಯರಲ್ಲಿ ಗರ್ಭಕೋಶವನ್ನೂ ತೆಗೆಯಬಹುದು. ಹಿಸ್ಟಿರೆಕ್ಟಮಿ ಎಂದು ಕರೆಯಲಾಗುವ ಈ ಪ್ರಕ್ರಿಯೆಯಿಂದಾಗಿ ಮಹಿಳೆಗೆ ಮಕ್ಕಳಾಗುವುದಿಲ್ಲ ಮತ್ತು ಋತುಚಕ್ರವೂ ನಿಲ್ಲುತ್ತದೆ. ಅಂಡಾಶಯಗಳನ್ನು ತೆಗೆಯುವುದರಿಂದ ಮಹಿಳೆಯರ ಆಯುಷ್ಯ ಕಡಿಮೆಯಾಗುವುದಿಲ್ಲ. ಕುತೂಹಲದ ವಿಷಯವೆಂದರೆ ಕೆಲವು ಪುರುಷರಲ್ಲಿ ಎರಡೂ ವೃಷಣಗಳು ತೆಗೆಯುವುದು ಅವರ ಆಯುಷ್ಯವನ್ನು ಹೆಚ್ಚಿಸಲೂಬಹುದು.
ದೊಡ್ಡಕರುಳು
ದೊಡ್ಡಕರುಳು ಟ್ಯೂಬ್‌ನಂತಹ ರಚನೆಯಾಗಿದ್ದು,ಸುಮಾರು ಆರು ಅಡಿ ಉದ್ದವಿರುತ್ತದೆ ಮತ್ತು ನಾಲ್ಕು ಭಾಗಗಳನ್ನು ಹೊಂದಿರುತ್ತದೆ. ಕ್ಯಾನ್ಸರ್ ಅಥವಾ ಇತರ ಕಾಯಿಲೆಗಳಿಂದ ದೊಡ್ಡಕರುಳನ್ನು ಭಾಗಶಃ ಅಥವಾ ಸಂಪೂರ್ಣವಾಗಿ ತೆಗೆಯುವ ಅಗತ್ಯವುಂಟಾಗಬಹುದು.ಮಲವಿಸರ್ಜನೆ ಪ್ರಕ್ರಿಯೆಯಲ್ಲಿ ಬದಲಾವಣೆಯಾಗಬುದಾದರೂ ಹೆಚ್ಚಿನವರು ಶಸ್ತ್ರಚಿಕಿತ್ಸೆಯ ಬಳಿಕ ಚೆನ್ನಾಗಿ ಚೇತರಿಸಿಕೊಳ್ಳುತ್ತಾರೆ. ಶಸ್ತ್ರಚಿಕಿತ್ಸೆಯ ಗಾಯ ಸುಲಭದಲ್ಲಿ ಶಮನಗೊಳ್ಳುವಂತಾಗಲು ಆರಂಭದಲ್ಲಿ ಮೃದು ಆಹಾರಗಳನ್ನು ಸೇವಿಸುವಂತೆ ರೋಗಿಗೆ ವೈದ್ಯರು ಸಲಹೆ ನೀಡುತ್ತಾರೆ.
ಪಿತ್ತಕೋಶ
ಹೊಟ್ಟೆಯ ಬಲ ಮೇಲ್ಭಾಗದಲ್ಲಿ ಪಕ್ಕೆಲವುಗಳ ಕೆಳಗೆ ಯಕೃತ್ತಿನಡಿ ಪಿತ್ತಕೋಶವು ಸ್ಥಿತಗೊಂಡಿರುತ್ತದೆ. ಅದರಲ್ಲಿ ಪಿತ್ತರಸವು ಸಂಗ್ರಹವಾಗಿರುತ್ತದೆ. ಕೊಬ್ಬುಗಳ ವಿಭಜನೆಯಲ್ಲಿ ನೆರವಾಗಲು ಯಕೃತ್ತು ನಿರಂತರವಾಗಿ ಪಿತ್ತರಸವನ್ನು ಉತ್ಪಾದಿಸುತ್ತಿರುತ್ತದೆ ಮತ್ತು ಪಚನಕ್ರಿಯೆಯಲ್ಲಿ ಪಿತ್ತರಸದ ಅಗತ್ಯವಿಲ್ಲದಿದ್ದಾಗ ಅದು ಪಿತ್ತಕೋಶದಲ್ಲಿ ಸಂಗ್ರಹಗೊಳ್ಳುತ್ತದೆ.
ಪಿತ್ತರಸದಲ್ಲಿಯ ಹೆಚ್ಚುವರಿ ಕೊಲೆಸ್ಟ್ರಾಲ್ ಪಿತ್ತಕಲ್ಲುಗಳಿಗೆ ಕಾರಣವಾಗುತ್ತದೆ. ಹೀಗಾದಾಗ ವ್ಯಕ್ತಿಯ ಪಿತ್ತಕೋಶವನ್ನು ತೆಗೆಯಬೇಕಾಗುತ್ತದೆ. ಹೆಚ್ಚಿನವರಲ್ಲಿ ಪಿತ್ತಕಲ್ಲುಗಳೂ ಇದ್ದರೂ ಯಾವುದೇ ತೊಂದರೆಯಿರುವುದಿಲ್ಲ,ಆದರೆ ಇತರರು ಅಷ್ಟು ಸುದೈವಿಗಳಾಗಿರುವುದಿಲ್ಲ.
ಅಪೆಂಡಿಕ್ಸ್
ಅಪೆಂಡಿಕ್ಸ್ ಅಥವಾ ಅಂಟುಗಂತಿಯು ದೊಡ್ಡಕರುಳು ಮತ್ತು ಣ್ಣಕರುಳು ಸೇರುವಲ್ಲಿರುವ ಸಣ್ಣ ,ಮುಚ್ಚಿದ ತುದಿಯನ್ನು ಹೊಂದಿರುವ ಸಣ್ಣಚೀಲದಂತಹ ರಚನೆಯಾಗಿದೆ. ಕರುಳಿನಲ್ಲಿಯ ಜಿಡ್ಡು ಇತ್ಯಾದಿಗಳು ಈ ಅಪೆಂಡಿಕ್ಸ್‌ನ್ನ್ನು ಪ್ರವೇಶಿಸಿದಾಗ ಅವು ಹೊರಬರಲು ಸಾಧ್ಯವಾಗುವುದಿಲ್ಲ ಮತ್ತು ಅಪೆಂಡಿಕ್ಸ್ ಉರಿಯೂತಕ್ಕೊಳಗಾಗುತ್ತದೆ. ಇದನ್ನೇ ಅಪೆಂಡಿಸೈಟಿಸ್ ಎನ್ನುತ್ತಾರೆ. ಈ ಸಮಸ್ಯೆ ತೀವ್ರಗೊಂಡ ಪ್ರಕರಣಗಳಲ್ಲಿ ಶಸ್ತ್ರಚಿಕಿತ್ಸೆಯ ಮೂಲಕ ಅಪೆಂಡಿಕ್ಸ್‌ನ್ನು ತೆಗೆಯಲಾಗುತ್ತದೆ. ಹೀಗೆ ಅಪೆಂಡಿಕ್ಸ್ ತೆಗೆದ ಬಳಿಕವೂ ಜನರ ಬದುಕು ಎಂದಿನಂತಿರುತ್ತದೆ.
ಮೂತ್ರಪಿಂಡಗಳು
ಎಲ್ಲರಿಗೂ ಸಾಮಾನ್ಯವಾಗಿ ಎರಡು ಮೂತ್ರಪಿಂಡಗಳು ಇರುತ್ತವೆಯಾದರೂ ಅಪರೂಪದ ಪ್ರಕರಣಗಳಲ್ಲಿ ವ್ಯಕ್ತಿಯು ಜನ್ಮಜಾತವಾಗಿ ಒಂದೇ ಮೂತ್ರಪಿಂಡವನ್ನು ಹೊಂದಿರಬಹುದು. ಒಂದೇ ಮೂತ್ರಪಿಂಡದೊಂದಿಗೆ ಅಥವಾ ಎರಡೂ ಮೂತ್ರಪಿಂಡಗಳು ಇಲ್ಲದಿದ್ದರೂ(ಡಯಾಲಿಸಿಸ್ ನೆರವಿನೊಂದಿಗೆ) ವ್ಯಕ್ತಿಯು ಬದುಕಲು ಸಾಧ್ಯವಿದೆ. ಕಾಯಿಲೆಯಿಂದ ಮೂತ್ರಪಿಂಡಗಳಿಗೆ ಹಾನಿಯುಂಟಾದಾಗ ಒಂದನ್ನು ಅಥವಾ ಎರಡನ್ನೂ ತೆಗೆಯುವುದು ಅಗತ್ಯವಾಗಬಹುದು. ರೋಗಿಯ ಎರಡೂ ಮೂತ್ರಪಿಂಡಗಳು ವಿಫಲಗೊಂಡರೆ ಆತನಿಗೆ ಡಯಾಲಿಸಿಸ್ ಮಾಡಲಾಗುತ್ತದೆ ಮತ್ತು ಶರೀರದಲ್ಲಿಯ ತ್ಯಾಜ್ಯವನ್ನು ಹೊರಗೆ ತೆಗೆಯಲಾಗುತ್ತದೆ. ಡಯಾಲಿಸಿಸ್ ಪ್ರಕ್ರಿಯೆಯಲ್ಲಿರುವ ರೋಗಿಗಳು ಇತರ ಅಂಶಗಳು ಪೂರಕವಾಗಿದ್ದರೆ 16-18 ವರ್ಷಗಳ ಸುದೀರ್ಘ ಕಾಲ ಬದುಕಬಹುದು. ಆದರೆ 60 ವರ್ಷ ದಾಟಿದವರು ಕೇವಲ ಐದು ವರ್ಷಗಳ ಕಾಲ ಬದುಕಿರಬಹುದು ಎನ್ನುತ್ತಾರೆ ತಜ್ಞರು.