ಪ್ರಭುಸ್ತುತಿಯ ಪರಿಣಾಮಗಳು

Update: 2018-12-04 10:51 GMT

ಸ್ತುತಿಸಾಹಿತ್ಯ ಕನ್ನಡಕ್ಕೆ ಹೊಸತೇನಲ್ಲ. ರಾಜ ಪ್ರಭುತ್ವ ಕಾಲದಲ್ಲಿ ಆಸ್ಥಾನ ಲೇಖಕರು ಧಾರಾಳವಾಗಿ ಪ್ರಭುಸ್ತುತಿ ಸಾಹಿತ್ಯ ಸೃಷ್ಟಿಸಿದ್ದಾರೆ. ಅವರಿಗೆ ದೊರೆಯನ್ನು ಮೆಚ್ಚಿಸಿಯೇ ಬದುಕಬೇಕಿತ್ತು. ಎಂತಲೇ ಅವರಿಗೆ ರಾಜಮಾಡಿದ ಯುದ್ಧವು ಲೂಟಿಯೆಂದೂ, ನಿಷ್ಕಾರಣವಾಗಿ ಜನಹತ್ಯೆಯ ಕೆಲಸವೆಂದೂ ಅನಿಸಲಿಲ್ಲ. ಅನಿಸಿದರೂ ಹೇಳಲು ಸಾಧ್ಯವಾಗಲಿಲ್ಲ.

ಹಂಪಿ ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿರುವ ರಹಮತ್ ತರೀಕೆರೆ, ಕನ್ನಡ ಸಾಹಿತ್ಯ ಲೋಕದ ಜಂಗಮ. ಕನ್ನಡದ ಪ್ರಸಿದ್ಧ ಸಂಸ್ಕೃತಿ ಚಿಂತಕರು, ವಿಮರ್ಶಕರು ಎಂದು ಗುರುತಿಸಿಕೊಂಡಿರುವ ಇವರ ‘ಮರದೊಳಗಿನ ಕಿಚ್ಚು’ ಕೃತಿ ನೆಲಮೂಲಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆಯಾಗಿದೆ. ‘ಕತ್ತಿಯಂಚಿನ ದಾರಿಗೆ’ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ತಿರುಗಾಟ ಮತ್ತು ಅದರಿಂದ ದಕ್ಕಿದ ಅನುಭವಗಳ ನೆಲೆಯಲ್ಲಿ ಅವರು ಬರೆದ ಬರಹಗಳು ಕನ್ನಡ ಸಾಹಿತ್ಯದಲ್ಲಿ ಹೊಸ ಅಲೆಯನ್ನು ನಿರ್ಮಿಸಿದೆ. ಕರ್ನಾಟಕದ ಸೂಫಿಗಳ ಕುರಿತಂತೆ ಅವರು ಬರೆದಿರುವ ಅಧ್ಯಯನ ಕೃತಿ, ಕನ್ನಡತನದ ವ್ಯಾಖ್ಯಾನವನ್ನು ಹಿಗ್ಗಿಸಿದೆ. ‘ಅಂಡಮಾನ್ ಕನಸು’, ‘ಕರ್ನಾಟಕದ ನಾಥಪಂಥ’, ‘ಧರ್ಮಪರೀಕ್ಷೆ’ ಸೇರಿದಂತೆ, 15ಕ್ಕೂ ಅಧಿಕ ಕೃತಿಗಳನ್ನು ಕನ್ನಡಕ್ಕೆ ಕೊಟ್ಟಿದ್ದಾರೆ. ಇವರ ಸಾಧನೆಗಳಿಗೆ ರಾಷ್ಟ್ರ ಮತ್ತು ರಾಜ್ಯಮಟ್ಟದ ಹಲವು ಗೌರವಗಳು ಸಂದಿವೆ.

ರಹಮತ್ ತರೀಕೆರೆ

ಕೆಲವು ದಿನಗಳ ಹಿಂದೆ ದೊಡ್ಡರಂಗೇಗೌಡ ವಿರಚಿತ ನರೇಂದ್ರ ಮೋದಿಯವರನ್ನು ಸ್ತುತಿಸುವ ಪದ್ಯವೊಂದು ಪತ್ರಿಕೆಯಲ್ಲಿ ಪ್ರಕಟವಾಯಿತು. ಅದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಮರ್ಥನೆ ಮತ್ತು ವಿರೋಧ ಬಂದವು. ಈ ಪ್ರತಿಕ್ರಿಯೆಗಳಲ್ಲಿ ಮೂರು ಆಯಾಮಗಳಿದ್ದವು.

1.ಬರಹಗಾರರು ಯಾವಾಗಲೂ ಅನಧಿಕೃತ ವಿರೋಧ ಪಕ್ಷದ ಕೆಲಸ ಮಾಡಬೇಕು. ಅಧಿಕಾರಸ್ಥರನ್ನು ಸ್ತುತಿಸುವುದಲ್ಲ. ಅನುಮಾನಿಸಬೇಕು.

2. ಕವಿತೆ ಭಾಷೆಯ ಅತ್ಯುನ್ನತ ಅಭಿವ್ಯಕ್ತಿ. ಅಧಿಕಾರಸ್ಥರನ್ನು ವಾಚಾಮಗೋಚರ ಸ್ತುತಿಸುವಲ್ಲಿ ಅದರ ಸೂಕ್ಷ್ಮತೆ ಘನತೆ ಪಾವಿತ್ರಕ್ಕೆ ಕುಂದು ಬರುತ್ತದೆ.

3. ಕವಿ ತನ್ನ ಮೆಚ್ಚಿನ ರಾಜಕೀಯ ನಾಯಕನನ್ನು ಕುರಿತು ಹೊಗಳಿ ಬರೆಯುವುದರಲ್ಲಿ ತಪ್ಪೇನಿದೆ? ಅದು ಅವನ ಅಭಿವ್ಯಕ್ತಿ ಸ್ವಾತಂತ್ರ. ಅಸಹನೆ ತಪ್ಪು ಎನ್ನುವವರೇ ಇದನ್ನು ಸಹನೆಯಿಂದ ನೋಡುತ್ತಿಲ್ಲ. ಪ್ರಗತಿಪರರು ಎನಿಸಿಕೊಂಡವರು ಮರೆಮುಚ್ಚಿನಲ್ಲಿ ತಮಗೆ ಬೇಕಾದ ರಾಜಕಾರಣಿಗಳನ್ನು ಓಲೈಸುತ್ತಿಲ್ಲವೇ?

ಕೊನೆಯ ಪ್ರತಿಕ್ರಿಯೆಗೆ ಪೂರಕವಾಗಿ ಸ್ವತಃ ಕವಿ ದೊಡ್ಡ ರಂಗೇಗೌಡರು ಟೀಕಾಕಾರರನ್ನು ನರಿನಾಯಿಗಳಿಗೆ ಹೋಲಿಸಿ, ತಮ್ಮನ್ನು ಸಮರ್ಥಿಸಿಕೊಡರು. ಪದ್ಯವೊಂದರ ನೆಪದಲ್ಲಿ ಲೇಖಕರ ಹೊಣೆಗಾರಿಕೆ, ಕಾವ್ಯಭಾಷೆಯ ಸೂಕ್ಷ್ಮತೆ ಮತ್ತು ಪಾವಿತ್ರ, ಲೇಖಕರ ಅಭಿವ್ಯಕ್ತಿ ಸ್ವಾತಂತ್ರ ಹಾಗೂ ರಾಜಕೀಯ ಆಯ್ಕೆಯ ಹಕ್ಕಿನ ಸುತ್ತಮುತ್ತ ವಾಗ್ವಾದ ನಡೆದರೂ, ಅದರ ಹಿಂದೆ ರಾಜಕೀಯ ಚರ್ಚೆಯ ಆಯಾಮವೂ ಮುಖ್ಯವಾಗಿತ್ತು. ಇದಕ್ಕೆ ದೊಡ್ಡರಂಗೇಗೌಡರು ಹಿಂದೆ ಬಿಜೆಪಿಯಿಂದ ವಿಧಾನ ಪರಿಷತ್ತಿಗೆ ನಾಮಕರಣಗೊಂಡ ಸದಸ್ಯರಾಗಿದ್ದುದು; ಬಿಜೆಪಿ ಸರಕಾರವು ಕೇಂದ್ರದಲ್ಲಿರುವಾಗ ಪದ್ಮಶ್ರೀ ಪ್ರಶಸ್ತಿ ವಿಜೇತರಾಗಿದ್ದುದು; ಕರ್ನಾಟಕವು ಚುನಾವಣೆ ಹೊಸ್ತಿಲಲ್ಲಿರುವಾಗ ಪದ್ಯ ಪ್ರಕಟವಾಗಿದ್ದುದು; ಸದರಿ ಪ್ರತಿಕೆಯ ಮಾಲಕರು ಬಿಜೆಪಿಯ ಸಂಸದರೂ ಆಗಿದ್ದುದು ಕಾರಣವಾಗಿದ್ದಿರಬಹುದು.

ಹಾಗೆ ಕಂಡರೆ, ಸ್ತುತಿಸಾಹಿತ್ಯ ಕನ್ನಡಕ್ಕೆ ಹೊಸತೇನಲ್ಲ. ರಾಜಪ್ರಭುತ್ವ ಕಾಲದಲ್ಲಿ ಆಸ್ಥಾನ ಲೇಖಕರು ಧಾರಾಳವಾಗಿ ಪ್ರಭುಸ್ತುತಿ ಸಾಹಿತ್ಯ ಸೃಷ್ಟಿಸಿದ್ದಾರೆ. ಅವರಿಗೆ ದೊರೆಯನ್ನು ಮೆಚ್ಚಿಸಿಯೇ ಬದುಕಬೇಕಿತ್ತು. ಎಂತಲೇ ಅವರಿಗೆ ರಾಜಮಾಡಿದ ಯುದ್ಧವು ಲೂಟಿಯೆಂದೂ, ನಿಷ್ಕಾರಣವಾಗಿ ಜನಹತ್ಯೆಯ ಕೆಲಸವೆಂದೂ ಅನಿಸಲಿಲ್ಲ. ಅನಿಸಿದರೂ ಹೇಳಲು ಸಾಧ್ಯವಾಗಲಿಲ್ಲ. ಸಮೀಪದ ಮೈಸೂರು ಒಡೆಯರ ಇತಿಹಾಸವನ್ನೇ ಗಮನಿಸಬಹುದು. ಆಸ್ಥಾನದ ಇತಿಹಾಸಕಾರರು ಬರೆದ ಚರಿತ್ರೆಯಲ್ಲಿ, ಒಡೆಯರು ಭೂಕಂದಾಯ ಕೊಡಲು ನಿರಾಕರಿಸಿದ ರೈತರನ್ನು ಮತ್ತು ಅವರ ನಾಯಕರನ್ನು ಹತ್ಯೆ ಮಾಡಿದ ಘಟನೆಯ ಪ್ರಸ್ತಾಪವಿಲ್ಲ; ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಬಂಡೆದ್ದ ನಾಯಕರನ್ನು ನೇಣಿಗಟ್ಟಿದ ಮತ್ತು ರಕ್ಷಿಸಲು ಸ್ವಾತಂತ್ರ ಚಳವಳಿಯನ್ನು ದಮನಿಸಿದ ಉಲ್ಲೇಖವಿಲ್ಲ. ಅರಮನೆಯೊಳಗೆ ಅಧಿಕಾರಕ್ಕಾಗಿ ನಡೆದ ಪಿತೂರಿ ಕ್ರೌರ್ಯಗಳ ಸುದ್ದಿಯೂ ಇಲ್ಲ. ರಾಜಾಶ್ರಿತ ಲೇಖಕರಾಗಿದ್ದ ದೇವಚಂದ್ರ ಹಾಗೂ ಸೋಸಲೆ ಅಯ್ಯಿಶಾಸ್ತ್ರಿ ಮುಂತಾದ ಇತಿಹಾಸಕಾರರು ತಮ್ಮ ದೊರೆಗಳನ್ನು ಮಾತ್ರವಲ್ಲ, ಅವರಿಗೆ ದೊರೆಗಳಾಗಿದ್ದ ಬ್ರಿಟಿಷರನ್ನೂ ಸ್ತುತಿಸಿದರು. ಇವರಿಗೆ ಹೋಲಿಸಿದರೆ, ದೊರೆಸ್ತುತಿಯನ್ನು ವೃತ್ತಿಯ ಭಾಗವಾಗಿಸಿಕೊಂಡಿರುವ ಆಸ್ಥಾನದ ವಂದಿಮಾಗಧರೇ ವಾಸಿ. ವಂದಿಮಾಗಧರಿಗೆ ದೊರೆಯ ದೌರ್ಬಲ್ಯಗಳು ಗೊತ್ತಿರುತ್ತವೆ. ಶಿಷ್ಟಾಚಾರ ಅವರ ಬಾಯಿ ಬಿಗಿದಿರುತ್ತದೆ. ತಮ್ಮ ಹೊಗಳಿಕೆ ಸಂಪೂರ್ಣ ನಿಜವಲ್ಲ ಎಂದು ಗೊತ್ತಿರುವ ಅವರು ದೊರೆಗೆ ಗೊತ್ತಾಗದಂತೆ ಒಳಗೇ ನಕ್ಕಿರುವ ಸಾಧ್ಯತೆಯಿರುತ್ತದೆ.

ಪಂಪ ರನ್ನ ಮುಂತಾದ ರಾಜಪ್ರಭುತ್ವದಲ್ಲಿದ್ದ ಕವಿಗಳಿಗೆ ದೊರೆಯನ್ನು ಹೊಗಳುವುದು ಅನಿವಾರ್ಯವಿತ್ತು. ಆದರೆ ದೊರೆಯನ್ನು ಅನಿವಾರ್ಯವಾಗಿ ಹೊಗಳಿದ ಪಾಪಪ್ರಜ್ಞೆಯನ್ನು ಅವರು, ದುಷ್ಟ ಮೂರ್ಖ ದೊರೆಯ ಪಾತ್ರ ಬಂದಾಗ, ಅವನನ್ನು ಕಟುವಾಗಿ ವಿಮರ್ಶಿಸುವ ಮೂಲಕ ತೀರಿಸಿಕೊಳ್ಳುತ್ತಿದ್ದರು. ಭಾಷೆ ಮತ್ತು ಕಲೆಗಾರಿಕೆ ಬರಹಗಾರರಿಗೆ ಒದಗಿಸುವ ಗುಪ್ತದಾರಿಯಿದು. ತಮ್ಮ ರಾಜಭಕ್ತಿಗೆ ಹೆಸರಾದ ಬಿ.ಎಂ. ಶ್ರೀಕಂಠಯ್ಯನವರು ಒಡೆಯರ ಮೇಲೆ ಪ್ರಗಾಥಗಳನ್ನು ಯಾವುದೇ ವ್ಯಂಗ್ಯವಿಲ್ಲದೆ ರಚಿಸಿದರು. ಅವರ ಸ್ತುತಿಯಲ್ಲಿ ವೈಯಕ್ತಿಕ ರಾಜನಿಷ್ಠೆ ಮಾತ್ರ ಇರಲಿಲ್ಲ. ರಾಜಪ್ರಭುತ್ವವು ಕನ್ನಡಕ್ಕಾಗಿ ಮೈಸೂರು ನಾಡಿನ ಹಿತಕ್ಕಾಗಿ ಮಾಡುತ್ತಿರುವ ಕಾರ್ಯಗಳ ಬಗ್ಗೆ ಪ್ರಾಮಾಣಿಕವಾದ ಕೃತಜ್ಞತೆಯಿತ್ತು. ಇಂದು ದಮನಿತ ಸಮುದಾಯದ ವಿಮೋಚಕ ಚಳವಳಿಗಳು ಟಿಪ್ಪುಸುಲ್ತಾನ, ನಾಲ್ವಡಿ ಕೃಷ್ಣರಾಜ ಒಡೆಯರ್, ಶಾಹು ಮಹಾರಾಜರನ್ನು ಆಧುನಿಕ ಚಳವಳಿಗಾರರಾದ ಅಂಬೇಡ್ಕರ್ ನಾರಾಯಣಗುರು ಫುಲೆ ಮುಂತಾದವರ ಜತೆಗಿಟ್ಟು ಗೌರವಿಸುತ್ತಿರುವುದನ್ನು ಇದೇ ಹಿನ್ನೆಲೆಯಲ್ಲಿ ಗಮನಿಸಬೇಕು. ಈ ನಿದರ್ಶನಗಳು ಪ್ರಭುಸ್ತುತಿಗಳು ಏಕರೂಪಿಯಾಗಿ ಗ್ರಹಿಸುವುದಕ್ಕೆ ಕಷ್ಟವಾಗುವಂತೆ ಸಂಕೀರ್ಣವಾಗಿರುವುದನ್ನು ಸೂಚಿಸುತ್ತವೆ.

ಆಸ್ಥಾನಿಕರಿಗೆ ಹೋಲಿಸಿದರೆ ಆಸ್ಥಾನದ ಹೊರಗಿದ್ದ ಲೇಖಕರಿಗೆ ಪ್ರಭು-ಪ್ರಭುತ್ವಗಳ ವಿಮರ್ಶೆ ಮಾಡಲು ಹೆಚ್ಚಿನ ಸ್ವಾತಂತ್ರ ಮತ್ತು ಅವಕಾಶವಿತ್ತು. ಜನಪದ ಲಾವಣಿಕಾರರು ಬ್ರಿಟಿಷ್ ವಸಾಹತುಶಾಹಿಯು ಕೊಂದ ಟಿಪ್ಪು, ಸಂಗೊಳ್ಳಿರಾಯಣ್ಣ, ಸರ್ಜಾ ಹನುಮಪ್ಪ ನಾಯಕ ಮುಂತಾದವರನ್ನು ಹುತಾತ್ಮರನ್ನಾಗಿ ಚಿತ್ರಿಸುವ ಮೂಲಕ ನೇರವಾಗಿ ಪ್ರತಿರೋಧ ದಾಖಲಿಸಿದರು. ಅವರು ದೊರೆಯ ಅಥವಾ ಬಂಟರನ್ನು ನಾಯಕರನ್ನಾಗಿ ಹಾಡುಕಟ್ಟಿದರೂ, ಅಲ್ಲಿ ಪ್ರಭುತ್ವದಿಂದ ಫಾಯದೆ ಪಡೆಯುವ ಉದ್ದೇಶವಿರಲಿಲ್ಲ. ನಾಡಿನ ಬಿಡುಗಡೆಯ ವಿಶಾಲ ಆಶಯಗಳಿದ್ದವು. ಇನ್ನು ಉದ್ಯೋಗಿಯಾಗಿ ಬಸವಣ್ಣನವರು ಪ್ರಭುತ್ವದ ಭಾಗವಾಗಿದ್ದರೂ ಪ್ರಭುವಿಗೆ ತನ್ನ ವ್ಯಕ್ತಿತ್ವ ಒತ್ತೆಯಿಡದಂತೆ ಎಚ್ಚರ ವಹಿಸಬಲ್ಲವನಾಗಿದ್ದರು. ಪುರಂದರದಾಸರು ತಮ್ಮದೊಂದು ಕೀರ್ತನೆಯಲ್ಲಿ ಉತ್ತಮಪ್ರಭುತ್ವ ಲೊಳಲೊಟ್ಟೆ ಎಂದು ಕರೆದಿರುವುದು ಸರ್ವವಿಧಿತ. ದಾಸತ್ವ ಮತ್ತು ಕೀರ್ತನೆಗಳು ವಿಮರ್ಶನರಹಿತ ಸ್ತುತಿಯ ಸಂಕೇತಗಳಾಗಿದ್ದರೂ ಅಲ್ಲಿನ ಸ್ತುತಿ ರಾಜಕೀಯ ಪ್ರಭುವಿಗಲ್ಲ. ದೈವಕ್ಕೆ. ಮರ್ತ್ಯಕೀಟಕರಾದ ದೊರೆಗಳನ್ನು ಸ್ತುತಿಸಿ ಬರೆಯುವುದು ತಪ್ಪೆಂದೂ ಸಾವವರ ಮೇಲೆ ಕನಿಷ್ಠರ ಮೇಲೆ ಕಾವ್ಯ ತಾನು ಬರೆಯಲಾರೆನೆಂದೂ ಹರಿಹರ ಘೋಷಿಸಿದನು. ಅವನ ಈ ಲೌಕಿಕ ಪ್ರಭುತ್ವ ವಿರೋಧಕ್ಕೆ ಧಾರ್ಮಿಕ ಪ್ರಭುತ್ವವನ್ನು ವಿಮರ್ಶೆಯಿಲ್ಲದೆ ಒಪ್ಪುವ ಆಯಾಮವಿತ್ತು. ಹೀಗಾಗಿಯೇ ಧರ್ಮಕ್ಕಾಗಿ ಅನ್ಯಧರ್ಮೀಯರನ್ನು ಕೊಲ್ಲುವುದನ್ನು ವೈಭವೀಕರಿಸುವ ರಗಳೆಗಳನ್ನು ಆತ ನಿರಾಳವಾಗಿ ಬರೆದನು. ಆಸ್ಥಾನ ಲೇಖಕರಲ್ಲದ ಹಾಗೂ ಪ್ರಭುಸ್ತುತಿ ಮಾಡಿ ಬದುಕುವ ಉದ್ದೇಶವಿರದ ಡಿವಿಜಿ ಕೂಡ ಬ್ರಿಟಿಷರು ಈ ದೇಶವನ್ನು ಉದ್ಧರಿಸಬಲ್ಲ ಪ್ರಭುಗಳೆಂದು ನಂಬಿದ್ದರು ಹಾಗೂ ಮಂಗಳಶಾಸನವನ್ನು (1910) ರಚಿಸಿದರು. ಮುಂದೆ ವಿಶ್ವೇಶ್ವರಯ್ಯನವರು ದಿವಾನಸ್ಥಾನಕ್ಕೆ ರಾಜೀನಾಮೆಯಿತ್ತ ಬಳಿಕ ಅವರು ಮೈಸೂರು ಪ್ರಭುತ್ವದ ವಿಮರ್ಶಕರಾಗಿ ಮಾರ್ಪಟ್ಟರು. ಕುವೆಂಪು ಕೂಡ ತಮ್ಮ ತಾರುಣ್ಯದಲ್ಲಿ ನಾಲ್ವಡಿಯವರ ಮೇಲೆ ಸ್ತುತಿಪದ್ಯ ಬರೆದಿದ್ದುಂಟು. ಆದರೆ ನಂತರ ರಾಜಶಾಹಿಯನ್ನು ಕುರಿತು ಕಟುವಾಗಿ ಬರೆದರು. ತಮ್ಮ ಕಾಲದ ಆಧುನಿಕ ಸರಕಾರಗಳನ್ನು ಸಹ ವಿಮರ್ಶಿಸಿದರು. ಹೀಗಾಗಿ ಪ್ರಭುವಿರೋಧಿ ಸಾಹಿತ್ಯವೂ ಮುಖಬೆಲೆಯಲ್ಲಿ ಮೆಚ್ಚುವುದು ವಿರೋಧಿಸುವುದು ಕಷ್ಟವೆನಿಸುವಂತೆ ಬಹುಮುಖಿಯಾಗಿದೆ.

ಇಲ್ಲಿಯೇ ಅಡಿಗ, ಕುವೆಂಪು ಮುಂತಾದ ಕವಿಗಳು ತಮ್ಮ ಕಾಲದ ಅಧಿಕಾರಸ್ಥರನ್ನು ಎದುರುಹಾಕಿಕೊಂಡು ಬರೆದಿದ್ದು ನೆನಪಾಗುತ್ತಿದೆ. ಅಡಿಗರ ‘ಪ್ರಾರ್ಥನೆ’ಯು ಎಲ್ಲ ಬಗೆಯ ಪ್ರಭುತ್ವಗಳಿಗೆ ಓಲೈಸುವ ಕವಿಯ ಕಷ್ಟಗಳನ್ನು ಮಾತ್ರವಲ್ಲ, ಭಟ್ಟಂಗಿತನವು ಯಾವುದೇ ವ್ಯಕ್ತಿಯ ಸ್ವಂತಿಕೆಯನ್ನು ಹೇಗೆ ನಾಶಪಡಿಸುತ್ತದೆ’ ಎಂಬುದನ್ನು ಕಟುವಾಗಿ ವಿಡಂಬನೆಯ ಕಾಣಿಸುವ ಕವಿತೆ. ಅಡಿಗರು ಶ್ರೀಯವರ ರಾಜಭಕ್ತಿಯನ್ನೂ ನವಿರಾಗಿ ವಿಡಂಬಿಸುವರು. ಜನಸಂಘದ ಹುರಿಯಾಳಾಗಿ ನಿಂತಿದ್ದ ಅವರು ಅದರ ಆಧುನಿಕ ರೂಪದ ರಾಜಕೀಯ ಪಕ್ಷಕ್ಕೆ ಸೇರಿದ ದೊಡ್ಡರಂಗೇಗೌಡರ ಮೋದಿಸ್ತುತಿ ಪದ್ಯಕ್ಕೆ ಹೇಗೆ ಪ್ರತಿಕ್ರಿಯಿಸುತ್ತಿದ್ದರೊ? ಅಡಿಗರ ಪರವಾಗಿ ಚುನಾವಣಾ ಪ್ರಚಾರಕ್ಕೆ ಹೋಗಿದ್ದ ಆದರೆ ‘ಧಣಿ ಹೇಳುವ ಮೊದಲೇ ಕಾಲೊತ್ತುವ ಜನ ನಾವು’ ಎಂದು ಹೇಳುತ್ತಿದ್ದ ಲಂಕೇಶ್ ಇದ್ದಿದ್ದರೆ ಹೇಗೆ ಗೇಲಿ ಮಾಡುತ್ತಿದ್ದರೊ? ಬಹುಶಃ ರಾಜಕೀಯ ಆಯ್ಕೆ ಬೇರೆ ಕಾವ್ಯನಿಷ್ಠೆ ಬೇರೆ ಎಂದು ಹೇಳುತ್ತಿದ್ದರೇ? ಹಾಗೆ ಹೇಳುವಷ್ಟು ಅವು ಸುಲಭಭೇದ್ಯವೇ?

ಪ್ರಭುಸ್ತುತಿ ಸಾಹಿತ್ಯದ ಸಮಸ್ಯೆ ಇರುವುದು ಲೇಖಕರ ವೈಯಕ್ತಿಕ ರಾಜಕೀಯ ಆಯ್ಕೆ-ತಿರಸ್ಕಾರಗಳಲ್ಲಲ್ಲ. ಒಟ್ಟಾರೆ ಸಾಹಿತ್ಯ ಸಂಸ್ಕೃತಿ ರಾಜಕಾರಣದ ಪರಿಸರದಲ್ಲಿ ಉಂಟು ಮಾಡುವ ಪರಿಣಾಮಗಳ ಮೇಲೆ. ನಿಜ, ಲಜ್ಜೆಗೆಟ್ಟ ಪ್ರಭುಸ್ತುತಿಗಳಿಂದ ಬರಹದ ವೈಚಾರಿಕತೆ ನಷ್ಟವಾಗುತ್ತದೆ. ಭಾಷೆ ಅಶ್ಲೀಲವಾಗುತ್ತದೆ. ಎಂತಲೇ ಸಾಮಾನ್ಯವಾಗಿ ಸ್ತುತಿಸಾಹಿತ್ಯವು ದೈನಿಕ ಭಾಷೆಯನ್ನು ಇಟ್ಟು ಅಡಂಬರದ ಸಂಸ್ಕೃತಭೂಯಿಷ್ಠವಾದ ಸವೆದು ಅರ್ಥಶಕ್ತಿ ಕಳೆದುಕೊಂಡ ಪದಪುಂಜಗಳ ನೆರವನ್ನು ಪಡೆಯುವುದು ಗಮನಾರ್ಹ. ಇದು ಲೇಖಕರ ಶಬ್ದದಾರಿದ್ರದ ಪ್ರಶ್ನೆಯಲ್ಲ. ಅವರ ಅಪ್ರಾಮಾಣಿಕತೆಗೆ ಭಾಷೆ ಮಾಡುವ ಅಸಹಕಾರದ ಪರಿಕೂಡ. ಲೇಖಕರು ಸ್ತುತಿಸಾಹಿತ್ಯದಲ್ಲಿ ತಮ್ಮನ್ನು ಮುಚ್ಚಿಕೊಳ್ಳಲು ಭಾಷೆಯ ಅವಕುಂಠನವನ್ನು ಎಷ್ಟೇ ಹಾಕಿದರೂ, ಒಳಗಿನ ವಿಗ್ರಹದ ವಿಕಾರ ಹೊರಗೆ ಮೈದೋರುತ್ತದೆ. ಇದು ಸಾಹಿತ್ಯದಲ್ಲಿ ಮಾತ್ರವಲ್ಲ, ಅಷ್ಟೇನು ಮುತ್ಸದ್ದಿಗಳಲ್ಲದ ಅಗ್ಗದ ರಾಜಕಾರಣಿಗಳನ್ನು ಬಸವಣ್ಣ, ಗಾಂಧಿ, ದೇವರಾಜ ಅರಸು ಅವರಿಗೆ ಹೋಲಿಸಿ ಈಚಿನ ವರ್ಷಗಳಲ್ಲಿ ಹುಟ್ಟಿರುವ ಹೇಳಿಕೆಗಳಲ್ಲೂ ಗೋಚರಿಸುವುದು. ಆಧುನಿಕ ರಾಜಕೀಯ ಚರಿತ್ರೆಯಲ್ಲಿ ಪ್ರಭುಸ್ತುತಿಯ ಪರಂಪರೆ ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿದ್ದು ಇಂದಿರಾ ಪ್ರಧಾನಿಯಾಗಿದ್ದ ಕಾಲದಲ್ಲಿ ಎನ್ನಲಾಗುತ್ತದೆ. ನನ್ನ ಗುರುಗಳಾದ ಶಂಕರಮೊಕಾಶಿ ಪುಣೇಕರರು ಇಂದಿರಾ ಅವರನ್ನು ಕಾಳಿಗೆೆ ಹೋಲಿಸಿ ಬರೆದ ಹಾಡನ್ನು ಕವಿಗೋಷ್ಠಿಯಲ್ಲಿ ವಾಚಿಸುವಾಗ ಎದ್ದ ಗದ್ದಲಕ್ಕೆ ನಾನು ಸ್ವತಃ ಸಾಕ್ಷಿಯಾಗಿರುವೆ. ಆದರೆ ಪುಣೇಕರರದು ಹಾಗೆ ಪ್ರಭುತ್ವವನ್ನು ಓಲೈಸದ ಅದರ ಋಣವನ್ನು ತೀರಿಸುವ ಭಕ್ತಿಯಾಗಿರಲಿಲ್ಲ. ಪ್ರಾಮಾಣಿಕವಾಗಿಯೂ ಅವರು ಇಂದಿರಾರನ್ನು ಕಾಳಿಯೆಂದು ನಂಬಿದ್ದರು. ಕನ್ನಡ ಕವನಗಳಲ್ಲಿ ವ್ಯಕ್ತಿಗಳನ್ನು ಕುರಿತು ಹುಟ್ಟಿರುವ ಕವನಗಳು ಸಾವಿರಾರಿವೆ. ಅವುಗಳಲ್ಲಿ ರಾಜಕಾರಣಿಗಳನ್ನು ಧರ್ಮಾಧಿಕಾರಿಗಳನ್ನು ಕುರಿತು ನಾವು ಸೂಕ್ಷ್ಮ ಎನ್ನುವ ಕವಿಗಳೇ ಸ್ತುತಿಸಿ ಬರೆದಿರುವರು. ಅಲ್ಲಿರುವುದು ಸ್ವಾರ್ಥವಲ್ಲ. ನಿರ್ದಿಷ್ಟ ಸಜ್ಜನನಂತೆ ಕಾಣುವ ವ್ಯಕ್ತಿಯ ಹಿಂದಿನ ವ್ಯವಸ್ಥೆಯನ್ನು ಹಾಗೂ ಅದು ತನ್ನ ಅಸ್ತಿತ್ವಕ್ಕಾಗಿ ಮಾಡಿರುವ ಹಿಂಸೆ-ಕ್ರೌರ್ಯಗಳನ್ನು ಅರಿಯಲಾಗದ ಭೋಳೆತನ; ರಾಜಕೀಯ ಅಪ್ರಬುದ್ಧತೆ. ಮುಗ್ಧರ ರಾಜಕೀಯ ಅಪ್ರಬುದ್ಧತೆಯು ದುಬಾರಿಯಾಗಿರುತ್ತದೆ. ತುರ್ತುಪರಿಸ್ಥಿತಿಯಲ್ಲಿ ಸಂಜಯಗಾಂಧಿ ಕುರಿತು ಕನ್ನಡದ ಕೆಲವು ಕವಿಗಳು ಸಂಕೇತ ಮತ್ತು ರೂಪಕ ಭಾಷೆಗಳಲ್ಲಿ ಅಡಗಿಕೊಂಡು ಬರೆದರು. ಇದಕ್ಕೆ ಹೋಲಿಸಿದರೆ ದೊಡ್ಡರಂಗೇಗೌಡರದ್ದು ನೇರ ಪ್ರಾಮಾಣಿಕ ನಡೆ. ಈಚೆಗೆ ಮೋದಿಯವರನ್ನು ಸಮರ್ಥಿಸಿಕೊಂಡು ಎಸ್.ಎಲ್. ಭೈರಪ್ಪನವರು ಕೊಡುತ್ತಿರುವ ಹೇಳಿಕೆಗಳಲ್ಲೂ ಮುಚ್ಚುಮರೆಯಿಲ್ಲ. ಲೇಖಕರಿಗೆ ರಾಜಕೀಯ ಪಕ್ಷದ ಅಥವಾ ನಾಯಕನ ಪರವಾಗಿ ಹಾಗೊಂದು ಸ್ಪಷ್ಟ ನಿಲುವು ತಳೆಯಲು ಸ್ವಾತಂತ್ರವಿದೆ. ಆದರೆ ಅವರು ಬರಹಗಾರ ರಾಜಕಾರಣಕ್ಕೆ ತಲೆಗೊಡಬಾರದು, ಕಲೆಯು ರಾಜಕೀಯಕ್ಕೆ ಅತೀತವಾದುದು ಎಂದು ನೈತಿಕ ಕಲಾತ್ಮಕ ಶರಾ ಬರೆಯ ಬಾರದು ಅಷ್ಟೆ. ನಮ್ಮ ದುರ್ಬಲ ಲೇಖಕರ ರಾಜಕೀಯ ಹೇಳಿಕೆ ಮತ್ತು ಪದ್ಯಗಳಿಂದ ಸಾಹಿತ್ಯ ಪತನವಾಯಿತು ಎಂಬಂತೆ ಶೋಕಿತರಾಗಿ ಯಾಕೆ ನೋಡಬೇಕು? ಅವರು ಆಳುವ ಪ್ರಭುತ್ವದ ಅಥವಾ ಸಿದ್ಧಾಂತದ ಪರವಾಗಿ ನಿಲುವು ತೆಗೆದು ಕೊಂಡರೆ ಯಾಕೆ ವ್ಯಥೆ ಪಡಬೇಕು ಎಂದು ವಾದಿಸುವವರುಂಟು. ಆದರೆ ಪ್ರಜಾಪ್ರಭುತ್ವದಲ್ಲಿ ನಾಯಕಾರಾಧನೆಯ ಭಾಗವಾಗಿ ಹುಟ್ಟುವ ಅವಿಮರ್ಶಾತ್ಮಕ ಸ್ತುತಿಗಳಿಗೆ ಜನಾಭಿಪ್ರಾಯ ರೂಪಿಸುವ ಶಕ್ತಿಯೂ ಇರುತ್ತದೆ. ಪ್ರಜಾಪ್ರಭುತ್ವದಲ್ಲಿದ್ದೂ ಸರ್ವಾಧಿಕಾರಿಯಾಗಿರುವ ಅಧಿಕಾರಸ್ಥರನ್ನು, ಅದರಲ್ಲೂ ‘ಅರಸು ರಾಕ್ಷಸ ಮಂತ್ರಿ ಮೊರೆಯವ ಹುಲಿಯಾಗಿದ್ದಾಗಸ್ತುತಿಸುವ ಸಾಹಿತ್ಯವು, ಬಲಿಷ್ಠ ನಾಯಕ ಮಾತ್ರ ದೇಶವನ್ನು ಆಳಬಲ್ಲ. ಭ್ರಷ್ಟರನ್ನು ಮುರಿಯಬಲ್ಲ, ಪುಂಡರಾದ ನೆರೆದೇಶಗಳನ್ನು ಹದ್ದುಬಸ್ತಿನಲ್ಲಿ ಇಡಬಲ್ಲ’ ಎಂಬ ರಾಜಕೀಯ ಗ್ರಹಿಕೆಗಳ ಭಾಗವಾಗಿರುತ್ತದೆ. ಇದು ಸದರಿ ನಾಯಕನಿಗೆ ಹುಟ್ಟುವ ವಿಮರ್ಶೆ ಭಿನ್ನಮತಗಳನ್ನು ದೇಶದ್ರೋಹ ಎಂದು ಕರೆಯಬಲ್ಲದು. ಹೊಸತಲೆಮಾರಿನಲ್ಲಿ ತರುಣ ತರುಣಿಯರು ತಾವು ಒಪ್ಪುವ ರಾಜಕೀಯ ನಾಯಕರನ್ನು ಮತ್ತು ಲೇಖಕನನ್ನು ಹೊಗಳುವ ಮತ್ತು ಅವರ ಪ್ರತಿ ಬೆರಳೆತ್ತುವವರನ್ನು ದ್ವೇಷಿಸುವ ಕಲ್ಟ್ ಬೆಳೆದಿರುವುದರ ಭಾಗ; ನಿರ್ದಿಷ್ಟ ಮಾದರಿಯ ರಾಷ್ಟ್ರೀಯವಾದವನ್ನು ಪ್ರಶ್ನಿಸುವವರು ದೇಶದ್ರೋಹಿಗಳಾಗಿ ಮಾರ್ಪಡುತ್ತಿರುವುದರ ಭಾಗ; ಆಡಳಿತದಲ್ಲಿರುವ ನಾಯಕರ ಹೆಸರಲ್ಲಿ ಸೇನೆಗಳು ಬ್ರಿಗೇಡುಗಳು ಹುಟ್ಟಿರುವುದರ ವಿಸ್ತರಣೆ. ಆರಾಧಿತ ನಾಯಕ ದೇಶಕ್ಕೆ ನಷ್ಟವುಂಟು ಮಾಡುತ್ತಿದ್ದರೂ ಸಮರ್ಥಿಸಿಕೊಳ್ಳುವ ಜನಪ್ರಿಯ ಭಾಷಣಕಾರರು ದೇಶಪ್ರೇಮದ ಹೆಸರಲ್ಲಿ ಹುಟ್ಟಿಕೊಂಡಿರುವುದು ಹೀಗೆ. ರಾಜಕೀಯವಾಗಿ ಸ್ತುತಿಕಾವ್ಯವು ಸರ್ವಾಧಿಕಾರಿಗಳ ಆಗಮನವನ್ನು ಸಾರುವ ಕೋಗಿಲೆಯ ನಾದಗಳು. ಇವು ಜನರಲ್ಲಿ ಗುಲಾಮಗಿರಿ ಬೆಳೆಯುವುದನ್ನು ಸಂಭ್ರಮಿಸುತ್ತವೆ. ಎಲ್ಲ ಫ್ಯಾಶಿಸ್ಟ್ ಪ್ರಭುತ್ವಗಳು, ಮರಗಟ್ಟಿದ ರಾಜಕೀಯ ಸಿದ್ಧಾಂತಗಳು ಇದೇ ಚಹರೆ ಪ್ರಕಟಿಸಿರುವುದನ್ನು ಚರಿತ್ರೆಯಲ್ಲಿ ಕಾಣಬಹುದು.

ಏಕಮುಖಿ ವ್ಯಕ್ತಿಪ್ರಶಂಸೆ, ಅಮೂರ್ತ ರಾಷ್ಟ್ರದ ಗುಣಗಾನ, ಗತದ ವೈಭವ, ಸುವರ್ಣಯುಗ ಮರಳಿತರುವ ಸಂಕಲ್ಪ ಇವೆಲ್ಲವೂ ವಾಚ್ಯರೂಪೀ ನಾಯಕಾರಾಧಕ ಕಾವ್ಯಗಳಲ್ಲಿರುವ ಗುಣಗಳು. ದೊರೆ, ನಾಡು, ನಾಯಕ, ಧರ್ಮ, ದೇವರು, ಸಿದ್ಧಾಂತ ಇವು ಯಾವಾಗಲೂ ಏಕಮುಖಿ ಬೆಂಬಲವನ್ನು ಬಯಸುತ್ತವೆ. ಒಳವಿಮರ್ಶೆಯನ್ನಲ್ಲ. ಆದರೆ ವಿಮರ್ಶೆ ಮಾಡದೆ ಹೋದರೆ ಅವು ತಮ್ಮ ಶಕ್ತಿಯಾಗಿ ನಮ್ಮ ರಕ್ತದಲ್ಲಿ ಬೆರೆಯುವುದಿಲ್ಲ. ನಮ್ಮನ್ನು ಅವು ಉಪಕರಣದ ಮಟ್ಟಕ್ಕೆ ಇಳಿಸಿಬಿಡುತ್ತವೆ. ಆದ್ದರಿಂದ ಇದು ಕೇವಲ ಕೆಟ್ಟಪದ್ಯವೊಂದರ ಪ್ರಶ್ನೆಯಲ್ಲ. ಪ್ರಭುತ್ವದ ಜತೆಯಲ್ಲಿ ಬೇರೆಬೇರೆ ಬಗೆಯಲ್ಲಿ ರಾಜಿ ಅನುಸಂಧಾನ ಮಾಡುತ್ತಿರುವ ಟೀಕಾಕಾರರಲ್ಲಿಯೂ ಇರಬಹುದಾದ ಬೇರೆಬೇರೆ ಆರಾಧನೆಗಳನ್ನು ಚೆಕ್ ಮಾಡಿಕೊಳ್ಳುವ ಪ್ರಶ್ನೆ ಕೂಡ. ಅದರಲ್ಲೂ ನಮ್ಮ ಕಾಲದಲ್ಲಿ ಜನಾಭಿಪ್ರಾಯ ರೂಪಿಸುವ ಶಕ್ತಿಯುಳ್ಳ ಸುದ್ದಿಮಾಧ್ಯಮಗಳು ರಾಜಕೀಯ ಪ್ರಭುಗಳಿಗೂ, ಅವರನ್ನು ನಿಯಂತ್ರಿಸುವ ಕಾರ್ಪೊರೇಟ್ ಧನಿಗಳಿಗೂ ಮಾರಾಟಗೊಂಡಿರುವುದಕ್ಕೆ ಹೋಲಿಸಿದರೆ, ಒಂದು ಕೆಟ್ಟ ರಾಜಕೀಯಪದ್ಯ ಮಾಡುವ ನಷ್ಟ ಏನೂ ಅಲ್ಲ.

ಪ್ರಭುಸ್ತುತಿ ಸಾಹಿತ್ಯದ ಸಮಸ್ಯೆ ಇರುವುದು ಲೇಖಕರ ವೈಯಕ್ತಿಕ ರಾಜಕೀಯ ಆಯ್ಕೆ-ತಿರಸ್ಕಾರಗಳಲ್ಲಲ್ಲ. ಒಟ್ಟಾರೆ ಸಾಹಿತ್ಯ ಸಂಸ್ಕೃತಿ ರಾಜಕಾರಣದ ಪರಿಸರದಲ್ಲಿ ಉಂಟು ಮಾಡುವ ಪರಿಣಾಮಗಳ ಮೇಲೆ. ನಿಜ, ಲಜ್ಜೆಗೆಟ್ಟ ಪ್ರಭುಸ್ತುತಿಗಳಿಂದ ಬರಹದ ವೈಚಾರಿಕತೆ ನಷ್ಟವಾಗುತ್ತದೆ. ಭಾಷೆ ಅಶ್ಲೀಲವಾಗುತ್ತದೆ. ಎಂತಲೇ ಸಾಮಾನ್ಯವಾಗಿ ಸ್ತುತಿಸಾಹಿತ್ಯವು ದೈನಿಕ ಭಾಷೆಯನ್ನು ಇಟ್ಟು ಅಡಂಬರದ ಸಂಸ್ಕೃತಭೂಯಿಷ್ಠವಾದ ಸವೆದು ಅರ್ಥಶಕ್ತಿ ಕಳೆದುಕೊಂಡ ಪದಪುಂಜಗಳ ನೆರವನ್ನು ಪಡೆಯುವುದು ಗಮನಾರ್ಹ.

ಏಕಮುಖಿ ವ್ಯಕ್ತಿಪ್ರಶಂಸೆ, ಅಮೂರ್ತ ರಾಷ್ಟ್ರದ ಗುಣಗಾನ, ಗತದ ವೈಭವ, ಸುವರ್ಣಯುಗ ಮರಳಿತರುವ ಸಂಕಲ್ಪ ಇವೆಲ್ಲವೂ ವಾಚ್ಯರೂಪೀ ನಾಯಕಾರಾಧಕ ಕಾವ್ಯಗಳಲ್ಲಿರುವ ಗುಣಗಳು. ದೊರೆ, ನಾಡು, ನಾಯಕ, ಧರ್ಮ, ದೇವರು, ಸಿದ್ಧಾಂತ ಇವು ಯಾವಾಗಲೂ ಏಕಮುಖಿ ಬೆಂಬಲವನ್ನು ಬಯಸುತ್ತವೆ. ಒಳವಿಮರ್ಶೆಯನ್ನಲ್ಲ. ಆದರೆ ವಿಮರ್ಶೆ ಮಾಡದೆ ಹೋದರೆ ಅವು ತಮ್ಮ ಶಕ್ತಿಯಾಗಿ ನಮ್ಮ ರಕ್ತದಲ್ಲಿ ಬೆರೆಯುವುದಿಲ್ಲ. ನಮ್ಮನ್ನು ಅವು ಉಪಕರಣದ ಮಟ್ಟಕ್ಕೆ ಇಳಿಸಿಬಿಡುತ್ತವೆ.

Writer - ರಹಮತ್ ತರೀಕೆರೆ

contributor

Editor - ರಹಮತ್ ತರೀಕೆರೆ

contributor

Similar News

ಗಾಂಧೀಜಿ