ದಕ್ಷಿಣ ಏಶ್ಯದಲ್ಲಿ ಶಾಂತಿ ಸ್ಥಾಪನೆಗೆ ಪ್ರತಿಯೊಬ್ಬರ ಬೆಂಬಲ ಅಗತ್ಯ: ಮ್ಯಾಟಿಸ್

Update: 2018-12-04 14:36 GMT

ವಾಶಿಂಗ್ಟನ್, ಡಿ. 4: ದಕ್ಷಿಣ ಏಶ್ಯದಲ್ಲಿ ಶಾಂತಿ ಸ್ಥಾಪಿಸುವ ವಿಶ್ವಸಂಸ್ಥೆ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರ ಪ್ರಯತ್ನಗಳಿಗೆ ಪ್ರತಿಯೊಬ್ಬರೂ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಪಾಕಿಸ್ತಾನಕ್ಕೆ ನೀಡಿದ ಪ್ರಬಲ ಸಂದೇಶವೊಂದರಲ್ಲಿ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ಯುದ್ಧ ಕೊನೆಗೊಳ್ಳಬೇಕಾದರೆ ತಾಲಿಬಾನ್ ಜೊತೆಗೆ ಮಾತುಕತೆ ನಡೆಯಬೇಕು ಹಾಗೂ ಈ ಮಾತುಕತೆ ಏರ್ಪಡುವಲ್ಲಿ ಪಾಕಿಸ್ತಾನ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಅಫ್ಘಾನಿಸ್ತಾನದಲ್ಲಿ ಶಾಂತಿ ಏರ್ಪಡಿಸುವ ನಿಟ್ಟಿನಲ್ಲಿ ಬೆಂಬಲ ಕೋರಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್‌ಗೆ ಬರೆದ ಪತ್ರದ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸುತ್ತಿದ್ದರು.

‘‘ಉಪಖಂಡದಲ್ಲಿ ಶಾಂತಿ ಸ್ಥಾಪನೆಗೆ ಹಾಗೂ ಅಫ್ಘಾನಿಸ್ತಾನದಲ್ಲಿ 40 ವರ್ಷಗಳಿಂದ ನಡೆಯುತ್ತಿರುವ ಯುದ್ಧವನ್ನು ನಿಲ್ಲಿಸಲು ಪ್ರತಿಯೊಂದು ಜವಾಬ್ದಾರಿಯುತ ದೇಶಗಳಿಂದ ನಾವು ಬೆಂಬಲವನ್ನು ನಿರೀಕ್ಷಿಸುತ್ತೇವೆ’’ ಎಂದು ಪೆಂಟಗನ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಈ ಸಂದರ್ಭದಲ್ಲಿ ಅಮೆರಿಕ ಪ್ರವಾಸದಲ್ಲಿರುವ ಭಾರತೀಯ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News