ದಕ್ಷಿಣ ಕೊರಿಯಾ | ಮುವಾನ್ ವಿಮಾನ ಅಪಘಾತದ ನಂತರ ಮತ್ತೊಂದು ಜೆಜು ಏರ್ ವಿಮಾನದಲ್ಲಿ ತಾಂತ್ರಿಕ ತೊಂದರೆ
ಸಿಯೋಲ್: ರವಿವಾರ ಮುವಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ 179 ಮಂದಿ ಪ್ರಯಾಣಿಕರು ಮೃತಪಟ್ಟ ಬೆನ್ನಿಗೇ, ಸೋಮವಾರ ಬೆಳಗ್ಗೆ ದಕ್ಷಿಣ ಕೊರಿಯ ವಿಮಾನಯಾನ ಸಂಸ್ಥೆಯ ಮಿತವ್ಯಯ ಜೆಜು ಏರ್ ವಿಮಾನವು ಟೇಕಾಫ್ ಆಗುವ ವೇಳೆ ಲ್ಯಾಂಡಿಂಗ್ ಗೇರ್ ವಿಫಲಗೊಂಡಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಯಿತು ಎಂದು ವರದಿಯಾಗಿದೆ.
ಸೋಮವಾರ ಬೆಳಗ್ಗೆ ಸಿಯೋಲ್ ನ ಗಿಂಪೊ ವಿಮಾನ ನಿಲ್ದಾಣದಿಂದ ಜೆಜುಗೆ ಪ್ರಯಾಣ ಬೆಳೆಸಿದ್ದ ಜೆಜು ಏರ್ ಪ್ಲೇನ್ ನ ವಿಮಾನ ಸಂಖ್ಯೆ 7ಸಿ101 ಟೇಕಾಫ್ ಆಗುತ್ತಿದ್ದಂತೆಯೆ ತಾಂತ್ರಿಕ ತೊಂದರೆ ಕಾಣಿಸಿಕೊಂಡಿತು. ತಕ್ಷಣವೇ ಗಿಂಪೊ ವಿಮಾನ ನಿಲ್ದಾಣಕ್ಕೆ ಮರಳಿದ ವಿಮಾನವು, ಸುರಕ್ಷಿತವಾಗಿ ಭೂಸ್ಪರ್ಶ ಮಾಡಿತು ಎಂದು Reuters ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಮಾನದಲ್ಲಿ ಕಾಣಿಸಿಕೊಂಡ ನಿರ್ದಿಷ್ಟ ತಾಂತ್ರಿಕ ಸಮಸ್ಯೆ ಬಗ್ಗೆ ಇನ್ನಷ್ಟೆ ತಿಳಿಯಬೇಕಿದೆ.
ರವಿವಾರ 181 ಪ್ರಯಾಣಿಕರನ್ನು ಹೊತ್ತು ಬರುತ್ತಿದ್ದ ಜೆಜು ಏರ್ ಪ್ಲೇನ್ ನ ವಿಮಾನವು ಮುವಾನ್ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಪತನಗೊಂಡು, 179 ಪ್ರಯಾಣಿಕರು ಭೀಕರವಾಗಿ ಮೃತಪಟ್ಟಿದ್ದರು. ದಕ್ಷಿಣ ಕೊರಿಯ ವಿಮಾನ ಯಾನ ಇತಿಹಾಸದಲ್ಲೇ ಇದು ಅತ್ಯಂತ ಭೀಕರ ಘಟನೆ ಎಂದು ಹೇಳಲಾಗಿದೆ. ಈ ದುರಂತದಲ್ಲಿ ಕೇವಲ ಇಬ್ಬರು ಪ್ರಯಾಣಿಕರು ಮಾತ್ರ ಬದುಕುಳಿದಿದ್ದಾರೆ.