ಟ್ರಂಪ್ ನಿವಾಸದ ಪಕ್ಕದಲ್ಲೇ ಎಲಾನ್ ಮಸ್ಕ್ ವಾಸ; ಪ್ರತಿ ದಿನಕ್ಕೆ 1.71 ಲಕ್ಷ ರೂ. ಬಾಡಿಗೆ!
ವಾಷಿಂಗ್ಟನ್ : ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಖ್ಯ ನಿವಾಸದ ಸಮೀಪದಲ್ಲೇ ಇರುವ ಎಸ್ಟೇಟ್ ಮಾರ್-ಎ-ಲಾಗೊ ಕಾಟೇಜ್ ನಲ್ಲಿ ಎಲಾನ್ ಮಸ್ಕ್ ವಾಸಿಸುತ್ತಿದ್ದಾರೆ ಎಂದು ವರದಿಯಾಗಿದೆ.
ಫ್ಲೋರಿಡಾದ ಪಾಮ್ ಬೀಚ್ ನಲ್ಲಿರುವ ಟ್ರಂಪ್ ನಿವಾಸದಿಂದ ಕೆಲವೇ ಮೀಟರ್ ಗಳ ದೂರದಲ್ಲಿ ಇರುವ ಕಾಟೇಜ್ ನಲ್ಲಿ ಮಸ್ಕ್ ವಾಸಿಸುತ್ತಿದ್ದಾರೆ. ಅದಕ್ಕೆ ಮಸ್ಕ್ ಪ್ರತಿ ರಾತ್ರಿಗೆ 1.71 ಲಕ್ಷ ರೂ(2,000 ಡಾಲರ್) ಪಾವತಿ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.
ʼನ್ಯೂಯಾರ್ಕ್ ಟೈಮ್ಸ್ʼ ವರದಿಯು, ಎಲಾನ್ ಮಸ್ಕ್ ಅವರು ಟ್ರಂಪ್ ನಿವಾಸದಿಂದ ಕೆಲವೇ ಮೀಟರ್ ಗಳ ದೂರದಲ್ಲಿ ಇರುವ ʼಬಾನ್ಯಾನ್ʼನಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದೆ. ಮಸ್ಕ್ ಸರಕಾರದ ದಕ್ಷತಾ ಇಲಾಖೆಗೆ ಮುಖ್ಯಸ್ಥರಾಗಿದ್ದು, ಬಾಡಿಗೆ ಮೊತ್ತವನ್ನು ಸರಕಾರವೇ ಪಾವತಿ ಮಾಡಲಿದೆ ಎಂದು ವರದಿಯೊಂದು ತಿಳಿಸಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆಲುವಿಗೆ ಎಲಾನ್ ಮಸ್ಕ್ ಮಹತ್ವದ ಪಾತ್ರ ವಹಿಸಿದ್ದರು. ಇದರಿಂದಾಗಿ ಟೆಸ್ಲಾ ಮಾಲಕ ಎಲಾನ್ ಮಸ್ಕ್ ಅವರನ್ನು ಅಮೆರಿಕ ಸರ್ಕಾರದ ಕಾರ್ಯದಕ್ಷತಾ ಇಲಾಖೆ(ಡಿಒಜಿಇ)ಯ ಮುಖ್ಯಸ್ಥರಾಗಿ ನೇಮಿಸಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ಘೋಷಿಸಿದ್ದರು.