ಗಾಝಾ | ಇಸ್ರೇಲ್ ವೈಮಾನಿಕ ದಾಳಿಯಲ್ಲಿ 12 ಮಂದಿ ಮೃತ್ಯು
ಗಾಝಾ : ಗಾಝಾ ಪಟ್ಟಿಯಲ್ಲಿ ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಕನಿಷ್ಠ 12 ಫೆಲೆಸ್ತೀನೀಯರು ಮೃತಪಟ್ಟಿದ್ದು 12ಕ್ಕೂ ಅಧಿಕ ಮಂದಿ ಗಾಯಗೊಂಡಿರುವುದಾಗಿ ಗಾಝಾದ ಆರೋಗ್ಯ ಇಲಾಖೆ ಬುಧವಾರ ಹೇಳಿದೆ.
ಗಾಝಾದಲ್ಲಿ ಇಸ್ರೇಲ್- ಹಮಾಸ್ ನಡುವೆ ಸುಮಾರು 15 ತಿಂಗಳಿಂದ ನಡೆಯುತ್ತಿರುವ ಯುದ್ಧ ಹೊಸ ವರ್ಷಕ್ಕೂ ಮುಂದುವರಿದಿದ್ದು ಮಂಗಳವಾರ ತಡರಾತ್ರಿ ಉತ್ತರ ಗಾಝಾದ ಜಬಾಲಿಯಾ ಪ್ರದೇಶದಲ್ಲಿನ ಮನೆಯೊಂದರ ಮೇಲೆ ನಡೆದ ದಾಳಿಯಲ್ಲಿ ಒಬ್ಬ ಮಹಿಳೆ, 4 ಮಕ್ಕಳ ಸಹಿತ 7 ಮಂದಿ ಸಾವನ್ನಪ್ಪಿದ್ದು ಕನಿಷ್ಠ 12 ಮಂದಿ ಗಾಯಗೊಂಡಿದ್ದಾರೆ. ಮಧ್ಯ ಗಾಝಾದ ಬುರೆಜಿ ನಿರಾಶ್ರಿತರ ಶಿಬಿರದ ಮೇಲೆ ನಡೆದ ಮತ್ತೊಂದು ದಾಳಿಯಲ್ಲಿ ಮಹಿಳೆ ಹಾಗೂ ಒಂದು ಮಗು ಸಾವನ್ನಪ್ಪಿದೆ. ಬುಧವಾರ ಬೆಳಿಗ್ಗೆ ದಕ್ಷಿಣದ ಖಾನ್ ಯೂನಿಸ್ ನಗರದ ಮೇಲೆ ನಡೆದ ದಾಳಿಯಲ್ಲಿ ಮೂವರು ಮೃತಪಟ್ಟಿರುವುದಾಗಿ ಗಾಝಾದ ಯುರೋಪಿಯನ್ ಆಸ್ಪತ್ರೆಯ ಮೂಲಗಳನ್ನು ಉಲ್ಲೇಖಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಝಾದಲ್ಲಿ 2023ರ ಅಕ್ಟೋಬರ್ 7ರ ಬಳಿಕ ಇಸ್ರೇಲ್ ನ ವೈಮಾನಿಕ ದಾಳಿ ಹಾಗೂ ಭೂ ದಾಳಿಯಲ್ಲಿ ಇದುವರೆಗೆ 45,000ಕ್ಕೂ ಅಧಿಕ ಮಂದಿ ಸಾವನ್ನಪ್ಪಿರುವುದಾಗಿ ಹಮಾಸ್ ಮೂಲಗಳು ಹೇಳಿವೆ.