ಕೀವ್ ಮೇಲೆ ಡ್ರೋನ್‌ಗಳ ಮಳೆಗರೆದ ರಶ್ಯ | ಇಬ್ಬರು ಮೃತ್ಯು, 6 ಮಂದಿಗೆ ಗಾಯ
ಕೀವ್ : ಹೊಸ ವರ್ಷದ ಪ್ರಥಮ ದಿನದ ಪ್ರಥಮ ಗಂಟೆಯಲ್ಲೇ ಉಕ್ರೇನ್ ರಾಜಧಾನಿ ಕೀವ್ ಮೇಲೆ ರಶ್ಯ ನಡೆಸಿದ ಸರಣಿ ಡ್ರೋನ್ ದಾಳಿಯಲ್ಲಿ ಕನಿಷ್ಠ ಇಬ್ಬರು ಸಾವನ್ನಪ್ಪಿದ್ದು 6 ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
ಮಂಗಳವಾರ ತಡರಾತ್ರಿಯಿಂದ ಕೀವ್ ನಗರದ ಮೇಲೆ 111 ಡ್ರೋನ್ ದಾಳಿ ನಡೆಸಿದ್ದು ಹಲವನ್ನು ಉಕ್ರೇನ್ ನ ವಾಯುರಕ್ಷಣಾ ವ್ಯವಸ್ಥೆ ಹೊಡೆದುರುಳಿಸಿದೆ ಎಂದು ಉಕ್ರೇನ್ ನ ವಾಯುಪಡೆ ಹೇಳಿದೆ.
ಮುಂದಿನ 12 ತಿಂಗಳಲ್ಲಿ ಯುದ್ಧವನ್ನು ಅಂತ್ಯಗೊಳಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊದಿಮಿರ್ ಝೆಲೆನ್ಸ್ಕಿ ಹೊಸ ವರ್ಷದ ಸಂದೇಶದಲ್ಲಿ ಘೋಷಿಸಿದ ಕೆಲವೇ ಗಂಟೆಗಳಲ್ಲಿ ರಶ್ಯದ ಡ್ರೋನ್ ದಾಳಿ ನಡೆದಿದೆ. ಅಧ್ಯಕ್ಷರ ಭವನ ಹಾಗೂ ಸರ್ಕಾರಿ ಕಚೇರಿಗಳಿರುವ ರಾಜಧಾನಿ ಕೀವ್ನ ಪೆಚೆಸ್ರ್ಕಿ ಜಿಲ್ಲೆಯನ್ನು ಗುರಿಯಾಗಿಸಿ ದಾಳಿ ನಡೆದಿದ್ದು ಕೆಲವು ಡ್ರೋನ್ಗಳನ್ನು ಹೊಡೆದುರುಳಿಸಲಾಗಿದೆ. ಧ್ವಂಸಗೊಂಡು ನೆಲಕ್ಕೆ ಪತನಗೊಂಡ ಡ್ರೋನ್ ನ ಚೂರುಗಳು ಹಾಗೂ ಅವಶೇಷಗಳಡಿಯಿಂದ 4 ಮಂದಿಯನ್ನು ರಕ್ಷಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಹಲವು ಜನವಸತಿ ಕಟ್ಟಡಗಳಿಗೆ ಹಾಗೂ ಸೆಂಟ್ರಲ್ ಬ್ಯಾಂಕ್ನ ಕಟ್ಟಡಕ್ಕೆ ಹಾನಿಯಾಗಿದೆ. ಉಕ್ರೇನ್ ಪಡೆ ಅಮೆರಿಕ ಒದಗಿಸಿರುವ ಶಸ್ತ್ರಾಸ್ತ್ರಗಳನ್ನು ಬಳಸಿ ರಶ್ಯದ ಪ್ರದೇಶದೊಳಗೆ ದಾಳಿ ನಡೆಸುತ್ತಿರುವುದಕ್ಕೆ ಪ್ರತಿಯಾಗಿ ಕೀವ್ನ ಕೇಂದ್ರ ಭಾಗಕ್ಕೆ ಪ್ರತೀಕಾರ ದಾಳಿ ನಡೆಸುವುದಾಗಿ ಕಳೆದ ವಾರ ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಎಚ್ಚರಿಕೆ ನೀಡಿದ್ದರು.
ರಶ್ಯದ ಸರಣಿ ಡ್ರೋನ್ ದಾಳಿಯನ್ನು ಝೆಲೆನ್ಸ್ಕಿ ಖಂಡಿಸಿದ್ದಾರೆ. `ಹೊಸ ವರ್ಷದ ಆರಂಭದಂದೂ ರಶ್ಯ ದಾಳಿ ನಡೆಸಿದೆ. ಅವರಿಗೆ ಉಕ್ರೇನ್ ಅನ್ನು ನೋಯಿಸುವುದೇ ಕೆಲಸವಾಗಿದೆ' ಎಂದವರು ಟೆಲಿಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.