ಚೀನಾದಲ್ಲಿ ಹೆಚ್ಚಿದ HMPV ಭೀತಿ : ವರದಿ
ಹೊಸದಿಲ್ಲಿ: ಚೀನಾದಲ್ಲಿ ಕೋವಿಡ್ ಸೋಂಕಿನಂತಿರುವ ಹೊಸ ಮಾದರಿಯ ವೈರಾಣು ಹ್ಯೂಮನ್ ಮೆಟಾನ್ಯೂಮೊವೈರಸ್(HMPV) ಭೀತಿ ಹೆಚ್ಚಳವಾಗಿದೆ ಎಂದು ವರದಿಯಾಗಿದೆ. ಆದರೆ, ಇಂತಹ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಹ್ಯೂಮನ್ ಮೆಟಾಪ್ನ್ಯೂಮೋವೈರಸ್(ಎಚ್ಎಂಪಿವಿ) ಎಂಬ ವೈರಸ್ ಚೀನಾದಲ್ಲಿ ಹರಡುತ್ತಿದೆ. ವಿಶೇಷವಾಗಿ ಚೀನಾದ ಉತ್ತರ ಪ್ರಾಂತ್ಯಗಳಲ್ಲಿ 14 ವರ್ಷದೊಳಗಿನವರಲ್ಲಿ HMPV ಹರಡುತ್ತಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಈ ಕುರಿತು ದಿಲ್ಲಿ ವೈದ್ಯಕೀಯ ಮಂಡಳಿಯ ಅಧ್ಯಕ್ಷ ಡಾ ಅರುಣ್ ಗುಪ್ತಾ ಮಾಧ್ಯಮಗಳ ಜೊತೆ ಮಾತನಾಡಿದ್ದು, HMPVಯ ಲಕ್ಷಣಗಳು COVID-19 ಲಕ್ಷಣಗಳನ್ನು ಹೋಲುತ್ತದೆ. ಈ ಕುರಿತು ಭಯಪಡುವ ಅಗತ್ಯವಿಲ್ಲ. COVID-19 ಮತ್ತು HMPV ವೈರಸ್ ಗಳಲ್ಲಿ ಯಾವುದೇ ವ್ಯತ್ಯಾಸಗಳಿಲ್ಲ. ಅವುಗಳನ್ನು ಲ್ಯಾಬ್ ನಲ್ಲಿ ಅಧ್ಯಯನದ ಮೂಲಕ ಮಾತ್ರ ಪ್ರತ್ಯೇಕಿಸಬಹುದು ಎಂದು ಹೇಳಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಧೀನದ ಆರೋಗ್ಯ ಸೇವೆಗಳ ಇಲಾಖೆಯ ಮಹಾನಿರ್ದೇಶಕರಾದ ಡಾ.ಅತುಲ್ ಗೋಯಲ್ ಈ ಕುರಿತು ಪ್ರತಿಕ್ರಿಯಿಸಿದ್ದು, ಭಾರತದಲ್ಲಿ ಮಾನವ ಮೆಟಾಪ್ನ್ಯೂಮೋವೈರಸ್(HMPV) ಪ್ರಕರಣಗಳು ಪತ್ತೆಯಾಗಿಲ್ಲ. ಚೀನಾದಲ್ಲಿ ಉಸಿರಾಟದ ಕಾಯಿಲೆಗಳು ಏರಿಕೆಯಾಗುತ್ತಿದೆ. ಚೀನಾ HMPVಯನ್ನು ಸಾಂಕ್ರಾಮಿಕ ರೋಗವೆಂದು ಉಲ್ಲೇಖಿಸದಿದ್ದರೂ, ಡಿಸೆಂಬರ್ 2024ರಲ್ಲಿ ಅಜ್ಞಾತ ವೈರಸ್ ನ್ನು ನಿಯಂತ್ರಿಸಲು ಪ್ರೋಟೋಕಾಲ್ ನ್ನು ಜಾರಿಗೆ ತರುವುದಾಗಿ ಹೇಳಿತ್ತು ಎಂದು ಹೇಳಿದ್ದಾರೆ.
HMPV ಪ್ರಕರಣಗಳು ವರದಿಯಾಗಿರುವುದು ಇದೇ ಮೊದಲಲ್ಲ. 2011-12ರಲ್ಲಿ ಅಮೆರಿಕ, ಕೆನಡಾ ಮತ್ತು ಯುರೋಪ್ ನಲ್ಲಿ ಹಲವಾರು HMPV ಪ್ರಕರಣಗಳು ಪತ್ತೆಯಾಗಿದ್ದವು.