ಅಮೆರಿಕ | ಶಾಪಿಂಗ್ ಸೆಂಟರ್ ನಲ್ಲಿ ಬೆಂಕಿ ದುರಂತ
ನ್ಯೂಯಾರ್ಕ್: ಅಮೆರಿಕದ ದಲ್ಲಾಸ್ ನಗರದ ಶಾಪಿಂಗ್ ಸೆಂಟರ್‍ನಲ್ಲಿ ಶುಕ್ರವಾರ ಭೀಕರ ಅಗ್ನಿದುರಂತ ಸಂಭವಿಸಿದ್ದು ಸಾಕುಪ್ರಾಣಿಗಳ ಅಂಗಡಿಯಲ್ಲಿದ್ದ 579 ಪ್ರಾಣಿಗಳು ಹೊಗೆಯಿಂದ ಉಸಿರುಕಟ್ಟಿ ಸಾವನ್ನಪ್ಪಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ವಾಯವ್ಯ ದಲ್ಲಾಸ್‍ನ ಪ್ಲಾಝಾ ಲ್ಯಾಟಿನಾ ಶಾಪಿಂಗ್ ಸೆಂಟರ್‍ನಲ್ಲಿ ಕಾಣಿಸಿಕೊಂಡ ಬೆಂಕಿಯ ಜ್ವಾಲೆ ಸಾಕುಪ್ರಾಣಿಗಳ ಅಂಗಡಿಗೆ ಹಬ್ಬಿಲ್ಲ. ಆದರೆ ತೀವ್ರ ಹೊಗೆಯಿಂದ ಉಸಿರು ಕಟ್ಟಿ ಸಣ್ಣ ಹಕ್ಕಿಗಳು, ಕೋಳಿಗಳು, ಹ್ಯಾಮ್‍ಸ್ಟರ್(ಇಲಿಯ ನ್ನು ಹೋಲುವ ದಂಶಕಗಳು), ಎರಡು ನಾಯಿಗಳು ಹಾಗೂ ಎರಡು ಬೆಕ್ಕುಗಳು ಸೇರಿದಂತೆ 579 ಪ್ರಾಣಿಗಳು ಸಾವನ್ನಪ್ಪಿವೆ. ಅಗ್ನಿಶಾಮಕ ದಳದ 45 ಸಿಬ್ಬಂದಿ ಸುಮಾರು 2 ಗಂಟೆಯ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಿಸಿದ್ದಾರೆ ಎಂದು ದಲ್ಲಾಸ್‍ನ ಅಗ್ನಿಶಾಮಕ ದಳದ ವಕ್ತಾರ ಜೇಸನ್ ಇವಾನ್ಸ್ ಹೇಳಿದ್ದಾರೆ.
ಅಗ್ನಿದುರಂತದಲ್ಲಿ ಯಾವುದೇ ವ್ಯಕ್ತಿಗಳು ಗಾಯಗೊಂಡಿಲ್ಲ. ಆದರೆ ಶಾಪಿಂಗ್ ಸೆಂಟರ್‍ನ ಕಟ್ಟಡಕ್ಕೆ ತೀವ್ರ ಹಾನಿಯಾಗಿದ್ದು ಒಂದು ಭಾಗದ ಛಾವಣಿ ಕುಸಿದು ಬಿದ್ದಿದೆ. ಅಗ್ನಿದುರಂತಕ್ಕೆ ಕಾರಣದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.