ಎಚ್ಎಂಪಿವಿ ಆತಂಕ | ಚೀನಾದ ಆಸ್ಪತ್ರೆಗಳಲ್ಲಿ ನೂಕು ನುಗ್ಗಲು
ಬೀಜಿಂಗ್: ಎಚ್ಎಂಪಿವಿ (ಹ್ಯೂಮನ್ ಮೆಟಾನ್ಯುವೊವೈರಸ್) ಸೋಂಕು ಚೀನದಾದ್ಯಂತ ಕ್ಷಿಪ್ರಗತಿಯಲ್ಲಿ ಹರಡುತ್ತಿದ್ದು ಆತಂಕ, ಕಳವಳಕ್ಕೆ ಕಾರಣವಾಗಿದೆ. ಆಸ್ಪತ್ರೆಗಳು ಮಾಸ್ಕ್ ಧರಿಸಿರುವ ವ್ಯಕ್ತಿಗಳಿಂದ ಕಿಕ್ಕಿರಿದು ತುಂಬಿರುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮಗಳು ಪ್ರಸಾರ ಮಾಡಿವೆ.
ಉಸಿರಾಟದ ಕಾಯಿಲೆಯಾಗಿರುವ ಎಚ್ಎಂಪಿವಿ ಉಲ್ಬಣಿಸಿರುವ ನಡುವೆಯೇ ರೋಗಿಗಳು ಆಸ್ಪತ್ರೆಯಲ್ಲಿ ಕೆಮ್ಮುತ್ತಿರುವ ವೀಡಿಯೊಗಳು ವೈರಲ್ ಆಗಿದ್ದು ಆಸ್ಪತ್ರೆಗಳಲ್ಲಿ ರೋಗಿಗಳು ಸರತಿ ಸಾಲಿನಲ್ಲಿ ನಿಂತು ಕಾಯಬೇಕಿದೆ.
ಚೀನಾದಲ್ಲಿ, ವಿಶೇಷವಾಗಿ ಉತ್ತರ ಪ್ರಾಂತಗಳಲ್ಲಿ 14 ವರ್ಷದೊಳಗಿನ ಮಕ್ಕಳಲ್ಲಿ ಎಚ್ಎಂಪಿವಿ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬಂದಿರುವುದಾಗಿ ಅಧಿಕಾರಿಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಕೆಲವು ಉಸಿರಾಟದ ಕಾಯಿಲೆ ಪ್ರಕರಣಗಳು ಚಳಿಗಾಲದಲ್ಲಿ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಚೀನಾದ ಆರೋಗ್ಯ ಇಲಾಖೆ ಹೇಳಿದೆ. `ಅಜ್ಞಾತ ಮೂಲದ' ನ್ಯುಮೋನಿಯಾ ಸೋಂಕು ಪ್ರಕರಣದ ಮೇಲ್ವಿಚಾರಣಾ ವ್ಯವಸ್ಥೆಯನ್ನು ಪರೀಕ್ಷಿಸಲಾಗುತ್ತಿದೆ. ಡಿಸೆಂಬರ್ 16ರಿಂದ 22ರವರೆಗಿನ ವಾರದಲ್ಲಿ ತೀವ್ರವಾದ ಉಸಿರಾಟದ ಅಸ್ವಸ್ಥತೆಗಳ ಅಂಕಿಅಂಶದಲ್ಲಿ ಭಾರೀ ಹೆಚ್ಚಳ ದಾಖಲಾಗಿದೆ ಎಂದು ಡಿಸೆಂಬರ್ 27ರಂದು ಚೀನಾದ ರೋಗ ನಿಯಂತ್ರಣ ಪ್ರಾಧಿಕಾರ ಘೋಷಿಸಿತ್ತು.
ಚೀನಾದಲ್ಲಿ ಉಲ್ಬಣಗೊಂಡಿರುವ ಎಚ್ಎಂಪಿವಿ ಸೋಂಕಿನ ಹರಡುವಿಕೆಯ ವೇಗ , ಪ್ರಸರಣದ ವಿಧಾನ ಮತ್ತು ಮುಖ್ಯವಾಗಿ ವೈರಸ್ ಸೋಂಕಿತ ವ್ಯಕ್ತಿಗಳಲ್ಲಿ ಕಂಡುಬರುವ ರೋಗಲಕ್ಷಣ ವಿಶ್ವದಾದ್ಯಂತ ಕಳವಳಕ್ಕೆ ಕಾರಣವಾಗಿದೆ. ಜಗತ್ತಿನಾದ್ಯಂತ 7 ದಶಲಕ್ಷಕ್ಕೂ ಅಧಿಕ ಜನರ ಸಾವಿಗೆ ಕಾರಣವಾದ ಮಾರಣಾಂತಿಕ ಕೋವಿಡ್-19 ಸೋಂಕಿನ ಬಳಿಕ ಚೀನಾದಲ್ಲಿ ಉಲ್ಬಣಗೊಂಡಿರುವ ಎಚ್ಎಂಪಿವಿ ಸೋಂಕನ್ನು ಜಗತ್ತು ಆತಂಕದಿಂದ ಗಮನಿಸುತ್ತಿದೆ. ಗುರುತಿಸಲಾಗದ ಸೋಂಕುಗಳನ್ನು ಪರಿಹರಿಸಲು ಸರಕಾರ ಸ್ಕ್ರೀನಿಂಗ್, ಗುರುತಿಸುವಿಕೆ ಮತ್ತು ಪ್ರತ್ಯೇಕವಾಗಿರಿಸುವ(ಐಸೊಲೇಷನ್) ಕಾರ್ಯವಿಧಾನಗಳನ್ನು ಹೆಚ್ಚಿಸಿರುವುದರಿಂದ ಎಚ್ಎಂಪಿವಿ ಸೋಂಕು ಪ್ರಕರಣಗಳನ್ನು ಚೀನಾದಲ್ಲಿ ರಾಷ್ಟ್ರವ್ಯಾಪಿ ದಾಖಲಿಸಲಾಗಿದೆ.
2020ರ ಕೋವಿಡ್ ಸೋಂಕಿನ ಉಲ್ಬಣದಂತೆ ಎಚ್ಎಂಪಿವಿ ಮತ್ತು ಫ್ಲೂ ಜ್ವರದ ಏಕಾಏಕಿ ಉಲ್ಬಣದ ಹಿನ್ನೆಲೆಯಲ್ಲಿ ಚೀನಾದ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಚೀನಾದಲ್ಲಿ ಚಳಿಗಾಲ ಮತ್ತು ವಸಂತ ಕಾಲದಲ್ಲಿ ಹಲವಾರು ಉಸಿರಾಟದ ಕಾಯಿಲೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ. ಆದರೆ ಕಳೆದ ವರ್ಷಕ್ಕಿಂತ ಈ ವರ್ಷ ಸೋಂಕಿನ ಪ್ರಮಾಣ ಕಡಿಮೆ ಇರುವ ನಿರೀಕ್ಷೆಯಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿ ಕಾನ್ ಬಿಯಾವೊ ಸುದ್ದಿಗೋಷ್ಟಿಯಲ್ಲಿ ಹೇಳಿದ್ದಾರೆ.
►ಎಚ್ಎಂಪಿವಿ ವೈರಸ್
2001ರಲ್ಲಿ ಪತ್ತೆಹಚ್ಚಲಾದ ಎಚ್ಎಂಪಿವಿ ಸಾಮಾನ್ಯ ಉಸಿರಾಟದ ವೈರಸ್ ಆಗಿದ್ದು ಅದು ಮೇಲ್ಭಾಗ ಮತ್ತು ಕೆಳಗಿನ ಉಸಿರಾಟದ ಕಾಯಿಲೆಗಳನ್ನು ಉಂಟು ಮಾಡುತ್ತದೆ. ಶೀತ, ಸಣ್ಣಮಟ್ಟದ ಉಸಿರಾಟದ ಸಮಸ್ಯೆ, ಜ್ವರದ ಲಕ್ಷಣಗಳು ಕಂಡು ಬರುತ್ತವೆ ಮತ್ತು ಇತರ ವೈರಸ್ಗಳಂತೆ ಜನರಿಂದ ಜನರಿಗೆ ಹರಡುತ್ತದೆ. ಜ್ವರ, ಕೆಮ್ಮು, ಉಸಿರಾಟದ ತೊಂದರೆ, ಆಯಾಸ ಕಂಡುಬರುತ್ತದೆ. ವಯೋ ವೃದ್ಧರು ಮತ್ತು 1 ವರ್ಷಕ್ಕಿಂತ ಸಣ್ಣಮಕ್ಕಳಲ್ಲಿ ಹೆಚ್ಚು ಕಂಡುಬರುವ ಸಾಧ್ಯತೆಯಿದ್ದು ವೈರಸ್ಗೆ ನಿರ್ದಿಷ್ಟ ಔಷಧ ಇಲ್ಲದ ಕಾರಣ ಮುನ್ನೆಚ್ಚರಿಕೆ ಮತ್ತು ನಿಯಂತ್ರಣ ವಹಿಸುವ ಅಗತ್ಯವಿದೆ ಎಂದು ಆರೋಗ್ಯಾಧಿಕಾರಿಗಳು ಹೇಳಿದ್ದಾರೆ.