ಕೆನ್ಯಾ: ಆಕಾಶದಿಂದ ಬಿದ್ದ 500 ಕಿ.ಗ್ರಾಂ. ತೂಕದ ನಿಗೂಢ ವಸ್ತು!
Update: 2025-01-04 17:00 GMT
ನೈರೋಬಿ: ಕೆನ್ಯಾದ ಮುಕುಕು ಗ್ರಾಮದಲ್ಲಿ ಸುಮಾರು 500 ಕಿ.ಗ್ರಾಂ ತೂಕದ `ಕೆಂಪಗಿನ ಮತ್ತು ಬಿಸಿಯಾದ' ನಿಗೂಢ ವಸ್ತುವೊಂದು ಆಕಾಶದಿಂದ ಬಿದ್ದಿರುವುದಾಗಿ ವರದಿಯಾಗಿದೆ.
ಬೃಹತ್ ಲೋಹದ ಉಂಗುರ ಆಕಾಶದಿಂದ ಬಿದ್ದಿದ್ದು ಇದು ಬಾಹ್ಯಾಕಾಶದ ಅವಶೇಷಗಳಾಗಿರಬಹುದು. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಕೆನ್ಯಾದ ಬಾಹ್ಯಾಕಾಶ ಏಜೆನ್ಸಿ ಹೇಳಿದೆ.
3.5 ಮೀಟರ್ ಅಗಲದ ಮತ್ತು ಸುಮಾರು 500 ಕಿ.ಗ್ರಾಂ ತೂಕದ ಲೋಹದ ಉಂಗುರ ಬಿದ್ದಿರುವ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದ್ದರು. ಮೇಲ್ನೋಟಕ್ಕೆ ಇದು ಬಾಹ್ಯಾಕಾಶ ಯೋಜನೆಯ ಅವಶೇಷದಂತೆ ಕಾಣುತ್ತದೆ. ಬಾಹ್ಯಾಕಾಶ ನೌಕೆಯನ್ನು ಹೊತ್ತೊಯ್ಯುವ ರಾಕೆಟ್‍ನ ಭಾಗ ಇದಾಗಿರಬಹುದು. ಅಧಿಕಾರಿಗಳು ಸ್ಥಳಕ್ಕೆ ಬರುವಾಗಲೂ ಈ ವಸ್ತು ಬಿಸಿಯಾಗಿಯೇ ಇತ್ತು. ರಾಕೆಟ್‍ನ ಅವಶೇಷಗಳು ಭೂಮಿಯ ವಾತಾವರಣವನ್ನು ಮರುಪ್ರವೇಶಿಸಿದಾಗ ಅಥವಾ ಸಾಗರಗಳ ಮೇಲೆ ಬೀಳುವ ಸಮಯದಲ್ಲಿ ಸುಟ್ಟುಹೋಗುತ್ತವೆ ಎಂದು ಅಧಿಕಾರಿಗಳು ಹೇಳಿದ್ದಾರೆ.