ಗಾಝಾ | ಇಸ್ರೇಲ್ ದಾಳಿಯಲ್ಲಿ ಕನಿಷ್ಠ 19 ಮಂದಿ ಮೃತ್ಯು
ಗಾಝಾ: ಫೆಲಸ್ತೀನಿಯನ್ ಪ್ರದೇಶದಾದ್ಯಂತ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 8 ಮಕ್ಕಳ ಸಹಿತ ಕನಿಷ್ಠ 19 ಮಂದಿ ಮೃತಪಟ್ಟಿರುವುದಾಗಿ ನಾಗರಿಕ ರಕ್ಷಣಾ ಸಂಸ್ಥೆಯ ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಗಾಝಾ ನಗರದಲ್ಲಿ ಸ್ಥಳಾಂತರಗೊಂಡವರು ಆಶ್ರಯ ಪಡೆದಿದ್ದ ಮನೆಯೊಂದರ ಮೇಲೆ ಶನಿವಾರ ಬೆಳಿಗ್ಗೆ ನಡೆದ ವೈಮಾನಿಕ ದಾಳಿಯಲ್ಲಿ 7 ಮಕ್ಕಳ ಸಹಿತ 11 ಮಂದಿ ಸಾವನ್ನಪ್ಪಿದ್ದಾರೆ. ಎರಡು ಅಂತಸ್ತಿನ ಮನೆ ಸಂಪೂರ್ಣ ಧ್ವಂಸಗೊಂಡಿದ್ದು ಮನೆಯ ಅವಶೇಷಗಳಡಿ ಹಲವರು ಸಿಲುಕಿಕೊಂಡಿದ್ದಾರೆ. ಇದೇ ಪ್ರದೇಶದಲ್ಲಿದ್ದ ಆಂಬ್ಯುಲೆನ್ಸ್ ಮೇಲೆಯೂ ಇಸ್ರೇಲ್‍ನಿಂದ ಡ್ರೋನ್ ದಾಳಿ ನಡೆದಿದೆ. ದಕ್ಷಿಣದ ಖಾನ್ ಯೂನಿಸ್ ನಗರದಲ್ಲಿ ನೆರವು ಸಾಗಿಸುವ ಟ್ರಕ್‍ಗಳಿಗೆ ಬೆಂಗಾವಲಾಗಿದ್ದ ಕಾರೊಂದರ ಮೇಲೆ ನಡೆದ ದಾಳಿಯಲ್ಲಿ ಐದು ಭದ್ರತಾ ಅಧಿಕಾರಿಗಳು ಸಾವನ್ನಪ್ಪಿದ್ದಾರೆ. ನೆರವು ವಿತರಣೆಗೆ ಅಡ್ಡಿಪಡಿಸಲು ಉದ್ದೇಶಪೂರ್ವಕವಾಗಿ ಈ ದಾಳಿ ನಡೆಸಲಾಗಿದೆ ಎಂದು ನಾಗರಿಕ ರಕ್ಷಣಾ ಏಜೆನ್ಸಿಯ ವಕ್ತಾರ ಮಹ್ಮೂದ್ ಬಸಾಲ್ ಆರೋಪಿಸಿದ್ದಾರೆ. ಖಾನ್ ಯೂನಿಸ್ ನಗರದ ಮನೆಯೊಂದರ ಮೇಲೆ ನಡೆದ ಬಾಂಬ್ ದಾಳಿಯಲ್ಲಿ ಮಗು ಸೇರಿದಂತೆ ಮೂವರು ಮೃತಪಟ್ಟಿದ್ದು ಕೆಲವರು ಗಾಯಗೊಂಡಿರುವುದಾಗಿ ವರದಿಯಾಗಿದೆ.