ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ, ಜಪಾನ್‍ನ ಮಹಿಳೆ ನಿಧನ
ಟೋಕಿಯೊ: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ದಾಖಲೆ ಬರೆದಿದ್ದ ಜಪಾನ್‍ನ ಮಹಿಳೆ ಟೊಮಿಕೊ ಇಟೂಕಾ 116ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ.
ಹ್ಯೋಗೊ ಪ್ರಾಂತದ ಅಶಿಯಾ ನಗರದಲ್ಲಿ ನೆಲೆಸಿದ್ದ ಇಟೂಕಾ ಆಸ್ಪತ್ರೆಯಲ್ಲಿ ಡಿಸೆಂಬರ್ 29ರಂದು ಸಾವನ್ನಪ್ಪಿದ್ದಾರೆ ಎಂದು ನಗರದ ಮೇಯರ್ ಹೇಳಿದ್ದಾರೆ. ಸ್ಪೇನ್‍ನ ಮರಿಯಾ ಬ್ರನ್ಯಾಸ್ 2024ರ ಆಗಸ್ಟ್ ನಲ್ಲಿ 117ನೇ ವಯಸ್ಸಿನಲ್ಲಿ ಮೃತಪಟ್ಟ ಬಳಿಕ ವಿಶ್ವದ ಅತೀ ಹಿರಿಯ ವ್ಯಕ್ತಿ ಎಂದು ಹೆಸರು ಪಡೆದಿದ್ದ ಇಟೂಕಾ 4 ಮಕ್ಕಳು ಹಾಗೂ ಐವರು ಮೊಮ್ಮಕ್ಕಳನ್ನು ಅಗಲಿದ್ದಾರೆ.
ಜಪಾನ್‍ನಲ್ಲಿ ಸಾಮಾನ್ಯವಾಗಿ ಮಹಿಳೆಯರು ದೀರ್ಘಾಯುಷ್ಯವನ್ನು ಹೊಂದಿರುತ್ತಾರೆ. ಆದರೆ ವೃದ್ಧ ಜನಸಂಖ್ಯೆಯು ಹೆಚ್ಚುತ್ತಿರುವುದರಿಂದ ವೈದ್ಯಕೀಯ ಮತ್ತು ಕಲ್ಯಾಣ ವೆಚ್ಚ ಏರುತ್ತಿದ್ದು ಹದಗೆಡುತ್ತಿರುವ ಜನಸಂಖ್ಯಾ ಬಿಕ್ಕಟ್ಟನ್ನು ದೇಶ ಎದುರಿಸುತ್ತಿದೆ. 2024ರ ಸೆಪ್ಟಂಬರ್ ವರೆಗಿನ ಅಂಕಿಅಂಶದ ಪ್ರಕಾರ ಜಪಾನ್‍ನಲ್ಲಿ 100 ಅಥವಾ ಅದಕ್ಕೂ ಹೆಚ್ಚು ವಯಸ್ಸಿನ 95,000ಕ್ಕೂ ಅಧಿಕ ಜನರಿದ್ದು ಇವರಲ್ಲಿ 88%ದಷ್ಟು ಮಹಿಳೆಯರು ಎಂದು ತಿಳಿದುಬಂದಿದೆ.