ಮ್ಯಾನ್ಮಾರ್ | 6 ಸಾವಿರ ಕೈದಿಗಳಿಗೆ ಕ್ಷಮಾದಾನಕ್ಕೆ ನಿರ್ಧಾರ
ಯಾಂಗಾನ್ : ದೇಶದ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ವಾರ್ಷಿಕ ಕ್ಷಮಾದಾನದ ಕ್ರಮವಾಗಿ ಸುಮಾರು 6000 ಕೈದಿಗಳಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸಲಾಗುವುದು ಎಂದು ಮ್ಯಾನ್ಮಾರ್ ಸೇನಾಡಳಿತ ಶನಿವಾರ ಘೋಷಿಸಿದೆ.
2021ರಲ್ಲಿ ಪ್ರಜಾಸತ್ತಾತ್ಮಕ ಆಡಳಿತವನ್ನು ಕ್ಷಿಪ್ರದಂಗೆಯಲ್ಲಿ ಪದಚ್ಯುತಿಗೊಳಿಸಿ ಅಧಿಕಾರ ವಶಪಡಿಸಿಕೊಂಡಿದ್ದ ಸೇನಾಡಳಿತ ಸಾವಿರಾರು ಪ್ರತಿಭಟನಾಕಾರರು ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರನ್ನು ಬಂಧಿಸಿದೆ.
ಜನವರಿ 4ರಂದು (ಶನಿವಾರ) ನಡೆದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಸೇನಾಡಳಿತ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್ ನೀಡಿದ ಸಂದೇಶವನ್ನು ಸೇನೆಯ ಉಪ ಮುಖ್ಯಸ್ಥರು ಓದಿ ಹೇಳಿದರು.
`ಮಾನವೀಯ ಮತ್ತು ಸಹಾನುಭೂತಿಯ ಆಧಾರದಲ್ಲಿ 180 ವಿದೇಶೀಯರು ಒಳಗೊಂಡಂತೆ 5,800ಕ್ಕೂ ಅಧಿಕ ಕೈದಿಗಳನ್ನು ಬಿಡುಗಡೆಗೊಳಿಸಲಾಗುವುದು. ಮರಣದಂಡನೆಗೆ ಗುರಿಯಾದ 144 ಕೈದಿಗಳ ಶಿಕ್ಷೆಯನ್ನು 15 ವರ್ಷ ಜೈಲು ಶಿಕ್ಷೆಗೆ ಇಳಿಸಲಾಗುವುದು ಎಂದು ಆಂಗ್ ಹ್ಲೈಂಗ್ ಘೋಷಿಸಿದ್ದಾರೆ. ಶಸ್ತ್ರಾಸ್ತ್ರಗಳನ್ನು ಕೆಳಗಿಳಿಸಿ ಶಾಂತಿಯುತ ವಿಧಾನಗಳ ಮೂಲಕ ರಾಜಕೀಯ ಸಮಸ್ಯೆಗಳನ್ನು ಪರಿಹರಿಸುವಂತೆ ಜನಾಂಗೀಯ ಅಲ್ಪಸಂಖ್ಯಾತ ಗುಂಪುಗಳಿಗೆ ಸೇನಾಡಳಿತ ಕರೆ ನೀಡಿದೆ.