ದಕ್ಷಿಣ ಕೊರಿಯಾ ಅಧ್ಯಕ್ಷರ ಬಂಧನಕ್ಕೆ ತನಿಖಾಧಿಕಾರಿಗಳು ದೌಡು
ಸಿಯೋಲ್: ವಾಗ್ದಂಡನೆಗೆ ಗುರಿಯಾಗಿರುವ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ಬಂಧಿಸಲು ದಕ್ಷಿಣ ಕೊರಿಯಾ ತನಿಖಾಧಿಕಾರಿಗಳು ಶುಕ್ರವಾರ ಮುಂಜಾನೆ ಸಿಯೋಲ್ ಗೆ ಧಾವಿಸಿದ್ದು, ಅಧ್ಯಕ್ಷರ ನಿವಾಸದ ಮುಂದೆ ಸೇರಿದ್ದ ನೂರಾರು ಮಂದಿ ಬೆಂಬಲಿಗರು ಬಂಧನ ಪ್ರಯತ್ನಕ್ಕೆ ತಡೆಯೊಡ್ಡಿದ್ದಾರೆ.
ಬಿಗಿ ಭದ್ರತೆಯ ನಡುವೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಆರೋಪಗಳಿಗೆ ಸಂಬಂಧಿಸಿದಂತೆ ಅಧ್ಯಕ್ಷರ ಉದ್ಧಟತನದ ನಿಲುವು ಸಾರ್ವಜನಿಕ ಮತ್ತು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.
ಅಧ್ಯಕ್ಷ ಯೂನ್ ಅವರು ವಿಚಾರಣೆಗಾಗಿ ನೀಡಿದ್ದ ಹಲವು ಸಮನ್ಸ್ ಗಳಿಂದ ತಪ್ಪಿಸಿಕೊಂಡ ಬಳಿಕ ಉನ್ನತಾಧಿಕಾರಿಗಳ ಭ್ರಷ್ಟಾಚಾರ ತನಿಖಾ ಕಚೇರಿ, ಅಧ್ಯಕ್ಷರ ವಿರುದ್ಧದ ಬಂಧನ ವಾರೆಂಟ್ ಜಾರಿಗೊಳಿಸಲು ತನಿಖಾಧಿಕಾರಿಗಳನ್ನು ಕಳುಹಿಸಿಕೊಟ್ಟಿದೆ. ತನಿಖಾಧಿಕಾರಿಗಳು ಕಚೇರಿ ಪ್ರವೇಶಿಸದಂತೆ ತಡೆಯಲಾಗಿದೆ. ಡಿಸೆಂಬರ್ 3ರಂದು ಯೂನ್ ಅವರು ಅಲ್ಪಾವಧಿಗೆ ಮಿಲಿಟರಿ ಕಾನೂನು ಘೋಷಣೆ ಮಾಡಿರುವುದನ್ನು ದಂಗೆ ಎಂದು ಪರಿಗಣಿಸಬೇಕೇ ಎಂಬ ಬಗ್ಗೆ ತನಿಖಾಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಅಧ್ಯಕ್ಷರನ್ನು ಬಂಧಿಸಿದಲ್ಲಿ, ಬಂಧನಕ್ಕೆ ಒಳಗಾದ ದೇಶದ ಮೊಟ್ಟಮೊದಲ ಅಧ್ಯಕ್ಷ ಎಂಬ ಕುಖ್ಯಾತಿಗೆ ಯೂನ್ ಪಾತ್ರರಾಗಲಿದ್ದಾರೆ.
ತನಿಖಾಧಿಕಾರಿಗಳ ವಾಹನ ಯೂನ್ ನಿವಾಸದ ಎದುರು ಪೊಲೀಸರು ಅಳವಡಿಸಿರುವ ಬ್ಯಾರಿಕೇಡ್ ಗಳತ್ತ ಮುನ್ನುಗ್ಗುತ್ತಿರುವ ದೃಶ್ಯಾವಳಿಗಳು ಟೆಲಿವಿಷನ್ ನಲ್ಲಿ ಪ್ರಸಾರವಾಗಿವೆ. ಸಿಯೋಲ್ ಕೋರ್ಟ್ ಅಧ್ಯಕ್ಷರ ವಿರುದ್ಧ ಬಂಧನ ವಾರೆಂಟ್ ಹೊರಡಿಸಿದ್ದು, ಅಧ್ಯಕ್ಷರನ್ನು ಅಧಿಕೃತವಾಗಿ ಬಂಧಿಸಬೇಕೇ ಅಥವಾ ಬಿಡುಗಡೆ ಮಾಡಬೇಕೇ ಎಂದು ನಿರ್ಧರಿಸುವ ಮುನ್ನ 48 ಗಂಟೆಗಳ ವಿಚಾರಣೆಗೆ ಅವಕಾಶ ನೀಡಿದೆ.