ಫೆಲೆಸ್ತೀನ್ ಪ್ರದೇಶದಲ್ಲಿ ಅಲ್ ಜಝೀರಾ ಸುದ್ದಿವಾಹಿನಿ ಪ್ರಸಾರಕ್ಕೆ ತಡೆ : ಫೆಲೆಸ್ತೀನ್ ಪ್ರಾಧಿಕಾರ ಆದೇಶ
ಹೊಸದಿಲ್ಲಿ: ಫೆಲೆಸ್ತೀನ್ ಪ್ರದೇಶಗಳಲ್ಲಿ ಖತರ್ ಮೂಲದ ಅಲ್ ಜಝೀರಾ ಸುದ್ದಿವಾಹಿನಿಯ ಪ್ರಸಾರವನ್ನು ಅಮಾನತುಗೊಳಿಸಿ ಫೆಲೆಸ್ತೀನ್ ಪ್ರಾಧಿಕಾರ ಗುರುವಾರ ಆದೇಶ ಹೊರಡಿಸಿದೆ.
ಅಲ್ ಜಝೀರಾ ಪ್ರಸಾರ ಮಾಡುವ ವಿಷಯಗಳು ಪ್ರಚೋದನಕಾರಿಯಾಗಿವೆೆ ಎಂದು ಹೇಳಿದೆ. ತಪ್ಪು ಮಾಹಿತಿ, ಪ್ರಚೋದಿಸುವಿಕೆ ಹಾಗೂ ದೇಶದ್ರೋಹವನ್ನು ಎಸಗಿದ್ದಕ್ಕಾಗಿ ಮತ್ತು ಫೆಲೆಸ್ತೀನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪಗಳನ್ನು ನಡೆಸಿದ್ದಕ್ಕಾಗಿ ಅಲ್ ಜಝೀರಾ ಸುದ್ದಿವಾಹಿನಿಯ ಪ್ರಸಾರವನ್ನು ಅಮಾನತಿನಲ್ಲಿರಿಸಲಾಗಿದೆಯೆಂದು ಫೆಲೆಸ್ತೀನ್ ನ ಅಧಿಕೃತ ಸುದ್ದಿಸಂಸ್ಥೆ ವಾಫಾ ಬುಧವಾರ ಸಂಜೆ ವರದಿ ಮಾಡಿದೆ.
ರಮಲ್ಲಾದಲ್ಲಿರುವ ಅಲ್ ಜಝೀರಾ ಉದ್ಯೋಗಿಯೊಬ್ಬರು ಕೂಡಾ ಫೆಲೆಸ್ತೀನ್ ಪ್ರಾಧಿಕಾರವು ಸುದ್ದಿವಾಹಿನಿಯ ಪ್ರಸಾರವನ್ನು ಅಮಾನತುಗೊಳಿಸಿರುವುದನ್ನು ದೃಢಪಡಿಸಿದ್ದಾರೆ ಎಂದು ವಾಫಾ ವರದಿ ತಿಳಿಸಿದೆ.
ಫೆಲೆಸ್ತೀನ್ ಆಡಳಿತದ ನಿರ್ಧಾರವು ಎಲ್ಲಾ ಪತ್ರಕರ್ತರು, ಉದ್ಯೋಗಿಗಳು, ಸಿಬ್ಬಂದಿ ಹಾಗೂ ಅದರ ಸಹ ವಾಹಿನಿಗಳ ಕಾನೂನಾತ್ಮಕ ಸ್ಥಾನಮಾನವನ್ನು ಮುಂದಿನ ಆದೇಶದವರೆಗೆ ಅಮಾನತಿನಲ್ಲಿರಿಸಲಾಗಿದೆಯೆಂದು ವಾಫಾದ ಹೇಳಿಕೆ ತಿಳಿಸಿದೆ.
ಫೆಲೆಸ್ತೀನ್ ಪ್ರಾಧಿಕಾರದ ನಿರ್ಧಾರವನ್ನು ಅಲ್‌ಜಝೀರಾ ಖಂಡಿಸಿದೆ. ಮಾಧ್ಯಮಗಳನ್ನು ಗುರಿಯಿರಿಸಲು ಇಸ್ರೇಲಿ ಅತಿಕ್ರಮಣಕಾರರ ಜೊತೆ ಫೆಲೆಸ್ತೀನ್ ಆಡಳಿತವು ಕೈಜೋಡಿಸಿದೆಯೆಂದು ಅದು ಆಪಾದಿಸಿದೆ.
ಪಶ್ಚಿಮದಂಡೆಯಲ್ಲಿ ಆಡಳಿತಾತ್ಮಕ ನಿಯಂತ್ರಣವನ್ನು ಹೊಂದಿರುವ ಫೆಲೆಸ್ತೀನ್ ಪ್ರಾಧಿಕಾರವು, ಇಸ್ರೇಲ್‌ನ ಅತಿಕ್ರಮಣಕ್ಕೊಳಗಾದ ಫೆಲೆಸ್ತೀನ್ ಪ್ರದೇಶಗಳಲ್ಲಿನ ಉದ್ವಿಗ್ನ ಘಟನಾವಳಿಗಳನ್ನು ವರದಿ ಮಾಡದಂತೆ ತನ್ನನ್ನು ಹಿಮ್ಮೆಟ್ಟಿಸಲು ಯತ್ನಿಸುತ್ತಿರುವುದಾಗಿ ಅಲ್‌ಜಝೀರಾ ಆಪಾದಿಸಿದೆ.
ಗಾಝಾ ಸಂಘರ್ಷದ ಕುರಿತ ವರದಿಗಳಿಗಾಗಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸರಕಾರದ ಕೆಂಗಣ್ಣಿಗೆ ಗುರಿಯಾಗಿದ್ದ ಅಲ್ ಜಝೀರಾ ವಾಹಿನಿಯ ಪ್ರಸಾರವನ್ನು ಈಗಾಗಲೇ ಇಸ್ರೇಲ್‌ನಲ್ಲಿ ನಿಷೇಧಿಸಲಾಗಿದೆ.