ಪದಚ್ಯುತ ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್‍ಗೆ ವಿಷಪ್ರಾಶನಕ್ಕೆ ಪ್ರಯತ್ನ: ವರದಿ

Update: 2025-01-03 15:20 GMT

 ಬಶರ್ ಅಸ್ಸಾದ್ | PC : PTI

ಮಾಸ್ಕೋ : ರಶ್ಯದಲ್ಲಿರುವ ಪದಚ್ಯುತ ಸಿರಿಯಾ ಅಧ್ಯಕ್ಷ ಬಶರ್ ಅಸ್ಸಾದ್‍ಗೆ ವಿಷಪ್ರಾಶನದ ಪ್ರಯತ್ನ ನಡೆದಿರುವುದಾಗಿ ವರದಿಯಾಗಿದೆ.

ಡಿಸೆಂಬರ್ 8ರಂದು ಸಿರಿಯಾದಿಂದ ರಶ್ಯಕ್ಕೆ ಪಲಾಯನ ಮಾಡಿದ್ದ ಅಸ್ಸಾದ್ ಮಾಸ್ಕೋದಲ್ಲಿ ರಶ್ಯದ ಭದ್ರತೆಯಲ್ಲಿದ್ದಾರೆ. ರವಿವಾರ (ಡಿಸೆಂಬರ್ 29) ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯಿಂದ ತೀವ್ರ ಅಸ್ವಸ್ಥಗೊಂಡ ಅಸ್ಸಾದ್ ವೈದ್ಯಕೀಯ ನೆರವು ಕೋರಿದರು. ಅವರಿಗೆ ತಕ್ಷಣ ಕುಡಿಯಲು ನೀರು ಒದಗಿಸಿದ್ದು ಇದರಿಂದ ಅವರು ಸ್ವಲ್ಪ ಚೇತರಿಸಿಕೊಂಡರು.

ಆದರೆ ಉಸಿರಾಟದ ಸಮಸ್ಯೆ ಮುಂದುವರಿದಿದ್ದು ತಲೆ ನೋವು ಮತ್ತು ಹೊಟ್ಟೆ ನೋವು ಕೂಡಾ ಆರಂಭಗೊಂಡಿದೆ. ಅವರ ಆರೋಗ್ಯ ಹದಗೆಟ್ಟ ಕಾರಣ ಮನೆಯಲ್ಲೇ ವಿಶೇಷ ಕೊಠಡಿಯಲ್ಲಿ ಅವರಿಗೆ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಸೋಮವಾರದ (ಡಿಸೆಂಬರ್ 30) ಸಂಜೆ ವೇಳೆ ಅವರ ಆರೋಗ್ಯದಲ್ಲಿ ಕ್ರಮೇಣ ಚೇತರಿಕೆ ಕಂಡುಬಂದಿದ್ದು ರಕ್ತ ಪರೀಕ್ಷೆಯಲ್ಲಿ ದೇಹದಲ್ಲಿ ವಿಷದ ಅಂಶ ಕಂಡುಬಂದಿದೆ. ಅವರಿಗೆ ವಿಷಪ್ರಾಶನ ಮಾಡಿರುವ ಸಾಧ್ಯತೆಯಿದೆ. ಆದರೆ ಯಾರು ಮತ್ತು ಹೇಗೆ ಮಾಡಿದ್ದಾರೆ ಎಂಬುದು ಖಚಿತಗೊಂಡಿಲ್ಲ. ರಶ್ಯದ ಅಧ್ಯಕ್ಷರ ಸಹಾಯಕ ಅಧಿಕಾರಿ ನಿಕೋಲಾಯ್ ಪತ್ರುಶೆವ್ ತನಿಖೆಗೆ ಆದೇಶಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ವಿಷಪ್ರಾಶನ ಪ್ರಯತ್ನದ ಬಗ್ಗೆ ಸಿರಿಯಾ ಅಥವಾ ರಶ್ಯ ಸರಕಾರ ಅಧಿಕೃತ ಹೇಳಿಕೆ ನೀಡಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News