ಗಾಝಾದ ಆಸ್ಪತ್ರೆಗೆ ಆಹಾರ ಪೂರೈಕೆಗೆ ಇಸ್ರೇಲ್ ನಿರ್ಬಂಧ | ವೈದ್ಯರನ್ನು ಆಸ್ಪತ್ರೆಯಿಂದ ತೆರವುಗೊಳಿಸಲು ಒತ್ತಡ : ವರದಿ
ಗಾಝಾ: ಉತ್ತರ ಗಾಝಾದಲ್ಲಿರುವ ಇಂಡೊನೇಶ್ಯಾ ಆಸ್ಪತ್ರೆಯಲ್ಲಿರುವ ವೈದ್ಯರನ್ನು ಬಲವಂತದಿಂದ ತೆರವುಗೊಳಿಸಲು ಮುಂದಾಗಿರುವ ಇಸ್ರೇಲಿ ಪಡೆಗಳು ಆಸ್ಪತ್ರೆಗೆ ನೀರು ಮತ್ತು ಆಹಾರ ಪೂರೈಕೆಯನ್ನು ನಿರ್ಬಂಧಿಸಿದೆ ಎಂದು ಆಸ್ಪತ್ರೆಯನ್ನು ನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆ (ಎನ್‍ಜಿಒ) ರವಿವಾರ ಹೇಳಿದೆ.
ಬೀತ್ ಲಾಹಿಯಾದಲ್ಲಿ ಜಬಾಲಿಯಾ ನಿರಾಶ್ರಿತರ ಶಿಬಿರದ ಬಳಿ 4 ಅಂತಸ್ತಿನ ಕಟ್ಟಡದಲ್ಲಿ ಕಾರ್ಯಾಚರಿಸುವ ಆಸ್ಪತ್ರೆಯನ್ನು ದೇಣಿಗೆ ಸಂಗ್ರಹಿಸಿ ಜಕಾರ್ತ ಮೂಲದ ಮೆಡಿಕಲ್ ಎಮರ್ಜೆನ್ಸಿ ರೆಸ್ಕ್ಯೂ ಕಮಿಟಿ(ಎಂಇಆರ್ ಸಿ) ನಿರ್ಮಿಸಿದೆ. ಕಳೆದ ಡಿಸೆಂಬರ್ ನಲ್ಲಿ ತಿಂಗಳುಗಟ್ಟಲೆ ಇಸ್ರೇಲ್ ನ ಭೀಕರ ವೈಮಾನಿಕ ದಾಳಿಯಿಂದಾಗಿ ಧ್ವಂಸಗೊಂಡ ಗಾಝಾದ ಕಮಲ್ ಅಡ್ವಾನ್ ಆಸ್ಪತ್ರೆಯ ಹಲವು ರೋಗಿಗಳು, ಆರೈಕೆ ಮಾಡುವವರು ಮತ್ತು ಆರೋಗ್ಯ ಕಾರ್ಯಕರ್ತರನ್ನು ಈ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಇದೀಗ ಇಂಡೊನೇಶ್ಯಾ ಆಸ್ಪತ್ರೆಯನ್ನು ತೆರವುಗೊಳಿಸಬೇಕೆಂಬ ಇಸ್ರೇಲ್ ನ ಆದೇಶವನ್ನು ವೈದ್ಯರು ತಿರಸ್ಕರಿಸಿದ್ದಾರೆ.
ಆದರೆ ಆಸ್ಪತ್ರೆಯ ಪರಿಸ್ಥಿತಿ ಹದಗೆಡುತ್ತಿದೆ. ನೀರು ಮತ್ತು ಆಹಾರದ ಕೊರತೆಯಿದೆ. ಆಸ್ಪತ್ರೆಗೆ ನೆರವು ಪೂರೈಕೆಗೆ ಇಸ್ರೇಲ್ ಪಡೆ ತಡೆಯೊಡ್ಡಿದೆ. ಆದರೆ ರೋಗಿಗಳನ್ನು ಬಿಟ್ಟುಹೋಗುವುದಿಲ್ಲ ಎಂದು ವೈದ್ಯರು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಎಂ ಇ ಆರ್ ಸಿ ಅಧಿಕಾರಿಗಳನ್ನು ಉಲ್ಲೇಖಿಸಿ ಅರಬ್ ನ್ಯೂಸ್ ವರದಿ ಮಾಡಿದೆ.
ನಾವು ಪರಿಸ್ಥಿತಿಯನ್ನು ಗಮನಿಸುತ್ತಿದ್ದೇವೆ.
ಇಸ್ರೇಲ್ ಪಡೆ ಆಸ್ಪತ್ರೆಗೆ ಪೂರೈಕೆಯನ್ನು ನಿರ್ಬಂಧಿಸುವ ಮೂಲಕ ವೈದ್ಯರು ಮತ್ತು ರೋಗಿಗಳನ್ನು ಬಲವಂತದಿಂದ ತೆರವುಗೊಳಿಸಲು ಪ್ರಯತ್ನಿಸುತ್ತಿದೆ. ಉತ್ತರ ಗಾಝಾವನ್ನು ಖಾಲಿ ಮಾಡುವುದು, ಉತ್ತರ ಗಾಝಾದ ಎಲ್ಲಾ ಆಸ್ಪತ್ರೆಗಳನ್ನು ಖಾಲಿ ಮಾಡುವುದು ಅವರ ತಂತ್ರವಾಗಿದೆ. ಇಸ್ರೇಲ್ ಭದ್ರತಾ ಪಡೆಯ ಕ್ರಿಮಿನಲ್ ಕೃತ್ಯಗಳಿಂದ ಫೆಲೆಸ್ತೀನೀಯರನ್ನು ರಕ್ಷಿಸಲು ಅಂತರಾಷ್ಟ್ರೀಯ ಸಮುದಾಯ ಕ್ರಮ ಕೈಗೊಳ್ಳಬೇಕು ಎಂದು ಎಂಇಆರ್‍ಸಿ ಆಗ್ರಹಿಸಿದೆ. ಗಾಝಾ ಪಟ್ಟಿಯ ವೈದ್ಯಕೀಯ ವ್ಯವಸ್ಥೆಯನ್ನು ಹಮಾಸ್ ಅಡಗುದಾಣವಾಗಿ ಬಳಸಿಕೊಳ್ಳುತ್ತಿದೆ ಎಂದು ಇಸ್ರೇಲ್ ಪ್ರತಿಪಾದಿಸುತ್ತಿದೆ.
► ಸೇವೆ ಸ್ಥಗಿತ
2023ರ ಅಕ್ಟೋಬರ್ ಬಳಿಕ ಗಾಝಾದ ಮೇಲೆ ಇಸ್ರೇಲ್‍ನ ನಿರಂತರ ವೈಮಾನಿಕ ದಾಳಿಯಿಂದಾಗಿ ಸುಮಾರು 1 ವರ್ಷದಿಂದ ಇಂಡೋನೇಶ್ಯಾ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿಲ್ಲ. ಆಸ್ಪತ್ರೆಯಲ್ಲಿ ವಿದ್ಯುತ್, ನೀರು ಅಥವಾ ಇನ್ನಿತರ ವ್ಯವಸ್ಥೆಗಳಿಲ್ಲದಿದ್ದರೂ ಗಂಭೀರ ಗಾಯಗೊಂಡವರಿಗೆ ಇಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ. ಕಳೆದ ವರ್ಷ ಸೀಮಿತ ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸಿದ್ದ ಆಸ್ಪತ್ರೆಯ ಮೇಲೆ ಇಸ್ರೇಲ್ ನ ಬಾಂಬ್ ದಾಳಿಯ ಹಿನ್ನೆಲೆಯಲ್ಲಿ ಕಳೆದ ತಿಂಗಳು ಇಲ್ಲಿದ್ದ ಕೆಲವು ರೋಗಿಗಳನ್ನು ಮತ್ತು ವೈದ್ಯಕೀಯ ಸಿಬ್ಬಂದಿಯನ್ನು ದಕ್ಷಿಣ ಗಾಝಾದ ಅಲ್-ಶಿಫಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ವೈದ್ಯರು ಆಸ್ಪತ್ರೆಯಲ್ಲೇ ಉಳಿದಿದ್ದಾರೆ.
ಶುಕ್ರವಾರ ಆಸ್ಪತ್ರೆಯನ್ನು ಸುತ್ತುವರಿದ ಇಸ್ರೇಲ್ ಪಡೆಗಳು ಆಸ್ಪತ್ರೆ ಮತ್ತು ರೋಗಿಗಳನ್ನು ಬಿಟ್ಟು ತಕ್ಷಣ ತೆರಳುವಂತೆ ವೈದ್ಯರಿಗೆ ಆದೇಶಿಸಿರುವುದಾಗಿ ವರದಿಯಾಗಿದೆ.