ಪಾಕಿಸ್ತಾನ | ಬಸ್ಸಿನ ಮೇಲೆ ಬಾಂಬ್ ದಾಳಿ 4 ಮಂದಿ ಮೃತ್ಯು ; 32 ಮಂದಿಗೆ ಗಾಯ
ಪೇಷಾವರ: ಪಾಕಿಸ್ತಾನದ ಪ್ರಕ್ಷುಬ್ಧ ಬಲೂಚಿಸ್ತಾನ ಪ್ರಾಂತದ ಟರ್ಬತ್ ನಗರದಲ್ಲಿ ಶನಿವಾರ ಪ್ರಯಾಣಿಕರ ಬಸ್ಸಿನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 4 ಮಂದಿ ಸಾವನ್ನಪ್ಪಿದ್ದು ಇತರ 32 ಮಂದಿ ಗಾಯಗೊಂಡಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ನಿಷೇಧಿತ ಪ್ರತ್ಯೇಕತಾವಾದಿ ಸಂಘಟನೆ ಬಲೂಚಿಸ್ತಾನ್ ಲಿಬರೇಷನ್ ಆರ್ಮಿ(ಬಿಎಲ್‍ಎ) ಸ್ಫೋಟದ ಹೊಣೆ ವಹಿಸಿಕೊಂಡಿದೆ. ಸೇನೆಯ ವಾಹನಗಳ ಮೇಲೆಯೂ ಬಾಂಬ್ ದಾಳಿ ನಡೆಸಿದ್ದು ಸಾವು-ನೋವಿನ ಸಂಖ್ಯೆ ಹೆಚ್ಚಿದೆ ಎಂದು ಬಿಎಲ್‍ಎ ಹೇಳಿದೆ.
ಕರಾಚಿಯಿಂದ ಟರ್ಬತ್‍ಗೆ ಪ್ರಯಾಣಿಸುತ್ತಿದ್ದ ಬಸ್ಸು ಟರ್ಬತ್ ನಗರದ ಬಹ್ಮಾನ್ ಪ್ರದೇಶದಲ್ಲಿದ್ದಾಗ ಸುಧಾರಿತ ಸ್ಫೋಟಕ ಸಾಧನ(ಐಇಡಿ)ವನ್ನು ಬಳಸಿ ಬಾಂಬ್ ಸ್ಫೋಟಿಸಲಾಗಿದೆ. ಬಸ್ಸಿನಲ್ಲಿದ್ದ ಉನ್ನತ ಪೊಲೀಸ್ ಅಧಿಕಾರಿ ಝೊಹೈಬ್ ಮೊಹ್ಸಿನ್ ಹಾಗೂ ಕುಟುಂಬದವರು ಸ್ಫೋಟದ ಗುರಿಯಾಗಿರುವ ಸಾಧ್ಯತೆಯಿದೆ. 4 ಪ್ರಯಾಣಿಕರು ಸಾವನ್ನಪ್ಪಿದ್ದು 32 ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ 8 ಮಂದಿಯ ಸ್ಥಿತಿ ಗಂಭೀರವಾಗಿದೆ.
ಬಲೂಚಿಸ್ತಾನ್ ಪ್ರಾಂತದ ಮುಖ್ಯಮಂತ್ರಿ ಸಫ್ರ್ರಾಜ್ ಬುಗ್ತಿ ದಾಳಿಯನ್ನು ಖಂಡಿಸಿದ್ದು `ಅಮಾಯಕ ಜನರನ್ನು ಗುರಿಯಾಗಿಸಿ ದಾಳಿ ನಡೆಸುವವರು ಮನುಷ್ಯರೆಂದು ಕರೆಸಿಕೊಳ್ಳಲು ಅರ್ಹರಲ್ಲ' ಎಂದು ಹೇಳಿದ್ದಾರೆ.