ಅಮೆರಿಕದಲ್ಲಿ ಶೀತಗಾಳಿಗೆ ಐವರು ಮೃತ್ಯು; ಏಳು ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ
ವಾಷಿಂಗ್ಟನ್: ಕೇಂದ್ರ ಮತ್ತು ಪೂರ್ವ ಅಮೆರಿಕದಾದ್ಯಂತ ಮೈಕೊರೆಯುವ ಚಳಿ ಸಾಮಾನ್ಯ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ರಸ್ತೆ ಮತ್ತು ರೈಲು ಸಂಚಾರ ಹಾಗೂ ವಿಮಾನಯಾನ ಅಸ್ತವ್ಯಸ್ತಗೊಂಡಿದೆ.
ಉತ್ತರ ಧ್ರುವದಿಂದ ಶೀತಗಾಳಿ ವ್ಯಾಪಕವಾಗಿ ಬೀಸುತ್ತಿದ್ದು, ದೇಶಾದ್ಯಂತ ಐದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಹಾಗೂ ಪೂರ್ವ ಅಮೆರಿಕದಲ್ಲಿ ರೈಲು ಮತ್ತು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದ್ದು, ಹಲವು ವಿಮಾನಗಳ ಸೇವೆ ರದ್ದುಪಡಿಸಲಾಗಿದೆ.
ಮೆರಿಲ್ಯಾಂಡ್, ವರ್ಜೀನಿಯಾ, ಪಶ್ಚಿಮ ವರ್ಜೀನಿಯಾ, ಕಾನ್ಸಸ್, ಮಿಸ್ಸೋರಿ, ಕೆಂಟುಕಿ ಮತ್ತು ಅರ್ಕಾನ್ಸಸ್ ರಾಜ್ಯಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.
ಕಾನ್ಸಸ್ ನ ವಿಚಿಟಾದಲ್ಲಿ ಎಸ್‌ಯುವಿ ನಿಯಂತ್ರಣ ಕಳೆದುಕೊಂಡು ಉರುಳಿ ಬಿದ್ದು ಇಬ್ಬರು ಮೃತಪಟ್ಟಿದ್ದರೆ, ಮಂಜುಗಡ್ಡೆಯಲ್ಲಿ ಟ್ರಕ್ ಸಿಲುಕಿಕೊಂಡು ಚಾಲಕ ಜೀವಂತ ಸಮಾಧಿಯಾಗಿದ್ದಾನೆ. ಶನಿವಾರದಿಂದ ಸೋಮವಾರದ ವರೆಗೆ ಶೀತಗಾಳಿ ಮತ್ತು ದಟ್ಟ ಹಿಮಪಾತದಿಂದ 200 ರಸ್ತೆ ಅಪಘಾತಗಳು ಸಂಭವಿಸಿವೆ ಎಂದು ಕಾನ್ಸಸ್ ಹೈವೆ ಪ್ಯಾಟ್ರೋಲ್ ವರದಿ ಮಾಡಿದೆ. ವರ್ಜೀನಿಯಾದ ವೇಕ್ಫೀಲ್ಡ್‌ನಲ್ಲಿ ಲಾರಿ ಮರದಡಿ ಸಿಲುಕಿಕೊಂಡು 32 ವರ್ಷದ ವ್ಯಕ್ತಿ ಮೃತಪಟ್ಟಿದ್ದಾನೆ.