ಭಾರತದಲ್ಲಿ ಎಐ ಕ್ಷೇತ್ರದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಘೋಷಣೆ
ವಾಷಿಂಗ್ಟನ್: ಮುಂದಿನ ಎರಡು ವರ್ಷಗಳಲ್ಲಿ ಮೈಕ್ರೋಸಾಫ್ಟ್ ಸಂಸ್ಥೆಯು ಭಾರತದಲ್ಲಿ ಕೃತಕ ಬುದ್ಧಿಮತ್ತೆ(ಎಐ) ಮತ್ತು ಕ್ಲೌಡ್ ಇನ್‍ಫ್ರಾಸ್ಟ್ರಕ್ಚರ್ ಕ್ಷೇತ್ರದಲ್ಲಿ 3 ಶತಕೋಟಿ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ ಎಂದು ಸಂಸ್ಥೆಯ ಸಿಇಒ ಸತ್ಯ ನಾಡೆಲ್ಲಾ ಮಂಗಳವಾರ ಘೋಷಿಸಿದ್ದಾರೆ.
ಭಾರತವು ಎಐ ಆವಿಷ್ಕಾರದಲ್ಲಿ ವೇಗವಾಗಿ ಮುನ್ನಡೆಯುತ್ತಿದೆ ಮತ್ತು ದೇಶದಾದ್ಯಂತ ಹೊಸ ಅವಕಾಶಗಳ ಬಾಗಿಲನ್ನು ತೆರೆಯುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡಲಿರುವ 3 ಶತಕೋಟಿ ಡಾಲರ್ ನಿಧಿಯಲ್ಲಿ ಹೊಸ ಡೇಟಾ ಕೇಂದ್ರಗಳ ಸ್ಥಾಪನೆಯೂ ಸೇರಿದೆ ಎಂದು ನಾಡೆಲ್ಲಾ ಹೇಳಿದ್ದಾರೆ.
ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾಗಿರುವ ಭಾರತ ಕಳೆದ ಕೆಲವು ವರ್ಷಗಳಲ್ಲಿ ಎಐ ಕ್ಷೇತ್ರದ ಪ್ರಮುಖ ನೆಲೆಯಾಗಿ ಗುರುತಿಸಿಕೊಂಡಿದ್ದು ಹೊಸ ಬಳಕೆದಾರರನ್ನು ಸೆಳೆಯಲು ಅಮೆರಿಕದ ಬೃಹತ್ ತಂತ್ರಜ್ಞಾನ ಸಂಸ್ಥೆಗಳು ಪೈಪೋಟಿ ನಡೆಸುತ್ತಿವೆ. ಇತ್ತೀಚೆಗಿನ ತಿಂಗಳುಗಳಲ್ಲಿ ಎನ್ವಿಡಿಯಾ ಮುಖ್ಯಸ್ಥ ಜೆನ್ಸನ್ ಹುವಾಂಗ್ ಮತ್ತು ಮೆಟಾದ ಮುಖ್ಯ ಎಐ ವಿಜ್ಞಾನಿ ಯನ್ ಲೆಕುನ್ ಸೇರಿದಂತೆ ಉನ್ನತ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದಾರೆ.