ಭಾರತ ಮೂಲದ ಅನಿತಾ ಆನಂದ್ ಗೆ ಕೆನಡಾ ಪ್ರಧಾನಿ ಹುದ್ದೆ ಸಾಧ್ಯತೆ

Update: 2025-01-08 02:32 GMT

ಒಟ್ಟಾವ, ಕೆನಡಾ: ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿರುವ ಜಸ್ಟಿನ್ ಟ್ರೂಡೊ ಅವರ ಸ್ಥಾನಕ್ಕೆ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅನಿತಾ ಆನಂದ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಸೋಮವಾರ ಪ್ರಧಾನಿ ಹುದ್ದೆಗೆ ಟ್ರೂಡೊ ರಾಜೀನಾಮೆ ನೀಡಿರುವುದರಿಂದ ಹೊಸ ನಾಯಕನ ಆಯ್ಕೆ ಅನಿವಾರ್ಯವಾಗಿದೆ.

ಮಾರ್ಚ್ 24ರಂದು ಹೊಸ ಪ್ರಧಾನಿ ಆಯ್ಕೆಯಾಗಲಿದ್ದಾರೆ. ಸಾರಿಗೆ ಮತ್ತು ಆಂತರಿಕ ವ್ಯವಹಾರಗಳ ಖಾತೆ ಸಚಿವರಾಗಿರುವ ಅನಿತಾ ಆನಂದ್, ಪ್ರಧಾನಿ ಹುದ್ದೆಯ ರೇಸ್ ನಲ್ಲಿ ಮುಂಚೂಣಿಯಲ್ಲಿದ್ದಾರೆ. ಡೊಮಿನಿಕ್ ಲೆಬ್ಲಾಂಕ್, ಕ್ರಿಸ್ಟಿನಾ ಫ್ರೀಲ್ಯಾಂಡ್, ಮೆಲೈನ್ ಜೋಲಿ, ಫ್ರಾಂಕೋಯಿಸ್ ಫಿಲಿಪ್ ಚಾಂಪೇನ್ ಮತ್ತು ಮಾಕ್ ಕೆರ್ನಿ ಹೆಸರು ಕೂಡಾ ಚಾಲ್ತಿಯಲ್ಲಿದೆ.

2019ರಿಂದ ಸಂಸದರಾಗಿರುವ ಅನಿತಾ ಆನಂದ್ ಕೆನಡಾದ ಲಿಬರಲ್ ಪಾರ್ಟಿಯ ಹಿರಿಯ ಸದಸ್ಯೆ. ಸಾರ್ವಜನಿಕ ಸೇವೆ ಮತ್ತು ನೇಮಕಾತಿ, ರಾಷ್ಟ್ರೀಯ ರಕ್ಷಣೆ ಖಾತೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ ಅವರು ಖಜಾನೆ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. 2024ರಿಂದ ಅವರು ಸಾರಿಗೆ ಮತ್ತು ಆಂತರಿಕ ವ್ಯಾಪಾರ ಖಾತೆ ಸಚಿವರಾಗಿದ್ದಾರೆ.

1960ರ ದಶಕದ ಆರಂಭದಲ್ಲಿ ಭಾರತದಿಂದ ಕೆನಡಾಗೆ ವಲಸೆ ಬಂದ ಸರೋಜ್ ಡಿ ರಾಮ್ ಮತ್ತು ಎಸ್.ವಿ.ಆನಂದ್ ಎಂಬ ವೈದ್ಯ ದಂಪತಿಯ ಪುತ್ರಿಯಾಗಿ 1967ರ ಮೇ 20ರಂದು ಜನಿಸಿದ ಅನಿತಾ, ವಿದ್ಯಾರ್ಥಿ ಜೀವನದಿಂದಲೂ ತಮ್ಮ ಪೋಷಕರಿಂದ ಮೌಲ್ಯಗಳನ್ನು ರೂಡಿಸಿಕೊಂಡಿದ್ದರು ಮತ್ತು ವೃತ್ತಿಸಂಹಿತೆಯನ್ನು ಅಳವಡಿಸಿಕೊಂಡಿದ್ದರು. ಇವರಿಗೆ ಗೀತಾ ಹಾಗೂ ಸೋನಿಯಾ ಎಂಬ ಇಬ್ಬರು ಸಹೋದರಿಯರಿದ್ದಾರೆ. 18ನೇ ವಯಸ್ಸಿನಲ್ಲಿ ಅಂದರೆ 1985ನಲ್ಲಿ ಒಂಟಾರಿಯೊಗೆ ಸ್ಥಳಾಂತರಗೊಂಡು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದರು. ಬಳಿಕ ಬ್ಯಾಚುಲರ್ ಆಫ್ ಆರ್ಟ್ಸ್ (ಆನರ್ಸ್) ಪದವಿಯನ್ನು ಆಕ್ಸ್ಫರ್ಡ್ ವಿವಿಯಿಂದ ಪಡೆದರು. ಡಾಲ್ ಹೌಸಿ ವಿವಿ ಮತ್ತು ಟೊರಾಂಟೊ ವಿವಿಯಿಂದ ಕಾನೂನು ವಿಷಯದಲ್ಲಿ ಬ್ಯಾಚುಲರ್ ಡಿಗ್ರಿ ಮತ್ತು ಮಾಸ್ಟರ್ಸ್ ಡಿಗ್ರಿ ಪಡೆದರು. ಯೆಲೆ ಲಾ ಸ್ಕೂಲ್ ಸೇರಿದಂತೆ ವಿವಿಧೆಡೆ ಅಧ್ಯಾಪನಾ ವೃತ್ತಿ ಕೈಗೊಂಡರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News