ಟಿಬೆಟ್ ನಲ್ಲಿ ಸರಣಿ ಭೂಕಂಪಕ್ಕೆ ಮೃತರ ಸಂಖ್ಯೆ 100ಕ್ಕೆ ಏರಿಕೆ

Update: 2025-01-07 14:18 GMT

Photo | PTI

ಟಿಬೆಟ್: ಮಂಗಳವಾರ ಬೆಳಿಗ್ಗೆ ನೇಪಾಳ ಹಾಗೂ ಪಶ್ಚಿಮ ಚೀನಾ ಗಡಿಯ ಟಿಬೆಟ್ ನಲ್ಲಿ ಸಂಭವಿಸಿದ ಸರಣಿ ಭೂಕಂಪಕ್ಕೆ ಮೃತರ ಸಂಖ್ಯೆ 100ಕ್ಕೆ ಏರಿಕೆಯಾಗಿದ್ದು, 130ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭೂಕಂಪದಲ್ಲಿ ಟಿಬೆಟ್ ನ ಶಿಗಾಟ್ಸೆ ಪ್ರದೇಶದಲ್ಲಿ ಕನಿಷ್ಠ 95 ಜನರು ಮೃತಪಟ್ಟಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ Reuters ವರದಿ ಮಾಡಿದೆ. 130 ಮಂದಿ ಗಾಯಗೊಂಡಿದ್ದಾರೆ ಎಂದು ಚೀನಾದ ಸರ್ಕಾರಿ ಮಾಧ್ಯಮ ತಿಳಿಸಿದೆ.

ಡಿಂಗ್ರಿ ಕೌಂಟಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಹಲವಾರು ಕಟ್ಟಡಗಳು ಕುಸಿದಿವೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿದೆ. ಭೂಕಂಪದ ತೀವ್ರತೆಗೆ ದಿಲ್ಲಿ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಕಂಪನದ ಅನುಭವವಾಗಿದೆ ಎಂದು ತಿಳಿದು ಬಂದಿದೆ. ಬಿಹಾರ ವಿಪತ್ತು ನಿರ್ವಹಣಾ ಇಲಾಖೆಯ ಪ್ರಕಾರ, ಭಾರತ-ನೇಪಾಳ ಗಡಿಯಲ್ಲಿರುವ ಪಾಟ್ನಾ, ಮಧುಬನಿ, ಶೆಯೋಹರ್, ಮುಂಗೇರ್, ಸಮಸ್ತಿಪುರ್, ಮುಜಾಫರ್ಪುರ್, ಕತಿಹಾರ್, ದರ್ಬಂಗಾ, ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್ ಮತ್ತು ಹಲವಾರು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಭೂಕಂಪ ಸಂಭವಿಸಿದಾಗ ಕತಿಹಾರ್, ಪೂರ್ಣೆಯಾ, ಶಿಯೋಹರ್, ದರ್ಬಂಗಾ ಮತ್ತು ಸಮಸ್ತಿಪುರದಲ್ಲಿ ಜನರು ಮನೆಗಳಿಂದ ಹೊರ ಬಂದಿದ್ದಾರೆ.

2015ರಲ್ಲಿ ನೇಪಾಳದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿತ್ತು. ಈ ವೇಳೆ ಸುಮಾರು 9,000 ಜನರು ಮೃತಪಟ್ಟು, 22,000 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - siddik

contributor

Byline - ವಾರ್ತಾಭಾರತಿ

contributor

Similar News