ಯಾರಾಗಲಿದ್ದಾರೆ ಕೆನಡಾದ ಮುಂದಿನ ಪ್ರಧಾನಿ?: ಮುಂಚೂಣಿಯಲ್ಲಿದೆ ಪಿಯರೆ ಪೊಯಿಲಿವ್ರೆ, ಭಾರತೀಯ ಮೂಲದ ಅನಿತಾ ಆನಂದ್ ಹೆಸರು
ಹೊಸದಿಲ್ಲಿ: ಜಸ್ಟಿನ್ ಟ್ರುಡೊ ಸೋಮವಾರ ಕೆನಡಾದ ಪ್ರಧಾನ ಮಂತ್ರಿ ಮತ್ತು ಲಿಬರಲ್ ಪಕ್ಷದ ನಾಯಕನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಬೆನ್ನಲ್ಲೇ ಕೆನಡಾದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ಕನ್ಸರ್ವೇಟಿವ್ ಪಕ್ಷದ ನಾಯಕ ಪಿಯರೆ ಪೊಲಿಯೆವ್ರೆ, ಭಾರತೀಯ ಮೂಲಕದ ಅನಿತಾ ಆನಂದ್, ಲಿಬರಲ್ ಪಕ್ಷದ ಮಾರ್ಕ್ ಕಾರ್ನಿ ಅವರ ಹೆಸರು ಮುಂಚೂಣಿಯಲ್ಲಿದೆ.
ಕೆನಡಾದ ಕನ್ಸರ್ವೇಟಿವ್ ಪಕ್ಷದ ನಾಯಕನಾಗಿರುವ ಪಿಯರೆ ಪೊಯಿಲಿವ್ರೆ(45) ಕ್ಯಾಲ್ಗರಿಯಲ್ಲಿ ಮೂಲತಃ ಕ್ಯಾಲ್ಗರಿಯವರು. ಅವರು ಕ್ಯಾಲ್ಗರಿ ವಿಶ್ವವಿದ್ಯಾನಿಲಯದಿಂದ ʼಇಂಟರ್ ನ್ಯಾಶನಲ್ ರಿಲೇಶನ್ಸ್ʼ ವಿಚಾರದಲ್ಲಿ ಪದವಿಯನ್ನು ಪಡೆದಿದ್ದಾರೆ. 2004ರಲ್ಲಿ ಅವರು ಕನ್ಸರ್ವೇಟಿವ್ ಪಕ್ಷದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು. ಸ್ಟೀಫನ್ ಹಾರ್ಪರ್ ಅವರ ಸರಕಾರದಲ್ಲಿ ಹಿರಿಯ ಕ್ಯಾಬಿನೆಟ್ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
ಪಿಯರೆ ಪೊಯಿಲಿವ್ರೆ ಗ್ರೀಲಿಯ ಪೂರ್ವ ಒಂಟಾರಿಯೊ ಗ್ರಾಮದಲ್ಲಿ ಪತ್ನಿ ಅನೈಡಾ ಮತ್ತು ಅವರ ಇಬ್ಬರು ಮಕ್ಕಳಾದ ವ್ಯಾಲೆಂಟಿನಾ ಮತ್ತು ಕ್ರೂಝ್ ಅವರೊಂದಿಗೆ ವಾಸಿಸುತ್ತಿದ್ದಾರೆ. ಪಾಲಿಮಾರ್ಕೆಟ್ ಪ್ರಕಾರ, ಕನ್ಸರ್ವೇಟಿವ್ ಪಕ್ಷವನ್ನು ಮುನ್ನಡೆಸುವ ಪಿಯರೆ ಪೊಲಿಯೆವ್ರೆ ಅವರು ಕೆನಡಾದ ಪ್ರಧಾನಿಯಾಗುವ ಸಾಧ್ಯತೆ ಹೆಚ್ಚಿದೆ.
ಕೆನಡಾದ ಪ್ರಧಾನಿ ಸ್ಥಾನಕ್ಕೆ ಪಿಯರೆ ಪೊಲಿಯೆವ್ರೆ ಅಲ್ಲದೆ ಭಾರತೀಯ ಮೂಲದ ಅನಿತಾ ಆನಂದ್, ಕ್ರಿಸ್ಟಿಯಾ ಫ್ರೀಲ್ಯಾಂಡ್, ಲಿಬರಲ್ ಪಕ್ಷದ ಮಾರ್ಕ್ ಕಾರ್ನಿ ಹೆಸರು ಕೂಡ ಕೇಳಿ ಬಂದಿದೆ. ಮಾರ್ಕ್ ಕಾರ್ನಿ ಅವರ ಬಗ್ಗೆ ಇತ್ತೀಚೆಗೆ ಜಸ್ಟಿನ್ ಟ್ರಡೊ ಕೂಡ ಪ್ರಶಂಸೆ ವ್ಯಕ್ತಪಡಿಸಿದ್ದರು. ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್ ನ ಮಾಜಿ ಗವರ್ನರ್ ಆಗಿರುವ ಕಾರ್ನಿ ಅವರು ಆರ್ಥಿಕ ವಿಚಾರಗಳಲ್ಲಿ ವ್ಯಾಪಕ ಅನುಭವವನ್ನು ಹೊಂದಿದ್ದಾರೆ.
ಭಾರತೀಯ ಮೂಲದ ಅನಿತಾ ಆನಂದ್ ಕೆನಡಾ ಪ್ರಧಾನಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಪ್ರಭಾವಶಾಲಿ ಆಡಳಿತ ಮತ್ತು ಸಾರ್ವಜನಿಕ ಸೇವಾ ಹಿನ್ನೆಲೆ ಹೊಂದಿರುವ ಅನಿತಾ ಆನಂದ್, ವೃತ್ತಿಯಿಂದ ವಕೀಲರಾಗಿದ್ದಾರೆ. 2019ರಲ್ಲಿ ಕೆನಡಾದ ರಾಜಕೀಯಕ್ಕೆ ಪ್ರವೇಶಿಸಿದ್ದ ಅನಿತಾ ಲಿಬರಲ್ ಪಕ್ಷದ ಪ್ರಭಾವಿ ಸದಸ್ಯರಲ್ಲಿ ಓರ್ವರಾಗಿದ್ದಾರೆ. ಕೆನಡಾದ ಸಾರಿಗೆ ಮತ್ತು ಆಂತರಿಕ ವ್ಯಾಪಾರ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಅನಿತಾ ಆನಂದ್, ಕೆನಡಾದ ರಕ್ಷಣಾ ಸಚಿವರಾಗಿಯೂ ಕಾರ್ಯನಿರ್ವಹಿಸಿರುವ ಅನುಭವ ಹೊಂದಿದ್ದಾರೆ.