ಯುಎಇಗೆ ವಿಸಿಟಿಂಗ್ ವೀಸಾಗಳ ಅನುಮೋದನೆ ಹೆಚ್ಚುತ್ತಿದೆ : ವರದಿ
ದುಬೈ : ಹೆಚ್ಚಿನ ಅರ್ಜಿದಾರರು ಅಗತ್ಯ ದಾಖಲೆಗಳನ್ನು ಒದಗಿಸುವುದರಿಂದ ಇತ್ತೀಚಿಗೆ ಯುಎಇಗೆ ವಿಸಿಟಿಂಗ್ ವೀಸಾಗಳ ಅನುಮೋದನೆ ಹೆಚ್ಚುತ್ತಿದೆ ಎಂದು ಪ್ರವಾಸೋದ್ಯಮದ ಪ್ರಮುಖರು ತಿಳಿಸಿದ್ದಾರೆ.
ಯುಎಇಗೆ ಭೇಟಿ ನೀಡುವವರು ರಿಟರ್ನ್ ಟಿಕೆಟ್, ವಸತಿ ಕುರಿತು ದಾಖಲೆ ಮತ್ತು ನಿಗದಿತ ಮೊತ್ತದಷ್ಟು ಹಣವನ್ನು ಹೊಂದಿರುವುದು ಕಡ್ಡಾಯವಾಗಿದೆ. ಟ್ರಾವೆಲ್ ಏಜೆಂಟ್ ಗಳ ಪ್ರಕಾರ, ಈ ಮೊದಲು ಅರ್ಜಿದಾರರು ನಿಯಮಾವಳಿಗಳನ್ನು ಪೂರೈಸಲು ವಿಫಲರಾಗುತ್ತಿದ್ದರಿಂದ ಹೆಚ್ಚಿನ ವಿಸಿಟಿಂಗ್ ವೀಸಾಗಳು ತಿರಸ್ಕೃತಗೊಳ್ಳುತ್ತಿದ್ದವು. ಆದರೆ, ಅಧಿಕಾರಿಗಳು ಮತ್ತು ಟ್ರಾವೆಲ್ ಏಜೆನ್ಸಿಗಳು ಜಾಗೃತಿ ಅಭಿಯಾನಗಳನ್ನು ಮಾಡುತ್ತಿದ್ದು, ಯುಎಇಗೆ ಭೇಟಿ ನೀಡುವವರು ನಿಯಮಗಳನ್ನು ಅನುಸರಿಸುವಂತೆ ಮಾಡಿವೆ.
ಯುಎಇ, ವಿಶೇಷವಾಗಿ ದುಬೈ ಪ್ರತಿವರ್ಷ ಮಿಲಿಯಗಟ್ಟಲೆ ಪ್ರವಾಸಿಗಳನ್ನು ಬರಮಾಡಿಕೊಳ್ಳುತ್ತಿದೆ. ಶ್ರೀಮಂತ ರಾಷ್ಟ್ರಗಳಿಂದ ಆಗಮಿಸುವ ಪ್ರವಾಸಿಗಳ ಸಂಖ್ಯೆ ಹೆಚ್ಚುತ್ತಿದೆ. 2024ರ ಮೊದಲ 11 ತಿಂಗಳುಗಳಲ್ಲಿ 16.79 ಮಿಲಿಯನ್ ಪ್ರವಾಸಿಗಳು ದುಬೈಗೆ ಭೇಟಿ ನೀಡಿದ್ದು,ಇದು ಶೇ.9ರಷ್ಟು ಹೆಚ್ಚಳವಾಗಿದೆ. ಒಟ್ಟು ಪ್ರವಾಸಿಗಳ ಸಂಖ್ಯೆಯಲ್ಲಿ ಪಶ್ಚಿಮ ಯುರೋಪ್‌ನವರ ಪಾಲು ಶೇ.20ರಷ್ಟಿದೆ.
2024ರ ಕೊನೆಯ ತ್ರೈಮಾಸಿಕದಲ್ಲಿ ವಿಸಿಟಿಂಗ್ ವೀಸಾಗಳ ಅನುಮೋದನೆಯಲ್ಲಿ ಸುಮಾರು ಶೇ.5ರಿಂದ ಶೇ.6ರಷ್ಟು ಏರಿಕೆಯನ್ನು ತನ್ನ ಸಂಸ್ಥೆಯು ನೋಡಿದೆ. ಇದು ಕಂಪನಿಯು ಸಾಂಪ್ರದಾಯಿಕವಾಗಿ ಹೊಂದಿದ್ದ ಅನುಮೋದನೆಗಳಿಗಿಂತ ಶೇ.1ರಿಂದ ಶೇ.2ರಷ್ಟು ಅಧಿಕವಾಗಿದೆ ಎಂದು ಅರಬ್ ವರ್ಲ್ಡ್ ಟೂರಿಸಮ್‌ನ ಆಪರೇಷನ್ಸ್ ಮ್ಯಾನೇಜರ್ ಶೆರಾಸ್ ಶರಾಫ್ ಹೇಳಿದ್ದಾರೆ.
ಆದರೆ ಟ್ರಾವೆಲ್ ಏಜೆನ್ಸಿಗಳು ಹೋಟೆಲ್ ಮತ್ತು ವಿಮಾನಯಾನ ವಿವರಗಳನ್ನು ಲಗತ್ತಿಸುವಂತೆ ಗ್ರಾಹಕರಿಗೆ ಅರಿವು ಮೂಡಿಸುತ್ತಿವೆ ಎಂದು ಮುಸಾಫಿರ್ ಡಾಟ್ ಕಾಮ್‌ನ ರಿಕಿನ್ ಶೇಠ್ ಹೇಳಿದ್ದಾರೆ. ದುಬೈ ದಕ್ಷಿಣ ಏಶ್ಯಾದಲ್ಲಿ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದೆ. ದುಬೈನಲ್ಲಿ ಜನರು ತಮ್ಮ ಮನೆಯ ವಾತಾವರಣವನ್ನು ಅನುಭವಿಸುತ್ತಾರೆ. ಐತಿಹಾಸಿಕವಾಗಿ ದುಬೈ ಶಾಪಿಂಗ್ ಫೆಸ್ಟಿವಲ್ ಪರಿಗಣಿಸಿ ಚಳಿಗಾಲದಲ್ಲಿ ವ್ಯಾಪಾರ ಹೆಚ್ಚುವುದನ್ನು ನಾವು ಯಾವಾಗಲೂ ನೋಡುತ್ತಿದ್ದೇವೆ. ಮುಂಬರುವ ತಿಂಗಳುಗಳಲ್ಲಿ ಪ್ರವಾಸಿಗಳ ಸಂಖ್ಯೆಯಲ್ಲಿ ಶೇ.25-30ರಷ್ಟು ಹೆಚ್ಚಳವನ್ನು ನಾವು ನಿರೀಕ್ಷಿಸಿದ್ದೇವೆ. ಅರ್ಜಿದಾರರು ಪ್ರಾಮಾಣಿಕವಾದ ದಾಖಲೆಗಳನ್ನು ಲಗತ್ತಿಸಿದರೆ ಅವರ ವೀಸಾಗಳನ್ನು ನಿರಾಕರಿಸುವುದಿಲ್ಲ. ಹೀಗಾಗಿ ಅನುಮೋದನೆ ಪ್ರಮಾಣ ಗಮನಾರ್ಹವಾಗಿ ಹೆಚ್ಚಿದೆ ಎಂದು ಶೇಠ್ ಹೇಳಿದರು.
ದೃಢೀಕೃತ ಟಿಕೆಟ್‌ಗಳು, ಹೊಟೇಲ್ ಬುಕಿಂಗ್ ದಾಖಲೆಗಳು ಅಥವಾ ವಸತಿ ಪುರಾವೆಯಂತಹ ಎಲ್ಲ ಅಗತ್ಯ ದಾಖಲೆಗಳನ್ನು ಒದಗಿಸುವ ಅರ್ಜಿದಾರರು ಯಾವುದೇ ಸಮಸ್ಯೆಯಿಲ್ಲದೆ ವೀಸಾ ಅನುಮೋದನೆಗಳನ್ನು ಪಡೆಯುತ್ತಾರೆ ಎಂದು ಶರಾಫ್ ಹೇಳಿದ್ದಾರೆ.
ಕೃಪೆ: khaleejtimes.com