ಸೌದಿ ಅರೇಬಿಯಾದ ಮೆಗಾ ಸಿಟಿ ನಿಯೋಮ್ ಗೆ ಮೆಗಾ ತೊಂದರೆಗಳು!

Update: 2025-03-12 19:19 IST

PC : NDTV 

ರಿಯಾದ್: ಸೌದಿ ಅರೇಬಿಯಾದ ಭವಿಷ್ಯದ ಮುನ್ನೋಟದ ಭಾಗವಾಗಿ 500 ಶತಕೋಟಿ ಡಾಲರ್ ನಲ್ಲಿ ನಿರ್ಮಾಣಗೊಂಡಿರುವ ನಿಯೋಮ್ ಮೆಗಾ ಸಿಟಿಯನ್ನು ಭಾರಿ ಜನಪ್ರಿಯ ತಾರೆಯರು ಭಾಗವಹಿಸಿದ್ದ ಸಮಾರಂಭದಲ್ಲಿ ಇತ್ತೀಚೆಗಷ್ಟೆ ಭಾಗಶಃ ಮುಕ್ತಗೊಳಿಸಲಾಯಿತು. ಆದರೆ, ಸೌದಿ ಅರೇಬಿಯಾದ ಈ ಮಹತ್ವಾಕಾಂಕ್ಷಿ ಮೆಗಾ ಸಿಟಿಯೆದುರು ಸವಾಲುಗಳ ರಾಶಿಯೇ ಬಿದ್ದಿದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.

The Wall Street Journal ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಈ ಯೋಜನೆಯ ಮೊದಲ ಹಂತದ ನಗರವಾದ ಸಿಂದಲಾಹ್ ನಿಗದಿತ ಅವಧಿಗಿಂತ ತೀರಾ ವಿಳಂಬವಾಗಿ ಪೂರ್ಣಗೊಂಡಿದ್ದು, ಅಂದಾಜಿಸಿದ್ದಕ್ಕಿಂತ ಹೆಚ್ಚು ಪ್ರಮಾಣದಲ್ಲಿ ವೆಚ್ಚವಾಗಿದೆ ಎಂದು ಹೇಳಲಾಗಿದೆ. ಆರಂಭದಲ್ಲಿ ಈ ಯೋಜನೆಯ ಅಂದಾಜು ವೆಚ್ಚ 1.3 ಶತಕೋಟಿ ಡಾಲರ್ ಆಗಿತ್ತು. ಆದರೆ, ಐಷಾರಾಮಿ ರೆಸಾರ್ಟ್ ದರಗಳು ಈ ಅಂದಾಜು ವೆಚ್ಚವನ್ನು ಸುಮಾರು 4 ಶತಕೋಟಿಗೆ ಏರಿಕೆ ಮಾಡಿವೆ. ಗಮನಾರ್ಹ ಸಂಗತಿಯೆಂದರೆ, ಕೆಲ ವಾರಗಳ ಹಿಂದೆ ನಿಯೋಮ್ ಮೆಗಾ ಸಿಟಿಯ ಸಿಇಒ ನದ್ಮಿ ಅಲ್-ನಸ್ರ್ ರನ್ನು ಬದಲಿಸಿದ ನಂತರ, ಈ ಯೋಜನೆಯ ರೂವಾರಿಯಾದ ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಉದ್ಘಾಟನಾ ಸಮಾರಂಭಕ್ಕೆ ಗೈರಾಗಿದ್ದರು.

2017ರಲ್ಲಿ ಪ್ರಾರಂಭವಾದಾಗಿನಿಂದ ಇಲ್ಲಿಯವರೆಗೆ ನಿಯೋಮ್ ಮೆಗಾ ಸಿಟಿಯ ನಿರ್ಮಾಣ ವೆಚ್ಚವು ಸುಮಾರು 50 ಶತಕೋಟಿ ಡಾಲರ್ ಆಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಆದರೆ, ತೇಲುವ ವಾಣಿಜ್ಯ ಜಿಲ್ಲೆ, ಮರಳುಗಾಡಿನಲ್ಲಿ ನೀರ್ಗಲ್ಲು ರೆಸಾರ್ಟ್ ನಿರ್ಮಾಣ ಹಾಗೂ 170 ಕಿಮೀ ಉದ್ದದ ರೇಖಾತ್ಮಕ ನಗರ ನಿರ್ಮಾಣದಂತಹ ಅದರ ದಿಟ್ಟ ಯೋಜನೆಗಳು ಫಲಪ್ರದವಾಗುವಲ್ಲಿ ವಿಫಲಗೊಂಡಿವೆ.

The Wall Street Journal ಸುದ್ದಿ ಸಂಸ್ಥೆಗೆ ದೊರೆತಿರುವ ವರದಿಗಳ ಪ್ರಕಾರ, ನಿಯೋಮ್ ನಾಯಕತ್ವದಲ್ಲಿ ವ್ಯಾಪಕ ಪ್ರಮಾಣದ ಹಣಕಾಸು ಅವ್ಯವಹಾರಗಳು ನಡೆದಿರುವುದು ಬಯಲಾಗಿದೆ. ಆಂತರಿಕ ಲೆಕ್ಕ ಪರಿಶೋಧನೆಯಲ್ಲಿ ಮೆಕ್ ಕಿನ್ಸೆ ಆ್ಯಂಡ್ ಕಂಪನಿಯ ಸಮಾಲೋಚಕರ ನೆರವಿನೊಂದಿಗೆ ಏರಿಕೆಯಾಗುತ್ತಿರುವ ವೆಚ್ಚವನ್ನು ಸಮರ್ಥಿಸಿಕೊಳ್ಳಲು ನಿಯೋಮ್ ಮೆಗಾಸಿಟಿಯ ಅಧಿಕಾರಿಗಳು ಅತಿರೇಕದ ಹಣಕಾಸು ಮುನ್ನಂದಾಜು ತಯಾರಿಸಿರುವುದಕ್ಕೆ ಸಾಕ್ಷಿ ಲಭ್ಯವಾಗಿದೆ. ಆಡಳಿತ ಮಂಡಳಿಯ ಕೆಲವು ಸದಸ್ಯರು ಉದ್ದೇಶಪೂರ್ವಕವಾಗಿ ಅಂಕಿ-ಸಂಖ್ಯೆಗಳನ್ನು ತಿರುಚಿದ್ದಾರೆ ಎಂದು ಲೆಕ್ಕ ಪರಿಶೋಧನಾ ವರದಿಯಲ್ಲಿ ಉಲ್ಲೇಖಿಸಲಾಗಿದೆ.

2023ರಲ್ಲಿ ಕರಡು ರಚನೆ ಮಂಡಳಿ ಮಂಡಿಸಿದ್ದ ಅಂದಾಜಿನ ಪ್ರಕಾರ, 2080ರ ವೇಳೆಗೆ ನಿಯೋಮ್ ಮೆಗಾಸಿಟಿ ನಿರ್ಮಾಣವನ್ನು 8.8 ಟ್ರಿಲಿಯನ್ ಡಾಲರ್ ನ ಅವಶ್ಯಕತೆ ಬೀಳಲಿದೆ ಎಂದು ಹೇಳಲಾಗಿದೆ. ಇದು ಸೌದಿ ಅರೇಬಿಯಾದ ವಾರ್ಷಿಕ ಬಜೆಟ್ ಗಿಂತ 25 ಪಟ್ಟು ಅಧಿಕವಾಗಿದೆ. ನಿಯೋಮ್ ಮೆಗಾಸಿಟಿಯ ಮೊದಲ ಹಂತದ ನಿರ್ಮಾಣ ಕಾಮಗಾರಿ 2035ರವರೆಗೂ ಮುಂದುವರಿಯಲಿದ್ದು, ಅದಕ್ಕಾಗಿ 370 ಶತಕೋಟಿ ಡಾಲರ್ ವೆಚ್ಚವನ್ನು ಅಂದಾಜಿಸಲಾಗಿದೆ.

ನಿಯೋಮ್ ಮೆಗಾಸಿಟಿ ನಗರ ಜೀವನವನ್ನು ಮರು ವ್ಯಾಖ್ಯಾನಿಸುವ ಗುರಿ ಹೊಂದಿದ್ದು, ಈ ಮೆಗಾಸಿಟಿಯನ್ನು ರಾಜಕುಮಾರ ಸಲ್ಮಾನ್ ಈಜಿಪ್ಟ್ ಪಿರಮಿಡ್ ಗಳಿಗೆ ಹೋಲಿಸಿದ್ದಾರೆ. ಈ ನಗರದ ಸಾಲು, ಮಧ್ಯಭಾಗವನ್ನು ಭವಿಷ್ಯದ ನಗರ ಎಂದು ಬಣ್ಣಿಸಲಾಗಿದ್ದು, ಮರಳುಗಾಡಿನುದ್ದಕ್ಕೂ 170 ಕಿಮೀವರೆಗೆ ವ್ಯಾಪಿಸಿದೆ. ಈ ನಗರವು ಎಂಪೈರ್ ಸ್ಟೇಟ್ ಕಟ್ಟಡಕ್ಕಿಂತ ಎತ್ತರವಾಗಿರುವ ಎರಡು ಸಮಾನಾಂತರ ಗಗನಚುಂಬಿ ಕಟ್ಟಡಗಳ ನಡುವೆ ನೆಲೆ ನಿಂತಿದೆ.

ಆದರೆ, ಈ ನಗರ ನಿರ್ಮಾಣದ ಅಂದಾಜು ವೆಚ್ಚ ಗಾತ್ರ ಮಾತ್ರ ಅಗಾಧ ಎಂಬುದು ಈಗಾಗಲೇ ಸಾಬೀತಾಗಿದೆ. 2030ರೊಳಗೆ ನಿರ್ಮಾಣ ಮಾಡಲು ಉದ್ದೇಶಿಸಿರುವ 16 ಕಿಮೀ ಉದ್ದದ ಸಾಲಿನ ಮೂಲ ಯೋಜನೆಯು ಈಗಾಗಲೇ ಮಹತ್ವಕಾಂಕ್ಷಿಯೆನಿಸಿದ್ದು, ಇಡೀ ನಗರಗಳಲ್ಲಿ ಈಗಾಗಲೇ ಬಳಸಲಾಗಿರುವ ಗಾಜು ಮತ್ತು ಉಕ್ಕಿನ ಪ್ರಮಾಣಕ್ಕಿಂತ ಹೆಚ್ಚು ಪ್ರಮಾಣದ ಗಾಜು ಮತ್ತು ಉಕ್ಕಿನ ಅಗತ್ಯ ಬೀಳಲಿದೆ. ನಂತರ ಅದನ್ನೂ ಕೂಡಾ ಕೇವಲ ಅರ್ಧ ಮೈಲಿ ವಿಭಜನೆಯೊಂದಿಗೆ 2.4 ಕಿಮೀಗೆ ಮರುಪರಿಷ್ಕರಿಸಲಾಗಿದ್ದು, ಅದರಲ್ಲಿ 2034ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಿರೀಕ್ಷಿಸಲಾಗಿರುವ ಕ್ರೀಡಾಂಗಣವೂ ಸೇರಿದೆ.

ಇಂಜಿನಿಯರಿಂಗ್ ಸವಾಲುಗಳು ಹಾಗೂ ಏರುತ್ತಿರುವ ವೆಚ್ಚಗಳಿಂದ ಕಾಮಗಾರಿ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಈ ಸಾಲಿನ 1,640 ಅಡಿ ಎತ್ತರವು ನಿರ್ಮಾಣ ಕಾಮಗಾರಿಯನ್ನು ಕ್ಲಿಷ್ಟಕರವಾಗಿಸಿದ್ದು, ನಿರ್ಮಾಣ ವೆಚ್ಚವನ್ನು ತಗ್ಗಿಸಲು ಅದರ ಎತ್ತರವನ್ನು 1,000 ಅಡಿಗೆ ತಗ್ಗಿಸುವಂತೆ ನಿಯೋಮ್ ಮೆಗಾಸಿಟಿಯ ಅಧಿಕಾರಿಗಳು ಸಲಹೆ ನೀಡಿದ್ದಾರೆ. ಆದರೆ, ಈ ಸಲಹೆಯನ್ನು ನಿರಾಕರಿಸಿರುವ ರಾಜಕುಮಾರ ಸಲ್ಮಾನ್, ಬೇರೆಲ್ಲಾದರೂ ಉಳಿತಾಯ ಮಾಡುವ ಸಾಧ್ಯತೆಯನ್ನು ಪರಿಶೀಲಿಸಿ ಎಂದು ಪಟ್ಟು ಹಿಡಿದಿದ್ದಾರೆ.

ನೀರ್ಗಲ್ಲು ರೆಸಾರ್ಟ್ ಆದ ಟ್ರೊನೇಜಾ ಕೂಡಾ ವೆಚ್ಚದ ಏರಿಕೆಯನ್ನು ಕಂಡಿದೆ. 2023ರ ಪರಾಮರ್ಶೆಯನ್ನು ಉಲ್ಲೇಖಿಸಿರುವ The Wall Street Journal ಸುದ್ದಿ ಸಂಸ್ಥೆ, ವೆಚ್ಚದಲ್ಲಿ 10 ಶತಕೋಟಿ ಡಾಲರ್ ಏರಿಕೆಯಾಗಿರುವುದನ್ನು ಪತ್ತೆ ಹಚ್ಚಿದೆ. ಲೆಕ್ಕಪುಸ್ತಕಗಳನ್ನು ಸರಿದೂಗಿಸಲು ಆದಾಯ ಮುನ್ನೋಟವನ್ನು ಅತಿಯಾಗಿ ಅಂದಾಜಿಸಿರುವುದು, ಹೂಡಿಕೆಯನ್ನು ಸಮರ್ಥಿಸಲು ಹೋಟೆಲ್ ಕೊಠಡಿಗಳ ಬಾಡಿಗೆಯನ್ನು ದಿಢೀರನೆ ಮೂರು ಪಟ್ಟು ಅಥವಾ ನಾಲ್ಕು ಪಟ್ಟು ಏರಿಕೆ ಮಾಡಿರುವುದೂ ಬಯಲಾಗಿದೆ.

ನಿಯೋಮ್ ಮೆಗಾಸಿಟಿಯು ಖಾಸಗಿ ಹೂಡಿಕೆಯನ್ನು ಆಕರ್ಷಿಸಲಿದೆ ಎಂದೇ ಸೌದಿ ಅರೇಬಿಯಾದ ಅಧಿಕಾರಿಗಳು ಒತ್ತಿ ಹೇಳುತ್ತಾ ಬಂದಿದ್ದರು. ಆದರೆ, ಸೌದಿ ಅರೇಬಿಯಾದಲ್ಲಿನ ನೇರ ವಿದೇಶಿ ಹೂಡಿಕೆ ಮಾತ್ರ ಗುರಿಗಿಂತ ತೀರಾ ಕನಿಷ್ಠ ಪ್ರಮಾಣದಲ್ಲೇ ಉಳಿದಿದೆ. 2030ರ ವೇಳೆಗೆ ವರ್ಷಕ್ಕೆ 100 ದಶಲಕ್ಷ ಕೋಟಿ ಡಾಲರ್ ನೇರ ವಿದೇಶಿ ಹೂಡಿಕೆಯನ್ನು ಆಕರ್ಷಿಸುವ ಗುರಿ ಹೊಂದಿದ್ದರೂ, 2023ರಲ್ಲಿ ಕೇವಲ 26 ದಶಲಕ್ಷ ಕೋಟಿ ಡಾಲರ್ ನೇರ ವಿದೇಶಿ ಹೂಡಿಕೆ ಮಾತ್ರ ಆಗಿದೆ.

ಇದರಿಂದಾಗಿ ಪ್ರಭಾವಿ ಹೂಡಿಕೆದಾರರು ಇನ್ನೂ ಆತಂಕದಲ್ಲೇ ಇದ್ದಾರೆ. ಹಲವಾರು ಹೂಡಿಕೆದಾರರು ಯೋಜನೆಯ ಗಾತ್ರ ಹಾಗೂ ಸಂಕೀರ್ಣತೆಯಲ್ಲದೆ, ಸೌದಿ ಅರೇಬಿಯಾದಲ್ಲಿನ ನಿರ್ಬಂಧದ ವಾತಾವರಣದ ಕುರಿತೂ ಕಳವಳ ಹೊಂದಿದ್ದಾರೆ. ಹೀಗಾಗಿ, ಯೋಜನಾ ವೆಚ್ಚದ ಬಗ್ಗೆ ತೀವ್ರ ಪಾರದರ್ಶಕತೆ ಹೊಂದಿರಬೇಕು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News