ಅಜ್ಮಾನ್ | ಮೊದಲ ಆವೃತ್ತಿಯ ತುಂಬೆ ಇಂಟರ್ ನ್ಯಾಷನಲ್ ರಿಸರ್ಚ್ ಗ್ರ್ಯಾಂಟ್ ಸಮಾರಂಭಕ್ಕೆ ತೆರೆ

ಅಜ್ಮಾನ್ (ಯುಎಇ): ಎಪ್ರಿಲ್ 15ರಂದು ಅಜ್ಮಾನ್ ನ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಮೊದಲ ಆವೃತ್ತಿಯ ತುಂಬೆ ಇಂಟರ್ ನ್ಯಾಷನಲ್ ರಿಸರ್ಚ್ ಗ್ರ್ಯಾಂಟ್ (ಸಂಶೋಧನಾ ಅನುದಾನ) ನ ಸಮಾರಂಭವು ಯಶಸ್ವಿಯಾಗಿ ನಡೆಯಿತು.
ಯುಎಇನಲ್ಲಿರುವ ತುಂಬೆ ಸಮೂಹವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಅಜ್ಮಾನ್ ನ ರಾಜಕುಮಾರ ಶೇಖ್ ಅಮ್ಮರ್ ಬಿನ್ ಹುಮೈದ್ ಅಲ್ ನುಐಮಿ ಅವರ ಪ್ರತಿನಿಧಿಯಾಗಿ ರೂಲರ್ಸ್ ಕೋರ್ಟ್ ನ ಅಧ್ಯಕ್ಷ ಡಾ. ಶೇಖ್ ಮಜೀದ್ ಬಿನ್ ಸಯೀದ್ ಅಲ್ ನುಐಮಿ ಆಗಮಿಸಿದ್ದರು. ವಿಜೇತರಿಗೆ ಅವರು ಸಂಶೋಧನಾ ಅನುದಾನ ಪ್ರದಾನ ಮಾಡಿದರು.
3 ದಶಲಕ್ಷ ದಿರ್ಹಂಗಳ ಆರಂಭಿಕ ನಿಧಿಯೊಂದಿಗೆ ಪ್ರಾರಂಭಗೊಂಡಿರುವ ಈ ಅಂತರ್ ರಾಷ್ಟ್ರೀಯ ಅನುದಾನವನ್ನು ಸೂಕ್ಷ್ಮ ಔಷಧ, ಔಷಧ ಸಂಶೋಧನೆ ಮತ್ತು ಕ್ಯಾನ್ಸರ್ ಪ್ರತಿರೋಧ, ಮಧುಮೇಹಕ್ಕೆ ಸಂಬಂಧಿಸಿದ ಜನಸಂಖ್ಯಾ ಆರೋಗ್ಯ, ಆರೋಗ್ಯಕರ ವೃದ್ಧಾಪ್ಯ ಹಾಗೂ ಮರು ಉತ್ಪಾದನಾ ಔಷಧ, ಕೃತಕ ಬುದ್ಧಿಮತ್ತೆ, ಆರೋಗ್ಯ ಸೇವೆ ನಿರ್ವಹಣೆ ಹಾಗೂ ಆರೋಗ್ಯ ಆರ್ಥಿಕತೆಯಲ್ಲಿನ ಮಾಹಿತಿ ಶಾಸ್ತ್ರ ಮತ್ತು ಡಿಜಿಟಲ್ ಪರಿವರ್ತನೆ ಹಾಗೂ ಆರೋಗ್ಯ ವೃತ್ತಿಪರ ಶಿಕ್ಷಣದಲ್ಲಿನ ಆವಿಷ್ಕಾರದಂತಹ ಪ್ರಮುಖ ವಲಯಗಳಲ್ಲಿನ ಮುಂಚೂಣಿ ಯೋಜನೆಗಳಿಗೆ ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ.

ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಸ್ಥಾಪಕ ಹಾಗೂ ತುಂಬೆ ಸಮೂಹದ ಅಧ್ಯಕ್ಷ ಡಾ. ತುಂಬೆ ಮೊಯಿದೀನ್, “ನಾವು ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯನ್ನು ಸಂಶೋಧನಾ ತಾಣವನ್ನಾಗಿ ಪರಿವರ್ತಿಸಲು ಈ ಸಂಶೋಧನಾ ಅನುದಾನವನ್ನು ಜಾರಿಗೆ ತಂದಿದ್ದೇವೆ. 10 ವರ್ಷಗಳ ನಂತರ ಒಟ್ಟು ಸಂಶೋಧನಾ ಅನುದಾನದ ಮೊತ್ತ 10 ದಶಲಕ್ಷ ದಿರ್ಹಂಗಳಿಗೆ ತಲುಪ ಲಿದ್ದು, ಸಂಶೋಧನಾ ಉತ್ಕೃಷ್ಟತೆಯನ್ನು ಸಾಧಿಸುವ ದೀರ್ಘಕಾಲೀನ ಬದ್ಧತೆಯನ್ನು ಮತ್ತಷ್ಟು ಸದೃಢಗೊಳಿಸಲಿದೆ ಎಂದು ಅಭಿಪ್ರಾಯಪಟ್ಟರು.
ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಪ್ರಭಾರ ಕುಲಪತಿ ಪ್ರೊ. ಮಂದ ವೆಂಕಟರಮಣ ಅವರು ಮಾತನಾಡಿ, “ಈ ಅನುದಾನವು ಉತ್ತೇಜನಕಾರಿ ಚಾಲನೆ ಪಡೆದಿದ್ದು, ಸಂಶೋಧನಾ ಪ್ರಬಂಧ ಸಲ್ಲಿಕೆಯಲ್ಲಿನ ವೈವಿಧ್ಯತೆ ಮತ್ತು ಗುಣಮಟ್ಟವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಖ್ಯಾತಿಯನ್ನು ಪ್ರತಿಫಲಿಸಿದೆ. ಆರೋಗ್ಯ ಸೇವೆಯನ್ನು ಪರಿವರ್ತಿಸುವ ಹಾಗೂ ಜೀವಿತಾವಧಿಯನ್ನು ಹೆಚ್ಚಿಸುವ ಸಾಮರ್ಥ್ಯ ಹೊಂದಿರುವ ಸಂಶೋಧನೆಗಳಿಗೆ ನೆರವು ನೀಡಲು ನಾವು ಹೆಮ್ಮೆ ಪಡುತ್ತೇವೆ” ಎಂದರು.
ಗಲ್ಫ್ ಮೆಡಿಕಲ್ ಯೂನಿವರ್ಸಿಟಿಯ ಉಪ ಕುಲಪತಿ ಪ್ರೊ. ಸಲೀಂ ಚೌಯಿಬ್ ಅವರು ಮಾತನಾಡಿ, “ಆಯ್ಕೆಗೊಂಡಿರುವ ಸಂಶೋಧನಾ ಯೋಜನೆಗಳ ಗುಣಮಟ್ಟ ಹಾಗೂ ನೈಜತೆ ನಿಜಕ್ಕೂ ಅದ್ವಿತೀಯವಾಗಿದ್ದು, ಅವು ಜಾಗತಿಕ ಶೈಕ್ಷಣಿಕ ವಲಯದ ಆವಿಷ್ಕಾರಕ ಸ್ಫೂರ್ತಿಯನ್ನು ಮಂಡಿಸಿವೆ. ಅಭೂತಪೂರ್ವ ಸಂಶೋಧನೆ ಹಾಗೂ ಅಂತಾರಾಷ್ಟ್ರೀಯ ಸಹಯೋಗಕ್ಕೆ ತುಂಬೆ ಇಂಟರ್ ನ್ಯಾಷನಲ್ ರಿಸರ್ಚ್ ಗ್ರ್ಯಾಂಟ್ ಶಕ್ತಿಶಾಲಿ ವೇಗವರ್ಧಕವಾಗಿದೆ” ಎಂದು ಹೇಳಿದರು.