ಸೌದಿ : ಪ್ರಧಾನಿ ಮೋದಿಯನ್ನು ಭೇಟಿಯಾದ ಎಕ್ಸ್ ಪರ್ಟೈಸ್ ಸಿ ಇ ಒ ಆಶಿಫ್ ಕರ್ನಿರೆ

ಮಂಗಳೂರು, ಎ.25: ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿಗಿನ ಸೌದಿ ಅರೇಬಿಯಾ ಭೇಟಿ ವೇಳೆ ಸೌದಿಯಲ್ಲಿರುವ ಭಾರತೀಯ ಉದ್ಯಮ ಕ್ಷೇತ್ರದ ಪ್ರಮುಖ ನಾಯಕರನ್ನು ಅವರು ಎ.22 ರಂದು ಜಿದ್ದಾದಲ್ಲಿ ಭೇಟಿಯಾಗಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ಮೂಲದ ಸೌದಿ ಅರೇಬಿಯಾದ ಪ್ರತಿಷ್ಠಿತ ಕಂಪೆನಿ ಎಕ್ಸ್ ಪರ್ಟೈಸ್ ಗ್ರೂಪ್ ನ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಆಶಿಫ್ ಕರ್ನಿರೆ ಹಾಗೂ ಚೀಫ್ ಸ್ಟ್ರಾಟಜಿ ಆಫೀಸರ್ ಅಂಶಿಫ್ ಕರ್ನಿರೆ ಅವರು ಪ್ರಧಾನಿ ಮೋದಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಲುಲು ಗ್ರೂಪ್ ನ ಅಡಲಿತ ನಿರ್ದೇಶಕ ಯೂಸುಫ್ ಅಲಿ, ಆಸ್ಟರ್ ಹೆಲ್ತ್ ಕೇರ್ ನ ಸಿ ಇ ಒ ಅಲಿಷಾ ಮೂಪನ್ ಅವರೂ ಈ ಸಂದರ್ಭದಲ್ಲಿ ಪ್ರಧಾನಿ ಮೋದಿಯನ್ನು ಭೇಟಿಯಾದರು.
ಪ್ರಧಾನಿ ಮೋದಿ ಹಾಗೂ ಉದ್ಯಮ ರಂಗದ ಭಾರತ ಮೂಲದ ಈ ಪ್ರಭಾವೀ ನಾಯಕರ ನಡುವೆ ರಚನಾತ್ಮಕ ಮಾತುಕತೆ ನಡೆಯಿತು. ಸೌದಿ ಅರೇಬಿಯಾದ ಅಭಿವೃದ್ಧಿಗೆ ಭಾರತೀಯ ಮೂಲದ ಈ ಉದ್ಯಮಿಗಳು ನೀಡುತ್ತಿರುವ ಅಮೂಲ್ಯ ಕೊಡುಗೆಯನ್ನು ಪ್ರಧಾನಿ ಮೋದಿ ಶ್ಲಾಘಿಸಿದರು. ಇಂತಹ ಬೃಹತ್ ಉದ್ಯಮ ಸಮೂಹಗಳಿಂದ ಭವಿಷ್ಯದಲ್ಲಿ ಭಾರತ ಹಾಗೂ ಸೌದಿ ಅರೇಬಿಯಾ ನಡುವೆ ಇನ್ನಷ್ಟು ಬಾಂಧವ್ಯ ಬೆಳೆಯುವ ಸಾಧ್ಯತೆ ಹಾಗೂ ಎರಡೂ ದೇಶಗಳ ಆರ್ಥಿಕತೆಗೆ ಸಿಗುವ ಲಾಭದ ಕುರಿತು ಪ್ರಧಾನಿ ಮೋದಿ ಆಶಾಭಾವ ವ್ಯಕ್ತಪಡಿಸಿದರು.
ಭಾರತ ಹಾಗೂ ಸೌದಿ ಅರೇಬಿಯಾ ನಡುವೆ ಸುದೀರ್ಘ ಕಾಲದಿಂದ ಅತ್ಯುತ್ತಮ ಸಂಬಂಧ ಇರುವುದನ್ನು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಸ್ಮರಿಸಿದರು.