ಸೌದಿ | ಮರುಭೂಮಿಯಲ್ಲಿ ದಾರಿ ತಪ್ಪಿ ಎರಡು ದಿನ ಕಾರಿನ ರೇಡಿಯೇಟರ್ ನೀರು ಕುಡಿದು ಬದುಕುಳಿದ ಕುಟುಂಬ

ರಿಯಾದ್ : ಮರುಭೂಮಿಯಲ್ಲಿ ದಾರಿ ತಪ್ಪಿದ್ದ ಕುಟುಂಬವೊಂದು ಎರಡು ದಿನಗಳ ಕಾಲ ಕುಡಿಯಲು ನೀರು ಸಿಗದೆ ಬಾಯಾರಿಕೆಯಿಂದ ಕಾರಿನ ರೇಡಿಯೇಟರ್ ನಲ್ಲಿದ್ದ ನೀರನ್ನು ಕುಡಿದು ಬದುಕುಳಿದ ಭಯಾನಕ ಘಟನೆ ಸೌದಿ ಅರೇಬಿಯಾದಲ್ಲಿ ನಡೆದಿದೆ.
ರಿಯಾದ್ನಿಂದ ಸುಮಾರು 239 ಕಿಲೋಮೀಟರ್ ದೂರದಲ್ಲಿ ಹಲ್ಬನ್ ಮರುಭೂಮಿಯಿದೆ. ಈ ಮರುಭೂಮಿಯಲ್ಲಿ ಸೌದಿ ಮೂಲದ ಕುಟುಂಬವೊಂದು ದಾರಿ ತಪ್ಪಿ ಸಿಲುಕಿತ್ತು. ಆಹಾರ ಅಥವಾ ನೀರು ಸಿಗದೆ ಅವರು ಬದುಕುಳಿಯುವುದೇ ಕಷ್ಟಕರವಾಗಿತ್ತು. ಬಾಯಾರಿಕೆಯಿಂದ ಕೊನೆಗೆ ಅವರು ಕಾರಿನ ರೇಡಿಯೇಟರ್ ನೀರನ್ನು ಕುಡಿದಿದ್ದಾರೆ. ಎಲೆಗಳನ್ನು ತಿಂದು ಹಸಿವನ್ನು ನೀಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಮರುಭೂಮಿಯಲ್ಲಿ ನಾಪತ್ತೆಯಾಗಿದ್ದ ಕಟುಂಬದ ಪತ್ತೆ ಕಾರ್ಯಾಚರಣೆಯ ನೇತೃತ್ವವನ್ನು ಲಾಭರಹಿತ ಸಂಸ್ಥೆ ಎಂಝಾದ್ ವಹಿಸಿತ್ತು. ತಂಡಗಳನ್ನು ರಚಿಸಿ ಸುಧಾರಿತ ಡ್ರೋನ್ಗಳು, ಡಿಜಿಟಲ್ ಮ್ಯಾಪಿಂಗ್ ಪರಿಕರಗಳನ್ನು ಬಳಸಿಕೊಂಡು ವಿಶಾಲವಾದ ಮರುಭೂಮಿಯಲ್ಲಿ ಹುಡುಕಾಟವನ್ನು ನಡೆಸಲಾಗಿತ್ತು. ಎರಡು ದಿನಗಳ ಶೋಧ ಕಾರ್ಯಚರಣೆಯ ಬಳಿಕ ಡ್ರೋನ್ ವೊಂದು ಮರುಭೂಮಿಯಲ್ಲಿ ನಾಪತ್ತೆಯಾಗಿರುವ ಕುಟುಂಬದ ಪೋಟೊವನ್ನು ಸೆರೆ ಹಿಡಿದಿದೆ. ತಕ್ಷಣ ಕಾರ್ಯಪ್ರವೃತ್ತವಾದ ರಕ್ಷಣಾ ತಂಡ ಮರುಭೂಮಿಯಿಂದ ಕುಟುಂಬವನ್ನು ರಕ್ಷಿಸಿದೆ.