ದಮ್ಮಾಮ್-ಮಂಗಳೂರು ನಡುವಿನ ವಿಮಾನ 24 ಗಂಟೆ ವಿಳಂಬ; ಸೌದಿಯ ಕಾನೂನು ಸಂಸ್ಥೆಯಿಂದ ಏರ್ ಇಂಡಿಯಾಗೆ ನೋಟಿಸ್ ಜಾರಿ

Representational Image | PC: @AirIndiaX
ದಮ್ಮಾಮ್: ದಮ್ಮಾಮ್ ನಿಂದ ಮಂಗಳೂರಿಗೆ ಪ್ರಯಾಣಿಸಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಖ್ಯೆ ಐಎಕ್ಸ್-886ನ ದೀರ್ಘಾವಧಿ ವಿಳಂಬವನ್ನು ಪ್ರಶ್ನಿಸಿ, ಸೌದಿ ಅರೇಬಿಯಾದ ಕಾನೂನು ಸಂಸ್ಥೆಯೊಂದು ಏರ್ ಇಂಡಿಯಾಗೆ ಕಾನೂನು ನೋಟಿಸ್ ಜಾರಿಗೊಳಿಸಿದೆ.
ದಮ್ಮಾಮ್ ನಿಂದ ಮಂಗಳೂರಿಗೆ ಪ್ರಯಾಣ ಬೆಳೆಸಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು 24 ಗಂಟೆಗೂ ಹೆಚ್ಚು ಕಾಲ ವಿಳಂಬಗೊಂಡಿತ್ತು.
ಮಾರ್ಚ್ 25ರಂದು ದಮ್ಮಾಮ್ ನಿಂದ ನಿರ್ಗಮಿಸಬೇಕಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವು 24 ಗಂಟೆಗೂ ಹೆಚ್ಚು ಅವಧಿಯ ವಿಳಂಬದ ನಂತರ, ಮಂಗಳೂರು ತಲುಪಿತ್ತು. ಇದರಿಂದ ತೊಂದರೆ ಗೊಳಗಾಗಿದ್ದ ಪ್ರಯಾಣಿಕರ ಪರವಾಗಿ ಕಾನೂನು ನೋಟಿಸ್ ಜಾರಿಗೊಳಿಸಿರುವ ಸೌದಿ ಅರೇಬಿಯಾದ ಕಾನೂನು ಸಂಸ್ಥೆಯೊಂದು, ವಿಮಾನ ವಿಳಂಬದಿಂದ ಪ್ರಯಾಣಿಕರಿಗಾದ ತೀವ್ರ ಅನನುಕೂಲಕ್ಕೆ ಹೊಣೆ ಹೊರಬೇಕು ಹಾಗೂ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದೆ. ಈ ವಿಮಾನದಲ್ಲಿದ್ದ ಪ್ರಯಾಣಿಕರ ಪೈಕಿ ಹಿರಿಯ ನಾಗರಿಕರು, ಮಕ್ಕಳು ಹಾಗೂ ವೈದ್ಯಕೀಯ ನೆರವಿನ ಅಗತ್ಯವಿದ್ದ ವ್ಯಕ್ತಿಗಳಿದ್ದರು ಎಂದು ಹೇಳಲಾಗಿದೆ.
ಈ ಕಾನೂನು ನೋಟಿಸ್ ಅನ್ನು ಸೌದಿ ಅರೇಬಿಯಾ ಮೂಲದ ಪ್ರತಿಷ್ಠಿತ ಕಾನೂನು ಸಂಸ್ಥೆಯಾದ ಇಂಟರ್ ನ್ಯಾಷನಲ್ ಲಾ ಫರ್ಮ್ ಜಾರಿಗೊಳಿಸಿದೆ. ಈ ನೋಟಿಸ್ ಗೆ ಸೌದಿ ಅರೇಬಿಯಾದ ಖ್ಯಾತ ವಕೀಲ ಹಾಗೂ ಸಂಸ್ಥೆಯ ಪಾಲುದಾರರಾದ ವಕೀಲ ಫತೇನ್ ಫೈಝ್ ಅಲ್ ಅಹ್ಮರಿ ಸಹಿ ಮಾಡಿದ್ದಾರೆ.
ಸೌದಿ ಅರೇಬಿಯಾದಲ್ಲಿರುವ ಭಾರತೀಯ ಮೂಲದ ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ. ಪಿ.ಎ.ಹಮೀದ್ ಪಡುಬಿದ್ರಿ ಈ ಬಗ್ಗೆ ಮುತುವರ್ಜಿ ವಹಿಸಿ ಕಾನೂನು ಸಂಸ್ಥೆಯ ಗಮನಕ್ಕೆ ತಂದಿದ್ದಾರೆ.
ಪ್ರಯಾಣಿಕರಿಂದ ಹಲವಾರು ದೂರು ಸ್ವೀಕರಿಸಿದೆ. ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡ ಪ್ರಯಾಣಿಕರು ಅನುಭವಿಸುತ್ತಿದ್ದ ತೊಂದರೆಗಳಿಗೆ ಸಾಕ್ಷಿಯಾದೆ. ಹೀಗಾಗಿ, ನಾನು ಅಧಿಕೃತ ಕಾನೂನು ಕ್ರಮಕ್ಕೆ ಚಾಲನೆ ನೀಡಿದೆ ಎಂದು ಡಾ. ಹಮೀದ್ ಅವರು ಹೇಳಿದ್ದಾರೆ.
ವಿಮಾನ ಸಂಖ್ಯೆ ಐಎಕ್ಸ್-886 ಮಾರ್ಚ್ 25ರಂದು ರಾತ್ರಿ 10.10 ಗಂಟೆಗೆ ದಮ್ಮಾಮ್ ನಿಂದ ನಿರ್ಗಮಿಸಬೇಕಿತ್ತು. ಆದರೆ, ವಿಳಂಬದಿಂದಾಗಿ, ಪ್ರಯಾಣಿಕರು 24 ಗಂಟೆಗಿಂತಲೂ ಹೆಚ್ಚು ಕಾಲ ಡೋಲಾಯಮಾನ ಸ್ಥಿತಿಯಲ್ಲಿ ಕಳೆಯುವಂತಾಯಿತು. ವಿಮಾನಯಾನ ಸಂಸ್ಥೆಯಿಂದ ಸೂಕ್ತ ಮಾಹಿತಿ, ವಾಸ್ತವ್ಯ ವ್ಯವಸ್ಥೆ ಅಥವಾ ಮೂಲಭೂತ ನೆರವು ದೊರೆಯದ ಕಾರಣಕ್ಕೆ ಹಲವಾರು ಪ್ರಯಾಣಿಕರು ಸುದೀರ್ಘ ಕಾಲ ವಿಮಾನದೊಳಗೆ ಹಾಗೂ ವಿಮಾನ ನಿಲ್ದಾಣದ ಟರ್ಮಿನಲ್ ನಲ್ಲಿ ಕಳೆಯುವಂತಾಯಿತು ಎಂದು ತಿಳಿದು ಬಂದಿದೆ. ಈ ಅವ್ಯವಸ್ಥೆಯ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ವಿಮಾನ ಯಾನ ಸಂಸ್ಥೆಯ ಅಧಿಕಾರಿಗಳ ಸಂವಹನ ಕೊರತೆಯ ವಿರುದ್ಧ ಹಲವು ಮಂದಿ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಗೆ ಕಾನೂನು ನೋಟಿಸ್ ಜಾರಿಗೊಳಿಸಿರುವ ಸೌದಿ ಕಾನೂನು ಸಂಸ್ಥೆಯು, ವಿಮಾನ ಯಾನ ಸಂಸ್ಥೆ ನಿರ್ಲಕ್ಷ್ಯ ಧೋರಣೆ ತೋರಿದೆ ಎಂದು ಆರೋಪಿಸಿದ್ದು, ಹಲವು ಕುಂದುಕೊರತೆ ದೂರುಗಳತ್ತ ಬೊಟ್ಟು ಮಾಡಿದೆ. ಈ ದೂರುಗಳ ಪೈಕಿ ವಿಳಂಬ, ಅಧಿಕಾರಿಗಳಿಂದ ಮಾಹಿತಿಯ ಕೊರತೆ, ಹೋಟೆಲ್ ಹಾಗೂ ಆಹಾರದಂಥ ಪರ್ಯಾಯ ವ್ಯವಸ್ಥೆಗಳನ್ನು ಮಾಡದಿರುವುದು ಹಾಗೂ ವಿಮಾನದಲ್ಲಿ ಪ್ರಯಾಣಿಕರನ್ನು ಸುದೀರ್ಘ ಕಾಲ ಕೂಡಿ ಹಾಕಿರುವುದು ಸೇರಿವೆ. ಈ ಘಟನೆಯಿಂದ ಪ್ರಯಾಣಿಕರಿಗೆ ದೈಹಿಕ, ಭಾವನಾತ್ಮಕ ಹಾಗೂ ಆರ್ಥಿಕ ತೊಂದರೆಯಾಗಿದ್ದು, ವೈದ್ಯಕೀಯ ನೆರವಿನ ಅಗತ್ಯ ಇದ್ದವರಿಗೆ ಅಥವಾ ಸಣ್ಣ ಮಕ್ಕಳನ್ನು ತಮ್ಮೊಂದಿಗೆ ಕರೆದೊಯ್ದವರಿಗೆ ಸಮಸ್ಯೆಯಾಗಿದೆ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ತೊಂದರೆಗೀಡಾದ ಪ್ರಯಾಣಿಕರ ಕ್ಷಮೆ ಕೋರಬೇಕು, ಅವರಿಗಾಗಿರುವ ಸಮಸ್ಯೆಗೆ ಸಂಪೂರ್ಣ ಪರಿಹಾರ ಪಾವತಿಸಬೇಕು, ವಿಳಂಬದ ಕುರಿತು ವಿಸ್ತೃತ ವಿವರಣೆ ನೀಡಬೇಕು ಹಾಗೂ ಭವಿಷ್ಯದ ಕಾರ್ಯಾಚರಣೆ ಗಳಲ್ಲಿ ಇಂತಹ ಲೋಪಗಳು ಮರುಕುಳಿಸುವುದಿಲ್ಲ ಎಂದು ಸ್ಪಷ್ಟ ಭರವಸೆ ನೀಡಬೇಕು ಎಂದು ನೋಟಿಸ್ ನಲ್ಲಿ ಅಧಿಕೃತವಾಗಿ ಆಗ್ರಹಿಸಲಾಗಿದೆ. ಇನ್ನು 15 ದಿನಗಳೊಳಗಾಗಿ ಈ ಕುರಿತು ಪ್ರತಿಕ್ರಿಯೆ ನೀಡಬೇಕು ಎಂದು ವಿಮಾನ ಯಾನ ಸಂಸ್ಥೆಗೆ ಗಡುವು ವಿಧಿಸಲಾಗಿದೆ. ಒಂದು ವೇಳೆ, ಏರ್ ಇಂಡಿಯಾ ಎಕ್ಸ್ ಪ್ರೆಸ್ ಏನಾದರೂ ಪ್ರತಿಕ್ರಿಯೆ ನೀಡಲು ವಿಫಲವಾದರೆ, ಸೌದಿ ಅರೇಬಿಯಾ ಹಾಗೂ ಭಾರತಗಳೆರಡಲ್ಲೂ ಕಾನೂನು ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ಈ ಕಾನೂನು ವ್ಯಾಜ್ಯ ದಿಂದ ಉದ್ಘವಿಸಲಿರುವ ಯಾವುದೇ ಬಗೆಯ ಆರ್ಥಿಕ ನಷ್ಟಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ ಯನ್ನೇ ಹೊಣೆಯನ್ನಾಗಿಸಲಾಗುತ್ತದೆ ಎಂದೂ ವಕೀಲರು ಎಚ್ಚರಿಸಿದ್ದಾರೆ.
ಒಂದು ವೇಳೆ ಈ ಕುರಿತು ಪ್ರತಿಕ್ರಿಯಿಸುವಲ್ಲಿ ವಿಮಾನ ಯಾನ ಸಂಸ್ಥೆಯೇನಾದರೂ ವಿಫಲವಾದರೆ, ತೊಂದರೆಗೊಳಗಾಗಿರುವ ಪ್ರಯಾಣಿಕರಿಗೆ ನ್ಯಾಯವನ್ನು ಖಾತರಿಪಡಿಸಲು ನಾವು ಈ ವಿಷಯವನ್ನು ಸೌದಿ ಅರೇಬಿಯಾ ಹಾಗೂ ಭಾರತದ ನ್ಯಾಯಾಲಯಗಳೆರಡರಲ್ಲೂ ಬಲವಾಗಿ ಪ್ರಸ್ತಾಪಿಸಲಿದ್ದೇವೆ” ಎಂದು ಅವರು ಹಮೀದ್ ಹೇಳಿದ್ದಾರೆ.
ಈ ಪ್ರಕರಣವು ಎರಡೂ ದೇಶಗಳಲ್ಲಿನ ಪ್ರಯಾಣಿಕರ ಹಕ್ಕುಗಳ ಹೋರಾಟಗಾರರು ಹಾಗೂ ಕಾನೂನು ತಜ್ಞರ ಗಮನ ಸೆಳೆದಿದೆ. ಸೌದಿ ಅರೇಬಿಯಾದ ಕಾನೂನು ಸಂಸ್ಥೆ ಜಾರಿ ಮಾಡಿರುವ ನೋಟಿಸ್ ಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ಈವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.