ಕೆನಡಾದ ವಿರುದ್ಧ ಆರ್ಥಿಕ ಬಲದ ಬಳಕೆ: ಟ್ರಂಪ್ ಎಚ್ಚರಿಕೆ
ವಾಷಿಂಗ್ಟನ್ : ಎರಡು ವಾರದ ಬಳಿಕ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಡೊನಾಲ್ಡ್ ಟ್ರಂಪ್ ಕೆನಡಾವನ್ನು ಅಮೆರಿಕದ ಜತೆ ವಿಲೀನಗೊಳಿಸುವ ಹೇಳಿಕೆಯನ್ನು ಪುನರಾವರ್ತಿಸಿದ್ದು , ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿಸಲು ಆರ್ಥಿಕ ಬಲ ಬಳಸಬಹುದು ಎಂದಿದ್ದಾರೆ.
ಫ್ಲೋರಿಡಾದ ಪಾಮ್ ಬೀಚ್‍ನಲ್ಲಿರುವ ಮಾರ್-ಎ-ಲಾಗೊ ರೆಸಾರ್ಟ್‍ನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್ , ಪನಾಮಾ ಕಾಲುವೆಯ ನಿಯಂತ್ರಣ ಮರಳಿ ಪಡೆಯುವ ಮತ್ತು ಡೆನ್ಮಾರ್ಕ್‍ನಿಂದ ಗ್ರೀನ್‍ಲ್ಯಾಂಡ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಇರಾದೆಯನ್ನು ಪುನರುಚ್ಚರಿಸಿದರು. ಈ ನಿಟ್ಟಿನಲ್ಲಿ ಮಿಲಿಟರಿ ಬಲ ಪ್ರಯೋಗಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದು ಆರ್ಥಿಕ ಬಲದ ಮೂಲಕ ಕಾರ್ಯ ಸಾಧಿಸುವುದಾಗಿ ಹೇಳಿದ್ದಾರೆ.
1977ರ ಒಪ್ಪಂದದಡಿ 1999ರಲ್ಲಿ ಪನಾಮಾದ ನಿಯಂತ್ರಣಕ್ಕೆ ಬಂದ ಪನಾಮಾ ಕಾಲುವೆಯನ್ನು ಚೀನಾ ನಿರ್ವಹಿಸುತ್ತಿದೆ ಎಂದು ಟ್ರಂಪ್ ಪ್ರತಿಪಾದಿಸಿದ್ದಾರೆ. ಪನಾಮಾ ಕಾಲುವೆಯನ್ನು ನಮ್ಮ ಮಿಲಿಟರಿಗಾಗಿ ನಿರ್ಮಿಸಲಾಗಿದೆ. ಅದು ನಮ್ಮ ದೇಶಕ್ಕೆ ಅತೀ ಮಹತ್ವದ್ದಾಗಿದೆ. ಆದರೆ ಅದನ್ನು ಚೀನಾ ನಿರ್ವಹಿಸುತ್ತಿದೆ. ಈ ಕಾಲುವೆಯನ್ನು ನಾವು ಪನಾಮಾಕ್ಕೆ ನೀಡಿದ್ದೆವು. ಚೀನಾಕ್ಕೆ ಅಲ್ಲ' ಎಂದು ಟ್ರಂಪ್ ಹೇಳಿದ್ದಾರೆ. ಗ್ರೀನ್‍ಲ್ಯಾಂಡ್ ಅಮೆರಿಕಕ್ಕೆ ಸೇರಬೇಕು. ಈ ವಿಷಯದಲ್ಲಿ ತನ್ನ ಪ್ರಾದೇಶಿಕ ಮಹಾತ್ವಾಕಾಂಕ್ಷೆಗಳನ್ನು ಡೆನ್ಮಾರ್ಕ್ ವಿರೋಧಿಸಿದರೆ ಅದರ ವಿರುದ್ಧ ಆರ್ಥಿಕ ಪ್ರತೀಕಾರ ಕ್ರಮ ಕೈಗೊಳ್ಳುವುದಾಗಿ ಟ್ರಂಪ್ ಬೆದರಿಸಿದ್ದಾರೆ. ಡೆನ್ಮಾರ್ಕ್ ವಿರುದ್ಧ ಹೆಚ್ಚಿನ ಸುಂಕ ವಿಧಿಸುವುದಾಗಿ ಎಚ್ಚರಿಕೆ ನೀಡಿರುವುದಾಗಿ `ದಿ ಗಾರ್ಡಿಯನ್' ವರದಿ ಮಾಡಿದೆ.
►ಎರಡು ದೇಶಗಳ ಏಕೀಕೃತ ನಕ್ಷೆ ಹಂಚಿಕೊಂಡ ಟ್ರಂಪ್
ಕೆನಡಾವನ್ನು ಅಮೆರಿಕದ ಜತೆ ವಿಲೀನಗೊಳಿಸಲು ಆರ್ಥಿಕ ಬಲ ಬಳಸುವುದಾಗಿ ಎಚ್ಚರಿಕೆ ನೀಡಿದ ಬೆನ್ನಲ್ಲೇ ಟ್ರಂಪ್ ಅಮೆರಿಕದ ಧ್ವಜವಿರುವ ಎರಡು ದೇಶಗಳ ಏಕೀಕೃತ ನಕ್ಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಈ ನಕ್ಷೆಯಲ್ಲಿ ಕೆನಡಾವು ಅಮೆರಿಕದ 51ನೇ ರಾಜ್ಯವೆಂದು ತೋರಿಸಲಾಗಿದೆ. ತಿರುಚಿದ ನಕ್ಷೆಯನ್ನು ತನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್ `ಓ ಕೆನಡಾ !ʼ ಎಂದು ಶೀರ್ಷಿಕೆ ನೀಡಿದ್ದಾರೆ.
ಟ್ರಂಪ್ ಪೋಸ್ಟ್ ಬಗ್ಗೆ ಪ್ರತಿಕ್ರಿಯಿಸಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ಅವರ ಲಿಬಲರ್ ಪಾರ್ಟಿ ` ಅಮೆರಿಕ ಸಂಯುಕ್ತ ಸಂಸ್ಥಾನದ ಭಾಗ' ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನವಲ್ಲದ ಭಾಗ'ಗಳನ್ನು ಸ್ಪಷ್ಟವಾಗಿ ತೋರಿಸುವ ನಕ್ಷೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.