ಕೆನಡಾ 51ನೇ ರಾಜ್ಯವಾಗಿ ಅಮೆರಿಕ ಸೇರಲಿ: ಟ್ರೂಡೊ ರಾಜೀನಾಮೆಗೆ ಟ್ರಂಪ್ ಪ್ರತಿಕ್ರಿಯೆ
ವಾಷಿಂಗ್ಟನ್: ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೊ ರಾಜೀನಾಮೆ ಘೋಷಿಸಿದ ಬೆನ್ನಲ್ಲೇ ಪ್ರತಿಕ್ರಿಯಿಸಿದ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್, ಕೆನಡಾ 51ನೇ ರಾಜ್ಯವಾಗಿ ಅಮೆರಿಕ ಸಂಯುಕ್ತ ಸಂಸ್ಥಾನವನ್ನು ಸೇರಲಿ ಎಂಬ ತಮ್ಮ ಧೀರ್ಘಾವಧಿ ಸಲಹೆಯನ್ನು ಪುನರುಚ್ಚರಿಸಿದ್ದಾರೆ.
ಅಮೆರಿಕದ ಜತೆ ವಿಲೀನಗೊಳ್ಳುವುದರಿಂದ ಆಗುವ ಆರ್ಥಿಕ ಲಾಭವನ್ನು ಎತ್ತಿ ಹೇಳಿರುವ ಅವರು, ಕೆನಡಿಯನ್ನರು ಈ ಯೋಚನೆಯನ್ನು ಸ್ವಾಗತಿಸುತ್ತಾರೆ ಎಂಬ ವಿಶ್ವಾಸ ತಮಗಿದೆ ಎಂದು ಟ್ರಂಪ್ ಪೋಸ್ಟ್ ನಲ್ಲಿ ಹೇಳಿದ್ದಾರೆ. "ಕೆನಡಾ ಮುಂದುವರಿಸಲು ಅಗತ್ಯವಾದ ದೊಡ್ಡ ಪ್ರಮಾಣದ ವಿತ್ತೀಯ ಕೊರತೆ ಮತ್ತು ಸಬ್ಸಿಡಿಗಳ ಸಮಸ್ಯೆಯನ್ನು ಅಮೆರಿಕ ಸಂಯುಕ್ತ ಸಂಸ್ಥಾನ ಇನ್ನು ಮುಂದೆ ಅನುಭವಿಸಬೇಕಾಗುವುದಿಲ್ಲ. ಜಸ್ಟಿನ್ ಟ್ರೂಡೊ ಅವರಿಗೆ ಇದು ತಿಳಿದಿದೆ ಹಾಗೂ ಅವರು ರಾಜೀನಾಮೆ ನೀಡಿದ್ದಾರೆ" ಎಂದು ಟ್ರಂಪ್ ವಿವರಿಸಿದ್ದಾರೆ.
ಇಂಥ ವಿಲೀನದಿಂದ ಸುಂಕಗಳು ನಿರ್ಮೂಲನೆಯಾಗಲಿದ್ದು, ತೆರಿಗೆಗಳು ಕಡಿಮೆಯಾಗುತ್ತವೆ ಹಾಗೂ ಚೀನಾ ಹಾಗೂ ರಷ್ಯಾದಿಂದ ಕೆನಡಾ ಎದುರಿಸುತ್ತಿರುವ ಅಪಾಯಗಳ ವಿರುದ್ಧ ಕೆನಡಾದ ಭದ್ರತೆ ಖಾತರಿಯಾಗುತ್ತದೆ. "ಜತೆಯಾದರೆ ಎಂಥ ಶ್ರೇಷ್ಠ ದೇಶವಾಗಬಹುದು!!!" ಎಂದು ಉದ್ಗರಿಸಿದ್ದಾರೆ.
ಕೆನಡಾ ಅಮೆರಿಕದ ಭಾಗವಾಗಬೇಕು ಎಂಬ ಯೋಚನೆಯನ್ನು ಟ್ರಂಪ್ ಪ್ರಕಟಿಸುತ್ತಿರುವುದು ಇದೇ ಮೊದಲಲ್ಲ. ಟ್ರೂಡೊ ಜತೆ ಮಾರ್ ಎ ಲಾಗೊ ರೆಸಾರ್ಟ್ ನಲ್ಲಿ ಭೇಟಿ ಮಾತುಕತೆ ನಡೆಸಿದ ಸಂದರ್ಭದಲ್ಲಿ ಅಮೆರಿಕದ ಸುಂಕದಿಂದಾಗಿ ಕೆನಡಾ ಆರ್ಥಿಕತೆ ಕುಸಿದರೆ, ಕೆನಡಾ ಅಮೆರಿಕ ಜತೆ ವಿಲೀನವಾಗಬಹುದು ಹಾಗೂ ಟ್ರೂಡೊ ಗವರ್ನರ್ ಆಗಬಹುದು ಎಂದು ಸ್ಪಷ್ಟಪಡಿಸಿದ್ದರು. ಇಂಥ ಸುಂಕಗಳು ಕೆನಡಾದ ಆರ್ಥೀಕತೆಗೆ ಮಾರಕವಾಗಬಹುದು ಎಂಬ ಭೀತಿಯನ್ನು ಟ್ರೂಡೊ ವ್ಯಕ್ತಪಡಿಸಿದ್ದರು.
Donald Trump on Justin Trudeau’s resignation pic.twitter.com/453WPzLaoq
— ALX (@alx) January 6, 2025